ಜಿಲ್ಲಾ ಕೆಡಿಪಿಗೆ ಐವರ ನೇಮಕಗೊಳಿಸಿ ಆದೇಶ

ಅಮರೇಶ್ ಕರಡಿ, ಮಹಾವೀರ ಮೆಹತಾ, ರವಿಕುಮಾರ್, ಸ್ವಪ್ನಾ, ಗುರುನಗೌಡ ನೇಮಕ | ಸಕ್ರಿಯ ಕಾರ್ಯಕರ್ತರಿಗೆ ದೊರೆತ ಅವಕಾಶ

ಕೊಪ್ಪಳ:  ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ(ಕೆಡಿಪಿ) (೨೦ ಅಂಶಗಳ ಕಾರ್ಯಕ್ರಮ ಸರಿ) ಸಮಿತಿಗೆ ಈ ಕೆಳಕಂಡವರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ರಾಜ್ಯಪಾಲರ ಆಜ್ಞಾನುಸಾರ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎಂ. ರಾಮಕೃಷ್ಣ ಆದೇಶ ಹೊರಡಿಸಿದ್ದಾರೆ.

ಅಮರೇಶ್ ಕರಡಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಇವರು ದಾಖಲೆಯ ೭೨ ಸಾವಿರ ಮತಗಳನ್ನು ಪಡೆದಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಮಿಡಿಯುತ್ತಿರುವ ಇವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದನಂತರ ನೆನೆಗುದಿಗೆ ಬಿದ್ದ ಹತ್ತು ಹಲವು ಯೋಜನೆಗಳನ್ನು ಪುನರ್ ಅನುಷ್ಠಾನಗೊಳಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್-೧೯ ನಿಮಿತ್ತ ಲಾಖ್‌ಡೌನ್ ವೇಳೆ ಕೊಪ್ಪಳ,ಭಾಗ್ಯನಗರ ಹಾಗೂ ಗ್ರಾಮಾಂತರ ಪ್ರದೇಶದ ಸುಮಾರು ೨೦ ಸಾವಿರ ಬಡ ಕುಟುಂಬಳಿಗೆ ಆಹಾರಧಾನ್ಯದ ಕಿಟ್ ವಿತರಿಸಿದ್ದಾರೆ. ಇದಲ್ಲದೇ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ವಿವಿಧ ಸಮಿತಿಗಳಿಗೆ, ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ನೂರಾರು ಸಕ್ರಿಯ ಕಾರ್ಯಕರ್ತರನ್ನು ನಾಮನಿರ್ದೇಶನಗೊಳಿಸಿ ನೇಮಕ ಮಾಡುವಲ್ಲಿ ಶ್ರಮಿಸಿದ್ದಾರೆ. ಇವರು ಕೊಪ್ಪಳ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಮಸ್ಯೆಗಳು, ಜನರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವರು. ಸಮಿತಿ ಸಭೆಯಲ್ಲಿ ಸಮಸ್ಯೆಗಳ ಇತ್ಯರ್ಥಕ್ಕಾಗಿ ಆಗ್ರಹಿಸಿ ಪರಿಹಾರ ಸಿಗುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ.

ಮಹಾವೀರ ಮೇಹತಾ:

ಜಿಲ್ಲೆಯ ಪ್ರತಿಷ್ಠಿತ ಯಶಸ್ವೀ ಉದ್ಯಮಿಯಾದ ಇವರು, ಬಿಜೆಪಿ ಕೇಂದ್ರ ಮತ್ತು ರಾಜ್ಯದ ಕೈಗಾರಿಕಾ ಕೋಷ್ಠಕದಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ ಕೇಂದ್ರ ಮತ್ತು ರಾಜ್ಯ ನಾಯಕರು ಹಾಗೂ ಆರ್‌ಎಸ್‌ಎಸ್‌ನ ಹಿರಿಯರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರನ್ನು ಸಹ ಕೆಡಿಪಿ ಸಮಿತಿಗೆ ನೇಮಕ ಮಾಡಲಾಗಿದೆ. ಸಮಿತಿ ಸಭೆಯಲ್ಲಿ ಕೈಗಾರಿಕೆ ದೃಷ್ಟಿಯಿಂದ ಮತ್ತು ಪ್ರಮುಖವಾಗಿರುವ ಸಮಸ್ಯೆಗಳನ್ನು ಸಮರ್ಥವಾಗಿ ಮಂಡಿಸಲಿದ್ದಾರೆ. ಇದಲ್ಲದೆ ಇವರನ್ನು ಧಾರ್ಮಿಕ ಅಲ್ಪಸಂಖ್ಯಾತ ಕೋಟಾದಡಿ ನೇಮಕ ಮಾಡಿದ್ದು, ಜಿಲ್ಲೆಯ ಜೈನ್ ಸಮಾಜದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಸ್ವಪ್ನಾ ನಿರುಪಾದಿ:

ಕೆಡಿಪಿ ಸಮಿತಿಗೆ ಮಹಿಳಾ ಕೋಟಾದಡಿ ನೇಮಕವಾಗಿರುವ ಇವರು, ಮೈಲಾಪುರ ಗ್ರಾಮದವರು. ಇವರ ಪತಿ ನಿರುಪಾದಿ ಶಾಸಕ ಬಸವರಾಜ ದಡೆಸೂಗೂರ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕರಾದ ವೀರಪ್ಪ ಕೇಸರಟ್ಟಿ, ನಾಗಪ್ಪ ಸಾಲೋಣಿ ಅವರ ತಂಡದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರ ಪತ್ನಿ ಸ್ವಪ್ನಾ ಅವರನ್ನು ಇದೀಗ ಸಮಿತಿಗೆ ನೇಮಕ ಮಾಡಲಾಗಿದೆ.

ಗುರುನಗೌಡ ಸೋಮಶೇಖರಗೌಡ ಹುಲಿಹೈದರ್:

ವಾಲ್ಮೀಕಿ ಸಮಾಜದ ಕ್ರೀಯಾಶೀಲ ನಾಯಕರಾಗಿರುವ ಇವರನ್ನು ಎಸ್‌ಟಿ ಕೋಟಾದಡಿ ನೇಮಕ ಮಾಡಲಾಗಿದೆ. ಇವರು ಎರಡು ವಿಧಾನಸಭೆ ಹಾಗೂ ಎರಡು ಲೋಕಸಾಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗಳು ಗೆಲ್ಲುವಲ್ಲಿ ಶ್ರಮಿಸಿದ್ದಾರೆ. ಜಿಲ್ಲೆಯ ವಾಲ್ಮೀಕಿ ಸಮಾಜದಲ್ಲಿ ಯುವಪ್ರತಿಭೆಯಾಗಿ ಇವರು ಹೊರಹೊಮ್ಮುತ್ತಿದ್ದಾರೆ.

ರವಿಕುಮಾರ್ ಜನಾರ್ಧನರಾವ್ ಬಸಾಪಟ್ಟಣ:

ಹಿಂದುಳಿದ ವರ್ಗಗಳ ಕೋಟಾದಡಿ ನೇಮಕವಾದ ಇವರು, ಕಳೆದ ೧೦ ವರ್ಷಗಳಿಂದ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂಗಾವತಿ, ಸಿಂಧನೂರು, ಸಿರುಗುಪ್ಪಾ, ಮಸ್ಕಿಯಲ್ಲಿ ಬಿಜೆಪಿ ಬಲವರ್ಧನೆಗೆ ಸತತ ಶ್ರಮಿಸಿದ್ದಾರೆ. ಕಮ್ಮಾ ಸಮಾಜದಲ್ಲಿ ಪ್ರಮುಖ ಯುವ ನಾಯಕರಾಗಿ ಬೆಳೆಯುತ್ತಿರುವ ಇವರಿಗೆ ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಅರಿವಿದ್ದು ಸಮಿತಿ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಮನ ಸೆಳೆಯಲಿದ್ದಾರೆ.

 

Please follow and like us:
error