ಕೋವಿಡ್-19ರ ಬಗ್ಗೆ ನಿರ್ಲಕ್ಷ: ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್‌ಐಆರ್

ಹೊಸದಿಲ್ಲಿ, ಮಾ.21: ಬಾಲಿವುಡ್‌ನ ಖ್ಯಾತ ಗಾಯಕಿ ಕನಿಕಾ ಕಪೂರ್ ಕೋವಿಡ್-19ರ ಬಗ್ಗೆ ನಿರ್ಲಕ್ಷ ಹಾಗೂ ಅಸಹಕಾರ ತೋರಿದ ಕಾರಣಕ್ಕೆ ಐಪಿಸಿ ಸೆಕ್ಷನ್‌ಗಳಾದ 188, 269 ಹಾಗೂ 270ರ ಅಡಿಯಲ್ಲಿ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇತ್ತೀಚೆಗೆ ಇಂಗ್ಲೆಂಡ್‌ನಿಂದ ಮರಳಿದ್ದ ಕಪೂರ್ ತನಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ ಎಂದು ಶುಕ್ರವಾರ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದರು. ಲಕ್ನೋದ ಮುಖ್ಯ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಮೇರೆಗೆ ಕಪೂರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಲಕ್ನೋದಲ್ಲಿ ಔತಣಕೂಟದಲ್ಲಿ ಭಾಗವಹಿಸಿದ್ದ ಕಪೂರ್ ಹಲವು ಹಿರಿಯ ರಾಜಕಾರಣಿಗಳಲ್ಲಿ ಕೊರೋನ ವೈರಸ್ ಭೀತಿ ಹುಟ್ಟಿಸಿದ್ದಾರೆ. ಮಾರ್ಚ್ 14ರಂದು ಲಕ್ನೋ ಏರ್‌ಪೋರ್ಟ್‌ನಲ್ಲಿ ಆಗಮಿಸಿದ್ದಾಗ ಸ್ಕ್ರೀನಿಂಗ್ ನಡೆಸಿದಾಗ ಕಪೂರ್‌ಗೆ ಕೊರೋನ ವೈರಸ್ ತಗಲಿರುವುದು ಪತ್ತೆಯಾಗಿತ್ತು. ಆಗ ಅವರಿಗೆ ಸ್ವಯಂಪ್ರತ್ಯೇಕತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅವರು ಸಲಹೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು ಎನ್ನಲಾಗಿದೆ.

‘‘ನಾನು ಮಾರ್ಚ್ 11ರಂದು ಲಕ್ನೋಕ್ಕೆ ಬಂದಿದ್ದೇನೆ. ಲಂಡನ್‌ನಿಂದ ಮುಂಬೈ ಏರ್‌ಪೋರ್ಟ್‌ಗೆ ಮಾ.9ಕ್ಕೆ ಬಂದಿದ್ದೆ. ಏರ್‌ಪೋರ್ಟ್‌ನಲ್ಲಿ ನನ್ನನ್ನು ತಪಾಸಣೆ ನಡೆಸಿದ್ದಾಗ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ನನಗೆ ಕೊರೋನ ವೈರಸ್ ಇರುವುದು ಗೊತ್ತಿರಲಿಲ್ಲ’’ಎಂದು ಕನಿಕಾ ಕಪೂರ್ ಹೇಳಿದ್ದಾರೆ.

ಕನಿಕಾ ವಿರುದ್ಧ ಎಫ್‌ಐಆರ್ ದಾಖಲಾಗುವ ಮೊದಲು ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕನಿಕಾ ಕಪೂರ್ ಪಾರ್ಟಿಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಉತ್ತರಪ್ರದೇಶ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್, ರಾಜ್ಯ ರಾಜಧಾನಿಯ ಏರ್‌ಪೋರ್ಟ್‌ನಲ್ಲಿ ಪ್ರಮಾದ ನಡೆದಿದೆ ಎಂದಿದ್ದಾರೆ.

‘‘ನಮ್ಮ ಕಡೆಯಿಂದ ತಪ್ಪಾಗಿರುವುದು ಕಂಡುಬರುತ್ತಿದೆ. ತಪಾಸಣೆ ನಡೆಸದೇ ಕನಿಕಾ ಕಪೂರ್ ಏರ್‌ಪೋರ್ಟ್‌ನಿಂದ ಹೊರಹೋಗಿದ್ದೇಗೆ ಎಂದು ನನ್ನ ಅಧಿಕಾರಿಗಳ ಬಳಿ ಕೇಳಿದ್ದೇನೆ ಎಂದರು.

Please follow and like us:
error