ಖಾಸಗಿ ಚಾನಲ್‌ಗಳಿಗೆ ಒಂದು ಪಬ್ಲಿಕ್ ಲೆಟರ್- ಸಾಮಾಜಿಕ ಜಾಲತಾಣದಲ್ಲಿ ವೈರಲ್

ಆತ್ಮೀಯ ……ಟಿವಿ ಚಾನಲ್ ನಿರ್ದೇಶಕರಿಗೆ ಎಲ್ಲ ವೀಕ್ಷಕರ ಪರವಾಗಿ ಅ‌ನಂತ ವಂದನೆಗಳು. ನಿಮ್ಮಿಂದಾಗಿ ನಾವೆಲ್ಲ ಕ್ಷೇಮ, ನಮ್ಮಿಂದಾಗಿ ನೀವು ಮತ್ತು ನಿಮ್ಮ TRP ಕ್ಷೇಮವೆಂದು ಭಾವಿಸುತ್ತೇವೆ.

ನಮ್ಮ ಬದುಕಿನ ಶೈಲಿಯನ್ನು ಬದಲಿಸಿದ ನಿಮ್ಮಲ್ಲರಿಗೂ, ಎಲ್ಲ ಸಾಮಾನ್ಯ ವೀಕ್ಷಕರ ಪರವಾಗಿ ಅಭಿನಂದನೆಗಳನ್ನು ಹೇಳುತ್ತ ಕೃತಜ್ಞತಾಪೂರ್ವಕವಾಗಿ ವಿವರವಾದ ಈ ಪತ್ರ.

ನೀವು ಪದೇ ಪದೇ ತೋರಿಸಿದಂತೆ ನಾವೆಲ್ಲ ಸಿನಿಮಾ ತಾರೆಯರು ಬಳಸಿ ಬಿಟ್ಟ ಸೋಪು, ಪೇಸ್ಟು, ಶಾಂಪೋ, ಫೇಸ್ ಪೌಡರ್, ಮೌತ್ ವಾಶ್, ಹೇರ್‌ಡೈಗಳನ್ನೆಲ್ಲ ಬಳಸಿ ಬಳಸಿ ನಾವು ಬಹುತೇಕ ಕುಟುಂಬದವರೆಲ್ಲ ಆಲ್‌ಮೋಸ್ಟ್ ಶಾರೂಕ್‌ಖಾನ್, ಸುದೀಪ್, ಕಾಜೋಲ್ ಅಗರ್ವಾಲ್, ತ್ರಿಷಾ, ಪ್ರಿಯಾಂಕ ಆಗಿದ್ದೇವೆ!! ಲಿಂಬೋ ಮಿಶ್ರಿತ ಆ ಪಾತ್ರೆ ಲಿಕ್ವಿಡ್ ಸೋಪ್ ಬಳಸಿ ಅಡಿಗೆ ಮನೆಯ ಎಲ್ಲ ಪಾತ್ರೆಗಳು ಲಕ ಲಕ ಲಕ ಲಕಾಂತ ಹೊಳೆಯುತ್ತವೆ!!

ನೆಲ ವರ್ಸೋಕೆ, ಗೋಡೆ ಕ್ಲೀನ್ ಮಾಡೋಕೆ, ಕೈ ತೊಳೆಯೋಕೆ ನೀವು ಹೇಳಿದ್ದನ್ನು ಬಳಸಿ 99.99% ಬ್ಯಾಕ್ಟೀರಿಯಾ-ವೈರಸ್ ಫ್ರೀ ಮನೆ ಆಗಿದೆ ನಮ್ದು!!

ನಂದಿನಿ ಪ್ರಾಡಕ್ಟ್ ಬಳಸಿ ಕೆಲವರು ರಾಗಿಣಿ ತರಹ ಆಗಿ ಪುನೀತರಾದವರೂ ಇದ್ದೇವೆ. ಸುದೀಪ್ ಮತ್ತು ಉಪೇಂದ್ರ ಹೇಳಿದ TMT ಕಂಬಿ ಬಳಸಿ ನಾವೇ ನಿಜವಾದ ಸೂಪರ್ ಸ್ಟಾರ್ ಆಗಿದ್ದೇವೆ. ಎಲ್ಲ ಜೈಲ್‌ಗಳಲ್ಲೂ ಇದೇ ಕಂಬಿ ಬಳಸುವಂತೆ ನೀವು ಟಿವಿಯಲ್ಲಿ ಇನ್ನೊಂದು ಜಾಹೀರಾತು ಕೊಡಬಹುದಾ!?

ಬಾಹುಬಲಿ ಹೀರೋಯಿನ್ ತಮನ್ನ ಹೇಳಿದ ಮೇಲೆ ಆಗಲ್ಲ ಅನ್ನಲಾಗದೆ ಮೊನ್ನೆ ಇದ್ದ ಒಂಚೂರು ಬಂಗಾರವನ್ನೂ ಅವರು ಹೇಳಿದ ಬಂಗಾರದ ಅಂಗಡಿಗೆ ಮಾರಿ ಬಂದ ಹಣದಲ್ಲಿ ಅಕ್ಕಿ ತಂದು ಈಗ “ನೆಮ್ಮದಿಯಾಗಿದ್ದೇವೆ”. ಅಕ್ಕಿ ಎರಡುವಾರಕ್ಕೆ ಬರಬಹುದು!!

ಬೆಳಗಿನ ನಿಮ್ಮ ಜ್ಯೋತಿಷ್ಯದ ಕಾರ್ಯಕ್ರಮವಂತೂ ನಮ್ಮ ಕಣ್ಣನ್ನು ಸದಾ ತೆರೆಯುವಂತಹದು!! ನಾವು ನಿತ್ಯದ ವೈಯಕ್ತಿಕ ಬೆಳಗಿನ ಕಾರ್ಯಗಳನ್ನೂ ನಿಮ್ಮ ಜ್ಯೋತಿಷಿಗಳು ನಮ್ಮ ರಾಶಿಗನುಗುಣವಾಗಿ ಮುಹೂರ್ತ ಇಟ್ಟಾಗಲೇ ಮಾಡುತ್ತಿದ್ದೇವೆ!! ಸಿಂಹ ರಾಶಿಯವರಿಗೆ ಅಪಘಾತ ಸಂಭವ ಎಂದಾಗ ಆಫೀಸಿಗೆ ರಜೆ ಹಾಕಿದ್ದೇವೆ, ಕಟಕ ರಾಶಿಯವರಿಗೆ ಅನಾರೋಗ್ಯ ಎಂದಾಗ ಏನೂ ಆಗದೇ ಇದ್ದರೂ ನರ್ಸಿಂಗ್ ಹೋಮ್‌ನಲ್ಲಿ ಸ್ಪೆಷಲ್ ವಾರ್ಡ್‌ನಲ್ಲಿ ಅಡ್ಮಿಟ್ ಆಗಿ ಡ್ರಿಪ್ ಹಾಕಿಕೊಂಡು ಅಲ್ಲೂ ನಿಮ್ಮ ಟಿವಿ ನೋಡ್ತಾ ಮರುದಿನ ಡಿಸ್ಚಾರ್ಜ್ ಆಗಿದ್ದೂ ಇದೆ. ನಿಮ್ಮ ಜೋತಿಷಿಗಳ ಮೇಲೆ ನಮ್ಮ ಅಪಾರ ನಂಬಿಕೆ ಅದು. ಆ ಜೋತಿಷಿಗಳಿಗೆ ನಮ್ಮ ನಮಸ್ಕಾರಗಳನ್ನು ಮರೆಯದೇ ತಿಳಿಸಿ.

ಸಂಖ್ಯಾಶಾಸ್ತ್ರದ ಪರಣಿತ ಜ್ಯೋತಿಷಿಗಳು ನಮ್ಮ ಟೆಲಿಫೋನ್ ನಂಬರ್ ಬದಲಿಸಿ, ನಮ್ಮ ಗಾಡಿಯ ನಂಬರ್ ಬದಲಿಸಿ, ನಮ್ಮ ಹೆಸರಿನ ಅಕ್ಷರ ಬದಲಿಸಿ ನಮ್ಮಂತಹ ಅನೇಕರನ್ನು ಕಾಪಾಡಿದ್ದಾರೆ. ವೈಯಕ್ತಿಕವಾಗಿ ಕನ್ಯಾ ರಾಶಿಯವರಿಗೆ ಒಂದು ಎನ್ನುವ ಸಂಖ್ಯೆ ಪ್ರಾಣಕ್ಕೆ ಅಪಾಯ, ಒಳ್ಳೇದಲ್ಲ ಎಂದು ತಿಳಿಸಿ ಮಾಜೀ ಮುಖ್ಯಮಂತ್ರಿಗಳ ತರಹ ಎರಡನೇ ಮದುವೆಗೆ ಮುಂದಾಗುವಂತೆ ಮಾಡಿ ಕನ್ಯಾ ರಾಶಿಯ ಗಂಡಸರನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.

ಇನ್ನು ಸಣ್ಣ ನೆಗಡಿಗೂ ಕೂಡ ಬೆಳಗ್ಗೆ ರಾಶಿ ನಕ್ಷತ್ರ ಕಾರಣ ಎಂದು ನಂಬಿ ಮಧ್ಯಾಹ್ನ ಹೋಮಿಯೋಪತಿ ಔಷಧ ಸೇವಿಸಿ ರಾತ್ರಿ ಎರಡು ಚಮಚ ನೋನಿ ಕುಡಿದು, ಹೋಮ್ ಚಾನಲ್‌ನಲ್ಲಿ ನೋಡಿ ತರಿಸಿದ ಉಂಗುರ ಹಾಕಿ ಮಲಗುವ ಪದ್ದತಿ ರೂಡಿಸಿಕೊಂಡು ಏಳು ದಿನದಲ್ಲಿ ಅನೇಕರ ನೆಗಡಿ ಮಾಯವಾಗಿದೆ. ಎಲ್ಲ ಹೋಮಿಯೋ, ಅಲೋ, ಆಯುರ್ವೇದ, ನಾಟಿ, ಬಾಬಾ ಪತಿಗಳಿಗೆ ನಾವು ಸದಾ ಕೃತಜ್ಞರು. ಇಲ್ಲಾಂದ್ರೆ ಇಷ್ಟೊತ್ತಿಗೆ ನಮ್ಮ ಮೂಗನ್ನೇ ಕುಯಿದು ಹಾಕಬೇಕಿತ್ತು!! ಸದ್ಯ ಹಾಗಾಗಲಿಲ್ಲ, ನಮ್ಮನ್ನು ಎಚ್ಚರಿಸಿ ಕಾಪಾಡಿದಿರಿ.

ಕೊರೋನಾ ವಿಚಾರದಲ್ಲಿ ನೀವು ಅಷ್ಟೂ ಚಾನಲ್‌ನವರು ನಮಗೆ ಗೌರವಾನ್ವಿತ ಚೈನಾ ಅಧ್ಯಕ್ಷರ ರೀತಿಯಲ್ಲಿ ಕಾಣುತ್ತೀರಿ. ಒಂದು ವಿಷಯ ನಮಗೆ ಗಾಬರಿ ಭಯ ಹುಟ್ಟಿಸುವ ಕಾಲಕ್ಕೆ ನೀವು ಮನಶ್ಶಾಸ್ತ್ರಜ್ಞರ ಪರಿಯಲ್ಲಿ ಆ ವಿಷಯವನ್ನು ವಾರ್ತಾ ಕೌನ್ಸಿಲಿಂಗ್ ಮೂಲಕ ಜನರಲ್ಲಿ ಆ ವಿಷಯ ಮರೆಯಾಗುವಂತೆ ಬೇರೆ ವಿಷಯ ಪ್ರಚುರ ಪಡಿಸುವ ರೀತಿಗೆ ಅಷ್ಟೂ ಚಾನಲ್‌ಗಳಿಗೆ ನೋಬೆಲ್ ಪಾರಿತೋಷಕ ಕೊಡಬೇಕು, ನಮಗೆ ಹೆಮ್ಮೆ. ರಾಜಕೀಯ ಹೀಕರಿಸುವಾಗ ಕೊರೋನಾ ತಂದ್ರಿ, ಕೊರೋನಾ ಭಯ ಹುಟ್ಟಿಸುವಾಗ ಡ್ರಗ್ಸ್ ತಂದ್ರಿ, ಡ್ರಗ್ಸ್‌ಗೆ ಅಡಿಕ್ಟ್ ಆಗೋ ಮುಂಚೆ ಇನ್ನೊಂದು ವಿಷಯ ತಂದು ಸಮೋಹಿಕ ಸಮಾಜದ ಆರೋಗ್ಯ ಕಾಪಾಡುವ ನಿಮ್ಮ ನಡೆಗೆ ನೋಬೆಲ್ ಕೂಡ ಚಿಕ್ಕದೆ!!

ನಮ್ಮ ಭಾಷಾ ಜ್ಞಾನ ಹೆಚ್ಚುವುದಕ್ಕೆ ನಿಮ್ಮ ಕೊಡುಗೆ ಅಪಾರ ಎಂದು ಈ ಮೂಲಕ ಹೇಳಲು ಬಯಸುತ್ತೇವೆ. ಉದಾಹರಣೆಗೆ ಒಂದು ಸಣ್ಣ ಮಳೆ ಬಂದು ಎರಡು ಇಂಚು ನೀರು ಬಂದಾಗ ನೀವು ಬಳಸುವ ವರುಣಾಘಾತ, ಜಲಪ್ರಳಯ, ಜಲಸ್ಪೋಟ, ಮಳೆಗಂಡಾಂತರ, ವರ್ಷಾವಿಕೋಪ, ಮುಳುಗುತ್ತಿರುವ ನಗರ ಇತ್ಯಾದಿಗಳನ್ನು ಪ್ರೈಮರಿ ಶಾಲೆ ಟೀಚರ್ ಹೋಮ್‌ವರ್ಕ್ ಕೊಟ್ಟ ಹಾಗೆ ದಿನಕ್ಕೆ ನೂರರಿಂದ ಇನ್ನೂರು ಬಾರಿ ಬಳಸಿ ನಮ್ಮ ಶಬ್ದಭಂಡಾರವನ್ನು ವೃದ್ದಿಸಿದ್ದೀರಿ!!

ಇನ್ನು ವಾಕ್ಯರಚನೆ ವ್ಯಾಕರಣವಂತೂ ಅದ್ಭುತ!! ಉದಾಹರಣೆಗೆ ಯಾರೋ ಒಬ್ಬ ಲಿಂಬೆಹಣ್ಣಿನ ವ್ಯಾಪಾರಿ ಒಂದು ಐಡಿಯಾ ಮಾಡಿ “ಲಿಂಬೆಹಣ್ಣಿನ ಎರಡು ಹನಿಯನ್ನು ಮೂಗಿಗೆ ಬಿಟ್ಟರೆ, ಕೊರೋನಾ ಬರೋದಿಲ್ಲ” ಅಂತ ಒಂದು ಗಾಳಿ ಸುದ್ದಿಯನ್ನು ಏರ್ಟೆಲ್ ಮೊಬೈಲ್‌ನಲ್ಲಿ ಹಾಕಿದರೆ, ನೀವು ಆ ಒಂದು ವಾಕ್ಯವನ್ನು ಬೇರೆ ಬೇರೆ ರೀತಿಯಲ್ಲಿ ವಾಕ್ಯರಚನೆ ಮಾಡಿ, ವಾರ್ತಾ ವಾಚಕಿಯಿಂದ ಬೇರೆ ಬೇರೆ ಭಾವ ಭಂಗಿಗಳಲ್ಲಿ ಅದನ್ನು ಪ್ರಸಾರ ಮಾಡಿ, ನಂತರ ಪುನಃ ಅದನ್ನೇ ನೇರ ವರದಿ ಮಾಡುತ್ತಿದ್ದೇವೆ ಅಂತ ಹೇಳಿ, ಕ್ಯಾಮರಮ್ಯಾನ್ ಜತೆ ನಿಂತ ಆ ವರದಿಗಾರ ಪಕ್ಕದ ಬೀದಿಯಲ್ಲಿ ನಿಂತು ಅದೇ ವಾಕ್ಯವನ್ನು ಹನ್ನೆರಡು ರೀತಿಯಲ್ಲಿ ಹೇಳಿ ಅಂತಿಮವಾಗಿ ಕೊಶ್ಚನ್ ಮಾರ್ಕ್, ಆಶ್ಚರ್ಯ ಸೂಚಕ ಚಿಹ್ನೆಯೊಂದಿಗೆ ಒಂದು ಗಂಟೆಯ ಆ ಕಾರ್ಯಕ್ರಮ ನೆಡೆಸಿ ದಿನಕ್ಕೆ ಮೂರು ಬಾರಿ ಹಾಕಿದ್ದರಿಂದ ಕೊರೋನ ಹೋಗದಿದ್ದರೂ ನಮಗೆ ವ್ಯಾಕರಣ ಬಂತು!!

ನಮ್ಮ ಮನೆಯ ಸದಸ್ಯರ ಹೆಸರುಗಳಂತೆ ರಾಗಿಣಿ, ಸಂಜನಾ, ಕಂಗನಾ, ಜಮೀರ್ ಮುಂತಾದವರ ಹೆಸರುಗಳನ್ನು ನಮ್ಮ ತಲೆಗೆ ತುಂಬಿ, ನಾವೆಲ್ಲ ಒಂದು, ವಿಶ್ವ ಕುಟುಂಬ ಭಾವ ಬರುವಂತೆ ಮಾಡಿದ ನಿಮ್ಮ ರಿಪೀಟೆಡ್ ಬ್ರೇಕಿಂಗ್ ನ್ಯೂಸ್‌ಗೆ ನಮ್ದೊಂದು ಸೆಲ್ಯೂಟ್.

ಇನ್ನು ಮಧ್ಯಾಹ್ನ ತಟ್ಟೆಗೆ ಅನ್ನ ಹಾಕಿಕೊಂಡು ಎರಡು ತುತ್ತು ಬಾಯಿಗಿಡುವಾಗ ನೀವು ‘ಓ ಮೈ ಗಾಡ್’ ಸಿನಿಮಾ ‘ಕೃಷ್ಣ’ ಪಾತ್ರಧಾರಿ ಅಕ್ಷಯಕುಮಾರ್ ಮೂಲಕ ಹಾರ್ಪಿಕ್ ಬಾಟಲಿ ಕಳಿಸಿ ಹಳದಿಗಟ್ಟಿದ ಟಾಯಿಲೆಟ್ ತೋರಿಸಿ ‘ನೀವೆಷ್ಟೇ ತಿಂದರೂ, ತಿಂದಿದ್ದು ನಾಳೆ ಅಲ್ಲಿಗೆ ಹೋಗುವುದೇ’ ಎಂಬ ‘ಸತ್ಯದರ್ಶನ’ ಮಾಡಿಸುವ ಪರಿ ಅನನ್ಯ!!

ಸುಪ್ರೀಮ್ ಕೋರ್ಟ್ ಲಾಯರ್ ಕೂಡ ತಿಳಿಯದ ಲಾ ಪಾಯಿಂಟ್‌ಗಳು, ಜಡ್ಜ್ ಆಗಿ ನೀವು ಕೊಡುವ ನ್ಯಾಯ ತೀರ್ಮಾನ ಕೇಳಿ ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನೇ ತೆಗೆದು ಬಿಡಬಹುದೇನೋ ಅನ್ನುವಷ್ಟು ಶಾರ್ಪ್!! ನಿಮ್ಮಿಂದಾಗಿ ಚಿದಂಬರಮ್‌ಗೆ ಅದೆಷ್ಟು ವರ್ಷ ಜೈಲಾಯಿತು!! ಡಿಕೆಶಿಗೆ ನೀವು ಕೊಡಿಸಿದ ಬೈಲ್‌ಗೆ ಲೆಕ್ಕ ಇದೆಯಾ? ಕ್ಯಾಟ್ ವಾಕ್ ನಡಿಗೆಯ ರಾಗಿಣಿ ಸಂಜನರಂತವರು ಕಸ್ಟಡಿಯಲ್ಲಿ ಇಡ್ಲಿ ತಿನ್ನುವಾಗ ಆದ ಖಾರಕ್ಕೆ ನಿಮ್ಮ ವಾರ್ತೆಗಳಲ್ಲಿ ಕಣ್ಣೀರು ಹರಿಯುವಾಗ ನಮ್ಮ ಮನೆಯ ಬೆಕ್ಕು ಒಂದು ಕಣ್ಣಿನಲ್ಲಿ ನೀರು ಹರಿಸುವಷ್ಟು ಆರ್ದ್ರತೆಯ ಬ್ರೇಕಿಂಗ್ ನ್ಯೂಸ್!!

ಇನ್ನು ಎಲ್ಲ ಸದ್ಗುಣ ಬೆಳಸುವ ಧಾರವಾಹಿಗಳು, ಪುಟ್ಟ ಮಕ್ಕಳೂ ಕೂಡ ಹಠ ಮಾಡದೇ ನೋಡುವ ಐಟಂ ಸಾಂಗ್‌ಗಳು, ಅರವತ್ನಾಲ್ಕು ವಿದ್ಯೆಗಳಲ್ಲಿ ಒಂದಾದ ಆ ‘ವಿದ್ಯೆ’ ಕಲಿಸುವ ರಾತ್ರಿ ಹನ್ನೊಂದರ ಟ್ರೈನಿಂಗ್ ಪೋಗ್ರಾಮ್‌ಗಳು, ಜಾಹೀರಾತುಗಳ ಮಧ್ಯೆ ಪ್ರಸಾರ ಮಾಡುವ ನಮ್ಮ ‘ಮಚ್ಚಿನ’ ಸಿನಿಮಾಗಳು, ಜ್ಞಾನ-ಬುದ್ದಿಶಕ್ತಿ ವೃದ್ಧಿಸುವ ರಿಯಾಲಿಟಿ ಶೋಗಳು – ಜೀವನ ಚೈತ್ರ ಸಿನಿಮಾದಲ್ಲಿ ಅಣ್ಣವ್ರು ಹೇಳ್ತಾರಲ್ಲ “ಎಂಥಾ ಮಕ್ಕಳನ್ನು ಹೆತ್ತಿದ್ದಿಯೆ? ಒಂದೊಂದು ಈ ಮನೆಯ ಮುತ್ತುಗಳು ಕಣೆ” – ಹಾಗೆ ನಿಮ್ಮ ಚಾನಲ್ ಕಾರ್ಯಕ್ರಮಗಳು, ಪ್ರತಿಯೊಂದು ಪ್ರತೀ ಮನೆಯ ಮುತ್ತುಗಳು!!

ಹೀಗೆ ಮುಂದುವರೆಯಲಿ, TRP ಹೆಚ್ಚಲಿ.

ಸದಾ ನಿಮ್ಮ ಚಾನಲ್‌ಗಳನ್ನು ವೀಕ್ಷಿಸುವ ಪ್ರೇಕ್ಷಕ ಶಿರೋಮಣಿಗಳು!!

 

Please follow and like us:
error