ಕೊರೋನಗೆ ಕರ್ನಾಟಕದಲ್ಲಿ ಮೂರನೇ ಬಲಿ

ತುಮಕೂರು, ಮಾ.27: ಮಹಾಮಾರಿ ಕೊರೋನ ವೈರಸ್ ಸೋಂಕಿಗೆ ರಾಜ್ಯದಲ್ಲಿ ಮೂರನೇ ಬಲಿಯಾಗಿದ್ದು, ಕೊರೋನ ದೃಢಪಟ್ಟಿದ್ದ ತುಮಕೂರಿನ 65 ವರ್ಷದ ವೃದ್ಧರೊಬ್ಬರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಇಂದು ಬೆಳಗ್ಗೆ 10:45ಕ್ಕೆ ಶಿರಾ ಮೂಲದ ವ್ಯಕ್ತಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಈ ವ್ಯಕ್ತಿ ಮಾ.5ರಂದು ದಿಲ್ಲಿಗೆ ಭೇಟಿ ನೀಡಿದ್ದು, ಮಾ.7ರಂದು ಅಲ್ಲಿಗೆ ತಲುಪಿದ್ದರು. ಅಲ್ಲಿಂದ ಹಿಂದಿರುಗಿದ್ದ ಅವರು ಮಾ.11ರಂದು ಬೆಂಗಳೂರಿಗೆ ತಲುಪಿದ್ದರು. ಮಾ.14ರಂದು ಅವರು ಶಿರಾ ತಲುಪಿದ್ದರು. ಮಾ.15ರಂದು ಅವರಿಗೆ ಕೆಮ್ಮು ಮತ್ತು ಶೀತ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು. ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಅವರು ಇದೀಗ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಅವರ ನಿಕಟ ಸಂಪರ್ಕದಲ್ಲಿದ್ದ 13 ಮಂದಿಯನ್ನು ಐಸೋಲೇಶನ್‌ಗೆ ದಾಖಲಿಸಲಾಗಿದೆ. ಉಳಿದಂತೆ ಅವರ ಸಂಪರ್ಕಕ್ಕೆ ಬಂದಿದ್ದ 33 ಮಂದಿಯನ್ನು ಗೃಹಬಂಧನದಲ್ಲಿರಲು ಸೂಚಿಸಲಾಗಿದ್ದು, ಅವರೆಲ್ಲರ ರಕ್ತ ಪರೀಕ್ಷೆ ಮಾಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕೊರೋನಗೆ ಬಲಿಯಾದ ಈ ವ್ಯಕ್ತಿ ಇತ್ತೀಚೆಗೆ ಸಂಚಾರದ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿದ್ದು, ಅದನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿದೆ.

ಕೊರೋನದಿಂದ ಕರ್ನಾಟಕದಲ್ಲಿ ಇದಕ್ಕೂ ಮೊದಲು ಕಲಬುರಗಿಯಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದರೆ, ಗೌರಿಬಿದನೂರಿನಲ್ಲಿ ವೃದ್ಧೆಯೊಬ್ಬರು ಕೊನೆಯುಸಿರೆಳೆದಿದ್ದರು.

Please follow and like us:
error

Related posts