ಜಮೀನಿನಲ್ಲಿ ಆಸ್ಪತ್ರೆ ನಿರ್ಮಿಸಿ: ಕೇರಳ ಸರಕಾರಕ್ಕೆ ಉಸ್ತಾದ್ ಅಮ್ಜದ್ ಅಲಿ ಖಾನ್ ಪತ್ರ

ಮುಂಬೈ: ಸಂಗೀತ ಅಕಾಡಮಿಯನ್ನು ನಿರ್ಮಿಸಲು ತನಗೆ ಉದಾರವಾಗಿ ನೀಡಿದ್ದ ಜಮೀನಿನಲ್ಲಿ ಆಸ್ಪತ್ರೆಯನ್ನು ನಿರ್ಮಿಸುವಂತೆ ಕೋರಿ, ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರು ಕೇರಳ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆರೋಗ್ಯಪಾಲನೆಯು ಧರ್ಮಾತೀತವಾಗಿ ಪ್ರತಿಯೊಬ್ಬ ಮಾನವನ ಪ್ರಾಥಮಿಕ ಅಗತ್ಯವೆಂದು ತಾನು ನಂಬಿರುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಅಮ್ಜದ್ ಅಲಿ ಖಾನ್ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ‘‘ಕೆಲವು ವರ್ಷಗಳ ಹಿಂದೆ ಕೇರಳ ಸರಕಾರವು ನನಗೆ ನೀಡಲಾಗಿದ್ದ ಎರಡು ಎಕರೆ ಜಮೀನನ್ನು ಸಂಗೀತ ಅಕಾಡಮಿ ಸ್ಥಾಪನೆಗಾಗಿ ನೀಡಿತ್ತು. ಆದರೆ ನನ್ನ ದಿನಚರಿಯನ್ನು ಗಮನಿಸಿದರೆ, ನಾನು ವಿಶ್ವದಾದ್ಯಂತ ಪ್ರವಾಸ ಕೈಗೊಳ್ಳುತ್ತಲೇ ಇರಬೇಕಾಗುತ್ತದೆ. ಒಂದೇ ಕಡೆ ಕುಳಿತು,ಸಂಗೀತ ಬೋಧಿಸುವುದನ್ನು ನನಗೆ ಊಹಿಸಲೂ ಸಾಧ್ಯವಿಲ್ಲ. ಹೀಗಾಗಿ ನನಗೆ ನೀಡಲಾಗಿರುವ ಜಮೀನಿನಲ್ಲಿ ಆಸ್ಪತ್ರೆ ನಿರ್ಮಿಸುವಂತೆ ಕೋರಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದೇನೆ. ಈ ಆಸ್ಪತ್ರೆಯು, ಎಲ್ಲಾ ಧರ್ಮಗಳ ಜನರಿಗೆ ಸಮಾನವಾಗಿ ಚಿಕಿತ್ಸೆ ನೀಡುವಂತಹ ಸ್ಥಳವಾಗಿರಬೇಕು ಎಂದು ಅವರು ಇಮೇಲ್ ಪತ್ರದಲ್ಲಿ ಬರೆದಿದ್ದಾರೆ.

ಆರೋಗ್ಯ ಪಾಲನೆಯು ತುಂಬಾ ಮಹತ್ವದ್ದಾಗಿದ್ದು, ಬಡಜನರು ಉತ್ತಮ ಆರೋಗ್ಯ ಸೌಕರ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಈ ನಿವೇಶನದಲ್ಲಿ ವಿಶ್ವದರ್ಜೆಯ ಆಸ್ಪತ್ರೆ ನಿರ್ಮಾಣಗೊಳ್ಳಬೇಕೆಂದು ತಾನು ಬಯಸಿದ್ದು, ಅದಕ್ಕಾಗಿ ಟಾಟಾ ಗ್ರೂಪ್, ಅಂಬಾನಿ, ರಿಲಾಯನ್ಸ್ ಗ್ರೂಪ್ ಅಥವಾ ಲುಲು ಗ್ರೂಪ್ ಇಂಟರ್‌ನ್ಯಾಶನಲ್ ಸಂಸ್ಥೆಗಳನ್ನು ಕೂಡಾ ಒಳಪಡಿಸಬಹು ದಾಗಿದೆ ಎಂದವರು ಹೇಳಿದ್ದಾರೆ. ‘‘ನನ್ನ ತಂದೆ ಉಸ್ತಾದ್ ಹಾಫೀಝ್ ಅಲಿ ಖಾನ್ ಅವರು ನಾವೆಲ್ಲರೂ ಒಬ್ಬನೇ ದೇವರ ಮಕ್ಕಳು ಹಾಗೂ ನಮ್ಮ ಧರ್ಮವು ಮಾನವೀಯತೆಯಾಗಿದೆ. ನನ್ನ ಮೂವರು ಪುತ್ರ ಕೂಡಾ ಶಾಂತಿ ಹಾಗೂ ಸೌಹಾರ್ದ ಹರಡಲೆಂದೇ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ ’’ಎಂದರು.

ಪೌರತ್ವ ವಿರೋಧಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಲ್ಲರೂ ಅರ್ಥಮಾಡಿಕೊಂಡು, ಹಿಂಸೆಗೆ ಅಂತ್ಯ ಹಾಡುವರೆಂದು ತಾನು ಆಶಿಸುವುದಾಗಿ ಹೇಳಿದರು.

Please follow and like us:
error