ಕೊರೋನಾ ವೈರಸ್ : ಮಹಾ ದಿಗ್ಬಂಧನಕ್ಕೆ ಮುಂಬೈ ಸಜ್ಜು

ಮುಂಬೈ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 170ನ್ನು ತಲುಪಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ದೇಶದಲ್ಲೇ ಗರಿಷ್ಠ ಸಂಖ್ಯೆಯ ಅಂದರೆ 45 ರೋಗಿಗಳು ಇಲ್ಲಿ ಪತ್ತೆಯಾದಂತಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರದಿಂದ ಮಾರ್ಚ್ 31ರ ವರೆಗೆ ಭಾರತಕ್ಕೆ ಗಲ್ಫ್ ದೇಶಗಳಿಂದ ವಾಪಸ್ಸಾಗುವ 26 ಸಾವಿರ ಮಂದಿಯನ್ನು ಪ್ರತ್ಯೇಕವಾಗಿ ಇಟ್ಟು ದಿಗ್ಬಂಧನ ವಿಧಿಸಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋವಿಡ್-19 ಪೀಡಿತ ದೇಶಗಳಾದ ಯುಎಇ, ಕುವೈತ್, ಕತರ್ ಮತ್ತು ಒಮನ್‌ನಿಂದ ಆಗಮಿಸುವವರಿಗೆ ಈ ದಿಗ್ಬಂಧನ ಅನ್ವಯಿಸಲಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಈ ದೇಶಗಳಿಂದ ಸುಮಾರು 26 ಸಾವಿರ ಮಂದಿ ಆಗಮಿಸಲಿದ್ದಾರೆ ಎಂದು ಕೇಂದ್ರದಿಂದ ಪಡೆದ ಮಾಹಿತಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅಂದಾಜಿಸಿದೆ. ಈ ದೇಶಗಳಿಂದ ಮುಂಬೈಗೆ ಪ್ರತಿದಿನ 23 ವಿಮಾನಗಳು ಆಗಮಿಸುತ್ತವೆ. ಕೇಂದ್ರದ ಆದೇಶದ ಪ್ರಕಾರ, ಮೇಲೆ ಹೇಳಿದ ನಾಲ್ಕು ದೇಶಗಳಿಂದ ಆಗಮಿಸುವವರನ್ನು ಮಾರ್ಚ್ 18ರಿಂದ ಕಡ್ಡಾಯವಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿ ಇಡಬೇಕು.

ಮಹಾರಾಷ್ಟ್ರದಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ದುಬೈನಿಂದ ಮರಳಿದ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪೊವಾಯಿಯಲ್ಲಿ ಹೊಸದಾಗಿ ನಿರ್ಮಿಸಲಾದ ಎಂಜಿನಿಯರ್‌ಗಳ ತರಬೇತಿ ಕೇಂದ್ರವನ್ನು, ದಿಗ್ಬಂಧನ ವ್ಯವಸ್ಥೆಗಾಗಿ ಮೀಸಲಿಡಲು ಬೃಹತ್ ಮುಂಬೈ ಮಹಾನಗರ ಪಾಲಿಕೆ ನಿರ್ಧರಿಸಿದೆ. ಜತೆಗೆ ಮರೋಲ್‌ನಲ್ಲಿರುವ ಸೆವೆನ್‌ಹಿಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ. ಪೊವಾಯಿ ಕೇಂದ್ರದಲ್ಲಿ ಹಲವು ಸಮ್ಮೇಳನ ಕೊಠಡಿಗಳಲ್ಲಿ ನೂರಕ್ಕೂ ಹೆಚ್ಚು ಬೆಡ್ ಸೌಲಭ್ಯ ವ್ಯವಸ್ಥೆಗೊಳಿಸಲಾಗಿದ್ದು, ಇನ್ನಷ್ಟು ಸಿದ್ಧತೆಗಳು ನಡೆಯುತ್ತಿವೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಈ ನಾಲ್ಕು ದೇಶಗಳಿಂದ ಆಗಮಿಸುವ ಭಾರತೀಯರಲ್ಲಿ ಬಹುತೇಕ ಮಂದಿ ಮಧ್ಯಪ್ರಾಚ್ಯದಲ್ಲಿ ಉದ್ಯೋಗದಲ್ಲಿರುವವರು. ಈ ಪೈಕಿ ಆರೋಗ್ಯವಂತರಾಗಿದ್ದು, ಮುಂಬೈನಲ್ಲಿ ಮನೆಗಳನ್ನು ಹೊಂದಿದ್ದರೆ ಅವರನ್ನು ಮನೆಗೆ ಕಳುಹಿಸಿ ಅಲ್ಲೇ ಪ್ರತ್ಯೇಕವಾಗಿ 14 ದಿನಗಳ ಕಾಲ ವಾಸ್ತವ್ಯ ಇರಲು ಸೂಚಿಸಲಾಗುತ್ತದೆ. ಪುಣೆ, ನಾಸಿಕ್‌ನಂಥ ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವವರಿಗೆ ಅಪಾಯ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂಥವರು ಮನೆಗಳಿಗೆ ತೆರಳಬಹುದು. ಆದರೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವಂತಿಲ್ಲ. ಉಳಿದ ಎಲ್ಲರೂ ಪೊವಾಯಿ ಅಥವಾ ಸೆವೆನ್‌ಹಿಲ್‌ನಲ್ಲಿ 14 ದಿನಗಳನ್ನು ಕಳೆಯಬೇಕಾಗುತ್ತದೆ.

Please follow and like us:
error