ಚರ್ಚೆಗೆ ಅವಕಾಶ ಕೊಡದೆ ಗೋಹತ್ಯೆ ಮಸೂದೆ ಅಂಗೀಕಾರ : ನಾಳೆ ಕಾಂಗ್ರೆಸ್ ನಿಂದ ಕಲಾಪ ಬಹಿಷ್ಕಾರ – ಸಿದ್ದರಾಮಯ್ಯ

Kannadanet NEWS ಚರ್ಚೆಗೆ ಅವಕಾಶವನ್ನೇ ಕೊಡದೆ, ಮಸೂದೆಯ ಪ್ರತಿಯನ್ನೂ ವಿರೋಧ ಪಕ್ಷಗಳ ಸದಸ್ಯರಿಗೂ ನೀಡದೆ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯನ್ನು ಖಂಡಿಸಿ ನಾಳೆ ಕಾಂಗ್ರೆಸ್ ಪಕ್ಷ ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 

ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ಯಾವ ಮಸೂದೆಯನ್ನೂ ಮಂಡಿಸುವುದಿಲ್ಲ ಎಂದು ಬಿಎಸ್ ವೈ ಹೇಳಿದ್ದರು.ಇಂದಿನ ಕಲಾಪ ಪಟ್ಟಿಯಲ್ಲಿ ಕೂಡಾ ಈ ವಿಷಯ ಉಲ್ಲೇಖಿಸಲಾಗಿಲ್ಲ. ಆದರೆ ಮಧ್ಯಾಹ್ನ ಏಕಾಏಕಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿ ಅಂಗೀಕರಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ.

ಚರ್ಚೆಯನ್ನು ಎದುರಿಸಲು ಧೈರ್ಯ ಇಲ್ಲದ ಹೇಡಿ ಸರ್ಕಾರ ಮಾತ್ರ ಈ ರೀತಿ ವರ್ತಿಸಲು ಸಾಧ್ಯ. ಈ ರೀತಿಯ ಸರ್ವಾಧಿಕಾರಿ ನಡವಳಿಕೆಯಿಂದ ನಮ್ಮ ಬಾಯಿ ಮುಚ್ಚಿಸಲು ಇವರಿಗೆ ಸಾಧ್ಯವಾಗದು. ಈ ಸರ್ಕಾರದ ಭ್ರಷ್ಟಾಚಾರ ಮತ್ತು ದುಷ್ಟತನವನ್ನು ಬೀದಿಯಲ್ಲಿ ಜನರೊಂದಿಗೆ ನಿಂತು ವಿರೋಧಿಸುತ್ತೇವೆ.

ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ, ಒಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇನ್ನೊಂದೆಡೆ ಆಂತರಿಕ ಭಿನ್ನಮತದಿಂದಾಗಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಎಲ್ಲ ವೈಫಲ್ಯಗಳನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧದಂತಹ ಅನಗತ್ಯ ವಿಷಯಗಳನ್ನು ವಿವಾದವನ್ನಾಗಿ ಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನನ್ನು ‘Shadow Chief Minister’ ಎನ್ನುತ್ತಾರೆ. ಆದರೆ ಈ ಸರ್ಕಾರದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರವಲ್ಲ, ವಿರೋಧ ಪಕ್ಷದ ನಾಯಕನಿಗೂ ಗೌರವ ಇಲ್ಲ. ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇದೊಂದು ಕಪ್ಪು ದಿನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Please follow and like us:
error