ಕೋವಿಡ್ ೧೯ ಆನ್‌ಲೈನ್ ಕ್ರಾಂತಿ: ತಂತ್ರಜ್ಞಾನ, ಯಂತ್ರೋಪಕರಣಗಳು ವೈದ್ಯರಿಗೆ ಪರ್ಯಾಯವಲ್ಲ

Dr. H S Anupama

ಕನ್ನಡನೆಟ್ ನ್ಯೂಸ್:  ಕೋವಿಡ್ ಮಹಾಪಿಡುಗು ವಿಶ್ವವನ್ನು ವ್ಯಾಪಿಸಿ ಇನ್ನೂ ತನ್ನ ಬಿರುಸು ಕಡಿಮೆ ಮಾಡಿಕೊಳ್ಳದೇ ಹಾಹಾಕಾರ ಸೃಷ್ಟಿಸಿರುವಾಗ ಅದು ಹೇಗೆ ಬಂತು, ಯಾರಿಂದ ಬಂತು ಎನ್ನುವ ಚರ್ಚೆಗಳು ಒಂದೆಡೆ ಕಾವೇರುತ್ತಿದ್ದರೆ; ಇನ್ನೊಂದೆಡೆ ನೋಡದೇ, ಮುಟ್ಟದೇ ಕೆಲಸ ಮಾಡುವ ಆನ್‌ಲೈನ್ ಸಂಸ್ಕೃತಿಯ ಬಗೆಗೆ ಜನ ಹೆಚ್ಚೆಚ್ಚು ಯೋಚಿಸತೊಡಗಿದ್ದಾರೆ. ಮುಟ್ಟದಿರಿ, ಮುಟ್ಟಿದರೆ ಕೈತೊಳೆಯಿರಿ ಎನ್ನುವ ಕಾಯಿಲೆ ಕೋವಿಡ್‌ಗೆ ಆನ್‌ಲೈನ್ ವ್ಯವಹಾರ ಹೇಳಿಮಾಡಿಸಿದಂತಿದೆ ನಿಜ. ಆದರೆ ಭವಿಷ್ಯದಲ್ಲೂ ಇದು ಬೇಕೇ? ಎಲ್ಲಿ, ಎಷ್ಟು ಬೇಕು? ವೈದ್ಯಕೀಯ ರಂಗದಲ್ಲಿ ಆನ್‌ಲೈನ್ ಸಾಧ್ಯತೆಗಳೇನು ಎನ್ನುವುದು ಚರ್ಚೆಯ ವಿಷಯವಾಗಿದೆ.

ನಿಸ್ತಂತು ಮಾಧ್ಯಮ ಜನಸಂಪರ್ಕ ಸಾಧನವಾಗಿ ಬಳಕೆಯಾಗತೊಡಗಿದ್ದೇ ಬಂಡವಾಳ ಹೂಡುವವರು ಅದರ ವ್ಯಾಪಾರಿ ಸಾಧ್ಯತೆಗಳನ್ನು ಶೋಧಿಸಿದಾಗ. ಈ ವಿಷಯದಲ್ಲಿ ಆರೋಗ್ಯ ಕ್ಷೇತ್ರದ ಬಂಡವಾಳಿಗರು ಮುಂದಿದ್ದಾರೆ. ಕೋವಿಡ್ ಬರುವ ಮೊದಲೇ ವೈದ್ಯಕೀಯವು ಆನ್‌ಲೈನ್ ಆಗಿದೆ. ಪ್ರತಿವರ್ಷ ವೈದ್ಯಕೀಯ ವೃತ್ತಿಗೆ ಇಳಿಯುವ ಸಾವಿರಾರು ಹೊಸ ತಲೆಮಾರಿನ ಡಾಕ್ಟರುಗಳು ತಮ್ಮೊಡನೆ ಹೊಸ ಆಲೋಚನೆಗಳು, ಹೊಸ ಉಪಕರಣಗಳು, ಹೊಸ ಮುನ್ನೋಟಗಳನ್ನು ತಂದಿದ್ದಾರೆ. ಭ್ರೂಣದ ಅಂಗಾಂಶ ಕಸಿ, ರೊಬೋಟುಗಳಿಂದ ಶಸ್ತ್ರಚಿಕಿತ್ಸೆಗೆ ಸಹಾಯವೇ ಮೊದಲಾದ ಹೊಚ್ಚ ಹೊಸಪ್ರಯೋಗಗಳು ನಡೆಯುತ್ತಿವೆ. ಬೇಕೋ ಬೇಡವೋ, ಒಳ್ಳೆಯದೋ ಕೆಟ್ಟದೋ, ಹೊಸತನ ವೈದ್ಯಕೀಯ ವೃತ್ತಿಯನ್ನು ತಂತಾನೇ ಪ್ರವೇಶಿಸುತ್ತಲಿದೆ. ಈಗಂತೂ ಆಟ, ಪಾಠ, ಪ್ರಾರ್ಥನೆ, ಮದುವೆ, ತಲಾಖ್, ಲೈಂಗಿಕತೆ, ಸಭೆಗಳು ಆನ್‌ಲೈನ್ ಆದಮೇಲೆ ಚಿಕಿತ್ಸೆ ಆಗದಿರುತ್ತದೆಯೆ? ಎಲ್ಲೋ ಕುಳಿತು ಇನ್ನೆಲ್ಲೋ ಇರುವ ರೋಗಿಗೆ ವೈದ್ಯಕೀಯ ಸಲಹೆ ಕೊಡಲು ಡಾಕ್ಟರರ ಸಮೂಹವೇ ಸಿದ್ಧವಾಗಿದೆ. ಒಂದೇ ರೋಗವನ್ನನುಭವಿಸುವ ರೋಗಿಗಳ ಜಾಲತಾಣ ಗುಂಪುಗಳಿದ್ದು ಅವರು ಚಿಕಿತ್ಸೆಯ ಸಫಲತೆ-ವಿಫಲತೆ, ರೋಗದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಡಾಕ್ಟರನ್ನು ಕಾಣದೇ ಇಡಿಯ ದೇಹ ಚೆಕಪ್ ಮಾಡಿಕೊಳ್ಳಬೇಕೆ? ಕ್ಯಾನ್ಸರ್‌ಗೆ ಚಿಕಿತ್ಸೆ ಬೇಕೆ? ಚರ್ಮರೋಗಕ್ಕೆ ಪರಿಹಾರ ಬೇಕೆ? ಬಂಜೆತನ ನಿವಾರಣೆಯಾಗಬೇಕೆ? ಯಾವ ಚಿಕಿತ್ಸೆ, ಎಲ್ಲಿ, ಎಷ್ಟು % ಯಶಸ್ಸಿನೊಂದಿಗೆ, ಎಷ್ಟು ಖರ್ಚಿನಲ್ಲಿ ಆಗುತ್ತದೆಂದು ರೇಟಿಂಗ್‌ನೊಡನೆ ತಿಳಿಸುವ ಜಾಹೀರಾತು ತಾಣಗಳಿವೆ. ಯಾರಿಗೆ ಯಾವುದೆಂಬ ವಿವೇಚನೆಯೇ ಇಲ್ಲದೆ ಎಲ್ಲರಿಗೂ ಎಲ್ಲ ಟೆಸ್ಟ್ ಮಾಡಿಸಿ; ರಕ್ತ, ಮೂತ್ರ, ಎಕ್ಸ್‌ರೇ, ಸಿಟಿ-ಎಂಆರ್‌ಐ- ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗಳ ವರದಿಯನ್ನು ದೂರದೂರಿನ ಹೆಸರಾಂತ ತಜ್ಞರಿಗೆ ಕಳಿಸಿ ಸಲಹೆ ಪಡೆಯಬಹುದಾಗಿದೆ. ಮೂಗು, ಕಣ್ಣು, ಹೃದಯ, ಚರ್ಮ, ಕಿಡ್ನಿ, ಶ್ವಾಸಕೋಶ ಮತ್ತಿತರ ಅಂಗಾಂಗಗಳ ತಪಾಸಣಾ ವರದಿ ನೋಡಿ ಆಯಾಯಾ ತಜ್ಞರು, ವಿಶೇಷ ತಜ್ಞರು ಸಲಹೆ ಕೊಡುತ್ತಾರೆ. ಅವರೆಲ್ಲರ ತೀರ್ಪುಗಳನ್ನು ಸೇರಿಸಿ ಲ್ಯಾಬುಗಳು, ಆಸ್ಪತ್ರೆಗಳು ‘ನಿಲ್’ ವರದಿ ನೀಡಿ ರೋಗ, ನಿರೋಗಗಳನ್ನು ನಿಷ್ಕರ್ಷಿಸುತ್ತವೆ. ಮಿಗುವಷ್ಟು ದುಡ್ಡಿರುವ ಸಿರಿವಂತರಿಂದ ಬಡವರವರೆಗೆ, ನಗರವಾಸಿಗಳಿಂದ ಗ್ರಾಮೀಣ ಪ್ರದೇಶಗಳವರೆಗೆ ಕಾಸಿಗೆ ತಕ್ಕಂತೆ ಈ ಸೌಲಭ್ಯ ವಿಸ್ತರಿಸಿಕೊಂಡಿದೆ.

ವಾಹನ ಹಿಡಿದು, ಎಷ್ಟೋ ದೂರ ಪಯಣಿಸಿ, ಚೀಟಿ ಮಾಡಿ, ಕೂತು ಕಾದು, ಡಾಕ್ಟರನ್ನು ನೋಡುವ ಕಿರಿಕಿರಿಯೇ ಇಲ್ಲವೆಂದು ಆನ್‌ಲೈನ್ ಚಿಕಿತ್ಸೆ ಬಗೆಗೆ ಹಲವರು ಒಲವು ತೋರಿಸುತ್ತಿದ್ದಾರೆ. ಪುರುಸೊತ್ತಿಲ್ಲದ ಕಾಲದಲ್ಲಿ ನಿಸ್ತಂತು ಸಂಪರ್ಕವೇ ಸರಿಯೆಂಬ ಮಾತೂ ಕೇಳಿಬರುತ್ತಿದೆ.

ಹೌದೇ? ಆನ್‌ಲೈನ್ ವೈದ್ಯಕೀಯ ಸಲಹೆಯೇ ಈ ಕಾಲಕ್ಕೆ ಸೂಕ್ತವೇ? ಡಾಕ್ಟರ್ ಮತ್ತು ರೋಗಿಯ ದೃಷ್ಟಿಯಿಂದ ಅದರ ಸಾಧಕ, ಬಾಧಕಗಳೇನು?

ಕಹಿ ಸತ್ಯ

 

ಮನುಷ್ಯ ದೇಹಕ್ಕೆ ಬರುವ ನೂರಾರು ಆರೋಗ್ಯ ಸಮಸ್ಯೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು:

೧. ಮನೋಕ್ಲೇಷದಿಂದ ಬರುವ ಸಮಸ್ಯೆಗಳು: ದೈಹಿಕ ಕಾಯಿಲೆಯಿರದ ಈ ಸಮಸ್ಯೆಗಳಿಗೆ ಮಾತುಕತೆ-ಸಲಹೆ-ಸೂಕ್ತ ಔಷಧಿಯೇ ಪರಿಹಾರ.
೨. ಔಷಧಿ-ಮಾತ್ರೆ-ಪಥ್ಯದಿಂದ ಗುಣವಾಗುವ ಕಾಯಿಲೆಗಳು: ಉದಾಹರಣೆಗೆ ಅಸ್ತಮಾ, ಏರು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮದ ಕಾಯಿಲೆ, ಕೆಲವು ಹೃದ್ರೋಗಗಳು, ಜ್ವರ, ಇತ್ಯಾದಿ.
೩. ಶಸ್ತ್ರಚಿಕಿತ್ಸೆ ಮತ್ತು ಪೂರಕ ‘ಪ್ರೊಸೀಜರು’ಗಳೂ ಅಗತ್ಯವಿರುವಂಥವು: ಹೆರಿಗೆ, ಗರ್ಭಪಾತ, ಗರ್ಭಕೋಶ ಸಂಬಂಧಿ ತೊಂದರೆಗಳು, ಕ್ಯಾನ್ಸರ್ ಗೆಡ್ಡೆ/ಹುಣ್ಣು, ಮೂಳೆಮುರಿತ, ಲಿವರು-ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ತೊಂದರೆಗಳು, ಅಪೆಂಡಿಕ್ಸ್ ಉರಿಯೂತ, ಟಾನ್ಸಿಲ್ ಉರಿಯೂತ, ಕೀವು, ಬಾವು ಇತ್ಯಾದಿ.

ಇದರಲ್ಲಿ ರೋಗಿಗೆ ಯಾವುದೇ ಒಂದು ವರ್ಗದ ಸಮಸ್ಯೆಯಿರಬಹುದು ಅಥವಾ ಎಲ್ಲವೂ ಒಟ್ಟೊಟ್ಟಿಗೆ ಇರಬಹುದು. ಕ್ಯಾನ್ಸರ್, ಸಕ್ಕರೆ ಕಾಯಿಲೆ ಇರುವವರಿಗೆ ಮಾನಸಿಕ ಕಾಯಿಲೆಯೂ ಇರಬಹುದು. ಅಸ್ತಮಾ ಇರುವ ಮಹಿಳೆಗೆ ಅತಿಸ್ರಾವವಾಗಬಹುದು. ರೋಗಿಗೆ ಯಾವ್ಯಾವ ತರಹದ ಸಮಸ್ಯೆಗಳಿವೆಯೆಂದು ಗುರುತಿಸಲು ಡಾಕ್ಟರರು ರೋಗಿಯನ್ನು ‘ನೋಡು’ವುದು ಮುಖ್ಯವಾಗಿದೆ. ನೋಡಿದ ನಂತರ ಅವಶ್ಯವಿರುವ ತಪಾಸಣೆಗಳನ್ನಷ್ಟೇ ಮಾಡಿಸಬೇಕು. ರೋಗಿಯ ಮುಖಭಾವ, ಪ್ರತಿಕ್ರಿಯೆ, ಪರಿಸ್ಥಿತಿ, ಚಲನೆಯ ವಿಧಾನ, ಆತಂಕ, ಅನುಮಾನ, ಪ್ರಶ್ನೆ, ಅವರ ಜೊತೆಗಿರುವವರನ್ನೆಲ್ಲ ‘ನೋಡಿದ’ ಡಾಕ್ಟರು ತಮ್ಮ ಭಾವುಕ, ಬೌದ್ಧಿಕ ಬಂಡವಾಳ ತೊಡಗಿಸಿದಾಗ ರೋಗ-ರೋಗಿ-ಚಿಕಿತ್ಸೆಯ ಸ್ಥೂಲ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ತಮ್ಮ ಹಿಂದಿನ ಅನುಭವ, ಸಹಾನುಭೂತಿಗಳ ಮೂಸೆಯಿಂದ ಆ ರೋಗಿಗೆ ಹೊಂದುವ ಒಂದು ಸೂಕ್ತ ಪರಿಹಾರವನ್ನು ಹೆಕ್ಕಿ ಹೊರತೆಗೆಯಲು ಈ ಚಿತ್ರಣ ಪ್ರೇರೇಪಿಸುತ್ತದೆ. ಡಾಕ್ಟರ್-ರೋಗಿಯ ಸಂಬಂಧ ಚೆನ್ನಾಗಿದ್ದಷ್ಟೂ ಉತ್ತಮ ಪರಿಹಾರಗಳು ಅನುಭವದ ಬುಟ್ಟಿಯಿಂದ ಎದ್ದು ಬರುತ್ತವೆ.

ಮನುಷ್ಯರೆಂಬ ಯಂತ್ರಗಳಲ್ಲದ ಯಂತ್ರಗಳು ನಡೆಯಲು ಶಕ್ತಿ ಸೆಲೆ ಎಷ್ಟು ಮುಖ್ಯವೋ ಭಾವಸೆಲೆಯೂ ಅಷ್ಟೇ ಮುಖ್ಯ. ರೋಗಿಯ ಜೀವಕೋಶಕ್ಕೆ ಔಷಧಿ ಎಷ್ಟು ಅಗತ್ಯವೋ, ಅವರ ಭಾವಕೋಶವನ್ನು ಮರುಪೂರಣ ಮಾಡುವುದೂ ಅವಶ್ಯವಾಗಿದೆ. ಈ ಕುರಿತು ರೋಗಿಗಳನ್ನು, ಸಮಾಜವನ್ನು ಎಚ್ಚರಿಸುತ್ತಲೇ ಡಾಕ್ಟರುಗಳು ತಾವೂ ಮಾನವೀಯಗೊಳ್ಳಬೇಕಾದ ಅವಶ್ಯಕತೆಯಿದೆ. ಮಾಹಿತಿಗೂ, ಜ್ಞಾನಕ್ಕೂ ಅಂತರವಿದೆ. ಓದಿಗೂ, ತಜ್ಞತೆಗೂ ಅಂತರವಿದೆ. ಜನರ ಒಡನಾಟದಿಂದಷ್ಟೇ ಮಾಹಿತಿ ಜ್ಞಾನವಾಗಿ, ವಿವೇಕವಾಗಬಲ್ಲದು; ಅನುಭವವು ಚಿಂತನೆಯಾಗಿ ಅರಳಬಲ್ಲದು. ರೋಗಿಯನ್ನು ನೋಡಿ, ಮುಟ್ಟಿದಾಗ ಡಾಕ್ಟರುಗಳಲ್ಲಿ ಮಾತಿಲ್ಲದೆ ಭಾವನೆಗಳನ್ನು ಪತ್ತೆ ಹಚ್ಚುವ, ಮುಖಚಹರೆ ಅರಿಯುವ ಹೆಣ್ಣುಗುಣ ಉದ್ದೀಪನಗೊಳ್ಳಲು ಸಾಧ್ಯವಿದೆ.

ಆನ್‌ಲೈನ್ ಸಂಪರ್ಕ ಇಂಥ ಎಲ್ಲ ಸಾಧ್ಯತೆಗಳನ್ನು ಮೊಟಕುಗೊಳಿಸುತ್ತದೆ. ಡಾಕ್ಟರ್-ರೋಗಿ ಸಂಬಂಧವನ್ನು ವ್ಯಾಪಾರಿ ಗ್ರಾಹಕ ಮಟ್ಟಕ್ಕಿಳಿಸುತ್ತದೆ. ಇದರಿಂದ ಆರ್ಥಿಕ ಲಾಭಗಳಿರಬಹುದು. ಆದರೆ ಜನದೇವರ ದರ್ಶನವಾಗದಿರುವುದು ಡಾಕ್ಟರುಗಳಿಗೆ ದೊಡ್ಡ ನಷ್ಟವೇ ಸರಿ.

ಆನ್‌ಲೈನ್ ಸೇವೆಯ ಇನ್ನೊಂದು ಆತಂಕ ಮಾಹಿತಿ ಸೋರಿಕೆಯದ್ದು. ರೋಗಿಯು ವಿವರ ನೀಡುತ್ತಿರುವುದು ಒಬ್ಬ ವೈದ್ಯರಿಗೇ ಹೊರತು ಹ್ಯಾಕರ್‌ಗೆ ಅಲ್ಲವೆಂದು, ಆನ್‌ಲೈನ್ ಸೇವೆಯಲ್ಲಿ ಬಹಿರಂಗವಾಗುವ ಖಾಸಗಿ ವಿವರಗಳು ಸೋರುವುದಿಲ್ಲವೆಂದು ನಿಶ್ಚಿತವಿರುವುದಿಲ್ಲ. ಆನ್‌ಲೈನ್ ಸೇವೆ ನೀಡುತ್ತಿರುವವರು ನಕಲಿ ಡಾಕ್ಟರುಗಳೋ ಅಲ್ಲವೋ ಎಂದು ತಿಳಿಯಲೂ ಕಷ್ಟವಿದೆ.

ಮನುಷ್ಯರನ್ನು ಬಿಟ್ಟು ಉಳಿದ ಪ್ರೈಮೇಟ್ ಪ್ರಬೇಧದ ಪ್ರಾಣಿಗಳು ದಿನದ ೨೦% ಸಮಯವನ್ನು ಒಂದನ್ನೊಂದು ಮುಟ್ಟುವುದರಲ್ಲಿ ಕಳೆಯುತ್ತವೆ. ನಾವು ಮಾತ್ರ ಆಧುನಿಕರಾಗುತ್ತ ಹೋದಂತೆ ಮುಟ್ಟದ, ಮುಟ್ಟಿಸಿಕೊಳ್ಳದವರಾಗುತ್ತಿದ್ದೇವೆ. ತುಂಬಿ ತುಳುಕಿ ಭೂಮಿ ನಡುಗುವಷ್ಟು ಜನ ತುಂಬಿಕೊಂಡಿದ್ದರೂ ಇನ್ನಿಲ್ಲದ ಒಂಟಿತನ ಮನುಷ್ಯರನ್ನು ಆವರಿಸಿದೆ. ಒಂಟಿತನವು ಖಿನ್ನತೆ ಹುಟ್ಟಿಸುತ್ತದೆ, ಕೀಳರಿಮೆ ಬೆಳೆಸುತ್ತದೆ, ನಗಣ್ಯ ದೈಹಿಕ ಕಿರಿಕಿರಿಗಳೂ ದೊಡ್ಡವೆನಿಸತೊಡಗುತ್ತವೆ, ಚಹರೆಯ ಏರುಪೇರುಗಳೇ ಕಾಯಿಲೆಯಂತೆ ಭಾಸವಾಗುತ್ತವೆ. ಹೆಚ್ಚುತ್ತಿರುವ ದೌರ್ಜನ್ಯಗಳಿಗೆ, ಅತಿಭಯ, ಮುಂಗೋಪ, ಉದ್ರೇಕ, ಅಪರಾಧಿ ಪ್ರವೃತ್ತಿಗಳಂತಹ ನಡತೆಗಳಿಗೆ ಒಂಟಿತನವೇ ಕಾರಣವಾಗಿದೆ. ಒಂಟಿತನದ ಮೂಲ ಸ್ಪರ್ಶ ಹಸಿವು. ಇದಕ್ಕೆ ‘ಆನ್‌ಲೈನ್ ಕ್ರಾಂತಿ’ ಸೃಷ್ಟಿಸುವ ಭ್ರಮಾವಾಸ್ತವ ಕಾರಣವಾಗಿದೆ.

ಒಟ್ಟಾರೆ ಹೇಳುವುದಾದರೆ, ತಂತ್ರಜ್ಞಾನ ಮನುಷ್ಯರಿಗೆ ಸಹಾಯ ಮಾಡಬಹುದು. ಸಣ್ಣಪುಟ್ಟ ಕಾಯಿಲೆಗಳಿಗೆ ಆನ್‌ಲೈನ್ ಸಲಹೆ ಪಡೆಯಬಹುದು. ಔಷಧಿಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳಬಹುದು. ನಿಮ್ಮ ಡಾಕ್ಟರುಗಳೊಡನೆ ನಿರಂತರ ಆನ್‌ಲೈನ್ ಸಂಪರ್ಕ ಇಟ್ಟುಕೊಂಡು ಆಪ್ತ ಬಾಂಧವ್ಯ ಬೆಳೆಸಿಕೊಳ್ಳಬಹುದು. ಡಾಕ್ಟರರು ತಮ್ಮ ರೋಗಿಗಳ ಜೊತೆ ಆನ್‌ಲೈನ್ ಸಂಪರ್ಕದಲ್ಲಿದ್ದು ಭರವಸೆ, ಮಾಹಿತಿ ನೀಡಬಹುದು. ಆದರೆ ಮನುಷ್ಯರ ಬದಲಾಗಿ ತಂತ್ರಜ್ಞಾನ ಉಪಯೋಗಿಸಲು ಬಾರದು. ಡಾಕ್ಟರಿಗಾಗಿ ಕಾಯುವುದು, ಅವರೆದುರು ಹೇಳಿಕೊಳ್ಳುವುದು, ಪರೀಕ್ಷಿಸಲ್ಪಡುವುದು ಎಷ್ಟೇ ಕಷ್ಟವಾದರೂ ಸಹ ಆಸ್ಪತ್ರೆಗೆ ಹೋದಾಗ ಸಿಗುವ ಜನ, ಅವರ ಅನುಭವ-ಸಾಂತ್ವನದ ನುಡಿಗಳು, ವಾಸ್ತವ ಮಾಹಿತಿಗಳು, ಡಾಕ್ಟರರ ಮೇಲಿನ ವಿಶ್ವಾಸಗಳು ಬದುಕಿನಲ್ಲಿ ಭರವಸೆ ತುಂಬಬಲ್ಲವು.

ಅತಿಗಳ ಫಲಿತ ಕೋವಿಡ್

 

ಹೆಚ್ಚು ಜನ ಒಂದೆಡೆ ಇರುವುದೇ ಹಿಂಸೆ. ಮುನ್ನೂರಕ್ಕಿಂತ ಹೆಚ್ಚು ಜನ ಒಂದೆಡೆ ಇರುವಲ್ಲಿ ಒಮ್ಮತ ಸಾಧ್ಯವಿಲ್ಲ, ಸಾವಿರ ಜನ ಒಟ್ಟಿಗೇ ಇರುವಲ್ಲಿ ಭಿನ್ನಮತೀಯ ಗುಂಪು ಹುಟ್ಟಿಯೇ ಹುಟ್ಟುತ್ತದೆ. ಹತ್ತು ಸಾವಿರ ಜನ ಹಿಂಸೆಯಿಲ್ಲದೆ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಾನವಶಾಸ್ತ್ರಜ್ಞರು. ಹೀಗಿರುತ್ತ  ಕೋಟ್ಯಂತರ ಜನರನ್ನು ಒಂದು ಸಣ್ಣ ಪ್ರದೇಶದಲ್ಲಿ, ಕಾಲ್ಪನಿಕ ಗೆರೆಯೆಳೆದು, ದೇಶ ರಾಜ್ಯ ಜಾತಿ ಧರ್ಮಗಳೆಂಬ ಅಸ್ಮಿತೆ ಕೊಟ್ಟು ನಿಯಂತ್ರಿಸುವುದು ಪ್ರಕೃತಿ ಸಹಜವಲ್ಲ. ಹೀಗೆ ನಿಸರ್ಗ ತತ್ತ್ವಕ್ಕೆ ವಿರುದ್ಧವಾಗಿ ಒಂದೆಡೆ ನೆರೆವ ಬೃಹತ್ ಜನಸಮೂಹವೇ ಸಾಂಕ್ರಾಮಿಕ ರೋಗಗಳ ಕಾರಣವಾಗಿದೆ. ಬರಿಯ ಸಾಂಕ್ರಾಮಿಕ ರೋಗಗಳಷ್ಟೇ ಅಲ್ಲ, ನಮ್ಮ ಬಹುಪಾಲು ಸಮಸ್ಯೆಗಳ ಮೂಲ ನಗರೀಕರಣ ಮತ್ತು ಜನದಟ್ಟಣೆಯೇ ಆಗಿದೆ. ಒತ್ತೊತ್ತಾಗಿ ಬದುಕುವ ಮನುಷ್ಯ ಜೀವಿಗಳು ಅತಿ ಸಂಪರ್ಕ, ಅತಿ ಬಳಕೆ, ಅತಿ ಆಸೆ, ಅತಿ ತಿರುಗಾಟ, ಅತಿ ಡಾಂಭಿಕತೆ, ಅತಿ ಅನುಭೋಗಕ್ಕೆ ಒಳಗಾಗಿ ತಮ್ಮ ಸುತ್ತಲ ಜೀವಿ, ಅಜೀವಿ ಪರಿಸರವನ್ನು ನಾಶಗೈದದ್ದರ ಫಲಿತವಾಗಿ ಕರೋನಾದಂತಹ ಕಾಯಿಲೆಗಳು ಬಂದಿವೆ. ಶಂಕೆಯೇ ಇಲ್ಲ, ನಮ್ಮ ಅತಿಗಳ ನೇರ ಫಲಿತ ಕೋವಿಡ್-೧೯.

ಈ ಕಾಲವು ಬುದ್ಧಿ ಮತ್ತು ಅನುಭವವನ್ನು ಪ್ರತ್ಯೇಕಿಸಿ ಇಟ್ಟಿದೆ. ನಮಗಾದ ಅನುಭವವನ್ನು ಅರ್ಥಮಾಡಿಕೊಳ್ಳುವ, ವಿಶ್ಲೇಷಿಸುವ ವ್ಯವಧಾನವೂ ಇಲ್ಲದ ಆತುರ ಜೀವಿಗಳಾಗಿದ್ದೇವೆ. ಹಾಗೆ ನೋಡಿದರೆ ರೋಗಗಳು ಬರುವುದೇ ನಮ್ಮ ಅತಿಗಳನ್ನು ಮಿತಿಗೊಳಿಸಲಿಕ್ಕೆ. ನಾವು ಯಕಃಶ್ಚಿತ್ ಜೀವಿಗಳು ಎಂದು ನೆನಪಿಸುವುದಕ್ಕೆ. ಅತಿಗಳನ್ನು ಮಿತಿಗೊಳಿಸಿಕೊಂಡರೆ ಆರೋಗ್ಯ ತಂತಾನೇ ಸರಿಯಾಗುತ್ತದೆ. ಆದರೆ ನಾವು ರೋಗದಿಂದ ಪಾಠ ಕಲಿಯದೆ ರೋಗಕ್ಕೇ ಪಾಠ ಕಲಿಸಹೊರಡುತ್ತೇವೆ. ಸಾರಾಯಿ ಉತ್ಪಾದನೆಗೆ ಸಬ್ಸಿಡಿ ಕೊಟ್ಟು, ಸಾರಾಯಿ ದುಡ್ಡಿನಿಂದಲೇ ಸರ್ಕಾರ ಬದುಕುವುದೆಂದು ಹೇಳಿ, ಮದ್ಯದೊರೆಯನ್ನು ದೇಶ ಬಿಟ್ಟು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟು ಕೊನೆಗೆ ಸಾರಾಯಿ ನಿಷೇಧ ಕಾನೂನು ತರುತ್ತೇವೆ! ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುತ್ತಲೇ ಗುಟ್ಕಾ-ಬೀಡಿ-ಸಿಗರೇಟು ತಯಾರಿಸುತ್ತೇವೆ! ಇಂಥ ವೈರುಧ್ಯಮಯ ನಿಲುವು ಮತ್ತು ಬದುಕುಗಳಿಂದಲೇ ಇವತ್ತು ಅನಾರೋಗ್ಯ ಹೆಚ್ಚಾಗಿರುವುದು. ಆದರೂ ನಾವು ಕೋವಿಡ್‌ಗಳನ್ನು ಗೆಲ್ಲುವ ಭರವಸೆಯಲ್ಲಿದ್ದೇವೆ. ಹೆಚ್ಚೆಚ್ಚು ಆಸ್ಪತ್ರೆಗಳನ್ನು ತೆರೆಯುವ, ಲಸಿಕೆ-ಔಷಧಿ ಕಂಡುಹಿಡಿಯುವ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಸ್ತಾವಗಳು ಕಂಡುಬರುತ್ತಿವೆ. ನಮ್ಮ ಸರ್ಕಾರಗಳಾದರೋ ಕೋವಿಡ್ ಮಹಾಪಿಡುಗನ್ನು ಯುದ್ಧ ಸನ್ನಿವೇಶವೆಂದು ಭಾವಿಸಿವೆ. ಗಮನಿಸಿ, ವಾರಿಯರ‍್ಸ್, ಫ್ರಂಟ್‌ಲೈನ್ ಲೆಫ್ಟಿನೆಂಟ್ಸ್, ಲಾಕ್‌ಡೌನ್, ಕೌಂಟ್‌ಡೌನ್, ಮಿಷನ್ ಇತ್ಯಾದಿ ಯುದ್ಧಕಾಲದ ಭಾಷೆ ಬಳಕೆಯಲ್ಲಿದೆ. ಇದೆಲ್ಲದರ ಹಿಂದೆ ಅದಮ್ಯ ಜೀವನೋತ್ಸಾಹವಿದ್ದಂತೆ ಮನುಷ್ಯ ಮಿದುಳಿನ ಅಜೇಯತನದ ಅಹಂಕಾರವೂ ಇದೆ.

ಆದರೆ ರೋಗ ನಿವಾರಣೆಯೆಂದರೆ ಯುದ್ಧವಲ್ಲ. ಅದು ಎಲ್ಲರೂ ಒಟ್ಟಾಗಿ ಈಜಿ ದಾಟಬೇಕಾದ ವಿಷಮ ಪ್ರವಾಹ. ಪ್ರವಾಹದೆದುರು ಈಜಿ ದಡ ಸೇರಲು ಅನುಭೂತಿ, ಪ್ರೀತಿ, ಸಹಕಾರಗಳ ಜಂಟಿ ರಟ್ಟೆಬಲ ಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ. ಒಗ್ಗಟ್ಟೇ ಮಂತ್ರ, ಪ್ರೀತಿಯೇ ಆಧಾರ. ಹೀಗಿರುತ್ತ ನಗರೀಕರಣ ಮತ್ತು ಅತಿಗಳ ಬದುಕನ್ನು ತ್ಯಜಿಸದೆ ಬರಿಯ ಲಸಿಕೆ, ಔಷಧಿ, ಸಾಮಾಜಿಕ ಅಂತರ ಎಂದುಕೊಳ್ಳುವುದರಿಂದ, ಆನ್‌ಲೈನ್ ಡಾಕ್ಟರುಗಳು ಸಿಗುವುದರಿಂದ ಕೋವಿಡ್ ದೂರವಾಗುವುದಿಲ್ಲ. ಕೋವಿಡ್-೧೯ ಹೋಗುತ್ತದೆ, ೨೦ ಬರುತ್ತದೆ ಅಷ್ಟೇ.

ನಿಜವಾದ ಕ್ರಾಂತಿ ಕೋವಿಡ್-೧೯ಕ್ಕೆ ಲಸಿಕೆ ಕಂಡುಹಿಡಿಯುವುದೋ, ಚಿಕಿತ್ಸೆ ಕಂಡುಹಿಡಿಯುವುದೋ ಅಲ್ಲ. ಆನ್‌ಲೈನ್, ಆಫ್‌ಲೈನಿನಲ್ಲಿ ಅಸಂಖ್ಯ ಡಾಕ್ಟರುಗಳನ್ನು ಗುಡ್ಡೆ ಹಾಕಿಕೊಳ್ಳುವುದೋ ಅಲ್ಲ. ಅಥವಾ ಗಲ್ಲಿಗಲ್ಲಿಗೂ ಆಸ್ಪತ್ರೆ, ಜಿಲ್ಲೆಜಿಲ್ಲೆಯಲ್ಲೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ತೆರೆಯುವುದಲ್ಲ. ಆರೋಗ್ಯ ಕ್ಷೇತ್ರದ ನಿಜವಾದ ಕ್ರಾಂತಿ ಎಂದರೆ ಡಾಕ್ಟರುಗಳು ನಿರುದ್ಯೋಗಿಗಳಾಗುವಷ್ಟು ಆರೋಗ್ಯ ಸಾಧಿಸುವುದು. ಅವಶ್ಯವಿದ್ದಾಗ ಗುರುವಿನಂತೆ ಸಂಪರ್ಕಿಸಲು ‘ನಮ್ಮ ಡಾಕ್ಟರನ್ನು’ ನಾವೇ ಹುಡುಕಿಕೊಳ್ಳುವುದು.

***

ಆಗಲೇ ಆಗಮಿಸಿರುವವರು, ನಿರ್ಗಮನದ ಹಾದಿಯಲ್ಲಿರುವವರು ನಾವು.
ಬರಲಿರುವವರಿಗೆ ಸುರಕ್ಷಿತ ನೆಲ ಬಿಟ್ಟುಹೋಗುವ ಹೊಣೆ ನಮ್ಮದು.
ಎಂದೇ ಮಿತಗೊಳಿಸಿಕೊಳ್ಳೋಣ, ಎಲ್ಲ ಅಂದರೆ ಎಲ್ಲವನ್ನೂ.
ನಮ್ಮ ಕಣ್ಣು ತೆರೆಸಲಿ ಕೋವಿಡ್, ಇನ್ನಾದರೂ.

 

(ವೈದ್ಯ ಎಂಬ ಕನ್ನಡ ಪದ ‘ರೋಗಿ’ ಪದದಂತೆ ಲಿಂಗತಟಸ್ಥ ಅಲ್ಲ. ಎಂದೇ ‘ಡಾಕ್ಟರ್’ ಪದ ಬಳಸಿರುವೆ.)

(‘ಸೋಂಕು ರೋಗ ಪ್ರೇರೇಪಿಸಿದ ಆನ್‌ಲೈನ್ ಕ್ರಾಂತಿ ಶಾಶ್ವತವೇ? ವೈದ್ಯಕೀಯ ರಂಗದಲ್ಲಿ ಏನಾಗುತ್ತಿದೆ? ಭವಿಷ್ಯದ ಸಾಧ್ಯತೆಗಳೇನು?’ ಸಮಾಜಮುಖಿ ಪತ್ರಿಕೆಗೆ ಬರಹ ಜುಲೈ ೨೦೨೦.)

Please follow and like us:
error