ಕೊರೋನಾ ಮತ್ತು ಒಂದು ಕುಟುಂಬ -ಬಾನು ಮುಸ್ತಾಕ್

ಇಂತಹದೊಂದು ಯಾತನಾಮಯ ವಾದ ಮತ್ತು ಘೋರ ದುಃಖದ ದಿನಗಳನ್ನು ನಾನು ತನ್ನ ಬದುಕಿನಲ್ಲಿ ಕಾಣುತ್ತೇನೆ ಎಂಬ ನಿರೀಕ್ಷೆಯೇ ನನಗೆ ಇರಲಿಲ್ಲ. ಯಾರಿಗೂ ಎಲ್ಲೋ…… ನಮಗಲ್ಲ! ಎಂಬ ಅತೀವ ನಂಬಿಕೆ. ಅಂತಹ ನಂಬಿಕೆ ನೀರಿನ ಗುಳ್ಳೆಯಂತೆ ಹುಸಿಯಾಗಬಹುದು ಎಂಬ ಸನ್ನಿವೇಶವು ಕೂಡ ಮನದ ಯಾವ ಮೂಲೆಯಲ್ಲೂ ಕೂಡ ಇರಲಿಲ್ಲ. ೨೦೨೦ರ ಜೂನ್ ಮಧ್ಯಾಹ್ನ ಎಂದಿನಂತೆ ನನ್ನ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಘೋಷಿತ ಮತ್ತು ಅಘೋಷಿತ ಲಾಕ್ ಡೌನಿನ ಸಂದರ್ಭದಲ್ಲಿ ಒಳಬರುವ ಮತ್ತು ಹೊರಹೋಗುವ ಕರೆಗಳ ಭರಾಟೆ ಕೂಡ ಎಂದಿಗಿಂತ ತುಸು ಹೆಚ್ಚು. ಅಂತಹದೊಂದು ಕರೆ ನುಸುಳಿಕೊಂಡು ಒಳ ಬಂದಿತು. ಆ ಕರೆಯಲ್ಲಿ ಮೂವರು ಈಗಾಗಲೇ ಇದ್ದರು ನಾಲ್ಕನೇಯವಳಾಗಿ ಆ ಕಾನ್ಫರೆನ್ಸ್ ಕಾಲ್ ನಲ್ಲಿ ನನ್ನನ್ನು ಸೇರಿಸಿಕೊಳ್ಳಲಾಯಿತು. ಎಲ್ಲರೂ ಹಲೋ ಹಲೋ ಅನ್ನುವವರೇ. ಕೊನೆಗೂ ಒಬ್ಬಾಕೆ ಬಾಯಿ ಬಿಟ್ಟಳು.” ಹೀಗೆ…… ಹೀಗೆ” ನನಗೆ ಕೇಳಿಸಲಿಲ್ಲ ಎಂಬಂತೆ ನನ್ನ ಕಿವಿಗಳು ಲುಪ್ತವಾಗಿ ಹೋದಂತೆ ಅನಿಸಿ ಏನು ಸರಿಯಾಗಿ ಹೇಳು? ಎಂದು ಮತ್ತೊಮ್ಮೆ ಕೇಳಿದೆ ಅಳುವನ್ನು ಮತ್ತು ದುಃಖವನ್ನು ಅತ್ಯಂತ ಕೃತ್ರಿಮವಾಗಿ ನಿಯಂತ್ರಿಸುತ್ತಾ ಸಾಧ್ಯವಾಗದೆ ಅವಳು ವಿಚಿತ್ರ ಮತ್ತು ದುಃಖಾರ್ತ ಧ್ವನಿಯಲ್ಲಿ ಬಿಕ್ಕುಗಳ ನಡುವೆ ಹೇಳಿದಳು” ಸೀಮಾಳಿಗೆ ಕರೋನಾ ಅಂತೆ” ನಾನು ಬವಳಿ ಬಂದು ಬಿದ್ದು ಹೋದೆ. ಮನೆಯಲ್ಲಿ ಇದ್ದುದರಿಂದ ಬಳಿಯಲ್ಲಿ ಇದ್ದವರು ಉಪಚರಿಸಿದರು.
ಹೌದು ನಿಜ ಹೀಗಾಗಿದೆ ಎಂದು ತಿಳಿಯುವಷ್ಟರಲ್ಲಿ ಆಗಬಾರದ ಅನಾಹುತ ಆಗಿಹೋಗಿತ್ತು. ಐವತ್ತರ ಅಂಚಿನಲ್ಲಿದ್ದ ಆಕೆ ಕಿರಿಯವಳು. ಬೆಂಗಳೂರಿನ ಅಪಾರ್ಟ್ ಮೆಂಟ್ ಒಂದರಲ್ಲಿ ತನ್ನ ಪತಿ ಮತ್ತು ಇಬ್ಬರು ಮಕ್ಕಳಿಂದ ಕೂಡಿದ ತನ್ನ ಪುಟ್ಟ ಸಂಸಾರದ ಆಸೆ-ಆಕಾಂಕ್ಷೆ, ನಿರೀಕ್ಷೆ, ಅಭಿವೃದ್ಧಿ, ಅಭ್ಯುದಯ ಎಲ್ಲದಕ್ಕೂ ಭದ್ರವಾದ ದೀಪಸ್ಧಂಭದಂತೆ ಇದ್ದವಳು ಒಳ್ಳೆ ನೆಮ್ಮದಿಯ ಸಂಸಾರದ ಸೂತ್ರಧಾರಳಾಗಿದ್ದಳು. ಆ ಸಂಸಾರದ ಸಕಲ ಚಟುವಟಿಕೆಗಳು ಕೂಡ ಅವಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಸ್ನಾತಕೋತ್ತರ ಪದವಿ ಪಡೆದಿದ್ದ ಆಕೆ ವಿವಾಹಪೂರ್ವದಲ್ಲಿ ಒಳ್ಳೆ ನೌಕರಿಯಲ್ಲಿದ್ದಳು. ಮದುವೆಯಾದ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಕೇಂದ್ರ ಸರ್ಕಾರದಲ್ಲಿ ಉದ್ಯೋಗದಲ್ಲಿದ್ದ ಪತಿಯ ಜೊತೆಯಲ್ಲಿ ವರ್ಗಾವಣೆ ಗೊಳ್ಳುತ್ತಿದ್ದ ಆತನೊಡನೆ ಉತ್ತರದ ರಾಜ್ಯಗಳಲ್ಲಿ ಸುತ್ತಾಡಿ ಬಹುತೇಕ ಸಂಸಾರದ ಸವಾಲುಗಳಿಗೆ ಹೆಗಲು ಕೊಟ್ಟಿದ್ದವಳು ಅವರಿಬ್ಬರೂ ಕೂಡ ಅಂತೂ ಕೊನೆಗೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು ಉತ್ತರದ ರಾಜ್ಯಗಳಲ್ಲಿ ಸುತ್ತಾಡಿದ್ದರಿಂದ ಮಕ್ಕಳನ್ನು ಹೊರಗಡೆ ಬಿಡದೆ ಕ್ವಾರ್ಟರ್ಸಿನ ಎಲ್ಲೆಯೊಳಗೆ ಕಣ್ಣ ರೆಪ್ಪೆಯಲ್ಲಿ ಸಾಕಿದ್ದರು. ಆಕೆಯ ಮಗಳು ದಂತವೈದ್ಯ ಯಾಗಿದ್ದು ಸ್ನಾತಕೋತ್ತರ ಪದವಿಗಾಗಿ ಅಭ್ಯಾಸ ಮಾಡುತ್ತಿದ್ದಳು. ಕಿರಿಯವನು ಇಂಜಿನಿಯರ್ ಆಗಿದ್ದ. ೨೫ರ ಯುವಕನಾಗಿದ್ದರೂ ಹಾಲುಗಲ್ಲದ ಹೊಳೆಯುವ ಕೆನ್ನೆಯ ಕೂಸಂತಿದ್ದ. ಅವನು ಅಮ್ಮನ ಮಡಿಲ ಕೂಸಾಗಿದ್ದ. ಹೀಗಾಗಿ ನಾನು ಆಗಾಗ ಅವನನ್ನು ಛೇಡಿಸುತ್ತಿದ್ದೆ. ‘ನಾಳೆ ನಿನ್ನ ಹೆಂಡತಿ ಬಂದರೆ ನಿನ್ನ ಅಮ್ಮನ ಸೆರಗಿನಲ್ಲೇ ಆಟವಾಡಿಕೊಂಡು ಇರಬೇಕಿತ್ತು. ನನ್ನನ್ನು ಯಾಕೆ ಮದುವೆಯಾದೆ ?’ಎಂದು ಜಗಳವಾಡುತ್ತಾಳೆ ನೋಡು ಎಂದು.
ಹೀಗಿದ್ದ ಕುಟುಂಬ ಬಿರುಗಾಳಿಗೆ ಸಿಕ್ಕ ನೌಕೆಯಂತೆ ತರಗುಟ್ಟುತ್ತಿದೆ. ಕ್ಷಣಾರ್ಧದಲ್ಲಿ ಸುದ್ದಿ ಹರಡಿ ಅದೊಂದು ಅಂತರರಾಷ್ಟ್ರೀಯ ಸುದ್ದಿ ಆಗಿಬಿಟ್ಟಿತು. ನಮ್ಮ ಕುಟುಂಬದ ವಲಯದೊಳಗೆ. ಎಲ್ಲರೂ ಆ ಕುಟುಂಬವನ್ನು ಸಂಪರ್ಕಿಸುವವರೇ. ಆದರೆ ಯಾರ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ ಕೂಡಲೇ ವಾಟ್ಸಪ್ನಲ್ಲಿ ಮೆಸೇಜನ್ನು ಹಾಕಿದೆ ನಾನು ಎಲ್ಲರೂ ಒಟ್ಟಿಗೆ ಸಂಪರ್ಕಿಸ ಬೇಡಿ ಯಾರಾದರೂ ಒಬ್ಬರು ಸಂಪರ್ಕಿಸಿ ಎಲ್ಲರಿಗೂ ಸುದ್ದಿ ಮುಟ್ಟಿಸಿ. ಅಂತೆಯೇ ಬೆಂಗಳೂರಿನಲ್ಲಿಯೇ ಕಿರಿಯಗಳಿಗಿಂತ ಅನತಿ ದೂರದಲ್ಲಿಯೇ ಇರುವ ನಸೀಮಾಳಿಗೆ ಈ ಕೆಲಸವನ್ನು ವಹಿಸಿಕೊಡಲಾಯಿತು. ಅವಳು ಸುದ್ದಿ ಬಿತ್ತರಿಸ ತೊಡಗಿದಳು. ‘ನಾಲ್ಕೈದು ದಿನಗಳಿಂದ ಆಕೆಗೆ ಒಂದಿಷ್ಟು ಶೀತ ಮತ್ತು ಜ್ವರವಿತ್ತು. ಫ್ಲೂ ಇರಬಹುದೆಂದು ಆಕೆ ವೈದ್ಯರನ್ನು ಫೋನಿನಲ್ಲಿ ಸಂಪರ್ಕಿಸಿ ಔಷಧೋಪಚಾರ ಪಡೆದುಕೊಳ್ಳುತ್ತಿದ್ದಳು. ಆದರೆ ಎರಡು ದಿನಗಳಿಂದ ಜ್ವರ ಇದ್ದು ಈಗ ಅವಳ ಮುಖ ಮೋರೆ ತುಟಿಗಳೆಲ್ಲ ಬಿಳುಪೇರಿತ್ತು. ಉಸಿರಾಟಕ್ಕಾಗಿ ಚಡಪಡಿಕೆ ಆರಂಭವಾಯಿತು. ಕೂಡಲೇ ಅವಳಿಗೆ ಆಕ್ಸಿಜನ್ ಕೊಡಬೇಕಿತ್ತು. ಅಂಬುಲೆನ್ಸ್ ಅನ್ನು ಕಾಯುತ್ತಿದ್ದೇವೆ.’ ಪ್ರಪಂಚದಾದ್ಯಂತ ಹರಡಿರುವ ಬಂಧುಗಳೆಲ್ಲ ತಮ್ಮ ತಮ್ಮ ಭುಜಗಳ ಮೇಲೆ ತಾವೇ ತಲೆಯನ್ನು ಇಟ್ಟು ಕಂಬನಿಗರೆದರು ಮತ್ತೆ ಒಕ್ಕೊರಲಿನಿಂದ ಪ್ರಶ್ನಿಸತೊಡಗಿದರು, ಯಾವ ಆಸ್ಪತ್ರೆ? ಹೌದು ಅದೊಂದು ಅತೀವ ಕಠಿಣ ಪ್ರಶ್ನೆಯಾಗಿತ್ತು. ನಮ್ಮ ಆಯ್ಕೆಯ ಆಸ್ಪತ್ರೆ ಸಿಗುವುದೋ ಅಥವಾ ಎಲ್ಲಾ ಆಸ್ಪತ್ರೆಗಳು ಕೂಡ ಬಾಗಿಲನ್ನು ಬಂದ್ ಮಾಡಿದ್ದಲ್ಲಿ ಆಕ್ಸಿಜನ್ ಇಲ್ಲದೆ ಅವಳ ಕಥೆ ಏನಾಗುವುದು ಅವರವರೇ ಬಿಕ್ಕಿಬಿಕ್ಕಿ ಅತ್ತರು. ಅನೇಕ ಧ್ವನಿಗಳು ಒಟ್ಟಿಗೆ ನುಡಿದವು ಬಿಲ್ಲ್ ಎಷ್ಟೇ ಆದರೂ ಚಿಂತೆಯಿಲ್ಲ. ನಾವೆಲ್ಲಾ ಕೈಜೋಡಿಸುತ್ತೇವೆ ಆಕೆಯನ್ನು ಅತ್ಯುತ್ತಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ಅಂತೂ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ವಶೀಲಿಯಿಂದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸೋಲೇಶನ್ ವಾರ್ಡ್ನಲ್ಲಿ ಸ್ಥಳಾವಕಾಶ ಸಿಕ್ಕಿತು. ಸೀಮಾಳ ಮಗಳಾದ ನಿಸಾತ್ಳನ್ನು ಸಂಪರ್ಕಿಸಿ ಸೀಮಾಳದೊಂದು ಫೋಟೋ ಮತ್ತು ಆಂಬುಲೆನ್ಸ್ ಏರುತ್ತಿದ್ದ ಅವಳ ದಯನೀಯ ಪರಿಸ್ಥಿತಿಯ ಒಂದು ಫೋಟೋವನ್ನು ಅಪ್ಲೋಡ್ ಮಾಡಿದಳು. ಮತ್ತೊಂದು ಸುತ್ತಿನ ಕಣ್ಣೀರಿನ ಪ್ರವಾಹ. ಲಂಡನ್ ಅಮೆರಿಕ ದುಬಾಯಿ ಸೌದಿ ಬಾಂಬೆ ಎಲ್ಲಕಡೆಯಿಂದಲೂ ಹರಿದುಬಂದಿತ್ತು. ಆಕೆಯದೊಂದು ಮರಣಾಂತಿಕ ಕಾಯಿಲೆ. ಆ ಕಾಯಿಲೆಯ ಸಂದರ್ಭದಲ್ಲಿ ಆಕೆಗೆ ಬೆಂಬಲ ನೀಡುವ, ಆಕೆಯ ಕೈಯನ್ನಾದರೂ ಹಿಡಿಯುವ ಅವಳ ತುಟಿಗೆ ನಾಲ್ಕು ಹನಿ ನೀರನ್ನಾದರೂ ಹನಿಸುವ ಅವಕಾಶವಿಲ್ಲದ ಅಸಹಾಯಕತೆ .ನೂರಾರು ಜನರು ಪರಿತಪಿಸುತ್ತಿದ್ದರು. ಯಾರೂ ಜೊತೆಗಿಲ್ಲದೆ ಒಬ್ಬಂಟಿಯಾಗಿ ಅಪರಿಚಿತ ಶತ್ರುವಿನೊಂದಿಗೆ ಸೆಣಸಲು ಏಕಾಂಗಿಯಾಗಿ ಐಸೋಲೇಶನ್ ವಾರ್ಡ್ನಲ್ಲಿ ಹೋರಾಟ ನಡೆಸುತ್ತಿರುವ ಅವಳ ಏಕಾಂಗಿತನಕ್ಕೆ ಏನು ಮಾಡಬೇಕು
ಈ ಪೂರ್ಣ ಪ್ರಹಸನದಲ್ಲಿ ಆಕೆಗೆ ಚಿಕಿತ್ಸೆಗಾಗಿ ಆಸ್ಪತ್ರೆ ಬಾಗಿಲು ತೆರೆದದ್ದೇ ದೊಡ್ಡ ಸಾಧನೆ ಎಂದು ಎಲ್ಲಾ ಬಂಧುಗಳು ಒಟ್ಟಿಗೆ ಸೇರಿ ಆ ಕ್ಷಣದಿಂದಲೇ ಜಪ, ಸ್ತುತಿ ಪ್ರಾರ್ಥನೆಯ ಹಾದಿಯನ್ನು ಹಿಡಿದು ಬಿಟ್ಟರು. ತಾಯಿ ಎಂಬ ಹಿರಿಯ ಜೀವಕ್ಕೆ ಹೇಳುವುದೋ ಬೇಡವೋ ಎಂಬ ತೂಗುಯ್ಯಾಲೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳದೆ ತೀವ್ರ ಆತಂಕದಲ್ಲಿದ್ದಾಗ ಹೇಳುವುದೇ ಸೂಕ್ತ ಎಂಬ ಎಲ್ಲರ ತೀರ್ಮಾನದೊಂದಿಗೆ ಅತ್ಯಂತ ಸಾವಕಾಶವಾಗಿ ಮತ್ತು ಎಚ್ಚರಿಕೆಯಿಂದ ಯಾವ ದುಃಖವನ್ನು ಕೂಡ ಪ್ರಕಟಿಸಿದೆ ಬಹುಸಾಮಾನ್ಯ ವಿಷಯ ಎಂಬಂತೆ ಒಂದೆರಡು ಶಬ್ದಗಳಲ್ಲಿ ಸುದ್ದಿಯನ್ನು ಮುಟ್ಟಿಸಲಾಯಿತು. ಅವರಂತೂ ಇಷ್ಟಗಲ ಕಣ್ಣು ಬಿಟ್ಟು ಗಪ್ಪೆಂದು ಬಾಯಿ ಮುಚ್ಚಿ ಎದುರಿಗಿದ್ದ ಯಾರಿಗೂ ಪ್ರತಿಕ್ರಿಯೆಯನ್ನೂ ನೀಡದೆ, ಗೋಡೆಯತ್ತ ದೃಷ್ಟಿನೆಟ್ಟು ಅತೀವ ಮೌನಕ್ಕೆ ಜಾರಿದ್ದು ಇನ್ನೊಂದು ಎದೆನಡುಗಿಸುವ ದೃಶ್ಯ. ಅಂತೂ ರೋಗಿಗೆ ಆಕ್ಸಿಜನ್ ನೀಡಲಾಯಿತು ಎಂದು ಇನ್ನೊಂದು ಸುತ್ತಿನ ಪ್ರಚಾರವಾಯಿತು. ಏಕಕಾಲಕ್ಕೆ ಕುಟುಂಬದ ಅರ್ಧ ಪ್ರಪಂಚ ಸಂಪರ್ಕಕ್ಕೆ ಬಂದು ಎಲ್ಲರೂ ಕೂಡ ಕಣ್ಣೀರ ಕೋಡಿಯನ್ನು ಹರಿಸುತ್ತಾ ಮೌನ ಪ್ರಾರ್ಥನೆಯಲ್ಲಿ ಭಾಗಿಯಾಗ ತೊಡಗಿದರು. ಹಾಗೆಯೇ ಆಗಾಗ್ಗೆ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಮೊಬೈಲ್ನಲ್ಲಿ ಸುದ್ದಿಯ ಅಪ್ಡೇಟ್ ಗಾಗಿ ಕಣ್ಣುಹಾಯಿಸ ತೊಡಗಿದರು. ಆಕೆಯನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಬೇಕಾದರೆ ಆಕೆಯ ಗಂಡ ಮಗ ಮತ್ತು ಮಗಳು ಹಿಂಬಾಲಿಸಿದರು. ಆಕೆಯನ್ನು ಐಸೋಲೇಷನ್ ವಾರ್ಡ್ಗೆ ಕರೆದುಕೊಂಡು ಹೋಗಿ ನೀವಿನ್ನು ಹೋಗಬಹುದು ಎಂಬ ಸೂಚನೆ ಸಿಕ್ಕಿದೊಡನೆ ಅವರೆಲ್ಲರಿಗೂ ಅಪ್ಪಳಿಸಿದ ಭೀಕರ ಸತ್ಯವೆಂದರೆ ಅವಳಿಲ್ಲದ ಮನೆಗೆ ತಾವು ಕಾಲಿಡುತ್ತಿದ್ದೇವೆ ಎಂಬುದು. ಅಂತೂ ಮನೆಗೆ ಮರಳಿ, ಹಾಲಲ್ಲಿ ಕುಳಿತು ಒಬ್ಬರ ಮುಖವನ್ನೊಬ್ಬರು ನೋಡದೆ ಒತ್ತರಿಸಿ ಬರುತ್ತಿದ್ದ ನೋವನ್ನು ಮತ್ತು ಅಳುವನ್ನು ಒಳಗೊಳಗೆ ನುಂಗುವ ಪ್ರಯತ್ನ ಮಾಡುತ್ತಾ ಇರಬೇಕಾದರೆ ಮಗನಂತೂ ಕೊನೆಗೆ ಬಾಯಿ ಬಿಟ್ಟ ಮತ್ತು ಹೇಳಿದ ನನಗೆ ಗಂಟಲು ನೋವಾಗುತ್ತಿದೆ. ವಿಪರೀತವಾಗಿ ಎದೆಯಲ್ಲಿ ಹಿಡಿದಹಾಗೆ ಆಗುತ್ತಿದೆ. ಉಸಿರಾಡಲು ತುಂಬಾ ಕಷ್ಟ ಅಂತ ಅನಿಸುತ್ತಿದೆ. ಏನು? ಏನು? ಎಲ್ಲರೂ ಹಾರಿ ಬಿದ್ದರು. ಅಮ್ಮಿಯನ್ನು ಬಿಟ್ಟು ಇರಲಾರದೆ ಸೈಕಿಕ್ ಆಗಿ ಏನೇನೋ ಮಾತಾಡಬೇಡ. ಅಕ್ಕ ಗದರಿಸಿದಳು ಹಾಗೆ ಮಾಡುವಾಗ ಅವನ ಕೈಯನ್ನು ಹಿಡಿದರೆ ಸುಡುತ್ತಿದ್ದ ಕೆಂಡದಂಥ ಜ್ವರವನ್ನು ಕಂಡು ಅವಳು ಏನು ಮಾಡಬೇಕೆಂದು ತೋಚದೆ ಅಪ್ಪನನ್ನು ಕೇಳಿದಳು ಅಪ್ಪಾ ಇವನನ್ನು ಕೂಡ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಪ್ಪ ಅತೀವ ಗಲಿಬಿಲಿ ಗೊಂಡಿದ್ದರು. ಅವರ ಅಸಹನೀಯ ಮೌನವನ್ನು ಭೇದಿಸಲು ಸಾಧ್ಯವೇ ಆಗಿರಲಿಲ್ಲ ಫೋನನ್ನು ಕೈಗೆತ್ತಿಕೊಂಡು ಆಸ್ಪತ್ರೆಗೆ ಫೋನಾಯಿಸಿದಾಗ ಮತ್ತೆ ಆಸ್ಪತ್ರೆ ಹೇಳಿದ್ದು ಸಾರಿ ನಮಗೆ ವಾರ್ಡ್ಗಳು ಇಲ್ಲ ಇಡೀ ಕುಟುಂಬ ಸೀಮಾಳ ನೋವನ್ನು ಮರೆತು ಮಗನಿಗಾಗಿ ಬೇರೆಬೇರೆ ಆಸ್ಪತ್ರೆಗಳನ್ನು ಸಂಪರ್ಕಿಸಿ ತಮಗೊಂದು ಬೆಡ್ ನೀಡುವಂತೆ ಬೇಡಿಕೊಳ್ಳಲು ಆರಂಭಿಸಿದರು. ಎಲ್ಲಾ ಕಡೆಯಿಂದಲೂ ನಕಾರಾತ್ಮಕ ವಾದಂತಹ ಉತ್ತರ
ತನ್ನ ಉಸಿರಾಟದ ಚಡಪಡಿಕೆಯಲ್ಲಿ ಮತ್ತು ಅಮ್ಮನಿಲ್ಲದ ಗಾಬರಿಯಲ್ಲಿ ಅವನು ಇನ್ನಷ್ಟು ಕುಗ್ಗಿ ಹೋದ. ಅಪ್ಪನಂತೂ ಆಸ್ಪತ್ರೆಗಳ ನಂಬರನ್ನು ಒತ್ತಿಒತ್ತಿ ಸುಸ್ತಾದರು ಮಗಳು ತನ್ನ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರ ಸಹಕಾರವನ್ನು ಕೋರಿದಳು ಎಲ್ಲಕಡೆಯಿಂದಲೂ ನಕಾರಾತ್ಮಕ ವಾದಂತಹ ಉತ್ತರಗಳೇ ಬಂದವು . ಅಪ್ಪ ಒಣಗಿ ಹೋದ ತುಟಿಗಳಮೇಲೆ ನಾಲಿಗೆಯನ್ನು ಆಡಿಸುತ್ತಾ ಲೋಟ ನೀರು ತಂದು ಕೊಡು ಮಗಳೇ ಎಂದು ಕೇಳಿದರು. ನೀರಿನ ಲೋಟವನ್ನು ತಂದು ತಂದೆಯ ಕೈಗೆ ಕೊಟ ಮಗಳು ಬವಳಿ ಬಂದು ಬೀಳುವುದಷ್ಟೇ ಬಾಕಿ. ತಂದೆಯ ಕೈಗಳು ಕೆಂಡದಂತೆ ಸುಡುತ್ತಿವೆ. ಕುಟುಂಬದ ವ್ಯಕ್ತಿಯೊಬ್ಬರು ಪ್ರಮುಖ ಸರ್ಕಾರಿ ಹುದ್ದೆಯಲ್ಲಿದ್ದು, ವಾಟ್ಸಾಪ್ ಮೆಸೇಜುಗಳನ್ನು ನೋಡಿ ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಪ್ರಭಾವವನ್ನು ಬಳಸಿ ಒಂದೆರಡು ಬೆಡ್ಗಳನ್ನು ಹೊಂದಿಸಲು ಸಾಧ್ಯವಾಯಿತು. ಸಾವಿರಾರು ಜನವಸತಿಯಿಂದ ಕೂಡಿದ್ದ ಇಡೀ ಕಾಲೋನಿಯ ಜನ ಬೆಚ್ಚಿಬಿದ್ದರು ಮತ್ತೊಮ್ಮೆ ಆಂಬ್ಯುಲೆನ್ಸ್ ಅವರ ಆವರಣವನ್ನು ಪ್ರವೇಶಿಸಿತು. ಆದರೆ ರೋಗಿಗಳಾದ ಅಪ್ಪ-ಮಗನನ್ನು ಆಂಬುಲೆನ್ಸ್ಗೆ ಏರಿಸಬೇಕಾದಲ್ಲಿ ಪಿಪಿಇ ಕಿಟ್ಗಳು ಇರಲಿಲ್ಲ. ಹೀಗಾಗಿ ತಮ್ಮ ಸ್ವಂತ ಕಾರಿನಲ್ಲಿ ಅಪ್ಪನ ಜೊತೆಯಲ್ಲಿ ಮಗ ಡ್ರೈವ್ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಯನ್ನು ತಲುಪಿದ. ಕಾರನ್ನು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿ ವಾರ್ಡ್ಗೆ ಹೋದ .ಅವರಿಬ್ಬರೂ ಆ ವಾರ್ಡ್ಅನ್ನು ಮತ್ತು ಅವಾರ್ಡ್ನಲ್ಲಿದ್ದ ಅಪಾರ ಜನಸಂದಣಿಯನ್ನು ಮತ್ತು ಅಲ್ಲಿನ ಶೌಚಾಲಯವನ್ನು ಕಂಡು ಬೆಚ್ಚಿ ಬಿದ್ದರು. ಆದರೆ ಏನೂ ಮಾಡುವಂತಿರಲಿಲ್ಲ ಸರ್ಕಾರಿ ಆಸ್ಪತ್ರೆಯ ಎರಡು ಬೆಡ್ಗಳು ಅಪಾರ ಪ್ರಭಾವದಿಂದ ದೊರಕಿದ್ದವು. ಅವರಿಬ್ಬರೂ ಕೂಡ ಊಟದ ಚಿಂತೆ ಬಿಟ್ಟು ತಮ್ಮ ಹಾಸಿಗೆಗಳ ಮೇಲೆ ಬಿದ್ದುಕೊಂಡರು ಸುತ್ತಲಿನ ಕರೋನಾ ರೋಗಿಗಳ ಅವಿರತ ಕೆಮ್ಮುಗಳಿಂದ ಮಗ ದಿಕ್ಕೆಟ್ಟು ಹೋದ. ತಾವು ಇಲ್ಲಿಗೆ ಯಾಕೆ ಬಂದೆವು ಮನೆಯಲ್ಲೇ ಇರಬಹುದು ಎಂದು ಅನಿಸತೊಡಗಿತ್ತು. ಆದರೆ ಜ್ವರ ಏರತೊಡಗಿತ್ತು ಮುಂದೇನೂ ದಾರಿ ಕಾಣದೆ ನಿದ್ರೆ ಅರೆನಿದ್ರೆಯ ನಡುವೆ ಅವರಿಬ್ಬರೂ ಮಲಗಿದ್ದರು.
ಇತ್ತ ಮನೆಯಲ್ಲಿ ಮಗಳು ನಿಶಾತ್ ಒಬ್ಬಳೇ ಉಳಿದಳು. ಸುತ್ತಲೂ ಅಗಾಧ ಮೌನ ಮನೆಯಿಂದಾಚೆ ಹೊರ ಬರುವಂತಿಲ್ಲ. ಅವಳ ಎಲ್ಲಾ ಕುಟುಂಬದವರಿಗೂ ಚಿಂತೆ; ಕಾಲೋನಿಯ ಇತರೆ ಜನರ ಪ್ರತಿಕ್ರಿಯೆ ಹೇಗಾಗಬಹುದು? ನಿಶಾತ್ ಒಬ್ಬಳೇ ಮನೆಯಲ್ಲಿದ್ದಾಳೆ ಮುಂದಿನ ಪರಿಣಾಮ ಏನಾಗಬಹುದು? ನೆರೆ ಹೊರೆಯಲ್ಲಿ ಇದ್ದ ಜನರ ಪೈಕಿ ಮುಸ್ಲಿಂ ಕುಟುಂಬಗಳು ವಿರಳವಾಗಿದ್ದವು. ಈ ಸಂದರ್ಭದಲ್ಲಿ ಕೊರೋನಾ ಕೋಮುವಾದೀಕರಣಗೊಂಡು ಅವರುಗಳು ಒಬ್ಬಂಟಿಯಾದ ನಿಶಾತ್ಳಿಗೆ ಹಂಗಿಸಿದರೆ. ವ್ಯಂಗ್ಯವಾಡಿದರೆ. (ಅಥವಾ ಏನು ಮಾಡಬಹುದು ಎಂಬುದೆಲ್ಲಾ ಅವರವರ ಊಹೆಗೆ ಬಿಟ್ಟ ವಿಷಯವಾಗಿತ್ತು.) ಏನು ಮಾಡುವುದು? ಎಲ್ಲರಿಗೂ ನಿದ್ರೆ ಇಲ್ಲದ ರಾತ್ರಿಗಳು. ನಿಶಾತ್ಳನ್ನು ಸಂಪರ್ಕಿಸಲು ಒಂದಿಬ್ಬರಿಗೆ ಮಾತ್ರ ಅಂದರೆ ನನಗೆ ಮತ್ತು ನಸೀಮಾಳಿಗೆ ಮಾತ್ರ ಅವಕಾಶವಿತ್ತು ಪದೇಪದೇ ನಾವು ಅವಳ ಸಂಪರ್ಕದಲ್ಲಿ ಇರುತ್ತಿದ್ದೆವು ಹೊರದೇಶದಲ್ಲಿದ್ದ ಸದಸ್ಯರೊಬ್ಬರು ವಾಟ್ಸಾಪ್ನಲ್ಲಿ ಕರೆ ಮಾಡಿ ಹೇಳಿದರು ಕಾಲೋನಿಯ ಮ್ಯಾನೇಜರ್ ಅವರಿಗೆ ತಿಳಿಸಿ’ ಈಗಾಗಲೇ ಸುದ್ದಿಯಾಗಿದ್ದ ಸುದ್ದಿಯನ್ನು ಅಧಿಕೃತವಾಗಿ ಮ್ಯಾನೇಜರಿಗೆ ನಿಶಾತ್ ತಿಳಿಸಿದಳು. ಅವರ ಮಾತುಗಳು ತುಂಬಾ ಆತ್ಮವಿಶ್ವಾಸವನ್ನು ನೀಡುವಂತೆ ಇದ್ದವು. ಶಂಕರ್ ಎಂಬ ಹೆಸರಿನ ಆ ವ್ಯಕ್ತಿ (ಹೆಸರು ಬದಲಾಯಿಸಲಾಗಿದೆ) ಆಕೆಗೆ ಕರೆ ಮಾಡಿ ನೀನು ಹತಾಶಳಾಗಬೇಡ. ಸೂಕ್ತ ಸಮಯದಲ್ಲಿ ನಮಗೆ ಮಾಹಿತಿಯನ್ನು ನೀಡಿದ್ದೀಯ. ನಾವು ಕೂಡ ನಿನ್ನ ಕಷ್ಟಕಾಲದಲ್ಲಿ ನಿನ್ನ ನೆರವಿಗೆ ಇದ್ದೇವೆ. ಎಂದು ಹೇಳಿ ಶಂಕರ್ ಆ ಕಾಲೋನಿಯ ಜನರ ಸಂವಹನಕ್ಕೆ ಇದ್ದ ಟೆಲಿಗ್ರಾಂ ಆಪ್ನ ಮೂಲಕ ಸುದ್ದಿಯನ್ನು ಮುಟ್ಟಿಸಿದರು. ಆ ಕಾಲೋನಿಯ ನಿವಾಸಿಗಳು ಕೂಡ ನಿಶಾತ್ಳಿಗೆ ಫೋನ್ ಮಾಡಿ ತಂದೆ-ತಾಯಿ ಮತ್ತು ಸಹೋದರನ ಯೋಗಕ್ಷೇಮದ ಬಗ್ಗೆ ವಿಚಾರಿಸಿ ಆಕೆಗೆ ಸಾಂತ್ವನವನ್ನು ನೀಡಿ ಇಲ್ಲಿ ಆಕೆ ಏಕಾಂಗಿಯಾಗಿ ಇಲ್ಲವೆಂತಲೂ ತಾವೆಲ್ಲರೂ ಕೂಡ ಸಹಭಾಗಿಗಳೆಂದು ಅವಳಿಗೆ ನೆರವನ್ನು ಖಚಿತಪಡಿಸಿದರು. ಅಷ್ಟೇ ಅಲ್ಲದೆ ಆ ಬ್ಲಾಕಿನ ಒಟ್ಟು ಇಪ್ಪತ್ತನಾಲ್ಕು ಮನೆಗಳ ಪೈಕಿ ಇಪ್ಪತ್ತಮೂರು ಮನೆಯವರು ಸ್ವತಃ ಪರಸ್ಪರ ಜವಾಬ್ದಾರಿಯನ್ನು ಹೊತ್ತುಕೊಂಡು ಆಕೆಗೆ ರಾತ್ರಿಯ ಊಟವನ್ನು ಯಾವುದೋ ಒಂದು ಮನೆಯವರು ಕಳಿಸಿಕೊಟ್ಟರು.ಮತ್ತು ನಿರಂತರವಾಗಿ ಸರದಿಯ ಪ್ರಕಾರ ಅವಳಿಗೆ ಹೊತ್ತು ಹೊತ್ತಿಗೆ ಊಟ ತಿಂಡಿಯನ್ನು ಸರಬರಾಜು ಮಾಡುತ್ತಿದ್ದರು. ಫೋನ್ ಮೂಲಕ ಆಕೆಗೆ ಮಾಹಿತಿ ನೀಡಿ ಮನೆಯ ಹೊರಗಡೆ ತಂದಿಟ್ಟ ಊಟದ ಡಿಸ್ಪೋಜಬಲ್ ಪ್ಯಾಕೆಟ್ಗಳನ್ನು ಆಕೆ ತಂದು ಹಾಲಿನಲ್ಲಿ ಕುಳಿತುಕೊಂಡಾಗ ಅನ್ನ ಅವಳ ಗಂಟಲಲ್ಲಿ ಇಳಿಯಲಿಲ್ಲ. ಆದರೆ ಆ ಹೊತ್ತಿಗೆ ಜೊತೆ ನೀಡಿದ ಸುತ್ತಮುತ್ತಲಿನ ಎಲ್ಲಾ ಮನುಷ್ಯಜೀವಿಗಳ ಪ್ರೀತಿ ಕೂಡ ಅವಳ ಗಂಟಲನ್ನು ಕಟ್ಟಿಹಾಕಿತ್ತು ಹೊಟ್ಟೆ ಬೇರೆ ಚುರುಗುಟ್ಟುತ್ತಿತ್ತು ಏಕಾಂಗಿತನದ ಅಸಹಾಯಕತೆಯಲ್ಲಿ ನಿರಂತರವಾಗಿ ಬರುತ್ತಿದ್ದ ಅವಳ ನೆರೆಹೊರೆಯ ಜನರ ಮಾನವೀಯತೆಯ ಸಂದೇಶಗಳನ್ನು ಸ್ವೀಕರಿಸುತ್ತಾ ಆಕೆ ನೀರಿನ ಲೋಟವನ್ನು ಹಿಡಿದು ಅದರೊಡನೆ ಬಲವಂತವಾಗಿ ಅನ್ನದ ತುತ್ತುಗಳನ್ನು ಕೆಳಗಿಳಿಸಿದಳು. ಇಡೀ ರಾತ್ರಿ ಅವಳು ಮಲಗುವುದಾದರೂ ಹೇಗೆ?
ಫೋನಿನಲ್ಲಿ ಅಪ್ಪನ ಜೊತೆಗೆ ಮಾತ್ರ ಒಂದಿಷ್ಟು ಮಾತುಕತೆ ಸಾಧ್ಯವಾಗಿತ್ತು. ಅವರ ಪರೀಕ್ಷೆ ಮಾಡಿರಲಿಲ್ಲ ಔಷಧೋಪಚಾರ ಆರಂಭವಾಗಿರಲಿಲ್ಲ ಬಹುಶಃ ಮಾರನೆಯ ದಿನದಿಂದ ರಕ್ತ ಪರೀಕ್ಷೆಯ ವರದಿ ಬಂದ ನಂತರ ಅವರಿಗೆ ಔಷದೋಪಚಾರ ದೊರೆಯುವ ಸಾಧ್ಯತೆ ಇತ್ತು. ಅಂತೂ ರಾತ್ರಿ ೧೧ ಗಂಟೆಯ ನಂತರ ಹೊರದೇಶದಲ್ಲಿದ್ದ ಆಕೆಯ ಕಸಿನ್ಗಳು ತಮ್ಮ ಸರದಿಯನ್ನು ನಿಗದಿಗೊಳಿಸಿಕೊಂಡು ಭಾರತೀಯ ಕಾಲಮಾನ ಮತ್ತು ಹೊರದೇಶದ ಕಾಲಮಾನಕ್ಕೆ ಅನುಸಾರವಾಗಿ ಆಕೆಯ ಜೊತೆಯಲ್ಲಿ ನಿರಂತರವಾಗಿ ಮಾತನಾಡುತ್ತಾ ಆಕೆಯ ಜೊತೆ ಸಂವಹನ ಮಾಡುತ್ತಾ ಆಕೆಗೆ ತಮ್ಮ ಧ್ವನಿಯ ಮೂಲಕ ಜೊತೆಯಾದರು. ಆಕೆ ಇಡೀ ರಾತ್ರಿ ಹೇಗೆ ಕಳೆದಳು ಗೊತ್ತಿಲ್ಲ. ಬೆಳಗಿನ ಜಾವದ ಹೊತ್ತಿಗೆ ನಿದ್ರೆ ಅವಳನ್ನು ಆವರಿಸಿ ಅವಳು ಹಾಲಿನಲ್ಲಿದ್ದ ಸೋಫಾದಮೇಲೆ ಒರಗಿ ಕೊಂಡಳು. ತಲೆದಿಂಬನ್ನು ತಂದಿಡಲು ಅಮ್ಮ ಇರಲಿಲ್ಲ. ಹೊದಿಕೆಯನ್ನು ತಂದು ಮೈಮೇಲೆ ಹೊದಿಸಲು ಅಪ್ಪ ಇರಲಿಲ್ಲ. ನಿದ್ರೆಯಲ್ಲೂ ಅವಳ ಕಾಲೆಳೆಯಲು ತಮ್ಮ ಇರಲಿಲ್ಲ. ಜೀವನದ ಅತ್ಯಂತ ದುರದೃಷ್ಟಕರ ಮತ್ತು ಸವಾಲಿನ ದಿನಗಳು ಎಂದು ಅವಳ ಮನಃಪಟಲದಲ್ಲಿ ದಾಖಲಾದ ತುರ್ತಿನ ದಿನಗಳು ಅವು.

ಬೆಳಗಿನ ಜಾವ ಮುಗಿದು ಎಷ್ಟೊತ್ತಾದರೂ ಬಾಗಿಲ ಬಳಿ ಇಟ್ಟ ತಿಂಡಿಯ ಪ್ಯಾಕೆಟ್ಗಳು ಹಾಗೆಯೇ ಇದ್ದುದನ್ನು ಕಂಡ ಕಾಲೋನಿಯ ಜನ ಗಾಬರಿಯಾದರು. ಎಲ್ಲರೂ ಆಕೆಗೆ ನಿರಂತರವಾಗಿ ಫೋನ್ ಮಾಡಿದರು. ಆಕೆ ಪರಿವೆಯಿಲ್ಲದೆ ಗಾಢ ನಿದ್ರೆಯಲ್ಲಿದ್ದಳು. ಆಕೆಯ ಉಳಿದ ಕುಟುಂಬ ಆಸ್ಪತ್ರೆ ಸೇರಿತ್ತು. ಆಕೆಯ ಸಂಬಂಧಿಗಳ ಫೋನ್ ನಂಬರ್ ಕೂಡ ಇರಲಿಲ್ಲ. ನೆರೆಹೊರೆಯ ಜನ ಕಂಗಾಲಾದರು. ಆ ವಿಷಮ ಪರಿಸ್ಥಿತಿಯಲ್ಲಿ ಆಕೆಗೆ ಏನಾಗಿದೆಯೋ ಎಂಬ ಆತಂಕ ಅವರೆಲ್ಲರಿಗೂ ಇತ್ತು. ಹೀಗಾಗಿ ಒಂದಿಬ್ಬರು ಯುವಕರು ಧೈರ್ಯಮಾಡಿ ಮೇಲಿನಿಂದ ಮನೆಯ ಬಾಲ್ಕನಿಗೆ ಇಳಿದ್ದು ಕಿಟಕಿಯನ್ನು ತೆರೆಯುವ ಪ್ರಯತ್ನದಲ್ಲಿ ಗಾಜು ಪಳ್ಳನೆ ಒಡೆದಾಗ ಆ ಸದ್ದಿಗೆ ಎಚ್ಚರವಾಯಿತು. ನಿದ್ರೆಯಿಂದ ಎದ್ದು ಹೊರಬಂದು ಕ್ಷಮೆಯಾಚನೆ ಮಾಡುವುದೇ ಅವಳಿಗೆ ಏಕಮೇವ ದಾರಿಯಾಗಿತ್ತ. ಇಡೀ ರಾತ್ರಿ ನಿದ್ರೆ ಬರದೆ ಈಗತಾನೆ ತಾನು ನಿದ್ರೆಗೆ ಜಾರಿದ್ದು ಎಂಬ ಅವಳ ನಿಜವನ್ನು ಅವರೆಲ್ಲರೂ ಒಪ್ಪಿ ನಿರಾಳವಾದರು.
ಇತ್ತ ಪ್ರತಿಷ್ಠಿತ ಆಸ್ಪತ್ರೆಯಲ್ಲಿದ್ದ ಸೀಮಾಳಿಗೆ ಜ್ವರ ಸ್ವಲ್ಪ ಕಡಿಮೆಯಾಗಿತ್ತು. ವೈದ್ಯಕೀಯ ಉಪಚಾರ ಆರಂಭವಾಗಿತ್ತು. ಆದರೆ ನಾನು ಒಂಟಿ ಎಂಬ ಭಾವ ಬಲಿತಿದ್ದು ಚಡಪಡಿಸುತ್ತಿದ್ದಳು. ಅವಳ ಕುಟುಂಬದವರಂತೂ ಅವಳ ಸಂಪರ್ಕದಲ್ಲಿದ್ದರು. ಹೊರ ದೇಶಗಳಲ್ಲಿದ್ದ ಆಕೆಯ ಬಂಧುಗಳು ಕೂಡ ನಿರಂತರವಾಗಿ ಸಂಪರ್ಕ ಮಾಡತೊಡಗಿದರು. ಮೂಗಿನಲ್ಲಿ ಆಕ್ಸಿಜನ್ನ ನಳಿಕೆ ಇದ್ದರೂ ಎಲ್ಲರೊಡನೆ ಮಾತನಾಡಿ ಅವಳೇನೋ ಹರ್ಷಚಿತ್ತರಾದಳು. ಆದರೆ ಸಂಜೆಯ ಹೊತ್ತಿಗೆ ಜ್ವರ ಏರತೊಡಗಿತ್ತು . ಮಾರನೆಯ ದಿನದಿಂದ ಮೂರು ದಿನಗಳವರೆಗೂ ಆಕೆಯ ಆರೋಗ್ಯದ ಸ್ಥಿತಿ ನಮಗೆ ಯಾರಿಗೂ ತಿಳಿದುಬರಲಿಲ್ಲ. ಆಕೆಯ ಮಗಳಾದ ನಿಶಾತ್ ಮಾತ್ರ ಆಕೆಯ ಸಂಪರ್ಕದಲ್ಲಿದ್ದು ತೀರಾ ನಿರಾಶಾದಾಯಕ ವಾದ ಸುದ್ದಿಯನ್ನು ಮಾತ್ರ ನಮಗೆಲ್ಲಾ ತಲುಪಿಸುತ್ತಿದ್ದಳು. ಆಕೆಗೆ ವಿಪರೀತವಾದ ಆಮಶಂಕೆ ಮತ್ತು ಭೇದಿ ಆರಂಭವಾಗಿದ್ದು ಆಕೆ ನಿತ್ರಾಣವಾಗಿ ಇದ್ದಾಳೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಗಾಬರಿಗೊಂಡರು. ಚೇತರಿಕೆಯನ್ನು ಕಾಣುತ್ತಲೇ ಹಠಾತ್ ಆರೋಗ್ಯ ಏರುಪೇರಾಗಿ ಮರಣ ಹೊಂದಿದ ಕರೋನಾ ರೋಗಿಗಳ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದುತ್ತಿದ್ದಂತೆಯೇ ನಾವೆಲ್ಲರೂ ಒಳಗಿಂದೊಳಗೆ ಕುಸಿಯತೊಡಗಿz ವು.
ಜೂನ್ ೨೩ರಂದು ನನ್ನ ವೃತ್ತಿಗೆ ಸಂಬಂಧಿಸಿದಂತೆ ನಾನು ತುರ್ತಾಗಿ ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಉಂಟಾಯಿತು. ಬೆಂಗಳೂರಿಗೆ ಹೋಗಿ ಆಕೆಯನ್ನು ಕಾಣದೆ ಆಕೆಯ ಸಂಕಷ್ಟಕ್ಕೆ ಸ್ಪಂದಿಸದೆ ಬರಬೇಕಾದ ನನ್ನ ದುರವಸ್ಥೆಯಿಂದ ನಾನು ಕಂಗೆಟ್ಟು ಹೋಗಿದ್ದೆ. ಆ ದಿನವಂತೂ ಸುದ್ದಿ ನಿರ್ವಾತ. ಬೆಂಗಳೂರಿನಿಂದ ಮರಳಿ ಬಂದ ನಂತರ ಏನು ಮಾಡಬೇಕೆಂಬುದೇ ತಿಳಿಯದೆ ರಾತ್ರಿಯಿಡೀ ನಿದ್ರೆಯಿಲ್ಲದೆ ಕಳೆದು ಹೋಯಿತು. ಮಾರನೆಯ ಬೆಳಿಗ್ಗೆ ೧೦ ಗಂಟೆಗೆ ನಿಶಾತ್ಳ ಮೂಲಕ ಎಲ್ಲರಿಗೂ ಸುದ್ದಿ ಹರಡಿತ್ತು. ತನ್ನ ತಾಯಿಯ ಆರೋಗ್ಯ ಬಿಲ್ಕುಲ್ ಸರಿಯಿಲ್ಲ. ಆಕೆಗೆ ನ್ಯುಮೋನಿಯಾ ಆಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ನನಗೆ ನನ್ನ ಮೇಲೆ ತಿರಸ್ಕಾರ ಮೂಡಿತು. ಇದೆಂಥಾ ದುರ್ದೆಸೆ ಅವಳು ಬದುಕಿಗಾಗಿ ಹೋರಾಡುತ್ತಿದ್ದಾಳೆ. ಅವಳ ಬಳಿ ನಿಂತು ಅವಳ ಕೈ ಹಿಡಿದು, ಅವಳ ತಲೆ ಸವರಿ ಬೆವರನ್ನು ಒರೆಸಿ ಸಾಂತ್ವನವನ್ನು ಹೇಳುವ ಅವಕಾಶವೂ ಕೂಡ ಇಲ್ಲವಲ್ಲ. ಅವರವರ ಕೋಣೆಗಳಲ್ಲಿ ಅವರವರ ಅಂತರಂಗದಲ್ಲಿ ಬಿಕ್ಕಿಬಿಕ್ಕಿದವರೆಷ್ಟೋ ಮಂದಿ ಆದರೆ ಅವಳ ಸಲುವಾಗಿ ವಿಶೇಷ ಸ್ತುತಿ, ಪ್ರಾರ್ಥನೆ ಮತ್ತು ಮೆಡಿಟೇಶನ್ ನಿರಂತರವಾಗಿ ನಡೆಯ ತೊಡಗಿತು. ಅಗತ್ಯವಿರುವವರಿಗೆ ಬಟ್ಟೆ ಬರೆ, ಹಣ, ದವಸ ಧಾನ್ಯ ಎಲ್ಲವನ್ನು ಅವರವರು, ಅವರವರ ಸ್ಥಳದಲ್ಲಿ ಹಂಚ ತೊಡಗಿದರು. ಮತ್ತು ಅತ್ಯಂತ ದೈನ್ಯತೆಯಿಂದ ನಮ್ಮ ಇಂತಹ ಹೆಸರಿನ ಬಂಧುವಿನ ಜೀವಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಅನೇಕ ಜನ ಬೇಡಿಕೊಂಡರು.
ನಸೀಮಾ ಎರಡು ಆಸ್ಪತ್ರೆಗಳಿಗೆ ಆಹಾರವನ್ನು ಒದಗಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಳು. ಸೀಮಾಳಿಗೆ ಮೊಸರನ್ನವನ್ನು ಕೊಡಿ ಎಂದು ಆಸ್ಪತ್ರೆಯವರು ಹೇಳಿದರೆ ಆ ಲಾಜಿಕ್ ನಸೀಮಾಳಿಗೆ ಅರ್ಥವಾಗಲಿಲ್ಲ ನ್ಯುಮೋನಿಯಾ ಇರುವ ಪೆಷಂಟ್ಗೆ ಮೊಸರನ್ನ ಹೇಗೆ ಕೊಡಬೇಕು ಎಂದು ಅವಳ ಆತಂಕ. ಒಂದಿಷ್ಟು ಮೊಸರನ್ನವನ್ನು ಕಳಿಸಿ ಅದರ ಜೊತೆಯಲ್ಲಿ ಡ್ರೈಫ್ರೂಟ್ಸ್, ಕಷಾಯ, ಚಿಕನ್ ಸೂಪ್ ಮತ್ತು ಒಳ್ಳೆಯ ಸತ್ವಯುತ ಆಹಾರವನ್ನು ಆಸ್ಪತ್ರೆಗೆ ಕಳಿಸತೊಡಗಿದಳು. ಜೂನ್ ೨೬ ನೇ ತಾರೀಖಿನಂದು ಮತ್ತೆ ರೋಗಿಯೊಡನೆ ನಾವು ಸಂಪರ್ಕ ಸಾಧಿಸಲು ಸಾಧ್ಯವಾಯಿತು. ಭೇದಿಯಿಂದ ಆಕೆ ಚೇತರಿಸಿಕೊಂಡಿದ್ದಳು. ಆಕೆ ಹೇಳುವ ಪ್ರಕಾರ ನರ್ಸ್ಗಳು ಮತ್ತು ವೈದ್ಯರುಗಳು ಕೂಡ ಆಕೆಯನ್ನು ವಿರಳವಾಗಿ ಭೇಟಿ ಮಾಡುತ್ತಿದ್ದರು. ಒಮ್ಮೊಮ್ಮೆ ಆಕೆಯೊಂದಿಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಮಾತನಾಡಿ ಆಕೆಗೆ ವಿಶ್ವಾಸವನ್ನು ಮೂಡಿಸುತ್ತಿದ್ದರು. ಎರಡು ವಿಧದ ಕಷಾಯವನ್ನು ಆಕೆಗೆ ಮನೆಯಿಂದ ಕಳಿಸುತ್ತಿದ್ದರು. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಪುದೀನಾ, ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳು ಹಾಗೂ ಅಮೃತ ಬಳ್ಳಿಯ ಎಲೆಗಳು ಮತ್ತು ಹಸಿ ಶುಂಠಿ ಹಾಕಿದ ಕಷಾಯ. ಎರಡನೆಯದು ಮೆಂತ್ಯ, ಮೆಣಸು, ಜೀರಿಗೆ, ಚಕ್ಕೆ ಲವಂಗ, ಹಸಿಶುಂಠಿ ಹಾಕಿ ಕುದಿಸಿದ ಕಷಾಯ ಆಕೆಗೆ ಆಕ್ಸಿಜನ್ ಹಾಕುವುದು ಮತ್ತು ತೆಗೆಯುವುದು ನಡದೇ ಇತ್ತು. ಆಕ್ಸಿಜನ್ ನಳಿಕೆ ಇಲ್ಲದೆ ಆಕೆ ಎಷ್ಟು ಹೊತ್ತು ಇರಲು ಸಾಧ್ಯ ಎಂಬುದನ್ನು ವೈದ್ಯರು ಪರಿಶೀಲನೆ ಮಾಡುತ್ತಿದ್ದರು. ಆದರೆ ಅವಳಿಗೆ ವೆಂಟಿಲೇಟರ್ ಅಗತ್ಯ ಬೀಳಲಿಲ್ಲ.

ಈ ನಡುವೆ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಆಕೆಯ ಪತಿ ಮತ್ತು ಮಗನ ರಕ್ತ ಪರೀಕ್ಷೆಯ ವರದಿ ಬಂದಿದ್ದು ಕೊರೋನಾ ದೃಢವಾಗಿತ್ತು. ಸರ್ಕಾರಿ ಆಸ್ಪತ್ರೆಯ ವಾರ್ಡ್ಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚಿನ ರೋಗಿಗಳ ದಟ್ಟಣೆಯಾಗಿದ್ದು ಮೂಲಸೌಲಭ್ಯಗಳ ಅಪಾರ ಕೊರತೆ ಇತ್ತು. ಮತ್ತು ಸಾಕಷ್ಟು ಶುಚಿತ್ವವನ್ನು ಕಾಪಾಡಲು ಸಿಬ್ಬಂದಿಗಳು ಹೆಣಗಾಡುತ್ತಿದ್ದರು. ಮಗನಂತೂ ಮೂರು ಮಾಸ್ಕ್ಗಳನ್ನು ಏರಿಸಿ ತಲೆಯಿಂದ ಕಾಲಿನವರೆಗೂ ಹೊದಿಕೆಯನ್ನು ಬಿಗಿಯಾಗಿ ಕವುಚಿಕೊಂಡು ಮಲಗಿಬಿಟ್ಟಿದ್ದ. ಅಲ್ಲಿದ್ದ ರೋಗಿಗಳ ಕೆಮ್ಮು ಕಶ್ಮಲಗಳು ಅವನಿಗೆ ಭಯವಾಗುತ್ತಿರಲಿಲ್ಲ ಸಹ್ಯವಾಗುತ್ತಿರಲಿಲ್ಲ. ಅವನು ತೀರಾ ಖಿನ್ನತೆಯಿಂದ ಬಳಲಲಾರಂಭಿಸಿದ. ನಸೀಮಾಳ ಗೆಳತಿಯೊಬ್ಬಳು ಮಾನಸಿಕ ತಜ್ಞೆ ಆಗಿದ್ದಳು. ನಸೀಮಾಳ ಕೋರಿಕೆಯ ಮೇರೆಗೆ ಆ ತಜ್ಞೆ ವಿಡಿಯೋ ಕಾಲ್ ಮೂಲಕ ಅವನಿಗೆ ಸಮಾಲೋಚನೆಯನ್ನು ಮಾಡಿದಳು. ಮತ್ತು ದೃಢ ಆತ್ಮವಿಶ್ವಾಸ ಅವನಿಗೆ ಏಕೆ ಮತ್ತು ಹೇಗೆ ಅಗತ್ಯ ಎಂಬುದನ್ನು ಅವನಿಗೆ ಮನವರಿಕೆ ಮಾಡಿದಳು. ಚಿಕಿತ್ಸೆಯಂತೂ ಚೆನ್ನಾಗಿ ನಡೆಯುತ್ತಿತ್ತು. ಆದರೂ ಕೂಡ ಅವನ ತೊಳಲಾಟ ನೋಡಲಾರದೆ ಅನೇಕ ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಲಾಯಿತು. ಎಲ್ಲರೂ ಕೂಡ ನಕಾರಾತ್ಮಕವಾಗಿ ತಲೆಯಾಡಿಸಿದ ಮೇಲೆ ಅವರಿಬ್ಬರಿಗೂ ಸರ್ಕಾರಿ ಆಸ್ಪತ್ರೆ ಸ್ಥಿರವಾಯಿತು. ಅಪ್ಪನಂತೂ ಸ್ಥಿತಪ್ರಜ್ಞರಾಗಿಬಿಟ್ಟಿದ್ದರು. ಈನಡುವೆ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸುವುದರ ಬಗ್ಗೆ ಸರ್ಕಾರದ ಮಾತುಕತೆ ಮೊದಲಾದ ಸಕಾರಾತ್ಮಕವಾದ ಕೆಲವು ವರದಿಗಳನ್ನು ನಾವು ಅಪ್ಪ ಮಗನಿಗೆ ವಾಟ್ಸಾಪ್ ಮೂಲಕ ಕಳಿಸುತ್ತಿದ್ದೆವು. ಅವರಿಬ್ಬರಿಗೇ ಕೂಡ ಮನೆಯ ಊಟ, ಕಷಾಯ, ಡ್ರೈ ಫ್ರೂಟ್ಸ್ ಹಾಗೂ ಪುಷ್ಟಿಕರವಾದ ಆಹಾರವನ್ನು ನಸೀಮಾಳೇ ಕಳಿಸುತ್ತಿದ್ದಳು. ಅಪ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆಯೇ ಮಗನಿಗೆ ವಿಪರೀತ ಕೆಮ್ಮು ಅರ್ಥಾತ್ ನ್ಯುಮೋನಿಯಾ ಎಂದು ವೈದ್ಯರು ವರದಿ ನೀಡಿದರು. ಅಪ್ಪ-ಮಗನ ಸೋಂಕು ಧೃಡ ಪಡಿಸುವಿಕೆಯಿಂದ ಹಿಡಿದು ಅವರ ಚಿಕಿತ್ಸೆ, ರೋಗ ಮತ್ತು ಅವರಿಗೆ ಮಾಡಲಾಗಿದ್ದ ವ್ಯವಸ್ಥೆ ಇವೆಲ್ಲವುಗಳನ್ನು ಕೂಡ ಸೀಮಾಗೆ ತಿಳಿಯದಂತಹ ವ್ಯವಸ್ಥೆಯನ್ನು ನಾವು ಮಾಡಿದ್ದೆವು. ಆದರೆ ಆಕೆ ಪದೇ ಪದೇ ಗಂಡ ಮತ್ತು ಮಗ ಮನೆಯಲ್ಲಿ ಯಾಕೆ ಇಲ್ಲ ಎಂಬ ಪ್ರಶ್ನೆಯನ್ನು ಕೇಳುತ್ತಲೇ ಇದ್ದಳು. ಆಕೆಯ ಜೊತೆಯಲ್ಲಿ ಅವರಿಬ್ಬರೂ ಇದ್ದುದ್ದರಿಂದ ಅವರಿಬ್ಬರಿಗೂ ಕ್ವಾರಂಟೈನ್ ಮಾಡಲಾಗಿದ್ದು ಹೋಟೆಲ್ನಲ್ಲಿ ಇದ್ದಾರೆ ಎಂಬ ಸುದ್ದಿಯನ್ನು ಅವಳಿಗೆ ನೀಡಲಾಗಿತ್ತು. ಇದೊಂದು ಬಹಳ ಒಳ್ಳೆಯ ಮತ್ತು ಸಕಾರಾತ್ಮಕವಾದ ಕ್ರಮವಾಗಿತ್ತು ಎಂಬುದು ಆಮೇಲೆ ನನಗೆ ತಿಳಿದು ಬಂದಿತು.
ಇಷ್ಟೆಲ್ಲಾ ನಡೆಯುವ ಹೊತ್ತಿಗೆ ನಿಶಾತ್ ಮೆಲ್ಲನೆ ಆಲಾಪನೆ ಮಾಡತೊಡಗಿದಳು. “ನನಗೆ ವಾಸನೆ ಮತ್ತು ರುಚಿ ಗೊತ್ತಾಗುತ್ತಿಲ್ಲ”. ಇದು ಕೂಡ ಕೊರೋನಾದ ಗುಣ ಲಕ್ಷಣವೇ ಎಂಬುದು ನಮ್ಮೆಲ್ಲರ ಅರಿವಿಗೆ ಇರುವ ವಿಚಾರವಾಗಿತ್ತು. ಮನೆಯಲ್ಲಿದ್ದ ಕಸವನ್ನು ಹೊರಗೆ ಹಾಕಿರಲಿಲ್ಲ. ಅದೊಂದು ದುರ್ವಾಸನೆಯ ತಾಣವಾಗಿತ್ತು. ಮನೆಯ ಒಳಗಡೆ ಬಿಬಿಎಂಪಿಯ ಜನ ಬಂದು ವೈರಸ್ ನಿರ್ಮೂಲನದ ಶುಚಿತ್ವವನ್ನು ಕೈಗೊಂಡು ಸ್ಯಾನಿಟೈಸ್ ಮಾಡಬೇಕಿತ್ತು. ಮತ್ತು ನಿಶಾತ್ಳ ರಕ್ತಪರೀಕ್ಷೆ ಆಗಬೇಕಿತ್ತು. ಸಿಬ್ಬಂದಿ ಇಲ್ಲ ಎಂದು ಇವತ್ತು ನಾಳೆ ಎಂದು ಮುಂದೂಡಿದರೂ ಕೂಡ ಬಿಬಿಎಂಪಿ ಯವರು ಮೇಲ್ಕಂಡ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಬಿಬಿಎಂಪಿ ಅವರು ಮನೆಗೆ ಬಂದು ನಿಶಾತ್ಳ ಸ್ವಾಬ್ ಟೆಸ್ಟ್ ಅನ್ನು ಕೂಡ ಮಾಡಿದರು. ಅವಳ ಫಲಿತಾಂಶಕ್ಕಾಗಿ ಕಾಯುತ್ತಿದ್ದೆವು. ಈ ನಡುವೆ ದಂತವೈದ್ಯಕೀಯದ ಸ್ನಾತಕೋತ್ತರ ಪದವಿ ಪರೀಕ್ಷೆಯ ದಿನಾಂಕಗಳನ್ನು ಕೂಡ ವಿಶ್ವವಿದ್ಯಾಲಯದವರು ನಿಗದಿಪಡಿಸಿದರು. ನಿಶಾತ್ ದಿಕ್ಕೆಟ್ಟು ಹೋದಳು.
ಸುದೀರ್ಘವಾದ ಈ ಎಲ್ಲಾ ಸಮಸ್ಯೆಗಳ ನಡುವೆ ಒಂದೊಂದಾಗಿ ನೆಮ್ಮದಿಯ ಸುದ್ದಿಗಳು ಬರಲಾರಂಭಿಸಿದವು ಸೀಮಾಳನ್ನು ಪರೀಕ್ಷಿಸಿದ ವೈದ್ಯರು ಆಶ್ಚರ್ಯ ಚಕಿತರಾದರು ಆಕೆಯ ರಕ್ತ ಪರೀಕ್ಷೆ ಮಾಡಿಸಿ ಫಲಿತಾಂಶವನ್ನು ಕೈಯಲ್ಲಿ ಹಿಡಿದು ಬಂದ ವೈದ್ಯರು ಆಕೆಯನ್ನೇ ಕೇಳಿದರು ಒಂದೇ ಸಾರಿಗೆ ನಿನ್ನ ಫಲಿತಾಂಶ ನೆಗೆಟಿವ್ ಆಗಿ ಬಂದಿದೆ ನೀನು ನಮ್ಮ ಔಷಧೀಯ ಜೊತೆಯಲ್ಲಿ ಇನ್ನೇನನ್ನು ತೆಗೆದುಕೊಂಡೆ ಯಾವ ಕಷಾಯ ಕುಡಿದೆ? ಮುಂತಾಗಿ ಅವಳ ಬಳಿಯೇ ವಿವರಗಳನ್ನು ಸಂಗ್ರಹಿಸಿದರು ಅತ್ಯಂತ ಆಶ್ಚರ್ಯ ಜನಕವಾಗಿ ಆಕೆಯ ನ್ಯುಮೋನಿಯ ಗುಣವಾಗಿತ್ತು. ಕೊರೋನಾದ ಎಲ್ಲಾ ಲಕ್ಷಣಗಳಿಂದ ಆಕೆ ಹೊರ ಬಂದಿದ್ದಳು ಮತ್ತು ಶೀಘ್ರವಾಗಿ ಚೇತರಿಸಿ ಕೊಂಡಿದ್ದಳು.( ಅವಳ ಅನುಭವ ಕಥನವೇ ಬೇರೆಯದಿದೆ.)
ಜುಲೈ ೩ನೇ ತಾರೀಕು ೧೧:೦೦ ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಅಪ್ಪ ಮಗ ಮನೆ ಸೇರಿದರು. ಇಬ್ಬರೂ ಕೂಡ ಆ ರೋಗದಿಂದ ಮುಕ್ತಿ ಪಡೆದಿದ್ದರು. ನಿಶಾತ್ಳ ವರದಿ ನೆಗೆಟಿವ್ ಬಂದಿತ್ತು. ಆ ದಿನ ಸಂಜೆ ೭ ಗಂಟೆಗೆ ಅಪ್ಪ-ಮಗ ಇಬ್ಬರೂ ಹೋಗಿ ಸೀಮಾಳನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದರು. ಹೌದು ಹಲವು ಲಕ್ಷಗಳ ಬಿಲ್ ಆಗಿತ್ತು. ಆದರೆ ಆ ಕುಟುಂಬದ ಸಂಭ್ರಮ ಎಷ್ಟಿತ್ತೆಂದರೆ ಜೀವ ಉಳಿಸಲು ಶ್ರಮಪಟ್ಟ ವೈದ್ಯರ ಶ್ರಮಕ್ಕೆ ವಂದನೆಯನ್ನು ಸಲ್ಲಿಸುತ್ತಾ ಹಣದ ಬಗ್ಗೆ ಅವರು ಯಾವ ತಕರಾರನ್ನೂ ಕೂಡ ಮಾಡದೆ ನೆಮ್ಮದಿಯಾಗಿ ಮನೆ ಸೇರಿಕೊಂಡರು. ನಿಶಾತ್ ಕಂಬನಿ ಸುರಿಸುತ್ತಾ ಆಗ ಹೇಳಿದ್ದಳು” ಒಂದೇ ಕ್ಷಣದಲ್ಲಿ ನಮ್ಮ ಕುಟುಂಬ ವಿಧ್ರವಾಗಿಬಿಟ್ಟಿತ್ತು” ಎಂದು. ರಾತ್ರಿ ಕೂಡ ಅವಳು ಭಾವೋದ್ವೇಗದಿಂದ ಹೇಳಿದಳು “ನಮ್ಮ ಕುಟುಂಬ ಇಂದು ಒಟ್ಟುಗೂಡಿತ್ತು “ಎಂದು.
ಆ ಕುಟುಂಬಕ್ಕೆ ದೊಡ್ಡ ಆಘಾತ ಉಂಟಾಗಿತ್ತು. ಆದರೆ ಅವರ ಬಳಗವೆಲ್ಲಾ ಸಾಲಾಗಿ ಸನ್ನದ್ಧವಾಗಿ ಅವರ ಬೆನ್ನಿಗೆ ನಿಂತಿತ್ತು. ಈ ಯಾವ ಬೆಂಬಲವೂ ಇಲ್ಲದ ಕುಟುಂಬಗಳ ಹೋರಾಟವನ್ನು ಎದುರಿಸುವುದು ಹೇಗೆ? ಅವರಿಗೆ ಯಾರ ನೆರವು ದೊರಕುವುದು?
ಏನಪ್ಪಾ ಏನು ಮಾಡಲು ಕೂಡಾ ತೋಚುತ್ತಿಲ್ಲ.

 

– ಬಾನು ಮುಸ್ತಾಕ್

Please follow and like us:
error