ಕೊರೋನ ಭೀತಿ: 2 ತಿಂಗಳ ಪಡಿತರ ಎಪ್ರಿಲ್‌ನಲ್ಲಿಯೇ ವಿತರಿಸಲು ರಾಜ್ಯ ಸರಕಾರ ಆದೇಶ

ಬೆಂಗಳೂರು,  : ರಾಜ್ಯಾದ್ಯಂತ ಕೊರೋನ ಭೀತಿ ಹಿನ್ನೆಲೆಯಲ್ಲಿ ಮುಂದಿನ ಎರಡು ತಿಂಗಳ ಪಡಿತರವನ್ನು ಎಪ್ರಿಲ್‌ನಲ್ಲಿಯೇ ವಿತರಿಸುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ಧಾನ್ಯವನ್ನು ಮುಂಗಡವಾಗಿ ಎಪ್ರಿಲ್ ನಲ್ಲಿಯೇ ವಿತರಿಸುವಂತೆ ಆದೇಶಿಸಿದ್ದು, ಒಟ್ಟಿಗೆ ಎರಡು ತಿಂಗಳ ಪಡಿತರವನ್ನು ಫಲಾನುಭಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸಲಿದೆ.

ರಾಜ್ಯದಲ್ಲಿ 1.16 ಕೋಟಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ಗಳಿದ್ದು, ಪ್ರತಿ ತಿಂಗಳು 4.86 ಕೋಟಿ ಫಲಾನುಭಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಎಪ್ರಿಲ್‌ನಿಂದ ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿಯ ಬದಲಿಗೆ ಪ್ರತಿ ಫಲಾನುಭಗಳಿಗೆ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

ದೇಶಾದ್ಯಂತ ಕೊರೋನ ಮಹಾಮಾರಿ ಹೆಚ್ಚಾಗುತ್ತಿದ್ದು, ಸರಕಾರ ಇದರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಪಡಿತರ ಪಡೆಯಲು ಚೀಟಿದಾರರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ಹಾಗೂ ಬಯೋಮೆಟ್ರಿಕ್ ಪದ್ಧತಿ ಅನುಸರಿಸುತ್ತಿರುವುದರಿಂದ ಕೊರೋನ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಜಾಗೃತಗೊಂಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಒಬ್ಬರಿಂದ ಒಬ್ಬರಿಗೆ ರೋಗ ಹರಡದಂತೆ ಆರು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲು ನಿರ್ಧರಿಸಿತ್ತು. ಆದರೆ, ಇದರಿಂದ ಸಮಸ್ಯೆಗಳು ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಆಯಾ ತಿಂಗಳಲ್ಲಿ ಪಡಿತರವನ್ನು ನೀಡಲು ಇಲಾಖೆ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Please follow and like us:
error