ಕೊರೊನಾ ಸೋಂಕಿನ ಬಗ್ಗೆ ಶ‍್ವೇತಪತ್ರ ಹೊರಡಿಸಿ- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೊರೊನಾ ಸೋಂಕು ತಡೆಗಟ್ಟಲು ರಾಜ್ಯದ ಮುಖ್ಯಮಂತ್ರಿ   ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು ಪಾರದರ್ಶಕವಾಗಿಲ್ಲ. ಈ ಬಗ್ಗೆ ಶ್ವೇತಪತ್ರವನ್ನು ಹೊರಡಿಸಿ ಆತಂಕ ಅಸುರಕ್ಷತೆ, ಅಭದ್ರತೆಯಲ್ಲಿರುವ ಜನರಲ್ಲಿ ವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಆಗ್ರಹಿಸಿದ್ದಾರೆ, ಇದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ರಾಜ್ಯದ ಖಜಾನೆಯಿಂದ ಎಷ್ಟು ಖರ್ಚಾಗಿದೆ? ಅದು ಯಾವ ಉದ್ದೇಶಗಳಿಗೆ ಖರ್ಚಾಗಿದೆ? ಇದರಲ್ಲಿ ಕ್ವಾರಂಟೈನ್, ಚಿಕಿತ್ಸೆ, ಪಿಪಿಇ, ವೆಂಟಿಲೇಟರ್, ಆಮ್ಲಜನಕ ಸಿಲಿಂಡರ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆ ಮತ್ತು ಚಿಕಿತ್ಸೆಗೆ ಖರ್ಚಾದ ಹಣ ಎಷ್ಟು? ಕೇಂದ್ರ ಸರ್ಕಾರದಿಂದ ಬಂದಿರುವ ದುಡ್ಡು ಮತ್ತು ವೈದ್ಯಕೀಯ ಸಲಕರಣೆಗಳೆಷ್ಟು? ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳೆಷ್ಟು? ಯಾವ ಮಾನದಂಡದ ಆಧಾರದಲ್ಲಿ ಖಾಸಗಿ ಆಸ್ಪತ್ರೆಗಳ ಶುಲ್ಕ ನಿಗದಿಪಡಿಸಿದೆ? – ಈ ವಿವರಗಳನ್ನು ರಾಜ್ಯ ಸರ್ಕಾರ ಜನತೆಯ ಮುಂದಿಡಬೇಕು. ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ವಿವರ ಕೇಳಿ ನಾನು ಹಲವಾರು ಪತ್ರಗಳನ್ನು ಬರೆದಿದ್ದರೂ ಮುಖ್ಯಮಂತ್ರಿ ಮಾಹಿತಿ ಕೊಡುತ್ತಿಲ್ಲ. ಮಾಹಿತಿ ನಿರಾಕರಣೆ ನನ್ನ ಹಕ್ಕುಚ್ಯುತಿಯಾಗುವುದು ಮಾತ್ರವಲ್ಲ ಸರ್ಕಾರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸುತ್ತದೆ. ಮಾರ್ಚ್ 23ರಂದು ರಾಜ್ಯದಲ್ಲಿ ಲಾಕ್ ಡೌನ್ ಘೋಷಿಸಿದಾಗ ರಾಜ್ಯದಲ್ಲಿ ಸಾವು ಸಂಭವಿಸಿರಲಿಲ್ಲ, 26 ಮಂದಿ ಸೋಂಕಿತರಷ್ಟೇ ಇದ್ದರು. ಇಂದಿನ ವರದಿಯ ಪ್ರಕಾರ ಸೋಂಕಿತರ ಸಂಖ್ಯೆ 11,923, ಸಾವಿನ ಸಂಖ್ಯೆ 191 ದಾಟಿದೆ. ಎಲ್ಲಿದೆ ನಿಯಂತ್ರಣ?  ಕೊರೊನಾ ದಿಢೀರನೇ ಬಂದೆರಗಿಲ್ಲ, ಕಳೆದ ಮೂರು ತಿಂಗಳ ಅವಧಿಯನ್ನು ಕೇವಲ ಲಾಕ್‌ಡೌನ್ ಹೇರಿಕೆ ಮತ್ತು ಹಿಂತೆಗೆತದಲ್ಲಿ ವ್ಯರ್ಥವಾಗಿ ಕಳೆದ ಮುಖ್ಯಮಂತ್ರಿ , ಯಾವ ತಯಾರಿಯನ್ನೂ ನಡೆಸಿಲ್ಲ. ಈ ನಿಷ್ಕ್ರೀಯತೆಯ ಫಲವನ್ನು ರಾಜ್ಯದ ಜನತೆ ಅನುಭವಿಸಿದಂತಾಗಿದೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿವೆ. ಖಾಸಗಿ ಆಸ್ಪತ್ರೆಗಳು ಸರ್ಕಾರ ಒಪ್ಪಿಕೊಂಡಿರುವ ಚಿಕಿತ್ಸಾ ಶುಲ್ಕಕ್ಕೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಅವರನ್ನು

ಮುಖ್ಯಮಂತ್ರಿ ಒಪ್ಪಿಸಬೇಕು, ಇಲ್ಲವೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಎರಡನ್ನೂ ಮಾಡದೆ ಕೈಕಟ್ಟಿ ಕುಳಿತರೆ ಜನರೇನು ಮಾಡಬೇಕು? ಕೊರೊನಾ ಸೋಂಕು ನಗರ-ಪಟ್ಟಣಗಳಿಂದ ಹಳ್ಳಿಗಳಿಗೆ ಹರಡಿದೆ. ಆದರೆ ಕಳೆದ 15 ದಿನಗಳಿಂದ ಪರೀಕ್ಷೆ ಮಾಡುವ ಪ್ರಮಾಣ 16 ಸಾವಿರದಿಂದ ಸರಾಸರಿ 11000ಕ್ಕೆ ಇಳಿದಿದೆ. ಸೋಂಕು ಸಮುದಾಯಕ್ಕೆ ವ್ಯಾಪಿಸಿಕೊಂಡಿರುವ ಭೀತಿ ಇದೆ. ಏನಾಗಿದೆ ಸರ್ಕಾರಕ್ಕೆ? ರಾಜ್ಯಕ್ಕೆ 9200 ವೆಂಟಿಲೇಟರ್ ಬೇಕಾಗಿದೆ, ಇರುವುದು 1500 ಮಾತ್ರ. ಕೇಂದ್ರ ಸರ್ಕಾರಕ್ಕೆ 33,000 ವೆಂಟಿಲೇಟರ್ ಕಳಿಸಲು ಕೇಳಿದರೆ ಬಂದಿರುವುದು 90 ಮಾತ್ರ. 20,000 ಆಕ್ಸಿಜನೇಟೆಡ್ ವೆಂಟಿಲೇಟರ್ ಬೇಕಾಗಿದ್ದು, ಕೇವಲ 7000 ಮಾತ್ರ ಇವೆ. ಇದೆನಾ ತಯಾರಿ ? ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅಂದಾಜು 3,300 ಕೋಟಿ ರೂ.ಗಳ ಅವ್ಯವಹಾರ ನಡೆದಿದ್ದು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಪಾವತಿಸಿ ಖರೀದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಆರ್ಥಿಕ ಇಲಾಖೆ ಆಕ್ಷೇಪಿಸಿದೆ. ಈ ಬಗ್ಗೆ

ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು. ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ  ಮುಖ್ಯಮಂತ್ರಿ ತಕ್ಷಣ ಶ್ವೇತಪತ್ರ ಹೊರಡಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣದಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರ ಇದೇ ರೀತಿಯ ಉದಾಸೀನತೆ -ಉಡಾಫೆತನವನ್ನು ಮುಂದುವರಿಸಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಬಹುದು.

Please follow and like us:
error