ಕೊಪ್ಪಳ, ೦೧ ನನ್ನ ಮನೆಯ ಮಾತೃ ಭಾಷೆ ತೆಲಗು ಆಗಿತ್ತು. ಆದರೆ ರಾಜಕೀಯಕ್ಕೆ ಬಂದ ನಂತರ ತೆಲುಗು ಭಾಷೆಗಿಂತ ಕನ್ನಡ ಭಾಷೆ ಹತ್ತಿರ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ತುಕಾರಾಂ ಹೇಳಿದರು.
ತಾಲೂಕಿನ ತಳಕಲ್ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜು.೧೨, ೧೩ ರಂದು ಬನ್ನಿಕೊಪ್ಪ ಗ್ರಾಮದಲ್ಲಿ ಜರುಗುವ ಜಿಲ್ಲಾ ಕಸಾಪ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕನ್ನಡ ಭಾಷೆ ಸಮೃದ್ಧ ಆದದ್ದು. ಕನ್ನಡ ಅಪ್ಪಿಕೊಂಡರೆ ಅನ್ಯ ಭಾಷೆ ವ್ಯಾಮೋಹ ಸುಳಿಯದು. ಸದ್ಯ ನಾನು ನನ್ನ ಮಾತೃ ಭಾಷೆಯಾಗಿದ್ದ ತೆಲುಗುಕ್ಕಿಂತ ಹೆಚ್ಚಿನ ಆದ್ಯತೆ ಕನ್ನಡಕ್ಕೆ ನೀಡಿದ್ದೇನೆ. ನನ್ನ ಮನೆಯಲ್ಲೂ ಸಹ ಮಕ್ಕಳು, ತಾಯಿ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಕನ್ನಡ ನೆಲ, ಜಲ, ಭಾಷೆ ಏಳ್ಗೆಗಾಗಿ ಪಣತೊಟ್ಟಿದ್ದೇನೆ. ಜಿಲ್ಲಾ ಸಾಹಿತ್ಯ ಸಮ್ಮೇಳನ ಮೂಲಕ ಜಿಲ್ಲೆಯಲ್ಲಿ ಕನ್ನಡದ ಹಾಗೂ ಕನ್ನಡ ಸಾಹಿತ್ಯ ಹಿರಿಮೆ ಇಮ್ಮಡಿ ಆಗಲಿ. ಜಿಲ್ಲಾ ಸಾಹಿತ್ಯ ಸಮ್ಮೇಳನ ಜನಮಾನಸ ಆಗಲಿ ಎಂದರು.
ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, ಈ ಸಲದ ಜಿಲ್ಲಾ ಸಾಹಿತ್ಯ ಸಮ್ಮೇಳನ ಬನ್ನಿಕೊಪ್ಪ ಗ್ರಾಮದಲ್ಲಿ ಆಯೋಜನೆ ಮಾಡಿರುವುದು ಸ್ವಾಗತನೀಯ. ಸಮ್ಮೇಳನ ಬರೀ ಆಚರಣೆಗೆ ಸೀಮಿತವಾಗದೆ ಕನ್ನಡ ನಾಡು, ನುಡಿ ಹಾಗೂ ಯುವಕರಲ್ಲಿ ಸಾಹಿತ್ಯಾತ್ಮಕ ಪ್ರೇರಣೆ ಮೂಢಿಸುವಂತಾಗಲಿ ಎಂದರು.
ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ, ಜಿಪಂ ಸದಸ್ಯ ಹನುಮಂತಗೌಡ ಚಂಡೂರು, ತಾಪಂ ಸದಸ್ಯರಾದ ಶಿವಕುಮಾರ ಆದಾಪೂರ, ಗೌರಮ್ಮ ನಾಗನೂರ, ಗವಿಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ, ಉಪಾಧ್ಯಕ್ಷ ತಿಮ್ಮಣ್ಣ ಚೌಡಿ, ಪ್ರಮುಖರಾದ ಯಂಕಣ್ಣ ಯರಾಶಿ, ಕಳಕಪ್ಪ ಕಂಬಳಿ, ಬಸವರಾಜ ಉಳ್ಳಾಗಡ್ಡಿ, ರಾಘವೇಂದ್ರ, ಬಸವರೆಡ್ಡಿ ಆಡೂರು, ಲಕ್ಷ್ಮಣ ಹಿರೇಮನಿ, ಬಸವರಾಜ ಮೇಟಿ, ಶಾಂತಪ್ಪ, ಕಳಕಪ್ಪ ಕುಂಬಾರ, ಡಾ.ಫಕೀರಪ್ಪ ವಜ್ರಬಂಡಿ, ಮಹಾದೇವಪ್ಪ ಮೂಲಿಮನಿ, ಯಲ್ಲಪ್ಪ ಮೇಟಿ, ರೇವಣಪ್ಪ ಸಂಗಟಿ, ತಳಕಲ್ ಹಾಗೂ ಬನ್ನಿಕೊಪ್ಪ ಗ್ರಾಮಸ್ಥರಿದ್ದರು.