ಗೌರಿ ಹತ್ಯೆಗೆ 3 ವರ್ಷ: ಸೆ.5ಕ್ಕೆ ದೇಶಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳಿಂದ ‘ನಾವೆದ್ದು ನಿಲ್ಲದಿದ್ದರೆ’ ಆಂದೋಲನ

ಬೆಂಗಳೂರು  : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಮೂರು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಸುಮಾರು 500ಕ್ಕಿಂತ ಹೆಚ್ಚು ಮಹಿಳಾ ಸಂಘಟನೆಗಳು, ಲೈಂಗಿಕ ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಜಂಟಿಯಾಗಿ ಸೆ.5ರಂದು ‘ನಾವೆದ್ದು ನಿಲ್ಲದಿದ್ದರೆ’ ಎಂಬ ಆಂದೋಲನವನ್ನು ಹಮ್ಮಿಕೊಂಡಿವೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಗಳು, ಇಂದು ಭಾರತದಲ್ಲಿ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿ ಅಸಂಘಟಿತ ಕ್ಷೇತ್ರಗಳು ದುಡಿಯುತ್ತಿದ್ದರೂ ಸರಕಾರದ ಆರ್ಥಿಕ ನೀತಿಗಳು ಖಾಸಗಿ ಬಂಡವಾಳಶಾಹಿಗಳನ್ನು ಓಲೈಸುತ್ತಿದ್ದು, ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ತಿಳಿಸಿವೆ.

ಮಹಿಳೆಯರ, ಲೈಂಗಿಕ ಅಲ್ಪಸಂಖ್ಯಾತರ ಮೇಲೆ ಮರ್ಯಾದ ಹತ್ಯೆ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವಂತಹ ಸಿಎಎ ಹಾಗೂ ಕಾಶ್ಮೀರದಲ್ಲಿ ಕಲಂ 370ನ್ನು ರದ್ದುಗೊಳಿಸುವುದರ ಮೂಲಕ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಮಾಹಿತಿ ಹಕ್ಕು ಕಾನೂನನ್ನು ದುರ್ಬಲಗೊಳಿಸಿ, ಪ್ರಜೆಗಳ ಪ್ರಶ್ನಿಸುವ ಹಕ್ಕನ್ನು ಕಸಿಯಲಾಗುತ್ತಿದೆ. ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯ, ಉಡುಗೆ ತೊಡುಗೆಯ ಆಯ್ಕೆ, ಆಹಾರ ಪದ್ಧತಿ, ಧಾರ್ಮಿಕ ಆಚರಣೆಯ ಹಕ್ಕುಗಳನ್ನು ಕುಂಠಿತಗೊಳಿಸಲಾಗುತ್ತಿದೆ. ಹಾಗೂ ವಿವಿಧ ಮಾನವ ಹಕ್ಕುಗಳ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತರು, ಕಾರ್ಯಕರ್ತರು ಹಾಗೂ ಚಿಂತಕರಿಗೆ ಕಾನೂನು ನೆರವು ನಿರಾಕರಿಸಿ ಕಠಿಣ ಕಾನೂನುಗಳಡಿಯಲ್ಲಿ ಬಂಧಿಸಲಾಗುತ್ತಿದೆ.

ಕೋವಿಡ್‍ಗೂ ಮೊದಲು ನಿರುದ್ಯೋಗ ಹೆಚ್ಚಿದ್ದು, ಲಾಕ್‍ಡೌನ್ ನಂತರ ಇದು ದುಪ್ಪಟ್ಟಾಗಿದೆ. ಮಹಿಳೆಯರೇ ಹೆಚ್ಚಾಗಿರುವ ಅನೌಪಚಾರಿಕ, ಅಸಂಘಟಿತ ಕಾರ್ಮಿಕರ ಬದುಕು ನಿರ್ನಾಮವಾಗಿದೆ. ಕೋವಿಡ್ ನಿಯಂತ್ರಣದಲ್ಲಿ ತೊಡಗಿರುವ ಆಶಾ, ಅಂಗನವಾಡಿ ಹಾಗೂ ಪೌರ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೇ ವೇಳೆ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನದಡಿಯಲ್ಲಿ ಆಡಳಿತ ಹಾಗೂ ಪ್ರಜಾಪ್ರಭುತ್ವದ ಉಳಿವು ಹಾಗೂ ಜನತೆಯ ಮೂಲಭೂತ ಹಕ್ಕುಗಳ ಸಂರಕ್ಷಣೆಗೆ ಆಗ್ರಹಿಸಿ ಸೆ.5ರಂದು ದೇಶಾದ್ಯಂತ ಸಾವಿರಾರು ಜನ ಮತ್ತು ಸಂಘಟನೆಗಳು ಆನ್‍ಲೈನ್ ಮತ್ತು ನೇರವಾಗಿ ನಾವೆದ್ದು ನಿಲ್ಲದಿದ್ದರೆ ಎಂಬ ಅಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದ ಸ್ವರೂಪ

-ನಿರ್ದಿಷ್ಟ ಬೇಡಿಕೆಗಳನ್ನೊಳಗೊಂಡ ರಾಜ್ಯ ಪತ್ರವೊಂದನ್ನು ಬಿಡುಗಡೆ ಮಾಡಿ ರಾಜ್ಯ ಸರಕಾರ ಇತ್ತ ಗಮನವಹಿಸಬೇಕೆಂದು ಒತ್ತಾಯಿಸುವುದು.

-ಸ್ಥಳೀಯವಾದ ಬೇಡಿಕೆಗಳನ್ನೊಳಗೊಂಡ ಪತ್ರವನ್ನು ಸ್ಥಳೀಯ ಪ್ರಾಧಿಕಾರ, ಆಡಳಿತ ಕಚೇರಿ, ಸ್ಥಳೀಯ ರಾಜಕೀಯ ಮುಖಂಡರುಗಳಿಗೆ ಸಲ್ಲಿಸುವುದು.

-ವಿವಿಧ ಕಾರ್ಯ ವಲಯಗಳ ಮಹಿಳೆಯರ, ರೈತರ, ದಿನಗೂಲಿ ಕಾರ್ಮಿಕರ, ಸಿದ್ಧ ಉಡುಪು ಕಾರ್ಮಿಕರ, ವಲಸೆ ಕಾರ್ಮಿಕರ ಹಾಗೂ ಲೈಂಗಿಕ ಕಾರ್ಯಕರ್ತೆಯರ ಹೋರಾಟದ ಕತೆ, ಮಾಹಿತಿಗಳನ್ನೊಳಗೊಂಡ ವಿಡಿಯೋಗಳ ಬಿಡುಗಡೆ. ಹಾಗೂ ಫೇಸ್‍ಬುಕ್ ಲೈವ್ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

Please follow and like us:
error