ಜಮೀನು ಡಿನೋಟಿಫೈ -ಸಿಎಂ ಬಿ.ಎಸ್.ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಿ ಮುಕ್ತ,ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು- ಸಿದ್ದರಾಮಯ್ಯ
ಬೆಂಗಳೂರು : ಕೆಐಎಡಿಬಿ ಜಮೀನಿನ ಡಿನೋಟಿಫಿಕೇಷನ್ ಆರೋಪದ ತನಿಖೆಯ ರದ್ದತಿಗೆ ರಾಜ್ಯ ಹೈಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ರಾಜೀನಾಮೆ ನೀಡಿ ಮುಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘’ ಬಿ.ಎಸ್. ಯಡಿಯೂರಪ್ಪ ಕಾನೂನುಬಾಹಿರವಾಗಿ ಜಮೀನನ್ನು ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಆರೋಪಗಳು Cognizable offence ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಡಿಸೆಂಬರ್ 22ರ ಆದೇಶದಲ್ಲಿ ಹೈಕೋರ್ಟ್ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕೆಐಎಡಿಬಿ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾತ್ರದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2015ರಲ್ಲಿ ಎಫ್ ಐ ಆರ್ ಸಲ್ಲಿಸಿದ್ದು, ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ಕೂಡಾ ನಡೆಸಿತ್ತು. ಇದರಲ್ಲಿ ಯಡಿಯೂರಪ್ಪ ಅವರನ್ನು ಎರಡನೇ ಆರೋಪಿಯಾಗಿ ಮಾಡಿದ್ದರು.
ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ದೂರು ದಾಖಲಿಸಿರುವುದು ಕಾನೂನುಬಾಹಿರ ಕ್ರಮವಾಗಿರುವ ಕಾರಣ ಪ್ರಕರಣವನ್ನು ರದ್ದುಪಡಿಸಬೇಕೆಂಬ ಬಿ.ಎಸ್.ಯಡಿಯೂರಪ್ಪನವರ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿರುವುದರಿಂದ ಬಿ.ಎಸ್.ಯಡಿಯೂರಪ್ಪನವರಿಗೆ ರಾಜೀನಾಮೆ ಹೊರತು ಬೇರೆ ದಾರಿ ಇಲ್ಲದಂತಾಗಿದೆ.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದರೆ ತನ್ನ ಅಧಿಕಾರದ ಬಲದಿಂದ ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆಗಳಿವೆ. ತಾವು ಮುಖ್ಯಮಂತ್ರಿಯಾದ ಕೂಡಲೇ ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ಪಡೆದಿರುವುದೇ ಇದಕ್ಕೆ ಸಾಕ್ಷಿ.
ಡಿನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಸಬೇಕೆಂದು ಹೈಕೋರ್ಟ್ ನ್ಯಾಯಮೂರ್ತಿಗಳು ತನ್ನ ಆದೇಶದಲ್ಲಿ ತಿಳಿಸಿರುವುದು ಬಿ.ಎಸ್.ಯಡಿಯೂರಪ್ಪನವರು ತನಿಖೆ ಮೇಲೆ ಪ್ರಭಾವ ಬೀರಬಹುದೆನ್ನುವ ಗುಮಾನಿಯೂ ಕಾರಣ.
ಬಿ.ಎಸ್.ಯಡಿಯೂರಪ್ಪನವರ ವಿರುದ್ದದ ಆರೋಪ ಗಂಭೀರ ಸ್ವರೂಪದ್ದು, ಇದು ಸಾಮಾನ್ಯ ಡಿನೋಟೀಫಿಕೇಷನ್ ಪ್ರಕರಣ ಅಲ್ಲ. ಕೈಗಾರಿಕಾ ಸ್ಥಾಪನೆಗಾಗಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಿದ ನಂತರ ಡಿನೋಟೀಫಿಕೇಷನ್ ಮಾಡಲಾಗಿದೆ. ಪ್ರಕರಣದ ಗಂಭೀರತೆಯನ್ನು ನ್ಯಾಯಮೂರ್ತಿಗಳು ಕೂಡಾ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
‘ನಾ ಕಾವೂಂಗಾ, ನಾ ಕಾನೇ ದೂಂಗಾ’ ಎಂದು ಘೋಷಿಸಿದ್ದ ಪ್ರಧಾನಿ ನರೇಂದ್ರಮೋದಿಯವರಿಗೆ ಅವರದ್ದೇ ಪಕ್ಷದ ಮುಖ್ಯಮಂತ್ರಿಯವರ ಮೇಲಿನ ಈ ಗಂಭೀರ ಆರೋಪ ಕಣ್ಣಿಗೆ ಕಾಣುತ್ತಿಲ್ಲವೇ?
ದೇಶಪಾಂಡೆ ಮತ್ತು ಯಡಿಯೂರಪ್ಪ ವಿರುದ್ಧದ ಆರೋಪಗಳು ಭಿನ್ನವಾದವು. ಅವರ ವಿರುದ್ಧ ಅಕ್ರಮ ಡಿನೋಟಿಫೈ ಆರೋಪ ಇರಲಿಲ್ಲ. ಉದ್ದಿಮೆಗಳಿಗೆ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಖಾಸಗಿ ದೂರಿನಲ್ಲಿ ಆರೋಪಿಸಲಾಗಿತ್ತು. ಅದನ್ನು ಹೈಕೋರ್ಟ್ ಮಾನ್ಯ ಮಾಡಿಲ್ಲ ಎಂದು ಹೇಳಿದ್ದಾರೆ