ಕಳೆದ ವರ್ಷ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ನಡೆದಿರುವ ಮೊದಲ ಸ್ಥಳೀಯ ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ಮೈತ್ರಿಕೂಟವು 20 ಜಿಲ್ಲೆಗಳಲ್ಲಿ 9ರಲ್ಲಿ ಜಯ ಸಾಧಿಸಿದೆ.ಜಿಲ್ಲಾ ಅಭಿವೃದ್ಧಿ ಕೌನ್ಸಿಲ್(ಡಿಡಿಸಿ)ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳು ಮೇಲುಗೈ ಸಾಧಿಸಿದ್ದರೆ, ಜಮ್ಮು ವಲಯದಲ್ಲಿ ಬಿಜೆಪಿ 6 ಜಿಲ್ಲೆಗಳಲ್ಲಿ ಮೇಲುಗೈ ಸಾಧಿಸಿದೆ.
ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಸಹಿತ ಜಮ್ಮು-ಕಾಶ್ಮೀರ ಮೂಲದ ಏಳು ಪಕ್ಷಗಳನ್ನು ಒಳಗೊಂಡಿರುವ ಗುಪ್ಕರ್ ಮೈತ್ರಿಕೂಟ ಇದೀಗ 100ಕ್ಕೂ ಅಧಿಕ ಸೀಟುಗಳನ್ನು ಗೆದ್ದುಕೊಂಡಿದೆ. ಬಿಜೆಪಿ 72 ಸೀಟುಗಳನ್ನು ಗೆದ್ದುಕೊಂಡು ಅತಿದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಕಾಂಗ್ರೆಸ್ 26 ಸ್ಥಾನಗಳನ್ನು ಗೆದ್ದುಕೊಂಡಿದೆ. 20 ಜಿಲ್ಲಾ ಅಭಿವೃದ್ದಿ ಕೌನ್ಸಿಲ್ಗಳಲ್ಲಿ ಚುನಾವಣೆ ನಡೆದಿತ್ತು. ಪ್ರತಿ ಜಿಲ್ಲೆಯಲ್ಲಿ 14 ಸೀಟುಗಳಿವೆ. 25 ದಿನಗಳ ಕಾಲ 8 ಹಂತಗಳಲ್ಲಿ ಚುನಾವಣೆ ನಡೆದಿತ್ತು.
ಜಮ್ಮು ವಲಯದಲ್ಲಿ ಬಿಜೆಪಿ ಆರು ಜಿಲ್ಲಾ ಕೌನ್ಸಿಲ್ಗಳಾದ ಜಮ್ಮು, ಉಧಂಪುರ, ಸಾಂಬಾ, ಕಥುವಾ, ರೀಸಿ ಹಾಗೂ ದೋಡಾದಲ್ಲಿ ಜಯ ದಾಖಲಿಸಿದೆ. ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಪಕ್ಷಗಳು 4 ಜಿಲ್ಲಾ ಕೌನ್ಸಿಲ್ಗಳಾದ ಪೂಂಚ್, ರಾಜೌರಿ, ಕಿಶ್ತ್ವಾರ್ ಹಾಗೂ ರಾಮ್ಬನ್ ಜಿಲ್ಲೆಗಳಲ್ಲಿ 45 ಸೀಟುಗಳನ್ನು ಗೆದ್ದಿವೆ.
ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಮೈತ್ರಿಪಕ್ಷಗಳು 72 ಸೀಟುಗಳನ್ನು ಗೆದ್ದಿವೆ. ಬಿಜೆಪಿ ಕೇವಲ 3 ಸೀಟುಗಳನ್ನು ಗೆದ್ದಿದೆ. ಗುಪ್ಕರ್ ಮೈತ್ರಿ ಪಕ್ಷ 9 ಜಿಲ್ಲೆಗಳಲ್ಲಿ ಅಧಿಕಾರವನ್ನು ಹಿಡಿಯಲಿದ್ದು, ಶ್ರೀನಗರ ಜಿಲ್ಲೆಯಲ್ಲಿ ಫಲಿತಾಂಶ ಪ್ರಕಟವಾಗಿಲ್ಲ.