ಕೊಪ್ಪಳ : ಡಿಸೆಂಬರ್ ೨೮ ಖಾಸಗಿ ಶಾಲೆಗಳ ಉಳಿವಿಗಾಗಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘಟನೆಯ ಬೇಡಿಕೆಗಳನ್ನು ಈಡೇರಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಇಂದು ಕೊಪ್ಪಳ ಜಿಲ್ಲಾ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದಿಂದ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳಂತೆ ಖಾಸಗಿ ಶಾಲೆಗಳ ಸೇವೆಯು ಅಪಾರವಾದದ್ದು. ಅದರಲ್ಲಿಯೂ ಗ್ರಾಮೀಣ ಮಟ್ಟದಲ್ಲಿ ಬಜೆಟ್ ಶಾಲೆಗಳ ಸೇವೆ ಅನನ್ಯ. ತಮಗೆ ತಿಳಿದಿರುವಂತೆ ಕಳೆದ ೧೦ ತಿಂಗಳಿಂದ ಕೋವಿಡ್ ಸಂಕ್ರಾಮಿಕ ರೋಗದಿಂದಾಗಿ ಖಾಸಗಿ ಶಾಲೆಗಳ ಗೋಳು ಕೇಳತೀರದು. ಕಳೆದ ಸುಮಾರು ವರ್ಷಗಳಿಂದ ಶಾಲೆಗಳನ್ನು ನಡೆಸುತ್ತಾ ಬಂದರೂ ಬಜೆಟ್ ಶಾಲೆಗಳು ಯಾವುದೇ ಸ್ಥಿರ ನಿಧಿಯನ್ನು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಮತ್ತು ಕಡಿಮೆ ಶುಲ್ಕದಲ್ಲಿ ಶಿಕ್ಷಣವನ್ನು ನೀಡುತ್ತಾ ಬಂದಿರುತ್ತವೆ. ಒಂದು ಕಡೆ ಸಾಂಕ್ರಾಮಿಕ ರೋಗವಾದ ಕೋವಿಡ್-೧೯ ರಿಂದ ತತ್ತರಿಸಿದ್ದರೆ ಮತ್ತೊಂದು ಕಡೆ ಗಾಯದ ಮೇಲೆ ಬರೆ ಎಳೆದಂತೆ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳ ಅಸ್ತಿತ್ವವನ್ನೇ ಕಸಿದುಕೊಳ್ಳುವಂತಹ ಸುತ್ತೋಲೆಗಳನ್ನು ಹೊರಡಿಸುತ್ತಿದ್ದಾರೆ. ಖಾಸಗಿ ಶಾಲೆಗಳನ್ನು ಅಷ್ಟೇಗುರಿಯಾಗಿಸಿ ಇತ್ತೀಚಿನ ೧೦-೧೧-೨೦೨೦ ರಂದು ಹೊರಡಿಸಿರುವ ಆದೇಶ ಸಾವಿರಾರು ಖಾಸಗಿ ಶಾಲೆಗಳು ಮುಚ್ಚುವ ಮುನ್ಸೂಚನೆ ನೀಡುತ್ತಿವೆ. ಅಷ್ಟೇ ಅಲ್ಲದೆ ಮಾನ್ಯ ಶಿಕ್ಷಣ ಸಚಿವರ ದಿನಕ್ಕೊಂದು ಗೊಂದಲ ಹೇಳಿಕೆ ನೀಡಿ ಶಿಕ್ಷಣ ಇಲಾಖೆಯನ್ನು ಗೊಂದಲದ ಗೂಡಾಗಿಸಿದ್ದಾರೆ. ಆದರೂ ನಾವು ಸುಮಾರು ೧೫ ಬೇಡಿಕೆಗಳನ್ನು ಇಟ್ಟುಕೊಂಡು ಮಾನ್ಯ ಶಿಕ್ಷಣ ಸಚಿವರಲ್ಲಿ ಮತ್ತು ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕನಿಷ್ಟ ಸೌಜನ್ಯಕ್ಕಾದರೂ ನಮ್ಮ ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಮಾತನಾಡಿ ನಮ್ಮ ಕಷ್ಟಗಳನ್ನು ಕೇಳುವ ಮನಸ್ಥಿತಿ ಅವರಿಗಿಲ್ಲ. ಖಾಸಗಿ ಶಾಲೆಗಳ ಉಳಿವಿಗಾಗಿ ಇಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ೧೫ ಬೇಡಿಕೆಗಳನ್ನು ಇಟ್ಟು ಮನವಿಯನ್ನು ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಗೌರವ ಅಧ್ಯಕ್ಷರಾದ ಆರ್.ಬಿ.ಪಾನಗಂಟಿ, ಜಿಲ್ಲಾ ಖಜಾಂಚಿ ಸರ್ವೇಶ ವಸ್ತ್ರದ, ತಾಲೂಕ ಅಧ್ಯಕ್ಷರಾದ ಶಾಹಿದ್ ತಹಶೀಲ್ದಾರ, ಜಿಲ್ಲಾ ಸಮಿತಿ ಸದಸ್ಯರಾದ ಆರ್.ಹೆಚ್.ಅತ್ತನೂರ, ಭೀಮಣ್ಣ ವಾಲೇಕಾರ, ಮಲ್ಲಿಕಾರ್ಜುನ ಹಲಗೇರಿ, ನಿರುಪಾದಿಗೌಡ, ನೇತ್ರಾಜ್ ಗುರುವಿನಮಠ, ಇಸ್ಮಾಯಿಲ್ ಸಾಬ್, ಮಲ್ಲಿಕಾರ್ಜುನ ಚೌಕಿಮಠ ಹಾಊ ಜಿಲ್ಲೆಯ ಹಲವಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.