ಗೃಹ ದಿಗ್ಬಂಧನ ಉಲ್ಲಂಘಿಸಿದರೆ ಜೈಲು ಶಿಕ್ಷೆ, ದಂಡ: ಆರೋಗ್ಯ ಸಚಿವಾಲಯ ಸೂಚನೆ

ಹೊಸದಿಲ್ಲಿ: ಕೊರೋನಾ ನಿರ್ಬಂಧಕ್ಕೆ ಸರ್ಕಾರ ನೀಡಿದ ಶಿಷ್ಟಾಚಾರ, ಮಾರ್ಗಸೂಚಿ ಮತ್ತು ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಅಂತೆಯೇ ಶಂಕಿತ ರೋಗಿಗಳು ನಿಯಮ ಮೀರಿ ಗೃಹ ದಿಗ್ಬಂಧನ ಉಲ್ಲಂಘಿಸಿದರೆ ಆರು ತಿಂಗಳು ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕಟ್ಟುನಿಟ್ಟಿನ ಕಾನೂನು ಅವಕಾಶಗಳನ್ನು ಬಳಸಿಕೊಂಡು, ಗೃಹ ದಿಗ್ಬಂಧನವನ್ನು ಜನ ಉಲ್ಲಂಘಿಸದಂತೆ ಹಾಗೂ ರೋಗ ಹರಡದಂತೆ ತಡೆಯಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಈ ಬಗೆಯ ಭೀಕರ ಸಾಂಕ್ರಾಮಿಕವನ್ನು ತಡೆಯಲು ದಿಗ್ಬಂಧನ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅನಿವಾರ್ಯ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸಾಂಕ್ರಾಮಿಕ ರೋಗ ಕಾಯ್ದೆಯ ಸೆಕ್ಷನ್ 10 ಮತ್ತು ವಿಪತ್ತು ನಿರ್ವಹಣೆ ಕಾಯ್ದೆಯ ಸೆಕ್ಷನ್ 10ರ ಅನ್ವಯ ಆರು ತಿಂಗಳು ಜೈಲು ಹಾಗೂ ಒಂದು ಸಾವಿರ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಈ ಕಾನೂನು ಅವಕಾಶವನ್ನು ಕೇಂದ್ರ ಸರ್ಕಾರ ಈಗಾಗಲೇ ಬಳಸಿಕೊಂಡಿದ್ದು, ರಾಜ್ಯಗಳು ಕೂಡಾ ಬಳಸಿಕೊಳ್ಳುವಂತೆ ಸೂಚಿಸಿ ಪತ್ರ ಬರೆಯಲಾಗಿದೆ. ಜನತೆ ಪ್ರತ್ಯೇಕ ಕೇಂದ್ರಗಳಿಂದ ತಪ್ಪಿಸಿಕೊಳ್ಳುತ್ತಿರುವ ಹಾಗೂ ಗೃಹ ದಿಗ್ಬಂಧನವನ್ನು ಪಾಲಿಸದೇ ಇರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ ದೇಶದಲ್ಲಿ ಇದುವರೆಗೆ 223 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರ ಜತೆಗೆ ಸೋಂಕಿತರ ಜತೆ ನಿಕಟ ಸಂಪರ್ಕ ಹೊಂದಿದ್ದ 6700 ಮಂದಿಯ ಮೇಲೆ ತೀವ್ರ ನಿಗಾ ಇರಿಸಲಾಗಿದೆ. 1.12 ಲಕ್ಷ ಮಂದಿಯ ಸಮುದಾಯ ಸರ್ವೇಕ್ಷಣೆ ನಡೆಸಲಾಗುತ್ತಿದ್ದು, 15 ಸಾವಿರಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯ ಎಂದು ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲಾಲ್ ಅಗರ್‌ವಾಲ್ ಹೇಳಿದ್ದಾರೆ.

 

Please follow and like us:
error