ಕ್ಷಯರೋಗ ನಿರ್ಮೂಲನೆ ತ್ವರಿತಕ್ಕೆ ಸಿವಿಲ್ ಟಾಸ್ಕ್ಫೊರ್ಸ್ ರಚನೆ : ಸುರಳ್ಕರ್ ವಿಕಾಸ್ ಕಿಶೋರ್

Kannadanet NEWS
ಕೊಪ್ಪಳ, : ಕ್ಷಯಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಎಲ್ಲಾ ಸರಕಾರಿ, ಖಾಸಗಿ ಸಂಸ್ಥೆಗಳು, ಸಾರ್ವಜನಿಕರು ಶ್ರಮ ಅಗತ್ಯ. ಅದರ ಜೊತೆಗೆ ಜಿಲ್ಲೆಯಲ್ಲಿ ಕ್ಷಯ ನಿರ್ಮೂಲನೆ ತ್ವರಿತಗೊಳಿಸಲು ಜಿಲ್ಲಾ ಕ್ಷಯ ನಿರ್ಮೂಲನಾ ಮಂಡಳಿ ಹಾಗೂ ಸಿವಿಲ್ ಟಾಸ್ಕಫೋರ್ಸ ರಚನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ವತಿಯಿಂದ ಸೋಮವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಕ್ಷಯ ಪಾಲುದಾರರ ಸಭೆ (ಟಿಬಿ ಫೋರಂ)ಯ ಅಧ್ಯಕ್ಷತೆ ವಹಿಸಿ ಅವರು ಸಮಾತನಾಡಿದರು.
ಎಲ್ಲಾ ಕ್ಷಯರೋಗಿಗಳ ಮಾಹಿತಿಯನ್ನು ಖಾಸಗಿ ವೈದ್ಯರು, ಖಾಸಗಿ ಔಷಧ ವಿತರಕರು ಕಡ್ಡಾಯವಾಗಿ ನೀಡಲು ಸೂಚಿಸಿದರು. ಕ್ಷಯರೋಗಿಗಳ ಮರಣದ ಪ್ರಮಾಣ ಕಡಿಮೆ ಮಾಡಲು ಗುಣಾತ್ಮಕ ಸೇವೆಯನ್ನು ಹೆಚ್ಚಿಸಲು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಮಂಡಳಿ ಹಾಗೂ ಸಿವಿಲ್ ಟಾಸ್ಕ್ ಫೋರ್ಸ್ ರಚನೆ ಮುಖಾಂತರ ಕ್ಷಯರೋಗ ನಿರ್ಮೂಲನಾ ಕ್ರಮಗಳನ್ನು ತ್ವರಿತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ವೈದ್ಯರ ಮತ್ತು ಸ್ವಯಂ ಸೇವಾ ಸಂಸ್ಥೆಯವರು ಕ್ಷಯರೋಗ ನಿರ್ಮೂಲನಾ ದತ್ತಗ್ರಾಮ ಯೋಜನೆಯು ಮಾದರಿಯೊಂದು ಎಲ್ಲಾ ವೈದ್ಯರು ಗ್ರಾಮಗಳಲ್ಲಿ ಕ್ಷಯರೋಗ ನಿರ್ಮೂಲನೆಗೆ ಒತ್ತು ನೀಡಬೇಕು. ಡಾ. ಶಿವನಗೌಡ ಪಾಟೀಲ್ ರವರು ಈಗಾಗಲೇ 11 ಹಳ್ಳಿಗಳಲ್ಲಿ ಸೇವೆ ನೀಡುತ್ತಿದ್ದು, ಕ್ಷಯ ಮುಕ್ತ ಗ್ರಾಮ ಮಾಡಲು ಪ್ರಾರಂಭಿಸಿದ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಅದರಂತೆ, ಪ್ರತಿಯೊಬ್ಬ ನಾಗರೀಕರು ಸ್ವಯಂ ಸೇವಾ ಸಂಸ್ಥೆಗಳಿಗೆ ಕೈಜೋಡಿಸಲು ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಮಹೇಶ ಎಂ.ಜಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಕ್ಷಯ ರೋಗ 1600 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 71 ರೋಗಿಗಳು ಮರಣ ಹೊಂದಿರುತ್ತಾರೆ. ಮರಣಕ್ಕೆ ಮುಖ್ಯ ಕಾರಣ, ವಿಳಂಬ ಪತ್ತೆ, ಕೋ-ಮಾರ್ಬಡಿಟಿಸ್ (ಹೆಚ್.ಐ.ವಿ., ಅಲ್ಕೋಹಾಲ್, ಡಯಾಬಿಟಿಸ್) ಆಗಿರುತ್ತದೆ. ಮರಣದ ಪ್ರಮಾಣ ಕಡಿಮೆಗೊಳಿಸಲು ರೋಗಿಗಳನ್ನು ತ್ವರಿತವಾಗಿ ಪತ್ತೆ ಮಾಡಬೇಕಾಗಿರುತ್ತದೆ. ಆದರೆ, ಖಾಸಗಿಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವವರನ್ನು ಪತ್ತೆ ಮಾಡಲು ಸ್ವಲ್ಪ ಕಷ್ಟದ ಕೆಲಸವಾಗಿದೆ. ಖಾಸಗಿ ವೈದ್ಯರ ಬಳಿ ಹೋದ ರೋಗಿಗಳ ಮಾಹಿತಿ ಸರಕಾರಕ್ಕೆ ಸಲ್ಲಿಕೆಯಾಗುತ್ತಿರುವುದಿಲ್ಲ. ಆದ್ದರಿಂದ, ಸದರಿ ರೋಗಿಗಳಿಗೆ ಆರೋಗ್ಯ ರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳದೇ ಬಹು ಔಷಧ ಕ್ಷಯರೋಗಿಗಳಾಗಿ ಮಾರ್ಪಾಡಾಗುತ್ತಿದ್ದಾರೆ ಮತ್ತು ಮರಣದ ಪ್ರಮಾಣ ಈ ರೋಗಿಗಳಲ್ಲಿ ಹೆಚ್ಚು ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜ ಸೇರಿದಂತೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು, ಟಿಬಿ ಚಾಂಪಿಯನ್ಸ್, ಸ್ವಯಂ ಸೇವಾ ಸಂಸ್ಥೆಯವರು ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:
error