ಗೋಹತ್ಯೆ ನಿಷೇಧ: ಹೊಸ ಮಸೂದೆ ಪ್ರಕಾರ ಯಾವುದಕ್ಕೆ ಶಿಕ್ಷೆ ? ಏನೆಲ್ಲ ಕಾನೂನು ಬಾಹಿರ ?

ಬೆಂಗಳೂರು,  : ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ 2020ನೆ ಸಾಲಿನ ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷದೊಳಗಿನ ಆಕಳು, ಆಕಳ ಕರು ಮತ್ತು ಗೂಳಿ, ಎತ್ತು, ಎಮ್ಮೆ ಅಥವಾ ಕೋಣವನ್ನು ವಧಿಸುವಂತಿಲ್ಲ. ಆದರೆ, ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯಿಂದ ಅಥವಾ ಗುಣಪಡಿಸಲಾಗದಂತಹ ಕಾಯಿಲೆಯಿಂದ ಬಳಲುತ್ತಿರುವ 13 ವರ್ಷ ವಯಸ್ಸಿನ ಮೇಲ್ಪಟ್ಟ ಎಮ್ಮೆಯನ್ನು ಮಾತ್ರ ರಾಜ್ಯ ಸರಕಾರವು ಅಧಿಕೃತಗೊಳಿಸಿದ ಪಶುವೈದ್ಯಾಧಿಕಾರಿಯು ಸಕ್ಷಮ ಪ್ರಾಧಿಕಾರಿಯ ಪ್ರಮಾಣೀಕರಣದೊಂದಿಗೆ ವಧಿಸಲು ಅವಕಾಶ ಕಲ್ಪಿಸಬಹುದು.

ಯಾರಾದರೂ ಗೋಹತ್ಯೆ ಮಾಡಿದರೆ ಕನಿಷ್ಠ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಒಂದು ಜಾನುವಾರು ಹತ್ಯೆ ಮಾಡಿದರೆ ಕನಿಷ್ಠ 50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ.ಗಳವರಗೆ ದಂಡ ವಿಧಿಸಬಹುದು. ಪುನರಾವರ್ತಿತ ಅಪರಾಧಕ್ಕೆ 1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗೆ ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಗೋಹತ್ಯೆಗಾಗಿ ಜಾನುವಾರುಗಳನ್ನು ಮಾರಾಟ ಮಾಡುವುದಾಗಲಿ, ಖರೀದಿ ಮಾಡುವುದಾಗಿ ಮಾಡುವಂತಿಲ್ಲ. ಅಲ್ಲದೆ, ರಾಜ್ಯದ ಒಳಗೆ ಹಾಗೂ ಹೊರಗೆ ಸಾಗಾಣಿಕೆ ಮಾಡುವಂತಿಲ್ಲ. ಆದರೆ, ಕೃಷಿ ಮತ್ತು ಪಶುಸಂಗೋಪನೆಯ ಉದ್ದೇಶಕ್ಕಾಗಿ ಜಾನುವಾರು ಸಾಗಾಣಿಕೆಗೆ ಪರವಾನಿಗಿಯನ್ನು ಪಡೆಯಬೇಕು.

ರಾಜ್ಯ ಸರಕಾರವು ಜಾನುವಾರುಗಳ ಸಂರಕ್ಷಣೆಗಾಗಿ ಗೋಶಾಲೆಗಳನ್ನು ಒಳಗೊಂಡ ಸಂಸ್ಥೆಗಳನ್ನು ಸ್ಥಾಪಿಸಬಹುದು ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರಕ್ಕೆ ನಿರ್ದೇಶಿಸಬಹುದು. ಅಲ್ಲದೆ, ನೋಂದಾಯಿತ ಸೊಸೈಟಿ, ಸಂಸ್ಥೆ ಅಥವಾ ಸಂಘಕ್ಕೆ ನೀಡಬಹದು. ಸಬ್ ಇನ್ಸ್‍ಪೆಕ್ಟರ್ ಗಳಿಗೆ ಸಕ್ಷಮ ಪ್ರಾಧಿಕಾರದ ಅಧಿಕಾರ ಕಲ್ಪಿಸಲಾಗಿದೆ. ಅಕ್ರಮವಾಗಿ ಗೋ ಸಾಗಾಣಿಕೆ ಮಾಡುವುದು ಕಂಡು ಬಂದಲ್ಲಿ ಅವರು ದಾಳಿ ಮಾಡಿ, ಪರಿಶೀಲನೆ ಮಾಡಿ, ವಶಕ್ಕೆ ಪಡೆಯುವ ಅಧಿಕಾರವನ್ನು ಹೊಂದಿದ್ದಾರೆ. ಜಪ್ತಿ ಮಾಡಿದ, ಮುಟ್ಟುಗೋಲು ಹಾಕಿದ್ದನ್ನು ಸೆಷನ್ ಕೋರ್ಟ್ ನ್ಯಾಯಾಧೀಶರ ಎದುರು ವರದಿ ಮಾಡಬೇಕು. ಗೋಹತ್ಯೆ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬೇಕು. ಸಕ್ಷಮ ಪ್ರಾಧಿಕಾರವು ವಶಪಡಿಸಿಕೊಂಡ ಜಾನುವಾರುಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಬಹುದು. ವಶಪಡಿಸಿಕೊಂಡ ಗೋವುಗಳನ್ನು ಆರೋಪಿತರಿಗೆ ಹಿಂದಿರುಗಿಸುವಂತಿಲ್ಲ. ಗೋಹತ್ಯೆಯ ಪ್ರಕರಣ ಸೆಷನ್ ಜಡ್ಜ್ ಹಂತದಲ್ಲೇ ನಡೆಯಬೇಕು. ಆರೋಪ ಸಾಬೀತಾದಲ್ಲಿ ಜಾನುವಾರುಗಳನ್ನು, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.

ಸದ್ಭಾವನೆಯಿಂದ ಕಾರ್ಯನಿರ್ವಹಿಸುವ ವ್ಯಕ್ತಿಗಳ ಸಂರಕ್ಷಣೆ: ಈ ಅಧಿನಿಯಮದ ಅಥವಾ ಅದರಡಿ ರಚಿಸಿದ ನಿಯಮಗಳ ಅಡಿಯಲ್ಲಿ ಸದ್ಭಾವನೆಯಿಂದ ಕೈಗೊಂಡ ಅಥವಾ ಕೈಗೊಳ್ಳಲು ಉದ್ದೇಶಿಸಿದ ಸಕ್ಷಮ ಪ್ರಾಧಿಕಾರಿಯ ಅಥವಾ ಈ ಅಧಿನಿಯಮದ ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುವ ಯಾರೇ ವ್ಯಕ್ತಿಯ ವಿರುದ್ಧ ಯಾವುದೆ ದಾವೆ, ಅಭಿಯೋಜನೆ ಅಥವಾ ಇತರ ಕಾನೂನು ವ್ಯವಹರಣೆಗಳನ್ನು ಹೂಡುವಂತಿಲ್ಲ.

Courtesy : Varthabharati

Please follow and like us:
error