ಕ್ಷಮೆಯಾಚಿಸದಿದ್ದರೆ ಸಿದ್ದರಾಮಯ್ಯ ವಿರುದ್ಧ ಹಕ್ಕುಚ್ಯುತಿ ಮಂಡನೆ: ಯಡಿಯೂರಪ್ಪ ಎಚ್ಚರಿಕೆ

ಸ್ಪೀಕರ್ ಬಗ್ಗೆ ಲಘುವಾಗಿ ಮಾತನಾಡಿದ ಆರೋಪ

ಬೆಂಗಳೂರು : ವಿಧಾನಸಭೆ ಸ್ಪೀಕರ್ ಬಗ್ಗೆ ಲಘುವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಲೇ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಎಚ್ಚರಿಸಿದ್ದಾರೆ.

ಶುಕ್ರವಾರ ಡಾಲರ್ಸ್‌ ಕಾಲನಿಯಲ್ಲಿ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿಎಂ ಆಗಿ ಕೆಲಸ ಮಾಡಿರುವ ಸಿದ್ದರಾಮಯ್ಯನವರು ಸ್ಪೀಕರ್ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿ ಅಪಮಾನ ಮಾಡಿದ್ದಾರೆ. ವಿಪಕ್ಷ ನಾಯಕ ಅಥವಾ ಶಾಸಕರಾಗಲಿ ಸ್ಪೀಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಉದಾಹರಣೆಗಳಿಲ್ಲ. ಅಧಿಕಾರದ ಮದದಿಂದ ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ನೆಲಸಮ ಆಗುತ್ತಿದೆ. ಆದರೂ ಅವರು ಪಾಠ ಕಲಿತಿಲ್ಲ. ಚುನಾವಣೆಯಲ್ಲಿ ಜನ ಸೋಲಿಸಿದರೂ ಇನ್ನೂ ಬುದ್ಧಿ ಬಂದಿಲ್ಲ ಎಂದು ಟೀಕಿಸಿದ ಅವರು ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ನುಡಿದರು.

ಕಳಸಾ-ಬಂಡೂರಿ ವಿಚಾರದಲ್ಲಿ ಕೇಂದ್ರ ಸರಕಾರವನ್ನ ನಾವು ಮನವೊಲಿಸಿದ್ದೇವೆ. ಶೀಘ್ರದಲ್ಲೆ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಯಡಿಯೂರಪ್ಪ, ಗೋವಾ ರಾಜ್ಯದ ತಗಾದೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

Please follow and like us:
error