ಕೊರೋನ: ದೇಶದಲ್ಲಿ ಒಂದೇ ದಿನ 781 ಪ್ರಕರಣ ಪತ್ತೆ

ಹೊಸದಿಲ್ಲಿ, ಎ.10: ದೇಶದಲ್ಲಿ ಗುರುವಾರ ಒಂದೇ ದಿನ 781 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಭಾರತದಲ್ಲಿ ಸೋಂಕಿನ ತೀವ್ರತೆಯ ಸ್ಪಷ್ಟಚಿತ್ರಣ ಅನಾವರಣಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಬುಧವಾರ ದಾಖಲಾದ 598 ಪ್ರಕರಣಗಳಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಶೇಕಡ 30ರಷ್ಟು ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 229 ಪ್ರಕರಣಗಳು ವರದಿಯಾಗಿದ್ದು, ಯಾವುದೇ ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಪ್ರಕರಣ ಒಂದೇ ದಿನ ವರದಿಯಾಗಿರುವುದು ಇದೇ ಮೊದಲು. ತಮಿಳುನಾಡು (96), ರಾಜಸ್ಥಾನ (80), ಗುಜರಾತ್ (76) ಮತ್ತು ದಿಲ್ಲಿ(51) ಮತ್ತಿತರ ಕಡೆಗಳಲ್ಲಿ ಕೂಡಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಒಂದು ವಾರದಲ್ಲಿ 500-600 ಪ್ರಮಾಣದಲ್ಲಿ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು.
ಮಹಾರಾಷ್ಟ್ರದಲ್ಲಿ ಒಟ್ಟು 1,364 ಪ್ರಕರಣಗಳು ದೃಢಪಟ್ಟಿದ್ದು, ತಮಿಳುನಾಡು (834), ದಿಲ್ಲಿ (720), ತೆಲಂಗಾಣ (471), ರಾಜಸ್ಥಾನ (463), ಉತ್ತರ ಪ್ರದೇಶ (424) ನಂತರದ ಸ್ಥಾನಗಳಲ್ಲಿವೆ. ಭಾರತದ ಇತರೆಡೆ ಒಟ್ಟು 2,462 ಪ್ರಕರಣಗಳು ದೃಢಪಟ್ಟಿದ್ದು, ಇದುವರೆಗೆ ಒಟ್ಟು 483 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಈ ಸಾಂಕ್ರಾಮಿಕದಿಂದ 233 ಮಂದಿ ಜೀವ ಕಳೆದುಕೊಂಡಿದ್ದು, ಸಾವಿನ ಸಂಖ್ಯೆಯಲ್ಲೂ ಮಹಾರಾಷ್ಟ್ರಕ್ಕೆ ಅಗ್ರಸ್ಥಾನ. ಮಹಾರಾಷ್ಟ್ರದಲ್ಲಿ 97 ಮಂದಿ ಬಲಿಯಾಗಿದ್ದರೆ, ದಿಲ್ಲಿ ಹಾಗೂ ತೆಲಂಗಾಣದಲ್ಲಿ ತಲಾ 12 ಮಂದಿ, ತಮಿಳುನಾಡು ಹಾಗೂ ರಾಜಸ್ಥಾನದಲ್ಲಿ ತಲಾ 8 ಮಂದಿ, ಉತ್ತರ ಪ್ರದೇಶದಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಉಳಿದ ರಾಜ್ಯಗಳ ಸಾವಿನ ಸಂಖ್ಯೆ 107.
ಗುರುವಾರ ದೇಶಾದ್ಯಂತ ಒಟ್ಟು 31 ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 15 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ದಿಲ್ಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಅಪೋಲೊ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಆತಂಕ ಮೂಡಿಸಿದೆ. ದೇಶದ 20% ಪ್ರಕರಣಗಳು ಒಂದೇ ರಾಜ್ಯದಲ್ಲಿ ಕಂಡುಬಂದಿವೆ. ಅಂತೆಯೇ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಪೈಕಿ ಈ ರಾಜ್ಯದ ಪಾಲು ಶೇಕಡ 40ರಷ್ಟು. ರಾಜ್ಯದಲ್ಲಿ ಸೋಂಕಿತರ ಪೈಕಿ ಸಾವಿನ ಪ್ರಮಾಣ 7.1% ಆಗಿದೆ.
ಗುಜರಾತ್‌ನಲ್ಲಿ 24 ಗಂಟೆಗಳಲ್ಲಿ 76 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ ವರದಿಯಾದ ಪ್ರಕರಣಗಳ ಶೇಕಡ 29ರಷ್ಟು ಪ್ರಕರಣಗಳು ಒಂದೇ ದಿನ ಬೆಳಕಿಗೆ ಬಂದಿದ್ದು, ಅಹ್ಮದಾಬಾದ್ ನಗರದಲ್ಲೇ 143 ಪ್ರಕರಣಗಳು ಕಾಣಿಸಿಕೊಂಡಿವೆ.
100 ದಿನಗಳ ಹಿಂದೆ ದೇಶದ ಮೊದಲ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದ್ದ ಕೇರಳದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಇದುವರೆಗೆ 357 ಪ್ರಕರಣಗಳು ಇಲ್ಲಿ ಪತ್ತೆಯಾಗಿದ್ದು, ಇಬ್ಬರು ಜೀವ ಕಳೆದುಕೊಂಡಿದ್ದಾರೆ.

Please follow and like us:
error