ಕೊರೋನ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಮಂತ್ರಿ ಮೋದಿ ಚಾಲನೆ

ಹೊಸದಿಲ್ಲಿ: ಕೊರೋನ ಪಿಡುಗಿನ ವಿರುದ್ಧ ಜಗತ್ತಿನ ಅತಿ ದೊಡ್ಡ, ದೇಶವ್ಯಾಪಿ ಮೊದಲ ಹಂತದ ಲಸಿಕೆ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 10:30ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದ ಒಟ್ಟು 3006 ಕೇಂದ್ರಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ.

ಈ ಎಲ್ಲಾ ಕೇಂದ್ರಗಳ ನಡುವೆ ಆನ್‍ಲೈನ್ ಮೂಲಕ ಸಂಪರ್ಕ ಏರ್ಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ನೂರು ಫಲಾನುಭವಿಗಳಿಗೆ ಮೊದಲ ದಿನ ಲಸಿಕೆ ನೀಡಲಾಗುವುದು.

 

ಕೊರೋನ ವೈರಸ್ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾರ್ಯಕರ್ತರಿಗೆ ಭಾವನಾತ್ಮಕ ಗೌರವ ಸಲ್ಲಿಸಿರುವ ಪ್ರಧಾನಿ ಮೋದಿ, ಕೊರೋನ ಹಾವಳಿ ಜೋರಾಗಿದ್ದಾಗ ಕೆಲವರು ತಮ್ಮ ಪ್ರೀತಿ ಪಾತ್ರರ ಅಂತಿಮ ವಿಧಿಗಳನ್ನು ಸಹ ಮಾಡಲು ಸಾಧ್ಯವಾಗದಿರುವುದು, ವೈರಸ್ ಪೀಡಿತ ಜನರನ್ನು ತಮ್ಮ ಕುಟುಂಬದಿಂದ ಬೇರ್ಪಡಿಸಿದ ಹೃದಯ ಕದಡುವ ಕ್ಷಣಗಳ ಬಗ್ಗೆ ಮೆಲುಕು ಹಾಕಿದರು.
“ಬಿಕ್ಕಟ್ಟು ಹಾಗೂ ಹತಾಶೆಯ ವಾತಾವರಣದಲ್ಲಿ ಕೆಲವರು ನಮಗೆ ಭರವಸೆ ನೀಡುತ್ತಿದ್ದರು. ಅವರು ನಮ್ಮನ್ನು ಉಳಿಸಲು ತಮ್ಮನ್ನು ತಾವು ಅಪಾಯಕ್ಕೆ ಒಡ್ಡಿಕೊಂಡಿದ್ದರು. ವೈದ್ಯಯರು, ದಾದಿಯರು, ಅರೆ ವೈದ್ಯರು, ಆ್ಯಂಬುಲೆನ್ಸ್ ಚಾಲಕರು, ಆಶಾ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಹಾಗೂ ಇತರ ಮುಂಚೂಣಿ ಕಾರ್ಯಕರ್ತರು ಮಾನವೀಯತೆಗೆ ಒತ್ತು ನೀಡಿ ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿದರು. ಅವರು ತಮ್ಮ ಕುಟುಂಬಗಳಿಂದ ಹಾಗೂ ಮಕ್ಕಳಿಂದ ದೂರ ಉಳಿದಿದ್ದರು. ಕೆಲವು ಹಲವು ದಿನಗಳ ತನಕ ತಮ್ಮ ಮನೆಗಳಿಂದ ದೂರ ಉಳಿದಿದ್ದರು. ನೂರಾರು ಜನರು ತಮ್ಮ ಮನೆಗೆ ವಾಪಸಾಗಲೇ ಇಲ್ಲ. ಇನ್ನೊಬ್ಬರ ಜೀವ ಉಳಿಸಲು ಅವರು ತಮ್ಮಪ್ರಾಣವನ್ನು  ತ್ಯಾಗ ಮಾಡಿದರು. ನಾವಿಂದು ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಸಮಾಜವು ಅವರ ಋಣವನ್ನು ತೀರಿಸುವ ಹಾದಿಯಲ್ಲಿದೆ” ಎಂದು ಪ್ರಧಾನಿ ಹೇಳಿದರು.
“ಲಸಿಕೆ ತಯಾರಿಸಲು ವರ್ಷಗಳು ಬೇಕಾಗುತ್ತವೆ. ಆದರೆ ಇಷ್ಟು ಕಡಿಮೆ ಸಮಯದಲ್ಲಿ ಒಂದಲ್ಲ ಎರಡು ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ನಮ್ಮ ವಿಜ್ಞಾನಿಗಳ ಕೌಶಲ್ಯ ಹಾಗೂ ಪ್ರತಿಭಗೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಹೇಳಿದರು.

ಲಸಿಕೆ ಕುರಿತ ವದಂತಿಗೆ ಕಿವಿಗೊಡಬೇಡಿ: ಪ್ರಧಾನಿ ಮನವಿ
ಲಸಿಕೆ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಎರಡು ಕೋವಿಡ್ ಲಸಿಕೆಗಳಲ್ಲಿ ಒಂದಾಗಿರುವ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಇನ್ನೂ ಪ್ರಯೋಗ ಹಂತದಲಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.  ಆದರೆ ಜನರು ಲಸಿಕೆಗಳ ಕುರಿತ ವದಂತಿಗೆ ಕಿವಿಗೊಡಬಾರದು ಎಂದು ಪ್ರಧಾನಿ ಮನವಿ ಮಾಡಿದರು.
ಎರಡು ಲಸಿಕೆಗಳ ದತ್ತಾಂಶದ ಬಗ್ಗೆ ತೃಪ್ತಿವ್ಯಕ್ತಪಡಿಸಿದ ಬಳಿಕ ಡಿಜಿಸಿಐ ಅನುಮೋದನೆ ನೀಡಿದೆ. ಹೀಗಾಗಿ ವದಂತಿಯಿಂದ ದೂರವಿರಿ.ನಮ್ಮ ಲಸಿಕೆಗಳನ್ನು ಅಭಿವೃದ್ಧಿಪಡಿಸಿರುವವರು ಜಾಗತಿಕ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಜಾಗತಿಕವಾಗಿ ಶೇ.60ರಷ್ಟು ಮಕ್ಕಳ ಜೀವ ಉಳಿಸುವ ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಮೋದಿ ಹೇಳಿದರು.

Please follow and like us:
error