ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ಸರಕಾರ ನಾಂದಿ ಹಾಡಬಾರದು: ಸಿದ್ದರಾಮಯ್ಯ

ಬೆಂಗಳೂರು, ಮೇ 16: ‘ಗ್ರಾಮ ಪಂಚಾಯತ್ಗಳಿಗೆ ಯಾವುದೇ ಕಾರಣಕ್ಕೂ ಹೊಸ ಆಡಳಿತ ಸಮಿತಿ ರಚಿಸುವ, ಆಡಳಿತಾಧಿಕಾರಿ ನೇಮಿಸುವ ಕೆಟ್ಟ ಸಂಪ್ರದಾಯಕ್ಕೆ ರಾಜ್ಯ ಸರಕಾರ ನಾಂದಿ ಹಾಡಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ.

ಶನಿವಾರ ಪತ್ರ ಬರೆದಿರುವ ಸಿದ್ದರಾಮಯ್ಯ, ಗಾ.ಪಂ.ಗಳ ಕಾರ್ಯವೈಖರಿಯ ಬಗ್ಗೆ ಏನೇನೂ ತಿಳುವಳಿಕೆ ಇಲ್ಲದವರನ್ನು, ನಿರ್ದಿಷ್ಟ ಸಿದ್ಧಾಂತಗಳ ಹಿನ್ನೆಲೆಯವರನ್ನು ಸೇರಿಸಿ ಆಡಳಿತ ಸಮಿತಿ ರಚಿಸಿದರೆ ಕೊರೋನದಂತಹ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರಿಂದ ಗ್ರಾಮೀಣ ಕರ್ನಾಟಕ ತೀವ್ರ ಅನ್ಯಾಯಕ್ಕೆ ತುತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ತಾತ್ಕಾಲಿಕ ವ್ಯವಸ್ಥೆ ಮಾಡಲೇಬೇಕೆಂದಿದ್ದರೆ 1987ರಲ್ಲಿ ಮಾಡಿದಂತೆ ಪ್ರಸ್ತುತ ಅಧಿಕಾರದಲ್ಲಿರುವ ಎಲ್ಲ ಗ್ರಾಮ ಪಂಚಾಯತ್ಗಳನ್ನು ಮತ್ತು ಸದಸ್ಯರನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರಿಸಬೇಕು. ಅದರ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಗ್ರಾ.ಪಂ.ಗಳಿಗೆ ಆಯ್ಕೆಯಾಗುವ ಸದಸ್ಯರು ಯಾವುದೇ ಪಕ್ಷ, ಬಣ ಮುಂತಾದವುಗಳಿಗೆ ಸೇರದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಂವಿಧಾನದ ಮೂಲ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993 ನ್ನು ಜಾರಿಗೆ ತರಲಾಯಿತು. 5 ವರ್ಷಗಳ ಹಿಂದೆ ರಾಜ್ಯದ 6,024 ಗ್ರಾ.ಪಂ.ಗಳಿಗೆ ನಡೆದ ಚುನಾವಣೆಗಳಲ್ಲಿ 97,060 ಮಂದಿ ಸದಸ್ಯರು ಆಯ್ಕೆಯಾಗಿರುತ್ತಾರೆ. ಬರ, ಪ್ರವಾಹದಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವುದರ ಮೂಲಕ ಉತ್ತಮವಾಗಿ ಕೆಲಸ ಮಾಡಿದ್ದಾರೆಂದು ಅವರು ತಿಳಿಸಿದ್ದಾರೆ.

ಕೊರೋನ ಬಿಕ್ಕಟ್ಟಿನ ಸಂದರ್ಭದಲ್ಲಿ ಸಮರ್ಥವಾಗಿ ನಿಭಾಯಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈ ಸೋಂಕು ತೀವ್ರವಾಗಿ ಹರಡುತ್ತಿಲ್ಲ. ನಗರಗಳಿಂದ ವ್ಯಾಪಕವಾಗಿ ಜನರು ಹಳ್ಳಿಗಳಿಗೆ ವಲಸೆ ಹೋದರೂ, ಈ ಬೇಸಿಗೆಯಲ್ಲಿ ಕುಡಿಯುವ ನೀರು, ನೈರ್ಮಲ್ಯ ಮುಂತಾದ ಸಮಸ್ಯೆಗಳು ಸೃಷ್ಟಿಯಾಗದಂತೆ ಗ್ರಾ.ಪಂ.ಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಈ ಸದಸ್ಯರ ಅವಧಿ ಒಂದೆರಡು ತಿಂಗಳಲ್ಲಿ ಮುಗಿಯುತ್ತದೆ.

ನಿಗದಿತ ಅವಧಿಯೊಳಗೆ ಚುನಾವಣೆ ನಡೆಸುವುದು ಕಡ್ಡಾಯ. ಆದರೆ, ಕೊರೋನ ಸೋಂಕಿನ ನೆಪದಲ್ಲಿ ಸರಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ. ಹೀಗೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ನ್ಯಾಯಾಲಯವು ಚುನಾವಣೆ ನಡೆಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಬಿಕ್ಕಟ್ಟಿನ ನೆಪದಲ್ಲಿ ಸರಕಾರ ಜಿಲ್ಲಾಧಿಕಾರಿಗಳ ಮೂಲಕ ಆಡಳಿತಾಧಿಕಾರಿಗಳನ್ನು ಮತ್ತು ನಾಮನಿರ್ದೇಶಿತ ಆಡಳಿತ ಸಮಿತಿ ರಚಿಸಲು ಸರಕಾರ ಮುಂದಾಗಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಆಕ್ಷೇಪಿಸಿದ್ದಾರೆ.

Please follow and like us:
error