ಚಿಂತಕ ಆನಂದ್ ತೇಲ್ ತುಂಬ್ಡೆ ಬಂಧನ

ಸುಪ್ರೀಂ ಕೋರ್ಟ್ ಆದೇಶ, ವ್ಯಾಪಕ ವಿರೋಧ ಲೆಕ್ಕಕ್ಕಿಲ್ಲ

ಮುಂಬೈ, ಫೆ. 2: ಖ್ಯಾತ ಲೇಖಕ ಮತ್ತು ಹೋರಾಟಗಾರ ಆನಂದ್ ತೇಲ್ ತುಂಬ್ಡೆಯವರನ್ನು ಶನಿವಾರ ನಸುಕಿನ 3.30ರ ವೇಳೆಗೆ ಪುಣೆ ಪೊಲೀಸರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕಳೆದ ವರ್ಷ ನಡೆದ ಭೀಮಾ ಕೊರೆಗಾಂವ್ ಹಿಂಸಾಚಾರ ಘಟನೆಯ ಹಿನ್ನೆಲೆಯಲ್ಲಿ ಆನಂದ್ ತೇಲ್ ತುಂಬ್ಡೆಯವರನ್ನು ಬಂಧಿಸಲಾಗಿದೆ.

ಎಸಿಪಿ ಶಿವಾಜಿ ಪವಾರ್ ಈ ಬಂಧನ ದೃಢಪಡಿಸಿದ್ದು, ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆನಂದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುಣೆ ನ್ಯಾಯಾಲಯ ತಿರಸ್ಕರಿಸಿದ ಬೆನ್ನಲ್ಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. “ಆನಂದ್ ತೇಲ್ ತುಂಬ್ಡೆಯವರು ಅಪರಾಧ ಎಸಗುವಲ್ಲಿ ಷಾಮೀಲಾಗಿದ್ದಾರೆ ಎನ್ನುವುದನ್ನು ನಿರೂಪಿಸಲು ತನಿಖಾಧಿಕಾರಿಗಳು ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದ್ದಾರೆ” ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಿಶೋರ್ ವಂದಾನೆ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ್ದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಆನಂದ್ ತೇಲ್ ತುಂಬ್ಡೆಯವರನ್ನು ವಶಕ್ಕೆ ಪಡೆದ ಪುಣೆ ಇನ್‌ಸ್ಪೆಕ್ಟರ್ ಇಂದೂಲ್‌ ಕುಮಾರ್, ಆನಂದ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗುತ್ತಿದೆ ಎಂದು ವಕೀಲ ಪ್ರದೀಪ್ ಮಂಧ್ಯಾನ್ ಅವರಿಗೆ ತಿಳಿಸಿದರು.

ಸುಪ್ರೀಂಕೋರ್ಟ್ ಜನವರಿ 14ರಂದು ಆನಂದ್ ರಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಿ, ವಿಚಾರಣಾ ನ್ಯಾಯಾಲಯದಲ್ಲಿ ಅದಕ್ಕೂ ಮೊದಲು ಜಾಮೀನು ಪಡೆಯುವಂತೆ ಸೂಚಿಸಿತ್ತು. ಈ ಸುರಕ್ಷೆ ಅವಧಿ ಫೆಬ್ರವರಿ 11ಕ್ಕೆ ಕೊನೆಗೊಳ್ಳುತ್ತದೆ.