ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ- ಕಾವ್ಯ ಪ್ರಶಸ್ತಿ ವಿತರಣೆ

ಕೊಪ್ಪಳ,  : ಗವಿಸಿದ್ಧ ಬಳ್ಳಾರಿ ಈ ನೆಲದ ಮಹತ್ವದ ಕವಿ. ಇವರ ಹೆಸರಿನಲ್ಲಿ ನಡೆಯುವ ಸಾಹಿತ್ಯೋತ್ಸವ ಕಾರ್ಯಕ್ರಮವು ಹೊಸ ಪ್ರತಿಭೆಗಳ ಬೆಳವಣಿಗೆಗಳಿಗೆ ಪ್ರೇರಕವಾಗಲಿದೆ. ಬಳ್ಳಾರಿಯವರ ಕಾವ್ಯದ ನೆಲೆಗಟ್ಟಿನ ಮೇಲೆ ಉಪನ್ಯಾಸಗಳು ನಡೆಯುವ ಜರೂರಿದೆ. ೧೯೭೦ ರ ದಶಕದಿಂದಲೂ ಸಮಾಜಮುಖಿಯಾದ ಕಾವ್ಯ ಮತ್ತು ತೆರೆದ ಬದುಕಿನ ಮೂಲಕ ಹೆಸರಾದ ಗವಿಸಿದ್ಧ ಎನ್. ಬಳ್ಳಾರಿಯವರ ಪ್ರಖರ ಕಾವ್ಯ ಹೊಸ ಬರಹಗಾರರಿಗೆ ಹೊಸತನ ಸಂಚಲನ ಮೂಡಿಸಿತು ಎಂದು ಕಥೆಗಾರ ಮತ್ತು ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅಮರೇಶ ನುಗಡೋಣಿ ಅಭಿಪ್ರಾಯ ಪಟ್ಟರು.
ಅವರಿಂದು ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯ ಸಭಾಭವನದಲ್ಲಿ ನಡೆದ ಕವಿ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ – ೨೦೨೦’ ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕವಿ ತನ್ನನ್ನು ತಾನು ಅರಿಯುವುದು ಅವಶ್ಯಕತೆ ಇದೆ. ಎಲ್ಲ ಕಾಲಘಟ್ಟದ ಕಾವ್ಯಗಳನ್ನು ಅರಿತು ಮುನ್ನಡೆಯಬೇಕೆಂದು ಯುವಕವಿಗಳಿಗೆ ಕಿವಿಮಾತು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಡಾ. ಜಾಜಿ ದೇವೇಂದ್ರಪ್ಪ ಅವರು ಗವಿಸಿದ್ಧ ಬಳ್ಳಾರಿಯವರನ್ನು ವಿಮರ್ಶಕರು ಸರಿಯಾಗಿ ಗುರುತಿಸಲಿಲ್ಲ. ಇವರ ಉತ್ಕಷ್ಟ ಸಾಹಿತ್ಯಕ್ಕೆ ದೊರೆಯಬಹುದಾದ ಮಾನ್ಯತೆ ಅಷ್ಟಾಗಿ ದೊರೆಯದಿರುವುದು ವಿಷಾದಕರ ಸಂಗತಿ ಎಂದರು. ಹಲವು ಮಹತ್ವದ ಚಳುವಳಿಗಳ ಹಿಂದಿನ ಪ್ರೇರಕ ಶಕ್ತಿಯಾಗಿ ಗವಿಸಿದ್ಧ ಎನ್. ಬಳ್ಳಾರಿ ಇದ್ದಾರೆ. ಬೇಂದ್ರೆ, ಪು.ತಿ.ನ. ಮೊದಲಾದ ಕವಿಗಳಿಗೆ ತಮ್ಮ ಕಾವ್ಯದಲ್ಲಿ ಕೌಂಟರ್ ಮಾಡಿದ್ದಾರೆ. ಈ ನೆಲದ ನೋವು, ಧಗೆಗಳಿಗೆ ದನಿಯಾದ ಗವಿಸಿದ್ಧ ಎನ್. ಬಳ್ಳಾರಿ ಹೆಸರಿನಲ್ಲಿ ಅವರ ಮಕ್ಕಳು ಮಾಡುತ್ತಿರುವ ಕಾರ್ಯಕ್ರಮ ಬಹಳ ಖುಷಿ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ೨೦೨೦ ರ ‘ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಗೆ ಆಯ್ಕೆಯಾದ ಹಸ್ತಪ್ರತಿಗಳಿಗೆ ಬಹುಮಾನ ವಿತರಿಸಲಾಯಿತು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಕನ್ನಡ ಪ್ರಾಧ್ಯಾಪಕರಾದ ಡಾ. ಶೋಭಾ ನಾಯಕ ಮತ್ತು ತುಮಕೂರಿನ, ಮಧುಗಿರಿಯ ಬಿದಲೋಟಿ ರಂಗನಾಥ ಇವರಿಗೆ ತಲಾ ೫,೦೦೦ ರೂ., ಬೆಳ್ಳಿ ಪದಕ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಯಿತು.
ಕಳೆದ ವರ್ಷ ೨೦೧೯ ರ ‘ಗವಿಸಿದ್ಧ ಎನ್. ಬಳ್ಳಾರಿ – ಕಾವ್ಯ ಪ್ರಶಸ್ತಿ’ಯ ವಿಜೇತ ಹಸ್ತಪ್ರತಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಇವರ ‘ನೆರ್ಕೆಗೋಡೆಯ ರತ್ನಪಕ್ಷಿ’, ಹಲಗೇರಿಯ ರಮೇಶ ಸಿ. ಬನ್ನಿಕೊಪ್ಪ ಇವರ ‘ಕಾಣೆಯಾದ ನಗುವ ಚಂದಿರ’ ಮತ್ತು ಮಹೇಶ ಬಳ್ಳಾರಿಯವರ ‘ಐ ಕಾಂಟ್ ಬ್ರೀದ್ ..’ ಕವನ ಸಂಕಲನಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ಅವರು ಗವಿಸಿದ್ಧ ಎನ್. ಬಳ್ಳಾರಿಯವರ ಜೊತೆಗಿನ ಒಡನಾಟ, ಕಾವ್ಯ, ಹೋರಾಟದ ದಿನಗಳನ್ನು ಮೆಲುಕು ಹಾಕಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಐವರು ಪ್ರಗತಿಪರ ರೈತರು ಮತ್ತು ಐವರು ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಬಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ, ಗಂಗಾವತಿಯ ಕ್ಷೇತ್ರ ಸಮನ್ವಯಾಧಿಕಾರಿ ವಿ.ವಿ. ಗೊಂಡಬಾಳ, ವೀರಪ್ಪ ಬಳ್ಳಾರಿ ಉಪಸ್ಥಿತರಿದ್ದರು.
ಜಾನಪದ ಹಾಡುಗಾರ ಮಹೆಬೂಬ ಕಿಲ್ಲೇದಾರ್ ಅವರು ಗವಿಸಿದ್ಧ ಎನ್. ಬಳ್ಳಾರಿಯವರ ಕವಿತೆಗಳ ಗೀತ ಗಾಯನ ನೆರವೇರಿಸಿಕೊಟ್ಟರು. ಸಂಘಟಕ ಮಹೇಶ ಬಳ್ಳಾರಿ ಸ್ವಾಗತಿಸಿದರೆ, ಎಸ್.ಎನ್. ತಿಮ್ಮನಗೌಡರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರೇಶ ಮೇಟಿ ಮತ್ತು ವೀರೇಶ ಕೊಪ್ಪಳ ಕಾರ್ಯಕ್ರಮದ ನಿರೂಪಣೆ ಮಾಡಿದರು.

Please follow and like us:
error