fbpx

ಕೊವಿಡ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರಗಳು ಅಪಾಯಕಾರಿಯಾಗಿವೆ-ಸಿದ್ದರಾಮಯ್ಯ ಮಾಜಿ ಸಿ.ಎಂ.

ಬೆಂಗಳೂರು : ಕೋವಿಡ್-19 ನಿಯಂತ್ರಣದ ವಿಷಯದಲ್ಲಿ  ಮುಖ್ಯಮಂತ್ರಿಗಳು ಕೈಗೊಳ್ಳುತ್ತಿರುವ ದಿನಕ್ಕೊಂದು ನಿರ್ಧಾರ ಅಪಾಯಕಾರಿಯಾದುದು. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಾಗ ನಿಯಂತ್ರಣ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿರುವ ರಾಜ್ಯ ಸರ್ಕಾರ ಪ್ರತಿದಿನ ಸಡಿಲಿಸಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ.

ಹೊರರಾಜ್ಯಗಳಿಂದ ಬಂದವರಿಗೆ 14 ದಿನದ ಸಾಂಸ್ಥಿಕ ಕ್ವಾರಂಟೈನ್ ಬದಲಿಗೆ ಹೋಮ್ ಕ್ವಾರಂಟೈನ್ ಮಾತ್ರ ಕಡ್ಡಾಯಗೊಳಿಸಿರುವುದು ಅತ್ಯಂತ ಬೇಜವಾಬ್ದಾರಿ ಕ್ರಮ. ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಮೇಲ್ವಿಚಾರಣೆ ಮಾಡುವ ವ್ಯವಸ್ಥೆಯೇ ಇಲ್ಲದಿರುವಾಗ ಸೋಂಕು ತಗಲಿಸಿಕೊಂಡವರು ಇನ್ನಷ್ಟು ಜನರಿಗೆ ಸೋಂಕುಹರಡುವ ಸಾಧ್ಯತೆ ಇಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ಧಾರೆ. ಇದರ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು

ಸಾಂಸ್ಥಿಕ ಕ್ವಾರಂಟೈನ್‌ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೊಳಪಡಿಸುತ್ತಿದ್ದ ನಿಯಮವನ್ನು ಬದಲಾಯಿಸಿ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣಗಳು ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸಲು ನಿರ್ಧರಿಸಿರುವುದು ಅತ್ಯಂತ ಅಪಾಯಕಾರಿ ಕ್ರಮ.

ಕೊರೊನಾ ಸೋಂಕಿತರಲ್ಲಿ 90% ಮಂದಿಯಲ್ಲಿ ರೋಗಲಕ್ಷಣಗಳೇ ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆಯೇ ಒಪ್ಪಿಕೊಂಡಿರುವಾಗ, ಕ್ವಾರಂಟೈನ್ ಅವಧಿಯಲ್ಲಿ ರೋಗಲಕ್ಷಣ ಕಂಡುಬಂದರೆ ಮಾತ್ರ ಪರೀಕ್ಷೆಗೊಳಪಡಿಸುವ ಮುಖ್ಯಮಂತ್ರಿಯವರ ನಿರ್ಧಾರ ಅಪಾಯಕಾರಿ ಆಗಬಹುದು.

ಜ್ವರ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟ ಶಂಕಿತ ಕೊರೊನಾ ಶಂಕಿತರ ಕೋವಿಡ್ ಪರೀಕ್ಷೆ ನಡೆಸುವುದನ್ನು ಕೈಬಿಟ್ಟಿರುವ ಮುಖ್ಯಮಂತ್ರಿಯವರ ನಿರ್ಧಾರ ಅನುಮಾನಕ್ಕೆಡೆಮಾಡಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಲಾಗದು.

Please follow and like us:
error
error: Content is protected !!