ಜಗತ್ತನ್ನು ಈ ಭೀಕರ ರೋಗದಿಂದ ಕಾಪಾಡಬೇಕಿರುವುದು ಇದೇ ಲಸಿಕೆಗಳು. ನಮ್ಮೆದುರು ಬೇರೆ ದಾರಿಗಳಿಲ್ಲ

ಇರಾನ್ ಅಧ್ಯಕ್ಷ ಹಸನ್ ರೂಹಾನಿ ಇಡೀ ಜಗತ್ತೇ ಬೆಚ್ಚಿ ಬೀಳುವಂಥ ಹೇಳಿಕೆ ನೀಡಿದರು. ಇರಾನ್ ನ ಎರಡೂವರೆ ಕೋಟಿ ಜನರಿಗೆ ಕೋವಿಡ್-19 ಸೋಂಕು ತಗುಲಿರಬಹುದು ಎಂದು ರೂಹಾನಿ ಹೇಳಿಬಿಟ್ಟರು! ಇಷ್ಟೇ ಅಲ್ಲ ಇನ್ನೂ ಮೂರರಿಂದ ಮೂರೂವರೆ ಕೋಟಿ ಇರಾನಿಯನ್ನರಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದೂ ಸಹ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗಿನ ವರ್ಚುಯಲ್ ಮೀಟಿಂಗ್ ನಲ್ಲಿ ಹೇಳಿದರು. ಇದೇನಿದು ಎಂದು ಕ್ರಾಸ್ ಚೆಕ್ ಮಾಡುವ ಮುನ್ನವೇ ಇರಾನ್ ನಲ್ಲಿ ಎರಡೂವರೆ ಕೋಟಿ ಕರೋನಾ ಸೋಂಕಿತರು ಎಂಬ ಹೆಡ್ ಲೈನ್ ನ್ಯೂಸ್ ಗಳು ಇವತ್ತಿಡೀ ಟೀವಿ ಚಾನಲ್ಲುಗಳಲ್ಲಿ ಭೋರ್ಗರೆಯತೊಡಗಿದವು.

ರೂಹಾನಿ ಹೇಳಿಕೆಯ ನಂತರ ಇರಾನ್ ಉಪಾಧ್ಯಕ್ಷ ಅಲಿರೇಜಾ ಮೋಜಿ ಒಂದು ಸ್ಪಷ್ಟನೆಯ ರೂಪದ ಹೇಳಿಕೆಯನ್ನು ಟ್ವೀಟ್ ಮಾಡಿದರು. ಎರಡೂವರೆ ಕೋಟಿ ಎಂದರೆ ‌ಅಷ್ಟು ಜನ ಸೋಂಕಿತರು ಇದ್ದಾರೆ ಅಂತ ಅರ್ಥವಲ್ಲ, ಕರೋನಾ ತಗುಲಿ ಅದರಿಂದ ಇಮ್ಯೂನಿಟಿ ಪಡೆದವರ ಸಂಖ್ಯೆ ಅದು ಎಂದು ಅವರು ಹೇಳಿದರು.

ಇರಾನ್ ನಲ್ಲಿ ಮೇ ತಿಂಗಳಿನಲ್ಲಿ ಸ್ವಲ್ಪಮಟ್ಟಿಗೆ ಇಳಿಮುಖವಾಗಿದ್ದ ಕರೋನಾ ಈಗ ಮತ್ತೆ ವ್ಯಾಪಕವಾಗಿ ಹರಡುತ್ತಿದೆ. ಸುಮಾರು ಎಂಟು ಕೋಟಿ ಜನಸಂಖ್ಯೆಯ ಇರಾನ್ ನಲ್ಲಿ ಇದುವರೆಗೆ ಹದಿನಾಲ್ಕು ಸಾವಿರ ಜನರು ಕರೋನಾದಿಂದ ಮೃತಪಟ್ಟಿದ್ದಾರೆ.‌ ಅಧಿಕೃತ ವರದಿಗಳ ಪ್ರಕಾರ 2,69,400 ಮಂದಿಗೆ ಕರೋನಾ ದೃಢಪಟ್ಟಿದೆ.

ಆದರೆ ಇರಾನ್ ಅಧ್ಯಕ್ಷರು ಬೇರೆಯದೇ ಕಥೆ ಹೇಳುತ್ತಿದ್ದಾರೆ. ಅವರು ಮಾತನಾಡುತ್ತಿರುವುದು “Herd Immunity” ಕುರಿತು. Herd Immunity ಎಂದರೆ ಯಾವುದೇ ಒಂದು ಭೂಭಾಗದ ಬಹುತೇಕ ಜನರು ಸಾಂಕ್ರಾಮಿಕ ರೋಗವೊಂದರಿಂದ ಪಡೆಯುವ ರಕ್ಷಣೆ. ಈ ರಕ್ಷಣೆ ಎರಡು ವಿಧಗಳಲ್ಲಿ ಆಗಬಹುದು. ರೋಗವು ಜನಸಮುದಾಯದ ನಡುವೆ ವ್ಯಾಪಕವಾಗಿ ಹರಡಿ, ಸೋಂಕಿತರ ದೇಹದಲ್ಲೇ ಉಂಟಾಗುವ ರೋಗ ನಿರೋಧಕ ಶಕ್ತಿ ಮೊದಲ ವಿಧ. ಮತ್ತೊಂದು Human Intervention ನಿಂದ ಆಗುವಂಥದ್ದು. ಅಂದರೆ ಸಾಂಕ್ರಾಮಿಕ‌ ರೋಗಕ್ಕೆ ಲಸಿಕೆಯೊಂದು ಕಂಡುಹಿಡಿದು ಅದು, ಇಡೀ ಸಮುದಾಯವನ್ನು ತಲುಪಿ ರಕ್ಷಣೆ ಪಡೆಯೋದು.

ಇರಾನ್ ಅಧ್ಯಕ್ಷರು ಹೇಳುತ್ತಿರುವುದು ಮೊದಲನೇ ವಿಧದ “Herd Immunity” . ಆದರೆ ಅವರು ಹೇಳುವ ಪ್ರಕಾರ ಇರಾನ್ ನಲ್ಲಿ ಎರಡೂವರೆ ಕೋಟಿ ಜನರು ಸಾರ್ಸ್ ಕೋವಿಡ್-19 ರಿಂದ ರಕ್ಷಣೆ ಪಡೆದಿದ್ದಾರೆ ಎಂದರೆ ಅದನ್ನು ಅಷ್ಟು ಸುಲಭವಾಗಿ ನಂಬಲಾಗದು. ಇದನ್ನು ಪುಷ್ಟೀಕರಿಸುವ ವಿವಿಧ ಹಂತದ‌ ಮಾದರಿ ಪರೀಕ್ಷೆಗಳೂ ಕೂಡ ನಡೆದಿರಬೇಕು. ಚುನಾವಣೆಗಳ ನಂತರ, ಮೊದಲು ನಮ್ಮ ಟೀವಿ ಚಾನಲ್ ಗಳು ಸಮೀಕ್ಷೆ ನಡೆಸಿ, ರಿಸಲ್ಟ್ ಹೀಗೇ ಇರುತ್ತೆ ಎಂದು ಹೇಳುವುದಿಲ್ಲವೇ? ಆ ರೀತಿಯ ಸರ್ವೆಗಳಾದರೂ ನಮ್ಮ ಮುಂದಿರಬೇಕು. ಈ ಬಗ್ಗೆಯ ಸರ್ವೆಗೆ ಈಗ ಲಭ್ಯವಿರುವ ಸುಲಭದ ಉಪಾಯವೆಂದರೆ ಆಂಟಿಬಾಡೀಸ್ ಟೆಸ್ಟ್.‌ ಪಶ್ಚಿಮದ ದೇಶಗಳು ಈಗಾಗಲೇ ಈ ಆಂಟಿಬಾಡೀಸ್ ಟೆಸ್ಟ್ ಗಳನ್ನು ನಡೆಸುತ್ತಿವೆ. ಹಲವು ಬೇರೆ ಬೇರೆ ಬಗೆಯ ಭೌಗೋಳಿಕ ಪರಿಸರದ ಬೇರೆ ಬೇರೆ ಸಮೂಹಗಳ ಮೇಲೆ ಈ ಪರೀಕ್ಷೆಗಳನ್ನು ನಡೆಸಿದರೆ Herd Immunity ಸಾಧ್ಯವಾಗಿದೆಯಾ ಎಂದು ಅಂದಾಜು ಮಾಡಬಹುದು.

ಕರೋನಾದಿಂದಾಗಿ ಜಗತ್ತು ನಿಜಕ್ಕೂ ಹತಾಶಗೊಳ್ಳುತ್ತ ಹೋಗುತ್ತಿದೆ. ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಜಗತ್ತನ್ನು ಆಳುತ್ತಿರುವ ಸರ್ಕಾರಗಳು ಸುಸ್ತಾಗಿ ಹೋಗಿವೆ. ಒಂದೆಡೆ ಅವು ಕರೋನಾವನ್ನು ನಿಯಂತ್ರಿಸಲಾಗದೆ ಹೆಣಗುತ್ತಿವೆ, ಮತ್ತೊಂದೆಡೆ ಲಾಕ್ ಡೌನ್ ನಂಥ ಕಠಿಣ ನಿರ್ಧಾರಗಳಿಂದ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿವೆ. ಕೋವಿಡ್- 18 ಸಮುದಾಯಕ್ಕೆ ಹರಡಿ, ತನ್ಮೂಲಕವಾಗಿಯಾದರೂ “Herd Immunity” ಸಾಧ್ಯವಾಗಲಿ ಎಂಬುದು ಜಗತ್ತಿನ‌ ಹಲವು ರಾಜಕೀಯ ನಾಯಕರ ದೂರಾಲೋಚನೆಯಾಗಿರಬಹುದು. ಇರಾನ್ ಅಧ್ಯಕ್ಷರ ಹೇಳಿಕೆಯೂ ಅದೇ ಧಾಟಿಯಲ್ಲಿದೆ.

ಯಾವುದೇ ಪ್ಯಾಂಡಮಿಕ್ ವಿಷಯದಲ್ಲಿ ನಾವು Herd Immunity ಸಾಧಿಸಿದ್ದೇವೆ ಎಂದು ಹೇಳಿಕೊಳ್ಳಬೇಕೆಂದರೆ ಶೇ. 80ರಿಂದ 90ರಷ್ಟು ಮಂದಿಯಲ್ಲಾದರೂ ಆಂಟಿಬಾಡೀಸ್ ಸೃಷ್ಟಿಯಾಗಿರಬೇಕು. ಕೋವಿಡ್ ವಿಷಯದಲ್ಲಿ ಇದು ಜಗತ್ತಿನ ಯಾವ ರಾಷ್ಟ್ರದಲ್ಲೂ ಸಾಧ್ಯವಾಗಿಲ್ಲ. ಜಗತ್ತು ಈಗಲೂ ಕರೋನಾ ಸರಪಳಿಯನ್ನು ತುಂಡರಿಸುವ, ಹೆಚ್ಚು ಹರಡದಂತೆ ತಡೆಯುವ ಚಟುವಟಿಕೆಗಳನ್ನೇ ಗಂಭೀರವಾಗಿ ಅನುಸರಿಸುತ್ತಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಜರ್ ಬಳಸುವುದು, ಜನಜಂಗುಳಿಯಲ್ಲಿ ಸೇರದಿರುವುದು, ಲಾಕ್ ಡೌನ್ ಗೆ ಒಳಗಾಗುವುದು… ಇಂಥವೇ ನಾವು ಕಂಡುಕೊಂಡಿರುವ ಮಾರ್ಗಗಳು. ಆದರೆ ಇದ್ಯಾವುದರಿಂದಲೂ ನಾವು ಸಂಪೂರ್ಣ ಸುರಕ್ಷಿತರಲ್ಲ. ಇಷ್ಟೆಲ್ಲ ಎಚ್ಚರಿಕೆಗಳ ನಡುವೆಯೂ ಇಂಡಿಯಾದಲ್ಲಿ ಕರೋನಾ ಅಷ್ಟು ವೇಗವಾಗಿ ಹರಡುತ್ತಿಲ್ಲವೇ?

ವಾಸ್ತವವಾಗಿ ಸಾರ್ಸ್ ಕೋವಿಡ್-19 ಸೋಂಕಿಗೆ ಒಳಗಾಗಿ ಮನುಷ್ಯನಲ್ಲಿ ಹುಟ್ಟಿಕೊಳ್ಳುವ ರೋಗ ನಿರೋಧಕ ಶಕ್ತಿ ಎಲ್ಲಿಯವರೆಗೆ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಲಾಗದು. ಈ ರಕ್ಷಣೆ ಕೆಲವು ತಿಂಗಳುಗಳವರೆಗೆ, ವರ್ಷದವರೆಗೆ ಇರಬಹುದು, ಅಥವಾ ಅದಕ್ಕಿಂತ ಹೆಚ್ಚು ಕಾಲವೂ ಇರಬಹುದು. ಕೋವಿಡ್ ಹೊಸ ಅಲೆ ಎದ್ದರೆ ಅದರ ಹೊಡೆತಕ್ಕೆ ನಾವು ತಡೆದುಕೊಳ್ಳಲು ಸಾಧ್ಯವೆಂದು ಹೇಳಲಾಗದು.

ಹೀಗಿರುವಾಗ ನಮ್ಮ ಮುಂದಿನ ಏಕೈಕ ದಾರಿ ಪರಿಣಾಮಕಾರಿ ವ್ಯಾಕ್ಸಿನ್. ಅದರಿಂದಲೇ ಯಾವುದೇ ದೇಶ ತಾನು Herd Immunity ಗಳಿಸಿದ್ದೇನೆ ಎಂದು ಎದೆಯುಬ್ಬಿಸಿ ಹೇಳಬಹುದು. ವ್ಯಾಕ್ಸಿನ್ ತಯಾರಿಸುವುದಕ್ಕಿಂತ ದೊಡ್ಡ ಸವಾಲು ಅದರ ಕ್ಲಿನಿಕಲ್ ಟ್ರಯಲ್ ನಡೆಸುವುದು. ಇದುವರೆಗೆ ಯಾವುದೇ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಳಸಲಾಗಿರುವ ಯಾವುದೇ ಸ್ವರೂಪದ ವ್ಯಾಕ್ಸಿನ್ ಒಂದು ವರ್ಷದ ಕಾಲಾವಧಿಯ ಒಳಗೆ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಟ್ಟು ಬಳಕೆಗೆ ಸಿದ್ಧವಾಗಿಲ್ಲ. ಕರೋನಾದ ಭೀಕರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾಲಾವಧಿಯನ್ನು ಎಷ್ಟೇ ಇಳಿಸಿದರೂ ಎಂಟರಿಂದ ಹತ್ತು ತಿಂಗಳಾದರೂ ಬೇಕೇಬೇಕು. ಆ ಕೆಲಸ ನಡೆಯುತ್ತಿದೆ, ಅಮೆರಿಕ, ರಷ್ಯಾ ಮತ್ತು ಚೀನಾದ ನಾಲ್ಕು ಬೇರೆ ಬೇರೆ ಲಸಿಕೆಗಳು ಈಗ ಮೂರನೇ ಹಂತದ ಪ್ರಯೋಗದಲ್ಲಿವೆ. ಭಾರತದ ಲಸಿಕೆಯೂ ಈಗ ಜನಸಾಮಾನ್ಯರ ಮೇಲೆ ಪ್ರಯೋಗಗೊಳ್ಳುತ್ತಿದೆ.

ಜಗತ್ತನ್ನು ಈ ಭೀಕರ ರೋಗದಿಂದ ಕಾಪಾಡಬೇಕಿರುವುದು ಇದೇ ಲಸಿಕೆಗಳು. ನಮ್ಮೆದುರು ಬೇರೆ ದಾರಿಗಳಿಲ್ಲ.‌

– ದಿನೇಶ್ ಕುಮಾರ್ ಎಸ್.ಸಿ.

Please follow and like us:
error