ಕ್ಷಮಾಗುಣವು ಮನುಷ್ಯನನ್ನು ಎತ್ತರದಲ್ಲಿ ನಿಲ್ಲಿಸುತ್ತದೆ.: ಭಂತೆ ವರಜ್ಯೋತಿ

ವಿಜಯಪುರ ಏ. ೮- ಕ್ಷಮಾಗುಣಕ್ಕೆ ಬೌದ್ಧ ಧರ್ಮದಲ್ಲಿ ಮಹತ್ವದ ಸ್ಥಾನವಿದ್ದು, ಕ್ಷಮೆ ಯಾಚಿಸುವುದರಿಂದ ಮತ್ತು ಕ್ಷಮಿಸುವುದರಿಂದ ಮನುಷ್ಯ ದೊಡ್ಡವನೆನಿಸಿಕೊಳ್ಳುತ್ತಾನೆ ಎಂದು ಬೀದರ್ ಅಣದೂರಿನ ಬುದ್ಧಭೂಮಿ ಬುದ್ಧವಿಹಾರದ ಭಂತೆ ವರಜ್ಯೋತಿ ಅವರು ಹೇಳಿದರು.
ಇಲ್ಲಿನ ಸಾರಿಪುತ್ರ ಬುದ್ಧವಿಹಾರದಲ್ಲಿ ಏಪ್ರಿಲ್ ೧೩ರ ವರೆಗೆ ನಡೆಯಲಿರುವ ಪಬ್ಬಜ್ಜ (ಬೌದ್ಧ ಬಾಲ ಸಂಸ್ಕಾರ) ಶಿಬಿರಕ್ಕೆ ಚಾಲನೆ ನೀಡಿ ಮೊದಲ ದಿನದ ಧಮ್ಮದೇಸನ ನೀಡಿದ ಅವರು, ವೈರವನ್ನು ಶಾಂತಿಯಿಂದ ಗೆಲ್ಲಬೇಕೆಂಬುದು ಭಗವಾನ ಬುದ್ಧರ ಬೋಧನೆಯಾಗಿದೆ. ಯಾರಲ್ಲೇ ಆಗಲಿ ಕ್ಷಮೆ ಕೇಳುವುದರಿಂದ ವೈರತ್ವವು ಶಮನವಾಗುತ್ತದೆ. ಮನಸ್ಸು ಹಗುರವಾಗುತ್ತದೆ. ಕ್ಷಮೆ ಕೇಳುವುದರಿಂದ ಮತ್ತು ಕ್ಷಮೆ ನೀಡುವುದರಿಂದ ನಾವು ಸಣ್ಣವರಾಗುತ್ತೇವೆ ಎಂಬ ಭಾವನೆ ಬೇಡ ಎಂದು ಹೇಳಿದರು.
ವೈರವನ್ನು ತೊರೆದು ಪರಸ್ಪರ ಪ್ರೀತಿ ತೋರುವುದರಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಾವೇಕೆ ಕ್ಷಮೆ ಕೇಳಬೇಕು ಎಂಬ ಮೊಂಡುತನ ಸಲ್ಲದು. ಕ್ಷಮೆ ಯಾಚನೆಯಿಂದ ನಮ್ಮ ವ್ಯಕ್ತಿತ್ವ ದೊಡ್ಡದಾಗುತ್ತದೆ ಮತ್ತು ಕ್ಷಮಾಗುಣವು ಮನುಷ್ಯನನ್ನು ಎತ್ತರದಲ್ಲಿ ನಿಲ್ಲಿಸುತ್ತದೆ ಎಂದು ಹೇಳಿದರು.
ಭೂಮಿಯ ಮೇಲೆ, ಪ್ರಕೃತಿಯ ಮೇಲೆ ನಿತ್ಯವೂ ನಾವು ಎಷ್ಟೊಂದು ದೌರ್ಜನ್ಯ ಎಸಗುತ್ತೇವೆ. ಆದರೂ ನಿಸರ್ಗವು ನಮ್ಮ ಎಲ್ಲ ತಪ್ಪುಗಳನ್ನು ಕ್ಷಮಿಸುವಂತೆ ನಾವು ಕೂಡ ನಮಗೆ ಕೇಡು ಮಾಡಿದವರಿಗೂ ಕೆಟ್ಟದ್ದನ್ನು ಬಯಸದೆ ಕ್ಷಮಾಗುಣ ತೋರಬೇಕು ಎಂದು ಹೇಳಿದರು.
ಬುದ್ಧವಿಹಾರ ನಿರ್ಮಾಣ ಸಮಿತಿ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಏಳು ದಿನಗಳ ಈ ಪಬ್ಬಜ್ಜ ಶಿಬಿರದಲ್ಲಿ ಸುಮಾರು ೪೦ ಮಕ್ಕಳು ಪವಿತ್ರ ಚೀವರವನ್ನು ಧರಿಸಿ ಭಾಗವಹಿಸಿದ್ದಾರೆ.
ಶಿಬಿರ ಸಂಚಾಲಕರಾದ ಸಂತೋಷ ಶಹಾಪುರ, ವೆಂಕಟೇಶ ವಗ್ಯಾನವರ, ಸಂಜ್ಯೋತ ಔದಿ, ಉಪಾಸಕರಾದ ಅನಿಲ ಹೊಸಮನಿ, ರಾಜಶೇಖರ ಯಡಹಳ್ಳಿ, ಮಹೇಶ ಕ್ಯಾತನ್, ಬಸವರಾಜ ಬ್ಯಾಳಿ, ಕೆ.ಎಂ. ಶಿವಶರಣ, ಸಾಬು ಚಲವಾದಿ, ಪೀರಪ್ಪ ನಡುವಿನಮನಿ, ನಾಗರಾಜ ಲಂಬು, ಬಸವರಾಜ ಚಲವಾದಿ, ಚಿದಾನಂದ ನಿಂಬಾಳ, ಶಶಿಕಾಂತ ಹೊನವಾಡಕರ, ಸಂತೋಷ ಸುತಗುಂಡಿ, ದಿಲೀಪ ಯಂಭತ್ನಾಳ, ಶಿವು ಮ್ಯಾಗೇರಿ, ಉಪಾಸಕಿಯರಾದ ಸಿದ್ದಮ್ಮ ನಡುವಿನಮನಿ, ಭಾಗ್ಯಶ್ರೀ ವಗ್ಯಾನವರ, ಶಾರದಾ ಹೊಸಮನಿ, ಸುಲೋಚನಾ ಚಲವಾದಿ, ಸುಜಾತಾ ಚಲವಾದಿ, ಭಾರತಿ ಹೊಸಮನಿ, ರೇಣುಕಾ ಶಹಾಪುರ, ಸಿದ್ದಮ್ಮ ಚಲವಾದಿ, ಮುಕ್ತಾಬಾಯಿ ಚಲವಾದಿ, ರಮಾ ಕ್ಯಾತನ್, ನಿರ್ಮಲಾ ಕಾಳೆ, ಅನಿತಾ ಔದಿ, ಸುಮಾ ತಡವಲಕರ ಸೇರಿದಂತೆ ಎಲ್ಲ ಶಿಬಿರಾರ್ಥಿಗಳ ಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error