ಕೊರೋನ: ಭಾರತದಲ್ಲಿ ಒಂದೇ ದಿನ 315 ಹೊಸ ಪ್ರಕರಣ

ಹೊಸದಿಲ್ಲಿ, ಎ.1: ಲಾಕ್‌ಡೌನ್ ನಡುವೆಯೂ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಮಂಗಳವಾರ ಒಂದೇ ದಿನ ದೇಶದಲ್ಲಿ 315 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,600ರ ಗಡಿ ದಾಟಿದೆ. ಮಹಾರಾಷ್ಟ್ರದಲ್ಲಿ 82 ಹಾಗೂ ತಮಿಳುನಾಡಿನಲ್ಲಿ 57 ಪ್ರಕರಣಗಳು ಒಂದೇ ದಿನ ಬೆಳಕಿಗೆ ಬಂದಿವೆ. ಕೊರೋನ ಸೋಂಕಿತರ ಸಾವಿನ ಸಂಖ್ಯೆಯೂ 9 ಹೆಚ್ಚಿದ್ದು, 52 ಮಂದಿ ಮೃತಪಟ್ಟಂತಾಗಿದೆ.

ಕಳೆದ ಮೂರು ದಿನಗಳಲ್ಲಿ 626 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಶೇಕಡ 40ರಷ್ಟು. 302 ಮಂದಿಗೆ ಸೋಂಕು ತಗುಲಿರುವ ಮಹಾರಾಷ್ಟ್ರ ಸೋಂಕಿತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೇರಳ (241), ತಮಿಳುನಾಡು (124), ದಿಲ್ಲಿ(120), ಉತ್ತರ ಪ್ರದೇಶ (103), ಕರ್ನಾಟಕ (101), ರಾಜಸ್ಥಾನ (93), ತೆಲಂಗಾಣ (92), ಗುಜರಾತ್ (74) ಗರಿಷ್ಠ ಪೀಡಿತರನ್ನು ಹೊಂದಿರುವ ರಾಜ್ಯಗಳು. ಭಾರತದ ಇತರ ರಾಜ್ಯಗಳಲ್ಲಿ ಒಟ್ಟು 368 ಮಂದಿ ಸೋಂಕಿತರಿದ್ದಾರೆ.

ಮಹಾರಾಷ್ಟ್ರದಲ್ಲಿ ಗರಿಷ್ಠ (12) ಸಾವು ಸಂಭವಿಸಿದ್ದು, ತೆಲಂಗಾಣ ಹಾಗೂ ಗುಜರಾತ್‌ನಲ್ಲಿ ತಲಾ 6, ಕರ್ನಾಟಕದಲ್ಲಿ 3, ಕೇರಳ, ದಿಲ್ಲಿ ಹಾಗೂ ರಾಜಸ್ಥಾನದಲ್ಲಿ ತಲಾ 2, ತಮಿಳುನಾಡಿನಲ್ಲಿ 1, ಭಾರತದ ಇತರ ರಾಜ್ಯಗಳಲ್ಲಿ 18 ಸಾವು ಸಂಭವಿಸಿದೆ.

ದಿಲ್ಲಿಯ ನಿಝಾಮುದ್ದೀನ್ ಹಾಗೂ ದಿಲ್ಶದ್ ಗಾರ್ಡನ್ ಪ್ರದೇಶದಲ್ಲಿ 23 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 120 ತಲುಪಿದೆ.

ಇದುವರೆಗೆ ಕೋವಿಡ್ ಪ್ರಕರಣಗಳು ವರದಿಯಾಗದ ಜಾರ್ಖಂಡ್ ಹಾಗೂ ಅಸ್ಸಾಂನಲ್ಲೂ ಮಂಗಳವಾರ ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಂಚಿಯ ಹಿಂದಿಪ್ರಿ ಪ್ರದೇಶದ ಬಡಿ ಮಸೀದಿಯಲ್ಲಿ ತಂಗಿದ್ದ ಮಲೇಶ್ಯ ಮಹಿಳೆ (22)ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಸ್ಸಾಂನ ಸಿಲ್ಚೇರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲ್ಪಟ್ಟ 52 ವರ್ಷದ ವ್ಯಕ್ತಿಯಲ್ಲೂ ಸೋಂಕು ದೃಢಪಟ್ಟಿದೆ. ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂಧೋರ್‌ನಲ್ಲಿ ಒಂದೇ ದಿನ 17 ಪ್ರಕರಣ ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತ್ತೆ ಮೂರು ಮಂದಿ ವೈರಸ್ ಸೋಂಕಿಗೆ ಬಲಿಯಾಗಿದ್ದು, ಬಿಹಾರದಲ್ಲಿ 35 ವರ್ಷದ ಮಹಿಳೆ ಮಂಗಳವಾರ ಮೃತಪಟ್ಟಿದ್ದಾರೆ.

Please follow and like us:
error