ಗೋಲಿಬಾರ್‌ಗೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ: ಸಿಎಂ ಯಡಿಯೂರಪ್ಪ

ಬೆಂಗಳೂರು, ಡಿ.20: ಮಂಗಳೂರಿಗೆ ನಾಳೆ(ಶನಿವಾರ) ನಾನು ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಗೋಲಿಬಾರ್ ಮಾಡುವಂತಹ ಪರಿಸ್ಥಿತಿ ಯಾಕೆ ನಿರ್ಮಾಣವಾಯಿತು ಎಂಬುದರ ಕುರಿತು ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಲಿಬಾರ್‌ಗೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ. ಗಲಭೆಗಳಿಗೆ ಪ್ರಚೋದನೆ ನೀಡುತ್ತಿರುವುದು ಕಾಂಗ್ರೆಸ್‌ನವರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು, ಅನುಭವಿಗಳು. ಈ ರೀತಿ ಸರಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬಾರದು ಎಂದರು.

ಕೇರಳ ರಾಜ್ಯದ 30-40 ಮಂದಿ ಪತ್ರಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಪ್ಪು ಗ್ರಹಿಕೆಯಿಂದ ಹೇಳಲಾಗುತ್ತಿತ್ತು. ಆದರೆ, 7-8 ಮಂದಿಯನ್ನು ಮಾತ್ರ ಪತ್ರಕರ್ತರ ಗುರುತಿನ ಚೀಟಿ ಇಲ್ಲದೆ ಇದ್ದ ಕಾರಣ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು ಎಂದು ಅವರು ಹೇಳಿದರು.

ಕೇರಳದ ಪತ್ರಕರ್ತರನ್ನು ಪೊಲೀಸ್ ಭದ್ರತೆಯೊಂದಿಗೆ ಅವರ ರಾಜ್ಯದ ಗಡಿಗೆ ಕಳುಹಿಸಲಾಗಿದೆ. ಮಂಗಳೂರಿಗೆ ಭೇಟಿ ನೀಡಿ ಬಂದ ಬಳಿಕ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ವಿಚಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇರಳ ಸಿಎಂ ಪತ್ರ: ಕರ್ತವ್ಯ ನಿರತರಾಗಿದ್ದ ಕೇರಳದ ಪತ್ರಕರ್ತರನ್ನು ಮಂಗಳೂರಿನಲ್ಲಿ ಪೊಲೀಸರು ಕೆಲವು ಪ್ರದೇಶಗಳಿಗೆ ತೆರಳಲು ನಿರ್ಬಂಧಿಸಿದ್ದಾರೆ. ಪತ್ರಕರ್ತರು ತಮ್ಮ ಕೆಲಸವನ್ನು ಮುಕ್ತ ಹಾಗೂ ಸ್ವತಂತ್ರವಾಗಿ ನಿರ್ವಹಿಸಲು ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರ ಬರೆದಿದ್ದಾರೆ.

Please follow and like us:
error