ಕೋವಿಡ್-19 : ಗುತ್ತಿಗೆ-ಹೊರ ಗುತ್ತಿಗೆ ಸಿಬ್ಬಂದಿಗಳ ಮುಷ್ಕರ ನಿಷೇಧಿಸಿ ರಾಜ್ಯ ಸರಕಾರ ಅಧಿಸೂಚನೆ

ಬೆಂಗಳೂರು : ಸಾಮಾನ್ಯವಾಗಿ ಎಲ್ಲ ಸಾರ್ವಜನಿಕ ವಲಯದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಖಾಯಂ, ಗುತ್ತಿಗೆ ಆಧಾರದ ಸಿಬ್ಬಂದಿ, ಹೊರಗುತ್ತಿಗೆ ಆಧಾರದ ಸಿಬ್ಬಂದಿ ಅಥವಾ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ, ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ, ನಿರ್ಬಂಧಿಸುವ ಪ್ರಾಥಮಿಕ ಗುರಿಯನ್ನು ಸಾಧಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.

ಕೋವಿಡ್-19ಕ್ಕೆ ಸಂಬಂಧಪಟ್ಟಂತೆ, ಮೇಲಾಧಿಕಾರಿಯಿಂದ ನೀಡಲಾದ ಜವಾಬ್ದಾರಿಯನ್ನು ನಿರ್ವಹಿಸದೆ, ನಿರಾಕರಿಸುವುದನ್ನು ವಿಪತ್ತು ನಿರ್ವಹಣಾ ಕಾಯ್ದೆ, ನಿಯಮ ಅಥವಾ ಆದೇಶಗಳ ನಿಬಂಧನೆಗಳನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಹಾಗೂ ನಿರ್ದಿಷ್ಟ ಕಾಯ್ದೆಯಲ್ಲಿ ತಿಳಿಸಿರುವ ನಿಬಂಧನೆಗಳ ಅನ್ವಯ ದಂಡ ನಿಬಂಧನೆಗಳು ಹಾಗೂ ರಾಜ್ಯ ನಾಗರಿಕ ಸೇವೆಗಳ(ಮುಷ್ಕರ ನಿಯಂತ್ರಣ) ಕಾಯ್ದೆ-1966(1966ರ ಕರ್ನಾಟಕ ಕಾಯ್ದೆ ಸಂಖ್ಯೆ.30) ಯಾವುದು ಅನ್ವಯವಾಗುತ್ತದೋ ಅದರಂತೆ, ದಂಡ ನಿಬಂಧನೆಗಳನ್ನು ವಿಧಿಸಲಾಗುತ್ತದೆ ಎಂದು ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಆದುದರಿಂದ, ಯಾವುದೇ ಸಾರ್ವಜನಿಕ ವಲಯದ ಅಧಿಕಾರಿ, ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಖಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಈ ಮೂಲಕ ಮುಷ್ಕರಗಳು, ಅಸಹಕಾರ, ಅವಿಧೇಯತೆ ಅಥವಾ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ನಿರಾಕರಿಸುವುದು, ವರದಿಗಳನ್ನು ಸಲ್ಲಿಸದಿರುವುದು, ಮೇಲಾಧಿಕಾರಿಗಳ ಆದೇಶಗಳನ್ನು ಅನುಪಾಲನೆ ಮಾಡದಿರುವುದನ್ನು ನಿಷೇಧಿಸಲಾಗಿದೆ ಎಂದು ವಿಜಯಭಾಸ್ಕರ್ ಸ್ಪಷ್ಟಪಡಿಸಿದ್ದಾರೆ

Please follow and like us:
error