ಗ್ರಾ.ಪಂ. ಕಾರ್ಯಕರ್ತರನ್ನು ನಾಯಕರನ್ನಾಗಿಸಲು ನಾವು ದುಡಿಯುತ್ತೇವೆ: ಸವದಿ

ಕೊಪ್ಪಳ: ಲೋಕಸಭಾ, ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಗಲಿರುಳು ದುಡಿಯುತ್ತಾರೆ. ನಮಗೆಲ್ಲ ಜೈಕಾರ ಹಾಕಿ ಗೆಲ್ಲಿಸುತ್ತಾರೆ. ಆದರೆ ಈಗ ನಡೆಯುತ್ತಿರುವ ಗ್ರಾಪಂ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ನಮಗೆ ಕೆಲಸ ಮಾಡಿದ ನಿಮಗೆಲ್ಲ ನಾಯಕರಾದ ನಾವುಗಳು ದುಡಿಯುತ್ತೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಗ್ರಾಪಂ ಚುನಾವಣೆ ನಿಮಿತ್ತ ಜಿಲ್ಲಾ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು. ನಮಗಾಗಿ ಮನೆ ಮಠ ಊಟ ಬಿಟ್ಟು ಗೆಲ್ಲುವ‌ವರೆ ದುಡಿಯುತ್ತೀರಿ. ನಿಮ್ಮ ಸ್ವಾಭಿಮಾನಿ ಕೆಲಸ ಮಾಡಿದ್ದೀರಿ. ಪ್ರಮಾಣಿಕವಾಗಿ ದುಡಿದ ನಿಜವಾದ ಕಾರ್ಯಕರ್ತ ಕೊನೆಯಲ್ಲಿ ನಿಂತಿರುತ್ತಾನೆ. ಆತನಿಗಾಗಿ ದುಡಿಯುವುದೇ ನಮ್ಮ ಕೆಲಸ. ಬಿಜೆಪಿ ಇದೀಗ ಹೊಸ ಆಯಾಮ ಮಾಡಿದೆ. ಇದನ್ನು ಕಳೆದ ಇಪ್ಪತ್ತು ವರ್ಷಗಳಿಂದ ಗುಜರಾತ್ ನಲ್ಲಿ ನಡೆದಿದೆ. ಅದರಂತೆ ಇದೀಗ ಇಡೀ ದೇಶಾದ್ಯಂತ ಪ್ರಯೋಗ ನಡೆಯಲಿದೆ. ಕಾರ್ಯಕರ್ತನ ಗೆಲುವಿಗಾಗಿ ದುಡಿಯುವ ಆಯಾಮವನ್ನು ನಮಗೆಲ್ಲ ನೀಡಿದ್ದಾರೆ. ಹೀಗಾಗಿ ಗ್ರಾಪಂ ಚುನಾವಣೆಗಳಲ್ಲಿ ನಾವೆಲ್ಲ ಕಾರ್ಯಕರ್ತರ ಗೆಲುವಿಗೆ ಶ್ರಮಿಸುತ್ತೇವೆ. ಬರುವ ಇಪ್ಪತ್ತು ವರ್ಷಗಳ ಕಾಲ ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿಯೇ ಅಧಿಕಾರದಲ್ಲಿರುವಂತೆ ಹೊಸ ಕಾನ್ಸೆಪ್ಟ್ ಜಾರಿ ಮಾಡಲಾಗುತ್ತಿದೆ. ಎಂದು ತಿಳಿಸಿದರು.

 

ಕಾರ್ಯಕರ್ತರೇ ನಮ್ಮ ಜೀವಾಳ ಎಂದು ನಡೆಸಿಕೊಳ್ಳುವ ಏಕೈಕ ಪಕ್ಷ ಬಿಜೆಪಿ. ರಾಜ್ಯಸಭೆಗೆ ಆಯ್ಕೆ ನಡೆದಾಗ ಜೆಡಿಎಸ್ ನಿಂದ ಆಯ್ಕೆಯಾಗಿದ್ದು ಚಿರಯುವಕ ದೇವೇಗೌಡ, ಕಾಂಗ್ರೆಸ್ ನಿಂದ ಯುವಕರ ಕಣ್ಮಣಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದರು. ಆದರೆ ನಮ್ಮ‌ ಪಕ್ಷದಿಂದ ಸಾಮಾನ್ಯ ಕಾರ್ಯಕರ್ತರಾಗಿದ್ದ ಈರಣ್ಣ ಕಡಾಡಿ ಹಾಗೂ ಅಶೋಕ ಗಸ್ತಿ ಅವರನ್ನು ಆಯ್ಕೆ ಮಾಡಲಾಯಿತು. ಇವೆಲ್ಲವೂ ಕಾರ್ಯಕರ್ತರಿಗೆ ಅವಕಾಶ ನೀಡುವ ಪಕ್ಷ ಎಂದು ತೋರಿಸಿಕೊಡುತ್ತವೆ ಎಂದು ಮಾರ್ಮಿಕವಾಗಿ ಮಾತನಾಡಿದರು.

 

ಮನೆ ಬಾಡಿಗೆ ಕೊಡಲೂ ಆಗದ, ಆಸ್ತಿಯನ್ನೆ ಹೊಂದಿರದ ಅಶೋಕ ಗಸ್ತಿ ರಾಜ್ಯಸಭೆ ಸದಸ್ಯರಾದರು. ತುಳಿತಕ್ಕೆ ಒಳಗಾಗಿದ್ದ ಸಮುದಾಯದ ಸಾಮಾನ್ಯ ಕಾರ್ಯಕರ್ತ ದೊಡ್ಡ ಹುದ್ದೆಗೆ ಹೋಗುವುದು ಬಿಜೆಪಿ ಪಕ್ಷದಲ್ಲಿ ಮಾತ್ರ. ಬೇರೆ ಪಕ್ಷದಲ್ಲಿ ಈ ಪದ್ಧತಿ ಇಲ್ಲ. ಸ್ವತಃ ಸೋತಿದ್ದ ನನ್ನನ್ನೇ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್ ನಲ್ಲಿ ಒಮ್ಮೆ ಸೋತರೆ ಅಲ್ಲಿ ಸತ್ತಂತೆ ಸರಿ. ವಿಧಾನಸಭೆ ನೋಡಲು ಪಾಸ್ ಕೊಡದೇ ದೂರವಿಟ್ಟಿದ್ದ ಸಿದ್ಧಿ ಜನಾಂಗದವರನ್ನು ವಿಪ ಸದಸ್ಯರನ್ನಾಗಿ ಮಾಡಿದ್ದು ಇದೇ ಬಿಜೆಪಿ. ಇದೆಲ್ಲ ನಡೆಯುವುದು ನಮ್ಮ‌ ಪಕ್ಷದಲ್ಲಿ ಮಾತ್ರ ಎಂದರು.

 

ಸರ್ಕಾರಿ ಚೆಕ್ ಮೇಲೆ ಸಹಿ ಮಾಡುವ ಅವಕಾಶ ಇರುವುದು ಗ್ರಾಪಂ ಅಧ್ಯಕ್ಷನಿಗೆ ಮಾತ್ರ. ಅಂತಹ ಅಧಿಕಾರ ಕೊಡಿಸುವ ಕೆಲಸವನ್ನು ನಾಯಕರಾದ ನಾವೆಲ್ಲರೂ ಮಾಡೋಣ. ತನು ಮನ ಧನ ತ್ಯಾಗ ಮಾಡಿದ ಸಾಮಾನ್ಯ ಕಾರ್ಯಕರ್ತನ ಗೆಲುವಿಗೆ ಶ್ರಮಿಸಿ ಋಣ ತೀರಿಸೋಣ. ಅಧಿಕಾರ, ಸ್ಥಾನಮಾನ ನೀಡುವಂತೆ ಮಾಡಿರುವ ಕಾರ್ಯಕರ್ತರ ಗೆಲುವಿಗಾಗಿ ನಾಯಕರಾದ ನಾವೆಲ್ಲ ತನು ಮನ ಧನ ನೀಡಿ ಹದಿನೈದು ದಿನ ದುಡಿದು ಅವರಿಗೆ ಅಧಿಕಾರ ಕೊಡಿಸೋಣ ಎಂದು ನಾಯಕರಿಗೆ ಸಲಹೆ ನೀಡಿದರು.

 

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಅತಿಹೆಚ್ಚು ಗೆಲ್ಲಿಸುವ ಮೂಲಕ ಬಿಜೆಪಿ ಗಟ್ಟಿಗೊಳ್ಳವಂತೆ ಮಾಡೋಣ ಎಂದರು.

 

ಸಮಾವೇಶದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಮಾಜಿ ಶಾಸಕ ನೇಮಿರಾಜ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ನವೀನ, ಸಿದ್ದೇಶ್ ಯಾದವ್, ಕೆಡಿಪಿ ಸದಸ್ಯ ಅಮರೇಶ್ ಕರಡಿ, ಮುಖಂಡ ಸಿ.ವಿ. ಚಂದ್ರಶೇಖರ್, ಹೇಮಲತಾ ನಾಯಕ್, ಕಳಕನಗೌಡ ಪಾಟೀಲ್, ನವೀನ ಗುಳಗಣ್ಣವರ್, ಮಹಾಂತೇಶ್ ಪಾಟೀಲ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Please follow and like us:
error