ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ : DC ವಿಕಾಸ್ ಕಿಶೋರ್ ಸುರಳ್ಕರ್


ಕೊಪ್ಪಳ  ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ, ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಗೊಳಿಸಲು ಎಲ್ಲ ತಹಶೀಲ್ದಾರರು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಕೋವಿಡ್-19 ನಿಯಂತ್ರಣ, ಅತಿವೃಷ್ಟಿ, ಪ್ರವಾಹ ಮುನ್ನೆಚ್ಚರಿಕೆ, ಬೆಳೆ ಹಾನಿ ಮುಂತಾದವುಗಳ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಕುರಿತು ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿಯ ಅಗತ್ಯವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಬಗ್ಗೆ ಜನರು ಗಂಭೀರವಾಗಿಲ್ಲ. ಆದರೆ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಿರುವುದರಿಂದ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ. ದಂಡ ವಿಧಿಸಿದ ವ್ಯಕ್ತಿ ತಪ್ಪನ್ನು ಪುನರಾವರ್ತಿಸಿದರೆ ಅಂತವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಿ. ಈ ನಿಯಮಗಳನ್ನು ತಹಶೀಲ್ದಾರರು ಗಂಭೀರವಾಗಿ ಪರಿಗಣಿಸಿ ಕಡ್ಡಾಯವಾಗಿ ಜಾರಿಗೆ ತರಬೇಕು. ಈ ಮೂಲಕ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಎಚ್ಚರಿಕೆಯ ಸಂದೇಶ ತಲುಪಬೇಕು. ಅಗತ್ಯವಿದ್ದಲ್ಲಿ ನಿಮ್ಮ ತಂಡಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸೇರಿಸಿಕೊಳ್ಳಿ. ದಂಡ ಪಾವತಿಯನ್ನು ಕಡ್ಡಾಯಗೊಳಿಸಿ ಎಂದು ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯ ಪ್ರಯೋಗಾಲಯ ಸಿಬ್ಬಂದಿ ಪ್ರತಿ ವಾರ್ಡುಗಳಿಗೆ ತೆರಳಿ ಕೋವಿಡ್-19 ಪರೀಕ್ಷೆಗೆ ಮಾದರಿಯನ್ನು ಸಂಗ್ರಹಿಸುತ್ತಿದ್ದಾರೆ. ಈ ತಂಡದೊAದಿಗೆ ಆ ವ್ಯಾಪ್ತಿಯ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ತಹಶೀಲ್ದಾರರು ಭಾಗಿಯಾಗಿ ಜನರಲ್ಲಿ ಕೋವಿಡ್ ಪರೀಕ್ಷೆಗೆ ಸಹಕರಿಸುವಂತೆ ಮನವೊಲಿಸಿ. ಸೋಂಕು ದೃಢಪಟ್ಟವರು ಹೋಮ್ ಐಸೋಲೇಷನ್‌ನಲ್ಲಿದ್ದರೆ ಅವರಿಗೆ ನಿಯಮಿತ ಚಿಕಿತ್ಸೆಗೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ತೆರಳುತ್ತಿರುವ ಬಗ್ಗೆ ಪರಿಶೀಲಿಸಿ. ಸೋಂಕಿತರಿಗೆ ಚಿಕಿತ್ಸೆಗೆ ಸಂಬAಧಿಸಿದ ಕಿಟ್ ವಿತರಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಹಾಗೂ ನಿಗಾ ಇಡಿ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.
ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಅಥವಾ ಜಲಾಶಯದಿಂದ ಬಿಡುಗಡೆ ಮಾಡಿದ ನೀರಿನಿಂದ ಕೃಷಿ ಭೂಮಿಗೆ, ಗ್ರಾಮಗಳಿಗೆ ಹಾನಿಯಾಗುವ ಸಂಭವವಿದ್ದಲ್ಲಿ ಸಂಬAಧಿಸಿದ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆಯಾಗಿ ಡಂಗುರ, ಮೈಕ್‌ಗಳ ಮೂಲಕ ಘೋಷಣೆ ಮುಂತಾದವುಗಳ ಮೂಲಕ ಎಚ್ಚರಿಕೆ ನೀಡಿ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಒಂದು ವೇಳೆ ಮಳೆ ಹಾನಿ ಉಂಟಾದಲ್ಲಿ ಸಂಬAಧಿಸಿದ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಓಗಳು ಹಾನಿಯಾದ ಕುರಿತು ಫೋಟೋ ಸಹಿತ ಮಾಹಿತಿಯನ್ನು ಸಂಬAಧಿಸಿದ ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳಿಗೆ ನೀಡಿ 24 ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಮಳೆಯಿಂದ ಉಂಟಾಗುವ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಹಾನಿ ಕುರಿತ ಮಾಹಿತಿಯನ್ನು ಪರಿಹಾರ ತಂತ್ರಾAಶದಲ್ಲಿ ದಾಖಲಿಸಿ. ಪರಿಹಾರ ವಿತರಿಸುವಲ್ಲಿ ವಿಳಂಬ ಮಾಡಬೇಡಿ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ತಹಶೀಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾವಾಗಿ ಅನುಷ್ಠಾನಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ನಡೆಸಿ ತಾಲ್ಲೂಕು ವ್ಯಾಪ್ತಿಯಲ್ಲಿ ನಿಯಮಗಳನ್ನು ಜಾರಿಗೆ ತನ್ನಿ. ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರ ಬಗ್ಗೆ, ಮೊಬೈಲ್ ಯುನಿಟ್‌ಗಳ ಬಗ್ಗೆ ಡಾಟಾ ಎಂಟ್ರಿ ಮಾಡಿ ಅಗತ್ಯ ಮಾಹಿತಿ ಸುಲಭದಲ್ಲಿ ಸಿಗುವ ಹಾಗೆ ವ್ಯವಸ್ಥಿತವಾಗಿ ಮಾಹಿತಿಯನ್ನು ಸಿದ್ಧಗೊಳಿಸಿ. ಸೋಂಕು ಹರಡುವಿಕೆ ತಡೆಯಲು ಸರ್ಕಾರದ ನಿಯಮಗಳನ್ನು ನಿಮ್ಮ ವ್ಯಾಪ್ತಿಗಳಲ್ಲಿ ನಿಯಮಾನುಸಾರ ಅನುಷ್ಠಾನಗೊಳಿಸಿ. ಜನರಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿ ಎಂದರು.
ಘನ ತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿವಾರು ಸರ್ಕಾರಿ ಜಾಗಗಳನ್ನು ಗುರುತಿಸಬೇಕಾಗಿದ್ದು, ತಹಶೀಲ್ದಾರರು ನಿಮ್ಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿವಾರು ಸರ್ಕಾರಿ ಜಾಗ ಗುರುತಿಸಿ, ಸರ್ಕಾರಿ ಜಾಗವಿಲ್ಲದ ಎರಡರಿಂದ ಮೂರು ಗ್ರಾಮ ಪಂಚಾಯತಿಗಳನ್ನು ಒಂದೆಡೆ ಸೇರಿಸಿ ಆ ಜಾಗದಲ್ಲಿ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕಿಮ್ಸ್ ನಿರ್ದೇಶಕ ವಿಜಯನಾಥ ಪಾಟೀಲ್ ಇಟಗಿ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error