ಕ್ವಾರಂಟೈನ್: ಗೂಡು ತೂಗ್ಯಾವ ಗಾಳಿಗೆ..

Dr.H.S.Anupama

ಅದೆಲ್ಲಿಂದಲೋ ಕಣ್ಣಿಗೆ ಕಾಣಬಾರದಷ್ಟು ಸಣ್ಣ ವೈರಸ್ಸು ಬಂದು, ನಾನೂ ನಿಮ್ಮ ಜೊತೆ ಇರುತ್ತೇನೆಂದು ಗುದ್ದಾಡುತ್ತ, ಉಸಿರು ಕಟ್ಟಿಸುತ್ತ, ಬುದ್ಧಿ ಕಲಿಸುತ್ತ, ಗಾಬರಿಗೊಳಿಸುತ್ತ, ದಿಕ್ಕುದಿಕ್ಕಿಗು ಹರಡಿಹಬ್ಬಿ ನಮ್ಮನ್ನು ದಿಕ್ಕೇಡಿಗಳನ್ನಾಗಿಸಿರುವಾಗ ಹದಿನಾಲ್ಕು ದಿನದ ಮನೆವಾಸಕ್ಕೆ ಕಳಿಸಲ್ಪಡುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ದೂರವಿರಿ, ದೂರವಿಡಿ ಎನ್ನುವ ‘ಕ್ವಾರಂಟೈನ್’ ಪದ ಹೆಚ್ಚೆಚ್ಚು ಕೇಳಿಬರುತ್ತಿದೆ.

ಏನಿದು ಕ್ವಾರಂಟೈನ್?

ರೋಗಿ-ರೋಗಾಣು ಮತ್ತು ಸಮಾಜವನ್ನು ಬೇರ್ಪಡಿಸಿ ದೂರವಿಡುವ ಕ್ರಿಯೆಯನ್ನು ಸೂಚಿಸುವ ಪದ ಕ್ವಾರಂಟೈನ್. ಈ ವೆನೆಷಿಯನ್ ಪದದ ಅರ್ಥ ‘ನಲವತ್ತು’. ಹದಿನಾಲ್ಕನೇ ಶತಮಾನದ ಬ್ಯುಬೋನಿಕ್ ಪ್ಲೇಗಿನ ಸಮಯದಲ್ಲಿ ಇಟಲಿಯ ಬಂದರಿಗೆ ಬೇರೆಡೆಯಿಂದ ಬಂದ ಹಡಗುಗಳನ್ನು ಅದರಲ್ಲಿದ್ದ ಜನರ ಸಮೇತ 40 ದಿನ ಸಮುದ್ರದಲ್ಲೇ ನಿಲ್ಲಿಸಿ ನಂತರ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಹಡಗಿನ ಪ್ರವೇಶ ತಡೆಯುವ ಸೂಚನೆಯಾಗಿ ಈ ಪದ ಮತ್ತು ಕಪ್ಪುಹಳದಿ ಚೌಕಳಿಯ ಬಾವುಟ ಬಳಸಲಾಯಿತು.

ರೋಗಿಗಳನ್ನು ನಿರೋಗಿಗಳಿಂದ ದೂರವಿಡುವ ಕ್ರಮವನ್ನು ಕ್ರಿಸ್ತಪೂರ್ವ ಕಾಲದಿಂದಲೇ ರೂಢಿಸಿಕೊಂಡಿದ್ದೇವೆ. ಬೈಬಲಿನ ಓಲ್ಡ್ ಟೆಸ್ಟ್‌ಮೆಂಟಿನಲ್ಲಿರುವ ಕ್ರಿ. ಪೂ. 5ನೇ ಶತಮಾನದ ಮೂರನೆಯ ತೋರಾದಲ್ಲಿ ‘ಮೈಮೇಲೆ ಗುಳ್ಳೆ ಎದ್ದಿರುವವರನ್ನು ಪುರೋಹಿತರು ಏಳು ದಿನ ಬೇರೆಯಿರಿಸಬೇಕು. ವಾರದ ನಂತರ ಪರೀಕ್ಷಿಸಿ ಗುಳ್ಳೆ ಮಾಯ್ದಿರದಿದ್ದರೆ, ಮತ್ತೆ ಏಳು ದಿನ ಪ್ರತ್ಯೇಕವಾಗಿರಿಸಬೇಕು’ ಎಂದು ಉಲ್ಲೇಖಿಸಲಾಗಿದೆ. ಬರಿಯ ಪ್ರಾರ್ಥನೆ, ಹರಕೆಗಳಷ್ಟೇ ಅಲ್ಲ, ದೈಹಿಕವಾಗಿ ರೋಗಿಯಿಂದ ದೂರ ಕಾಯ್ದುಕೊಳ್ಳುವ ಅವಶ್ಯಕತೆಯನ್ನು ಮನಗಂಡು 7ನೇ ಶತಮಾನದ ಪ್ರವಾದಿ ಮಹಮ್ಮದರು, 14ನೇ ಶತಮಾನದ ವೈದ್ಯ-ತತ್ತ್ವಶಾಸ್ತ್ರಜ್ಞ-ಖಗೋಳಶಾಸ್ತ್ರಜ್ಞ ಅವಿಸೆನ್ನಾ (ಇಬ್ನ್ ಸಿನಾ) ‘ಕಾಯಿಲೆಯಿರುವವರನ್ನು ಉಳಿದವರಿಂದ ಪ್ರತ್ಯೇಕಿಸಿ’ ಎಂದು ಸ್ಪಷ್ಟವಾಗಿ ಹೇಳಿದರು.

ಆದರೆ ಬೇರೆಯಾಗಿ, ದೂರವಾಗಿ ಇರುವುದು ಮನುಷ್ಯಪ್ರಾಣಿಗೆ ಸಹ್ಯವಲ್ಲ, ಸುಲಭವೂ ಅಲ್ಲ. ರೋಗ-ರೋಗಾಣುವಿನ ಕಾರಣಕ್ಕೆ ತಮ್ಮನ್ನು ಪ್ರತ್ಯೇಕಿಸಿಡುವುದನ್ನು ಯಾರೂ ಖುಷಿಯಿಂದ ಸ್ವೀಕರಿಸುವುದಿಲ್ಲ. ಕ್ವಾರಂಟೈನ್ ಪದಕ್ಕೆ ಇರುವಂತೆಯೇ ಅದರ ಹಿಂದಿನ ಪ್ರತ್ಯೇಕತೆಯ ನೋವಿಗೂ, ಉಲ್ಲಂಘನೆಗೂ ದೀರ್ಘ ಚರಿತ್ರೆಯಿದೆ.

ಮಾನವಚರಿತ್ರೆಯಲ್ಲೇ ಅತಿದೀರ್ಘಕಾಲ, 26 ವರುಷ ಕ್ವಾರಂಟೈನ್‌ಗೆ ಒಳಪಡಿಸಲಾದವಳ ಕತೆ ಹೀಗಿದೆ:

ಚಾರ್ಲ್ಸ್ ವಾರೆನ್ ಎಂಬ ನ್ಯೂಯಾರ್ಕ್ ಬ್ಯಾಂಕರ್ 1906ರಲ್ಲಿ ಸಂಸಾರದೊಂದಿಗೆ ಪ್ರವಾಸಕ್ಕೆ ಹೋದಾಗ ಅಡುಗೆಗಾಗಿ ಮೇರಿ ಮಲೋನ್‌ಳನ್ನು ಕರೆದೊಯ್ದಿದ್ದ. ಸ್ವಲ್ಪ ದಿನದಲ್ಲೇ ವಾರೆನ್ನನಿಗೆ ಟೈಫಾಯ್ಡ್ (ವಿಷಮಶೀತಜ್ವರ) ಬಂತು. ನಂತರ ಅವನ ಹೆಂಡತಿ, ಮಗಳು, ಇಬ್ಬರು ಕೆಲಸದವರು, ತೋಟದ ಮಾಲಿ, ಮತ್ತೊಬ್ಬ ಮಗಳು ಎಲ್ಲರಿಗೂ ಟೈಫಾಯ್ಡ್ ಜ್ವರ ಬರುತ್ತದೆ. ಗಾಬರಿಗೊಂಡ ವಾರೆನ್, ತನ್ನ ಪ್ರವಾಸವನ್ನು ಮೊಟಕುಗೊಳಿಸಿ, ಪಟ್ಟಣದ ಆರೋಗ್ಯ ಇಲಾಖೆಗೆ ಪತ್ರ ಬರೆದು ಈ ಬಗೆಗೆ ತನಿಖೆ ನಡೆಸಬೇಕೆಂದು ಕೋರಿಕೊಳ್ಳುತ್ತಾನೆ. ಅವನಿದ್ದ ಮನೆಯ ಕೆಲಸದವರು, ಆಹಾರ ನೀರು ಸರಬರಾಜಿನವರು, ಅಡುಗೆ ಸಹಾಯಕರು ಎಲ್ಲರ ತಪಾಸಣೆ ನಡೆಯುತ್ತದೆ. ಅಡಿಗೆಯವಳಾಗಿದ್ದ ಮೇರಿಯಿಂದ ಟೈಫಾಯ್ಡ್ ಹರಡಿದ್ದು ಅವಳು ಜ್ವರಪೀಡಿತಳಾಗದಿದ್ದರೂ ರೋಗವಾಹಕಳಾಗಿದ್ದಾಳೆ ಎಂದು ತಿಳಿದುಬರುತ್ತದೆ. ಅವಳನ್ನು ಎಚ್ಚರಿಸಿ, ಕೆಲಸ ಬಿಡಿಸಿ, ಕಳಿಸುತ್ತಾರೆ.

ಅತ್ಯುತ್ತಮ ಬಾಣಸಿಗಳಾಗಿದ್ದ ಅವಳಿಗೆ ಅಡಿಗೆಯಲ್ಲದೆ ಬೇರೆ ಕೆಲಸ ಗೊತ್ತಿರುವುದಿಲ್ಲ. ಬೇರೊಂದು ಮನೆಯಲ್ಲಿ ಅಡುಗೆಯವಳಾಗುತ್ತಾಳೆ. ಅವರಿಗೆ ಜ್ವರ ಬಂದಾಗ ಕೆಲಸ ಬಿಟ್ಟು ಬೇರೆಡೆ ಸೇರುತ್ತಾಳೆ. ಮತ್ತೆರೆಡು ಮನೆಗಳಲ್ಲಿ ಹೀಗೇ. ಮನೆಯವರಿಗೆ ಜ್ವರ ಬಂದಕೂಡಲೇ ಹೇಳದೇಕೇಳದೇ ಬಿಟ್ಟುಹೋಗುತ್ತಿರುತ್ತಾಳೆ. ಅವಳು ಹೋದಲ್ಲೆಲ್ಲ ಜ್ವರವೂ ಹಿಂಬಾಲಿಸುತ್ತಿರುತ್ತದೆ. ಕೊನೆಗೆ ಜಾರ್ಜ್ ಸೋಪರ್ ಎಂಬ ಸ್ಯಾನಿಟೇಷನ್ ಇಂಜಿನಿಯರನನ್ನು ಟೈಫಾಯ್ಡ್ ಹರಡುವಿಕೆಯ ಬಗೆಗೆ ತನಿಖೆ ನಡೆಸಲು ನೇಮಿಸಿದಾಗ ಟೈಫಾಯ್ಡ್ ವಾಹಕರಿಂದ ಹಲವರಿಗೆ ಸೋಂಕು ತಗುಲುತ್ತಿದೆಯೆಂದೂ, ಮೇರಿ ವಾಹಕಳೆಂದೂ ಗುರುತಿಸುತ್ತಾನೆ.

ಮೇರಿ ಮಲೋನ್ ‘ಸಾಲ್ಮೊನೆಲ್ಲ ಟೈಫಿ’ ಎಂಬ ಬ್ಯಾಕ್ಟೀರಿಯಾದಿಂದ ಬರುವ ಟೈಫಾಯ್ಡ್ ಜ್ವರದ ವಾಹಕಳಾಗಿದ್ದಳು. ಜ್ವರ ಇರುವವರಲ್ಲಿ ಮತ್ತು ವಾಹಕರ ಮಲದಲ್ಲಿ ಸಾಲ್ಮೊನೆಲ್ಲಾವು ದೇಹದಿಂದ ಹೊರಹೋಗುತ್ತಿರುತ್ತದೆ. ನೊಣಗಳು ಅವನ್ನು ಪರಸರಿಸುತ್ತವೆ. ಶೌಚದ ಬಳಿಕ ಸ್ವಚ್ಛವಾಗಿ ಕೈತೊಳೆಯದ ಅಡುಗೆಯವರು, ವೈಯಕ್ತಿಕ ಶುಚಿತ್ವ ಕಡಿಮೆಯಿರುವವರು ಟೈಫಾಯ್ಡ್‌ಗೆ ತುತ್ತಾಗುತ್ತಾರೆ ಮತ್ತು ಹರಡುತ್ತಾರೆ. ಮೇರಿ ಟೈಫಾಯ್ಡ್ ವಾಹಕಳಾಗಿ ಅಡುಗೆ ಕೆಲಸ ಮಾಡುತ್ತಿದ್ದುದರಿಂದ ಆಹಾರ ಸೋಂಕುಂಟಾಗಿ ಸುಮಾರು ೫೧ ಜನರಿಗೆ ಟೈಫಾಯ್ಡ್ ಹರಡಿದಳೆಂದು, ಮೂವರ ಸಾವಿಗೆ ಕಾರಣಳೆಂದು ಶಂಕಿಸಲಾಗುತ್ತದೆ.

ರಕ್ತ, ಮಲ ತಪಾಸಣೆಗೆ ಅವಳು ಒಪ್ಪದಿದ್ದಾಗ ಬಲವಂತವಾಗಿ ಗೃಹಬಂಧನದಲ್ಲಿರಿಸಲಾಗುತ್ತದೆ. ಜ್ವರವೇ ಬರದೆ ತಾನು ಹೇಗೆ ಟೈಫಾಯ್ಡ್ ಹರಡಲು ಸಾಧ್ಯವೆಂಬುದು ಮೇರಿಯ ವಾದ. ಆಸ್ಪತ್ರೆಯಲ್ಲಿ ಭೇಟಿಮಾಡಿದ ಸೋಪರ್ ಅವಳ ಕುರಿತು ಪುಸ್ತಕ ಬರೆಯುವುದಾಗಿಯೂ, ರಾಜಧನ ಪೂರಾ ಅವಳಿಗೇ ಕೊಡುವುದಾಗಿಯೂ ಮನವೊಲಿಸಲೆತ್ನಿಸುತ್ತಾನೆ. ಆದರೆ ತನಗೊದಗಿದ ಅಪಖ್ಯಾತಿಯಿಂದ ಕುಪಿತಳಾದ ಮೇರಿ ಮನಸ್ಸು ಮಾಡುವುದಿಲ್ಲ. ಎರಡು ವರ್ಷದ ನಂತರ ಷರತ್ತಿನ ಮೇರೆಗೆ ಬಿಡುಗಡೆಯಾಗುತ್ತಾಳೆ. ಅಡುಗೆಯ ಕೆಲಸ ಬಿಡಬೇಕು ಅಥವಾ ಟೈಫಾಯ್ಡ್ ಬ್ಯಾಕ್ಟೀರಿಯಾದ ಅಡಗುತಾಣವಾದ ಪಿತ್ತಕೋಶ (ಗಾಲ್ ಬ್ಲಾಡರ್)ವನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆಸಬೇಕೆನ್ನುವುದು ಷರತ್ತು. ಅಡುಗೆ ಕೆಲಸ ಮಾಡುವುದಿಲ್ಲವೆಂದು ಹೇಳಿ ಹೊರಬರುತ್ತಾಳೆ.

ಲಾಂಡ್ರಿ ಕೆಲಸ ಸಿಗುತ್ತದೆ. ಆದರೆ ಅವಳಿಗದು ಇಷ್ಟವಿಲ್ಲ, ಸಂಬಳವೂ ಕಡಿಮೆ. ಕೊನೆಗೆ ತನ್ನ ಹೆಸರು ಮೇರಿ ಬ್ರೌನ್ ಎಂದು ಬದಲಿಸಿಕೊಂಡು ಮತ್ತೆ ಅಡುಗೆಯವಳಾಗಿ ಸೇರುತ್ತಾಳೆ! ಅಲ್ಲಿ ಟೈಫಾಯ್ಡ್ ಶುರುವಾದದ್ದೇ ಕೆಲಸ ಬಿಟ್ಟು ಬೇರೆ ಹೆಸರಿನಿಂದ ಬೇರೆ ಕೆಲಸ ಮಾಡುತ್ತಾಳೆ. ಒಮ್ಮೆ ಟೈಫಾಯ್ಡ್ ಸಾಂಕ್ರಾಮಿಕ ಹಬ್ಬಿದಾಗ ಇವಳು ನ್ಯೂಯಾರ್ಕಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ ಮತ್ತಲ್ಲಿ ೨೫ ಜನರಿಗೆ ಕಾಯಿಲೆ ಬಂದಿರುತ್ತದೆ! ಆಗ ಬಂಧಿಸಲ್ಪಟ್ಟ ಅವಳನ್ನು ೨೩ ದೀರ್ಘ ವರ್ಷಗಳ ಕಾಲ ಸಾಯುವವರೆಗೂ ಕ್ವಾರಂಟೈನಿನಲ್ಲಿ ಇಡಲಾಗುತ್ತದೆ. ದೂರದ್ವೀಪದಲ್ಲಿ ಏಕಾಂಗಿಯಾಗಿ, ಕೊನೆಯ ವರ್ಷಗಳಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿ, ನ್ಯುಮೋನಿಯಾದಿಂದ ತೀರಿಕೊಳ್ಳುತ್ತಾಳೆ.

ರೋಗವಾಹಕ ವ್ಯಕ್ತಿಗಳನ್ನು (ಕ್ಯಾರಿಯರ‍್ಸ್) ಸಮಾಜದಿಂದ ಬೇರ್ಪಡಿಸಿ ಇಡುವುದು ಕಾಯಿಲೆಯ ದೃಷ್ಟಿಯಿಂದ ಸರಿ. ಆದರೆ ಮನುಷ್ಯ ಜೀವಿಯನ್ನು ಕಾಯಿಲೆಯಿರುವ ಕಾರಣಕ್ಕೆ ಸಮಾಜ ನಡೆಸಿಕೊಳ್ಳುವ ರೀತಿ ಸರಿಯೇ ಎಂಬ ಪ್ರಶ್ನೆಗಳೆದ್ದವು. ಹಾಗಾದರೆ ರೋಗಿಗೆ ಸಾಮಾಜಿಕ ಜವಾಬ್ದಾರಿಗಳಿಲ್ಲವೇ? ಕ್ವಾರಂಟೈನನ್ನು ಒಪ್ಪದಿದ್ದವರಿಗೆ ತಿಳಿಸಿಹೇಳಬಹುದು, ಹಠಮಾರಿಯಾಗಿ ಸಮಾಜವಿರೋಧಿಯಾದರೆ ಸುಮ್ಮನೇ ಬಿಟ್ಟುಬಿಡಬಹುದೇ? ಎಂಬ ಮರುವಾದವೂ ಕೇಳಿಬಂತು. ಅಂದು ನಡೆದ ದೀರ್ಘ ಚರ್ಚೆ, ಆರೋಪ, ಪ್ರತ್ಯೇಕವಾಗಿರಿಸುವಿಕೆಗಳು ಇವತ್ತಿಗೂ ಜೀವಂತವಾಗಿವೆಯೆನ್ನುವುದನ್ನು ಗಮನಿಸಬಹುದು.

ದೈಹಿಕ ದೂರವಷ್ಟೇ ಸಾಕು

ನಮ್ಮ ಪ್ರಾಣ ನಾವು ಉಳಿಸಿಕೊಳ್ಳಬೇಕೆಂದು ಕಲಿತ ಮಾನವೀಯತೆಯ ಪಾಠಗಳನ್ನೆಲ್ಲ ಮರೆತಂತೆ ಕಾಣುತ್ತಿರುವ ಕಾಲದಲ್ಲಿ ಜನರ ಸಣ್ಣತನ, ಅವಕಾಶವಾದಿತನ, ದ್ವೇಷ, ಕೀಳರಿಮೆಗಳೆಲ್ಲ ಹೊರಬರತೊಡಗಿವೆ. ಒಂದಾದಮೇಲೊಂದು ಕೇಡು, ಬಿಕ್ಕಟ್ಟುಗಳು ಬಂದೆರಗಿದರೆ ಮನುಷ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಊಹಿಸಲೂ ಅಸಾಧ್ಯವಾಗಿದೆ. ರೋಗವನ್ನು ದೂರವಿಡುವ ನೆಪದಲ್ಲಿ ರೋಗಿಯನ್ನು, ರೋಗಿಯ ಸಮುದಾಯವನ್ನೇ ಪ್ರತ್ಯೇಕಗೊಳಿಸಿ ದೂಷಿಸುವುದು ಹೆಚ್ಚಾಗುತ್ತಿದೆ. ಇತಿಹಾಸದುದ್ದಕ್ಕೂ ಇಂಥದೇ ಪ್ರಮಾದಗಳು ಸಂಭವಿಸಿವೆ.

ಹೆಚ್ಚುಕಡಿಮೆ ನಾಲ್ಕು ಶತಮಾನ ಕಾಲ ಯೂರೋಪನ್ನು ಕಾಡಿದ ಬ್ಯುಬೋನಿಕ್ ಪ್ಲೇಗ್ ಕೋಟಿಗಟ್ಟಲೆ ಜೀವಗಳನ್ನು ಬಲಿತೆಗೆದುಕೊಂಡಿತು. ಪ್ಲೇಗ್ ಉತ್ತುಂಗ ತಲುಪತೊಡಗಿದ 1348ರ ಹೊತ್ತಿಗೆ ಕ್ರೈಸ್ತಧರ್ಮವನ್ನು ಹೀನಾಯಗೊಳಿಸಲು ಯಹೂದಿಗಳು ಮಾಡಿದ ತಂತ್ರ ಅದು ಎಂದು ಚರ್ಚು ಭಾವಿಸಿತು. ಕಾಯಿಲೆ ತೀವ್ರಗೊಳಿಸಲು ಯಹೂದಿಗಳು ಬಾವಿಗೆ ವಿಷ ಹಾಕಿದರೆಂದು ಆರೋಪಿಸಿ, ಬಲವಂತದ ತಪ್ಪೊತ್ತಿಗೆಗೆ ಒಳಪಡಿಸಿ, ಅಸಂಖ್ಯ ಜನರನ್ನು ಜೀವಂತ ದಹಿಸಲಾಯಿತು. ಇನ್ನು ಇಟಲಿಯಲ್ಲಿ 1493ರಿಂದ 1785ರತನಕ 121 ಕಾನೂನುಗಳು ಜಾರಿಯಾದವು. ಬಹುಪಾಲು ಕಾನೂನುಗಳು ಅಲೆಮಾರಿ ಜನಾಂಗವಾಗಿದ್ದ ರೋಮಾಗಳಿಂದ ಪ್ಲೇಗ್ ಬಂದಿತೆಂದು ಅವರನ್ನು ಅಂಕೆಯಲ್ಲಿಡಲೆಂದೇ ಸೃಷ್ಟಿಯಾದವು. ಪ್ಲೇಗ್ ನಿಯಂತ್ರಣಕ್ಕೆಂದು ರೋಮಾ ಗಂಡುಹೆಣ್ಣುಗಳು ಊಹಿಸಲಾಗದಷ್ಟು ದಾರುಣ ಹಿಂಸೆಗೆ ಒಳಗಾದರು. ಯೂರೋಪಿನ ಕೆಲವೆಡೆ ನಾಟಿವೈದ್ಯರಿಂದ, ಮಾಟಗಾರರ ತಪ್ಪು ಮಾಟದಿಂದ ಪ್ಲೇಗ್ ಬಂದಿದೆಯೆಂದು 90 ಸಾವಿರ ಜನರನ್ನು ಶಿಕ್ಷಿಸಲಾಯಿತು. ಅವರಲ್ಲಿ ಹೆಚ್ಚಿನವರು ಮಾಟಗಾತಿಯರೇ ಆಗಿದ್ದರು ಮತ್ತು ಅವರು ‘ಒಂಟಿ ಮಹಿಳೆ’ಯರಾಗಿದ್ದರು.

 

 

ಕಾಯಿಲೆಗೆ ಹೆಸರಿಡುವಾಗಲೂ ಜನಾಂಗದ್ವೇಷವನ್ನು ಹೊರಗೆಡವಲಾಯಿತು: ಏಷಿಯಾಟಿಕ್ ಕಾಲರಾ (1826), ಏಷಿಯಾಟಿಕ್ ಪ್ಲೇಗ್ (1846), ಏಷಿಯಾಟಿಕ್ ಫ್ಲೂ (1956), ಹಾಂಗ್‌ಕಾಂಗ್ ಫ್ಲು (1965), ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (2012), ಗೇ ರಿಲೇಟೆಡ್ ಇಮ್ಯುನೊಡಿಫಿಷಿಯೆನ್ಸಿ (ಗ್ರಿಡ್- ನಂತರ ಎಚ್ಚೈವಿ, 1985) – ಈ ಹೆಸರುಗಳೇ ಒಂದು ದೇಶ, ಪ್ರದೇಶ, ಸಮುದಾಯದ ಹೆಸರನ್ನು ಕಾಯಿಲೆಗೆ ಇಟ್ಟಿರುವುದನ್ನು ತೋರಿಸುತ್ತವೆ. ವಿಶ್ವ ಆರೋಗ್ಯಸಂಸ್ಥೆ ತಟಸ್ಥ ಆದರೆ ತಾಂತ್ರಿಕ ಹೆಸರುಗಳನ್ನೇ ರೋಗ-ರೋಗಾಣುವಿಗೆ ಇಡಬೇಕೆಂದು ಸೂಚಿಸಿದ ಮೇಲೂ ಕೋವಿಡ್ ಅನ್ನು ‘ಚೈನಾ ವೈರಸ್’, ‘ಕುಂಗ್‌ಫು ಫ್ಲು’ ಎನ್ನುವುದು ಮುಂದುವರೆದಿದೆ. ಭಾರತದಲ್ಲಿದು ಇನ್ನೂಒಂದು ಹೆಜ್ಜೆ ಮುಂದೆ ಹೋಗಿ ಕಾಯಿಲೆ ಹರಡುವಿಕೆಯನ್ನು ಒಂದು ಧರ್ಮೀಯರ ತಲೆಗೆ ಕಟ್ಟಿ, ಅವರು ಬೇಕೆಂದೇ ತಪಾಸಣೆ-ಕ್ವಾರಂಟೈನಿಗೆ ಒಳಗಾಗದೇ ರೋಗ ಹರಡುತ್ತಿರುವರೆಂದು ಬಿಂಬಿಸಲಾಗುತ್ತಿದೆ. ಅಪಾಯಕಾರಿ ಹುಸಿ ವೀಡಿಯೋಗಳು ಹರಿದಾಡುತ್ತಿವೆ. ತಮ್ಮೊಳಗಿನ ಆಕ್ರೋಶ, ಅಸಹಾಯಕತೆ, ಭಯ, ಅನಿಶ್ಚಿತತೆಗಳನ್ನು ಜನರು ಲಾಕ್‌ಡೌನ್ ಉಲ್ಲಂಘನೆ, ಕ್ವಾರಂಟೈನ್ ತಪ್ಪಿಸಿಕೊಳ್ಳುವಿಕೆ, ಪರಧರ್ಮ ದ್ವೇಷಗಳ ಮೂಲಕ ತೀರಿಸಿಕೊಳ್ಳುವಂತೆ ಕಂಡುಬರುತ್ತಿದೆ. ಮುಂದೊಂದು ದಿನ ಕೆಮ್ಮುವವರನ್ನು ಹೊಡೆಯುವ, ಹೊರದೂಡುವ ದಿನಗಳು ಬಂದರೂ ಆಶ್ಚರ್ಯವಿಲ್ಲ.

ದೇಹವಿಜ್ಞಾನ ನಮಗೆ ಹೇಳಿತ್ತು: ಕಾಯಿಲೆಗಳು ಯಾವುದೇ ಜಾತಿಮತಧರ್ಮಕುಲ ನೋಡದೆ ಎಲ್ಲರಿಗೂ ಬರುತ್ತವೆ. ರೋಗಾಣುವಿಗೆ ಬೇಕಾದದ್ದು ಒಂದು ಸಜೀವ ದೇಹ, ಮತ್ತದರ ಬಿಸಿ, ಮತ್ತು ಸಂಖ್ಯೆ ವೃದ್ಧಿಸಿಕೊಂಡು ಹೊರಹೋಗಲು ಒಂದು ದಾರಿ ಮಾತ್ರ ಎಂದು. ರೋಗಿಯನ್ನು ನೋಡಿ ಕೈತೊಳೆಯುವುದು ರೋಗಿಗಳಿಗೆ ಮಾಡುವ ಅವಮಾನವೆಂದು ಭಾವಿಸಿದ ಕಾಲವಿತ್ತು. ವಿಯೆನ್ನಾದ ಸೆಮೆಲ್ ವೈಸ್ ಕೈತೊಳೆಯುವುದರ ಮೂಲಕ ಬಾಣಂತಿ ನಂಜು ಕಡಿಮೆ ಮಾಡಬಹುದೆಂದು ಹೇಳಿದಾಗ ಅವನನ್ನು ಆಸ್ಪತ್ರೆಯಿಂದ ವಜಾ ಮಾಡಿದ್ದರು. ಕಾಯಿಲೆಯಿದ್ದರೂ ಲೆಕ್ಕಿಸದೇ ಸೇವೆ ಮಾಡುವುದು ಮೌಲ್ಯ ಎಂದು ಭಾವಿಸಲಾಗಿತ್ತು. ಕುಷ್ಠ, ಕ್ಷಯ ರೋಗಿಗಳ ನೋಡುತ್ತ ತಾವೇ ಲಯವಾದ ಎಷ್ಟೋ ವೈದ್ಯರಿದ್ದರು. ಬರಬರುತ್ತ ದೇಹವಿಜ್ಞಾನವು ರೋಗಾಣುವನ್ನು ಕಂಡು, ಅದನ್ನು ಪ್ರತ್ಯೇಕಿಸಲು ಹೇಳತೊಡಗಿದಮೇಲೆ ರೋಗಿಯನ್ನೇ ರೋಗಾಣುವಿನಂತೆ ಅಮಾನವೀಯವಾಗಿ ಕಾಣುತ್ತಿರುವುದು, ಪ್ರತ್ಯೇಕಿಸುವುದು ಹೆಚ್ಚುತ್ತಿದೆ.

ಲೋಕವೇ ಸಂಕಟಕ್ಕೀಡಾಗಿದೆ. ಈ ಹೊತ್ತು ಮನುಷ್ಯರ ಪ್ರಾಣವುಳಿಸಲು ದೈಹಿಕ ದೂರ ಕಾಪಾಡಿಕೊಳ್ಳಬೇಕೇ ಹೊರತು ಮಾನಸಿಕವಾಗಿ ಒಂದಾಗಿರಬೇಕು. ಅಲ್ಲವೆ?

ಕಾಲವು ಒಮ್ಮೆ ಹಿಂದೆ ಹೋಗುತ್ತಾ, ಒಮ್ಮೆ ಮುಂದೆ ಚಲಿಸುತ್ತಾ, ಹಿಂದುಮುಂದಿನ ನಡುವಿರುವ ನಮಗೆ ಇಂದೇನು ಬೇಕೆಂಬುದನ್ನೇ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇನೋ ಅನಿಸುವಂತೆ ಎಲ್ಲ ನಡೆಯುತ್ತಿದೆ. ಹಳೆಯದನ್ನು ಹೊಸರೊಡನೆ ಕೂಡಿಸಿ ನಾಳೆಗೆ ಕೌದಿ ಹೊಲಿಯುತ್ತಿರುವಾಗ ಬಂದೆರಗಿದ ಕರೋನಾ, ಎಲ್ಲವನ್ನು ಕಿತ್ತೆಳೆಯುತ್ತಿದೆ. ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿ ಬದುಕು ತುಯ್ಯುತ್ತಿರುವಾಗ ಹೊಸಲೋಕವನ್ನು ಹೊಸತಾಗೇ ಕಟ್ಟಿಕೊಳ್ಳಲು ಕಾಲ ಪ್ರಚೋದಿಸುತ್ತಿದೆ.

ಕಾಲವು ಕಳ್ಳಮಾಲನ್ನೂ ಪವಿತ್ರಗೊಳಿಸಿ ಪಿತ್ರಾರ್ಜಿತ ಆಸ್ತಿಯಾಗಿಸಿಬಿಡುತ್ತದೆ. ಹಾಗೆ ಇವತ್ತಿನ ಕೋಮುದ್ವೇಷವೆಂಬ ಕದ್ದ ಮಾಲು ಬರಲಿರುವ ಮೂರ್ನಾಲ್ಕು ತಲೆಮಾರುಗಳ ಪಿತ್ರಾರ್ಜಿತ ಆಸ್ತಿಯಾಗಬಾರದು. ಎಂದೇ ಕಷ್ಟಕಾಲದಲ್ಲೂ ಮೈತ್ರಿಯ ಅನುಭವವಿರುವಂತೆ ನೋಡಿಕೊಳ್ಳೋಣ. ಪ್ರಾಣಭಯದ ದಿನಗಳಲ್ಲೂ ಒಬ್ಬರನ್ನೊಬ್ಬರು ಪರಸ್ಪರತೆಯ ಕನ್ನಡಿಯಲ್ಲಿ ನೋಡಿಕೊಳ್ಳೋಣ. ಹಿತದ ನುಡಿಗಳೆಂಬ ತಂಗಾಳಿಯನ್ನೂ, ಪ್ರೀತಿಯೆಂಬ ಪ್ರಾಣನದಿಯನ್ನೂ ಭವಿಷ್ಯದ ತಲೆಮಾರಿಗೆ ಬಿಟ್ಟುಹೋಗೋಣ.

ವೈರಸ್ಸು ಅಳಿದಮೇಲೂ ನಾವಿರಬೇಕಲ್ಲವೇ? ನಮಗಿರುವುದು ಎರಡೇ ಕಣ್ಣುಗಳಾದರೂ ಕಾಣುವ ಕನಸುಗಳಿಗೆ ಮಿತಿಯಿದೆಯೆ?

 

Please follow and like us:
error