ಕ್ಯಾನ್ಸರ್ ಚಿಕಿತ್ಸೆಗೆ ಆಗ್ರಹಿಸಿ ತನ್ನ ಗಮನಸೆಳೆದ ವ್ಯಕ್ತಿಗೆ ಆಂಧ್ರ ಸಿಎಂ ನೀಡಿದ ನೆರವು ಎಷ್ಟು ಗೊತ್ತೇ?

ಹೈದರಾಬಾದ್, ಜೂ.6: ಕ್ಯಾನ್ಸರ್ ಚಿಕಿತ್ಸೆಗೆ ನೆರವು ಕೋರಿ ವಿಮಾನ ನಿಲ್ದಾಣದ ಹೊರಗೆ ಪ್ಲೆಕಾರ್ಡ್ ಹಿಡಿದು ನಿಂತಿದ್ದ ವ್ಯಕ್ತಿಗೆ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ 20 ಲಕ್ಷ ರೂಪಾಯಿ ನೆರವು ನೀಡಿರುವ ಅಪರೂಪದ ಪ್ರಸಂಗ ನಡೆದಿದೆ.

ಹದಿನೈದು ವರ್ಷದ ನೀರಜ್ ಎಂಬ ಬಾಲಕನ ಕುಟುಂಬ ಎಲ್ಲ ನಿರೀಕ್ಷೆಗಳನ್ನೂ ಕೈಬಿಟ್ಟಿತ್ತು. ನೀರಜ್ ಲ್ಯುಕೇಮಿಯಾದಿಂದ ಬಳಲುತ್ತಿದ್ದಾನೆ. ಚಿಕಿತ್ಸೆಗಾಗಿ ನೀರಜ್ ಕುಟುಂಬ 20 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಜ್ಞಾನಪುರಂ ಎಂಬಲ್ಲಿ ದಿನಗೂಲಿ ಕೆಲಸ ಮಾಡುವ ಅಪ್ಪಾ ನಾಯ್ಡು ಕುಟುಂಬಕ್ಕೆ ಅಷ್ಟು ದೊಡ್ಡ ಮೊತ್ತ ಮಂಗಳವಾರದ ವರೆಗೂ ಕನ್ನಡಿಯ ಗಂಟಾಗಿಯೇ ಇತ್ತು. ತಂದೆಯ ಕೂಲಿ ಹಾಗೂ ತಾಯಿ ತರಕಾರಿ ಮಾರಿ ಗಳಿಸುತ್ತಿದ್ದ ಆದಾಯವೇ ಕುಟುಂಬಕ್ಕೆ ಆಧಾರ.

ನೀರಜ್ ಕುಟುಂಬದವರು, ಸಹೋದರರು, ಸ್ನೇಹಿತರು ಸೇರಿ 20 ಲಕ್ಷ ನೆರವು ಕೋರುವ ಪ್ಲೆಕಾರ್ಡ್ ಸಿದ್ಧಪಡಿಸಿದರು. ವೈಎಸ್‌ಆರ್ ಕಾಂಗ್ರೆಸ್ ನಾಯಕ ಕೆ.ಕೆ.ರಾಜು ಅವರು ನೀರಜ್ ಕುಟುಂಬಕ್ಕೆ ಸಲಹೆ ನೀಡಿ, ದೊಡ್ಡ ಪೋಸ್ಟರ್‌ನೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಏನು ಮಾಡಬೇಕು ಎಂಬ ಸಲಹೆ ನೀಡಿದರು. ದೊಡ್ಡ ಮನುಷ್ಯರು, ರಾಜ್ಯದ ಮುಖ್ಯಮಂತ್ರಿ ಕೂಡಾ ಅಲ್ಲಿ ಬರುತ್ತಾರೆ ಎಂದು ಹೇಳಿದರು.

ಈ ತಂತ್ರ ಫಲಿಸಿತು. ವಿಮಾನ ನಿಲ್ದಾಣದಲ್ಲಿ ಜಗನ್ ಬರುತ್ತಿದ್ದಾಗ ಇದನ್ನು ಗಮನಿಸಿದರು. ತಕ್ಷಣ ಚಿಕಿತ್ಸೆಗೆ ಆಗುವ ವೆಚ್ಚ ಭರಿಸುವಂತೆ ಸರ್ಕಾರಕ್ಕೆ ಸೂಚಿಸಿದರು. ಜಿಲ್ಲಾಧಿಕಾರಿಯನ್ನು ಕರೆದು ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದರು.

Please follow and like us:
error