ಚಕ್ರವರ್ತಿ ಸೂಲಿಬೆಲೆಯ ಐತಿಹಾಸಿಕ ಸುಳ್ಳುಗಳ ‘ಕೋರ್ಟ್ ಮಾರ್ಷಲ್’ ಯಾವಾಗ? – ದಿನೇಶ್ ಕುಮಾರ್ ಎಸ್.ಸಿ.

ಡ್ರೋನ್ ಪ್ರತಾಪನ ಪ್ರತಾಪಗಳ ಪೋಸ್ಟ್ ಮಾರ್ಟಂ ಏನೋ ನಡೀತು. ಈಗ ಅವನನ್ನು ಬಿಡೋಣ. ಚಕ್ರವರ್ತಿ ಸೂಲಿಬೆಲೆಯ ಐತಿಹಾಸಿಕ ಸುಳ್ಳುಗಳ ‘ಕೋರ್ಟ್ ಮಾರ್ಷಲ್’ ಯಾವಾಗ? ಮೀಡಿಯಾದವರಿಗೆ ಈಗ ಒಂದು ಸಿಹಿಯಾದ ಸವಾಲು ನಮ್ಮ ಕಡೆಯಿಂದ. ತುಂಬಾ ರಿಸರ್ಚ್ ಏನೂ ಮಾಡಬೇಕಿಲ್ಲ. ಪ್ರಶ್ನೆಗಳನ್ನು ನಾವೇ ಸಿದ್ಧಪಡಿಸಿ ಕೊಡ್ತಾ ಇದ್ದೇವೆ. (ಪ್ರಶ್ನೆಗಳೇ ಟೆಕ್ನಿಕಲಿ ಸರಿ ಇಲ್ಲದೆ ಹೋದರೆ ಉತ್ತರಗಳು ಸಿಗಲು ಸಾಧ್ಯವಿಲ್ಲ ಎಂದು ನಿನ್ನೆ ಸಾಬೀತಾಯಿತಲ್ಲ.) ಅದಕ್ಕೆ ಸಾಕ್ಷಿಯಾಗಿ ವಿಡಿಯೋಗಳನ್ನೂ ಕೊಡುತ್ತೇವೆ. ಸೂಲಿಬೆಲೆಯನ್ನು ಕರೆದು ಕೂರಿಸಿ ಒಂದು ಮೀಡಿಯಾ ಟ್ರಯಲ್ ನಡೆಸಿ ನೋಡೋಣ. ಇದನ್ನು ಮಾಡುವ ಮೂಲಕ‌ ಮೀಡಿಯಾದವರು ತಮ್ಮನ್ನು ತಾವು ಉತ್ತಮ ಸಮಾಜದ ನಿರ್ಮಾತೃಗಳು, ನೇರ-ದಿಟ್ಟ-ನಿರಂತರ ಹೋರಾಟದ ರಣಕಲಿಗಳು, ಮೀಡಿಯಾಗಳೆಲ್ಲ ಯಾರ ಅಸ್ತಿಯೂ ಅಲ್ಲ ನಮ್ಮ ಆಸ್ತಿ ಎಂಬುದನ್ನು ಸಾಬೀತುಮಾಡಿ ಭರವಸೆಯ ಬೆಳಕಾಗಲಿ. ಇದನ್ನು ಮಾಡದೇ ಹೋದರೆ ನಿಮ್ಮ ಟಾರ್ಗೆಟ್ ಬರೀ ಡ್ರೋನ್ ಪ್ರತಾಪನ ಸೈಜಿನ ಟಪಾಸು ಗಿರಾಕಿಗಳು ಮಾತ್ರ, ಸೂಲಿಬೆಲೆಯಂಥ ಹೈಫೈ ಸುಳ್ಳುಗಾರರಲ್ಲ ಎಂಬುದು ಸಾಬೀತಾಗುತ್ತದೆ. ಏನ್ ಮಾಡ್ತೀರಾ ನೋಡಿ, ಪ್ರಶ್ನೆಗಳು ಕೆಳಗಡೆ ಇದ್ದಾವೆ. ಚೆಂಡು ಈಗ ನಿಮ್ಮ‌ಕೋರ್ಟಿನಲ್ಲಿ ಇದೆ.

1. ಬ್ಲಾಕ್ ಮನಿ ಇಂಡಿಯಾಗೆ ವಾಪಾಸು ತಂದ್ರೆ ದೇಶದ ತುಂಬೆಲ್ಲ ಚಿನ್ನದ ರಸ್ತೆ‌ ಮಾಡಬಹುದು ಅಂದ್ಯಲ್ಲ. ಬ್ಲಾಕ್ ಮನಿ ಬಂತಾ? ಎಲ್ಲಿದೆ ಚಿನ್ನದ ರಸ್ತೆ? ಒಂಚೂರು ಅದರ ಗೂಗಲ್ ಲೊಕೇಶನ್ ಮ್ಯಾಪ್ ಕಳ್ಸು ಗುರು. ನೋಡ್ಕೊಂಡು ಬರೋಣ.

2. ಸ್ವಿಜರ್ಲ್ಯಾಂಡ್ ಬ್ಯಾಂಕ್ ಅಕೌಂಟುಗಳಿಂದ ಬ್ಲಾಕ್ ಮನಿ ತರೋದಕ್ಕೆ ಮೋದಿನೇ ಹೋಗಿದ್ರು ಅಂದ್ಯಲ್ಲ. ಮೋದಿ ಎರಡನೇ ಅವಧಿಗೆ ಗೆದ್ದರೆ ತಕ್ಷಣ ಲಿಸ್ಟ್ ಕೊಡ್ತೀವಿ ಅಂದಿದ್ರಲ್ಲ ಆ ದೇಶದ ಪ್ರಧಾನಿ. ಬಂತಾ ಲಿಸ್ಟು? ಒಂದು ಜೆರಾಕ್ಸ್ ಕಾಪಿ ಕೊಡು ಗುರು. ಬಂತಾ ಬ್ಲಾಕ್ ಮನಿ? ಎಣಿಸಿದ್ದು ಮುಗಿದಿದ್ರೆ ಲೆಕ್ಕ ಕೊಡು. ಮೇಲ್ ಐಡಿ ಕೊಡಿ, ಮೇಲ್ ಮಾಡ್ತೀನಿ ಅಂತ ಮಾತ್ರ ಹೇಳ್ಬೇಡ‌.

3. ಡಿಸೆಂಬರ್ ತಿಂಗಳಿನಲ್ಲಿ ಇಂಡಿಯಾದಲ್ಲಿ ಇನ್ ಕಮ್ ಟ್ಯಾಕ್ಸ್ ಪಡೆಯುವುದನ್ನು ಸರ್ಕಾರ ನಿಲ್ಲಿಸುತ್ತದೆ ಎಂದು ಹೇಳಿದ್ದೆಯಲ್ಲ? ಯಾವ ಡಿಸೆಂಬರ್? ಯಾವಾಗ ಇನ್ ಕಮ್ ಟ್ಯಾಕ್ಸ್ ವ್ಯವಸ್ಥೆ ಕೊನೆಗೊಳ್ಳುತ್ತೆ? ಯಾವಾಗ ಐಟಿ ಇಲಾಖೆಯನ್ನ ರದ್ದು ಮಾಡ್ತಾರೆ ಮೋದಿ? ಎನಿ ಇನ್ಫರ್ಮೇಷನ್?

4. ಭಾರತದ ಎಲ್ಲ ಆಸ್ಪತ್ರೆಗಳಲ್ಲಿ ಏನೇನು ನಡೀತಾ ಇದೆ ಅಂತ ಮೋದಿ ದಿನವೂ ತಮ್ಮ ಲ್ಯಾಪ್’ಟಾಪಲ್ಲಿ ನಲ್ಲಿ ಚೆಕ್ ಮಾಡ್ತಾರೆ ಅಂದ್ಯಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಸಾಯ್ತಾ ಇದ್ರೂ ಮೋದಿ ಯಾಕೆ ಸುಮ್ನೆ ಇದ್ದಾರೆ? ಯಾವ್ದಾದ್ರೂ ದನ ಹೋಗಿ ಮೋದಿ ಲ್ಯಾಪ್’ಟಾಪ್ ಮೇಲೆ ಸೆಗಣಿ ಹಾಕಿ ಲ್ಯಾಪ್’ಟಾಪ್ ಹ್ಯಾಂಗ್ ಆಗೋಗಿದೆಯ? ಈಗ ಬರೀ ಲೈವ್ ಕವರೇಜ್ ನೋಡೋದಷ್ಟೆ ಅವರ ಕೆಲಸನಾ?

5. ಜಪಾನ್ ನಿಂದ ಬುಲೆಟ್ ಟ್ರೈನ್ ಬರಲಿದೆ ಅಂದ್ಯಲ್ಲ? ಬಂತಾ? ಮಂಗಳೂರಿನಿಂದ ಬೆಂಗಳೂರಿಗೆ ಒಂದೂವರೆ ಗಂಟೆಯಲ್ಲಿ ಟ್ರೈನಲ್ಲಿ ಬರಬಹುದಾ? ಬಾಗಲಕೋಟೆ- ಬೆಂಗಳೂರು ಬುಲೆಟ್ ಟ್ರೈನು ಓಡ್ತಾ ಇದೆಯಾ? ಆ ಬುಲೆಟ್ ರೈಲುಗಳ ಚಾಲಕರ ಫೋಟೋಗಳಿದ್ರೆ ಹಂಚ್ಕೋತೀಯ? ಅದೆಲ್ಲ ಕಾನ್ಫಿಡೆನ್ಷಿಯಲ್ ಈಗ Disclose ಮಾಡಕ್ಕಾಗಲ್ಲ ಅಂದ್ರೆ ನೆಟ್ಟಗಿರಲ್ಲ ಅಷ್ಟೇ.

6. ಹಡಗು ಮೂಲಕ ಆಮದು-ರಫ್ತು ಶುರುವಾಗಿದ್ದು ಮೋದಿ ಕಾಲದಲ್ಲಿ ಅಂದ್ಯಲ್ಲ? ಯಾವ ಮೂರ್ಖ ಕೊಟ್ಟ information ಇದು? ಭಾರತ ಸ್ವಾತಂತ್ರ್ಯ ಪೂರ್ವದಿಂದಲೂ ಹಡಗುಗಳ ಮೂಲಕವೇ ವ್ಯವಹಾರ ಮಾಡುತ್ತಿದ್ದಿದ್ದು ನಿನಗೆ ಗೊತ್ತಿಲ್ಲವೇ? ಪೋರ್ಚುಗೀಸರು, ಡಚ್ಚರು, ಬ್ರಿಟಿಶರು, ಅರಬ್ಬರು ಸಮುದ್ರದೊಳಗೆ ಸೈಕಲ್ ತುಳ್ಕೊಂಡು ನಮ್ ದೇಶದೊಳಗೆ ಬಂದ್ರ ಹೆಂಗೆ? ಭಾರತದ ಅತಿದೊಡ್ಡ ಹಡಗು ಬಂದರುಗಳನ್ನು ನಿರ್ಮಾಣ ಮಾಡಿದ್ದು ಹಡಗು ನಿಲ್ಸೋದಕ್ಕೋ ಅಥವ ‘ಅಯಾಮ್ ಎ ಡಿಸ್ಕೋ ಡ್ಯಾನ್ಸರ್’ ಹಾಡು ಹಾಕಿ ಜನರನ್ನು ಕುಣಿಸೋದಕ್ಕಾ?

7. ಮೋದಿ ಎಂಟು ಕೋಟು ಹೊಲೆಸಿಕೊಟ್ಟು ಕೊರಿಯಾ ದೇಶದ ಪ್ರಧಾನಿಯನ್ನು ಗೆದ್ದುಕೊಂಡ್ರು, ಮೋದಿ ಕೊಟ್ಟ ಎಂಟು ಕೋಟಿನಿಂದಾಗಿ ಭಾರತ-ಪಾಕಿಸ್ತಾನ ಯುದ್ಧ ನಡೆದರೆ ಕೊರಿಯಾ ಭಾರತವನ್ನೇ ಸಪೋರ್ಟ್ ಮಾಡ್ತಾ ಇತ್ತು ಅಂದ್ಯಲ್ಲ, ಪಾಕಿಸ್ತಾನ ಚೀನಾ ನೇಪಾಳ ಸೇರಿದಂತೆ ಎಲ್ಲ ದೇಶಗಳ ಪ್ರಧಾನಿ, ಅಧ್ಯಕ್ಷರಿಗೂ ಎಂಟೆಂಟು ಕೋಟು ಜೊತೆಗೊಂದು ಮಕ್ಮಲ್ ಟೋಪಿನೂ ಹೊಲೆಸಿಕೊಟ್ಟರೆ ಎಲ್ಲರೂ ನಮ್ಮ ಬುಟ್ಟಿಗೆ ಬೀಳ್ತಾರಾ? ಈ ಕೋಟು ಡಿಪ್ಲೊಮಸಿ ಕಥೆ ನಿನಗೆ ಯಾರು ಹೇಳಿದ್ದು? ಸ್ವತಃ ಮೋದಿನಾ ಅಥವಾ ಮೋದಿಯ ದರ್ಜಿನಾ? (ಕಜಿನ್ ಸಿಸ್ಟರ್ ವಿಷ್ಯ ಮಾತ್ರ ಹೇಳಬೇಡ..)

8. ಮೋದಿ ಕಾಲದಲ್ಲಿ ಹತ್ತು ಹದಿನೈದು ವರ್ಷಗಳಲ್ಲಿ ಒಂದು ರುಪಾಯಿಯ ಬೆಲೆ ಇಪ್ಪತ್ತು ಡಾಲರ್ ಆಗುತ್ತೆ ಅಂದ್ಯಲ್ಲ. ಆ ಲೆಕ್ಕಾಚಾರಕ್ಕೆ ಈಗ ಕಡಿಮೆ ಅಂದ್ರೂ ಒಂದು ಡಾಲರ್ ಬೆಲೆ ಒಂದು ರುಪಾಯಿನಾದ್ರೂ ಆಗಬೇಕಿತ್ತಲ್ಲವೇ? ನಾವು ಒಂದುಸಾವಿರ ರುಪಾಯಿ ಕೊಟ್ರೆ ಒಂದುಸಾವಿರ ಡಾಲರಿಗೆ ಬದಲಾಯಿಸಿ ಕೊಡ್ತೀಯ?

9. 2017ರಲ್ಲಿ ಭಾರತ ವಿಶ್ವಗುರು ಆಗೋಗುತ್ತೆ ಅಂದ್ಯಲ್ಲ, ಆಗೋಯ್ತಾ? ಮೋದಿ ಭಾರತವನ್ನು ವಿಶ್ವಗುರು ಮಾಡಿದ್ರಾ? ಯಾವ ಆಂಗಲ್ ನಲ್ಲಿ ವಿಶ್ವಗುರು ಆಯ್ತು ಗುರು? ಬಡತನ ನಿರ್ಮೂಲನೆ ಆಯ್ತಾ? ಜಿಡಿಪಿ ಅಮೆರಿಕಕ್ಕಿಂತ ಜಾಸ್ತಿಯಾಯ್ತಾ? ತಂತ್ರಜ್ಞಾನದಲ್ಲಿ ನಾವು ಚೀನಾ ಮೀರಿಸಿದೆವಾ? ಅಷ್ಟಕ್ಕೂ ವಿಶ್ವಗುರು ಪದದ definition ಹೇಳಿಬಿಡು ಹೋಗಲಿ.

10. 2014 ರಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್ ಗೆ 130 ಡಾಲರ್ ಆಸುಪಾಸಿನಲ್ಲಿತ್ತು. ಈಗ ಬ್ಯಾರಲ್ 30 ರಿಂದ 40 ಡಾಲರ್ ಗೆ ಇಳಿದಿದೆ. ಇಷ್ಟಾದರೂ ಆಗ ಪೆಟ್ರೋಲ್ ಗೆ ಇದ್ದ ಬೆಲೆಯೇ ಈಗಲೂ ಇದೆ ಅಂತ ಸಮರ್ಥಿಸಿಕೊಳ್ತೀಯಲ್ಲ? ಯಾವ ಲಾಜಿಕ್ ಇದು? ನೀನು ಹೊಟ್ಟೆಗೆ ಅನ್ನ-ಸಾರು ತಾನೇ ತಿನ್ನೋದು? ಗೋಮಾತೆ ಪ್ರಸಾದ ಏನಾದ್ರೂ ತಿಂತೀಯ ಅನ್ನೋದಾದ್ರೆ ಉತ್ತರ ಕೊಡಬೇಡ.

11. ವಿಜಯ್ ಮಲ್ಯನನ್ನು ಕರೆದುಕೊಂಡು ಬರಲು ಸ್ವತಃ ಪ್ರಧಾನಿ ಮೋದಿನೇ ಇಂಗ್ಲೆಂಡ್ ಗೆ ಹೋಗಿದ್ದರು. ಬ್ರಿಟಿಷ್ ಪ್ರಧಾನಿಗೆ ಧಮಕಿ ಹಾಕಿದ್ರು. ಆಮೇಲೆ ಅಲ್ಲಿನ ಲೋಯರ್ ಕೋರ್ಟು ಹೈಯರ್ ಕೋರ್ಟು ಮಲ್ಯನನ್ನು ಕರೆದುಕೊಂಡು ಹೋಗಬಹುದು ಅಂತ ಹೇಳಿದವು ಅಂದಿದ್ಯಲ್ಲ? ಮಲ್ಯ ಬಂದನಾ? ಯಾಕೆ ಬರಲಿಲ್ಲ? ಮಲ್ಯನನ್ನೇನಾದರೂ ಆ ದೇಶದಿಂದ ನಡೆಸಿಕೊಂಡೇ ಕರೆದುಕೊಂಡು ಬರ್ತಿದ್ದಾರಾ? ಹದಿನೇಳು ದೇಶ ದಾಟಿಸಿ, 23,000 ಕಿಮೀ ದೂರ ರಸ್ತೆಯಲ್ಲೇ ಬರ್ತಾ ಇದ್ದಾನ ಮಲ್ಯ? ಅಂದಾಜು ಎಷ್ಟು ದಶಕಗಳ ನಂತ್ರ ಮಲ್ಯ ನಡ್ಕೊಂಡು ನಮ್ ದೇಶ ತಲುಪಬಹುದು? ಎನಿ ಇನ್ಫರ್ಮೇಷನ್?

12. ವಡ್ನಗರ್ ರೈಲ್ವೆ ಸ್ಟೇಷನ್ ನಲ್ಲಿ ಬಾಲ ನರೇಂದ್ರ ಮೋದಿ ಟೀ ಮಾರುತ್ತಿದ್ದಾಗ ಸೈನಿಕರಿಗೆ ಪುಗಸಟ್ಟೆ ಟೀ ಕೊಟ್ಟ ಕಥೆಗೆ ಆಧಾರ ಏನು? ಸಿಸಿ ಟಿವಿ ಚೆಕ್ ಮಾಡ್ಕೊಳ್ಳಿ ಅನ್ನಬೇಡ, ಆ ಟೈಮಲ್ಲಿ ವಡ್ನಾಗರ್ ನಲ್ಲಿ ರೈಲ್ವೆ ಸ್ಟೇಷನ್ನೇ ಇರಲಿಲ್ಲ, ಸಿಸಿ ಟಿವಿ ಎಲ್ಲಿಂದ ತರೋದು?

13. ಮೋದಿ ಗಡಿಯುದ್ದಕ್ಕೂ ಲೇಸರ್ ಬೇಲಿ ಹಾಕಿದ್ದಾರೆ ಅಂದ್ಯಲ್ಲಾ ಎಲ್ಲಿದೆ ಲೇಸರ್ ಬೇಲಿ. ಲೇಸರ್ ಬೇಲಿ ಇದ್ರೂ ಚೀನಾ ಸೈನಿಕರು ಭಾರತದ ಗಡಿಯೊಳಗೆ ಬಂದು ನಮ್ಮ ಇಪ್ಪತ್ತು ಸೈನಿಕರನ್ನು ಹೇಗೆ ಕೊಂದುಹಾಕಿದರು? ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಟ್ರು ಅಂದ್ಯಲ್ಲ.. ಈ 20 ವೀರ ಸೈನಿಕರಿಗೆ ಅವು ಯಾಕೆ ಸಿಕ್ಕಿರಲಿಲ್ಲ?

14. ಗಡಿಯಲ್ಲಿ ಸೈನಿಕರ ಸಾವು ನಿಂತುಹೋಯ್ತಾ? ನವಾಮಿ ಗಂಗೆ ಏನಾಯ್ತು? ಗಂಗೆ ಶುದ್ಧಳಾದಳಾ? ದೇಶದಲ್ಲಿ ಉದ್ಯೋಗ ಸೃಷ್ಟಿ ಎಲ್ಲಿಗೆ ಬಂತು? ಎಷ್ಟು ಸ್ಮಾರ್ಟ್ ಸಿಟಿಗಳು ಆದ್ವು? ದೊಲೆರಾ ಪ್ರಾಜೆಕ್ಟ್ ಎಲ್ಲಿಗೆ ಬಂತು? ಕ್ಯಾಶ್ ಲೆಸ್ ಎಕಾನಮಿ ಆಗೇ ಹೋಯ್ತಾ? 2000 ನೋಟಿನಲ್ಲಿ ಯಾರೂ ಲಂಚ ಕೊಡ್ತಾ ಇಲ್ವಾ?

ಇದು ಮುಗಿಯಲ್ಲ ಬಿಡಿ. ಆದರೂ ಹದಿನಾಲ್ಕೇ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬಿಡಲಿ, ಇದನ್ನು ಎಲ್ಲ ಮೀಡಿಯಾಗಳ ಪ್ರಿನ್ಸಿಪಲ್ ಎಡಿಟರುಗಳಿಗೆ ತಲುಪುವವರೆಗೆ ಶೇರ್ ಮಾಡಿ ಫ್ರೆಂಡ್ಸ್.

– ದಿನೇಶ್ ಕುಮಾರ್ ಎಸ್.ಸಿ.

Please follow and like us:
error