ಕೊರೊನಾ ವೈರಸ್ : ಮುಸ್ಲಿಂ ಸಮುದಾಯದ ವಿರುದ್ದ ಅಪಪ್ರಚಾರ ಕ್ರಮಕ್ಕೆ ಮುಸ್ಲಿಂ ಚಿಂತಕರ ಚಾವಡಿ ಆಗ್ರಹ

ಸಹನೆಯಿಂದ ವಿವೇಕದಿಂದ ಈ ಸನ್ನಿವೇಶವನ್ನು ಎದುರಿಸಬೇಕೆಂದು ಮುಸ್ಲಿಂ ಸಮುದಾಯಕ್ಕೆ ವಿನಂತಿ

Bangalore  ಕೊರೊನಾ ವೈರಸ್ ಕಾರಣದಿಂದ ಇಡೀ ದೇಶ ನಲುಗುತ್ತಿದೆ. ಅದರಿಂದ ಪಾರಾಗಲು ಈ ದೇಶದ ಜನ ತಮ್ಮ ಜಾತಿ ಧರ್ಮ ಭಾಷೆ ಪ್ರಾಂತ್ಯದ ಭೇದವನ್ನು ಬದಿಗಿಟ್ಟು ವೈದ್ಯರು ಮತ್ತು ಸರ್ಕಾರದ ಅಗತ್ಯ ಕ್ರಮಗಳಿಗೆ ಸಹಕರಿಸಬೇಕಿದೆ. ಈ ಹೊತ್ತಿನಲ್ಲಿ ಕೆಲವು ಅತಿಯಾದ ಧಾರ್ಮಿಕ ಶ್ರದ್ಧೆಯುಳ್ಳ ಜನ ಮತ್ತು ಮೂಲಭೂತವಾದಿಗಳು ಹುಂಬತನದಿಂದ ವರ್ತಿಸುತ್ತಾ ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಕನ್ನು ಉಂಟು ಮಾಡುತ್ತಿದ್ದಾರೆ. ಈ ಬಗೆಯ ಹುಂಬತನ ಉಡಾಫೆ ಮಾಡುವವರು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇದ್ದಾರೆ. ಇದಕ್ಕೆ ಕಳೆದ ೨೫ದಿನಗಳಿಂದ ದೇಶದಲ್ಲಿ ನಡೆದಿರುವ ಘಟನೆಗಳು ಸಾಕ್ಷಿ. ಇದನ್ನು ಎಲ್ಲ ಪ್ರಜ್ಞಾವಂತರು ಖಂಡಿಸಬೇಕಿದೆ.

ಇದೇ ಹೊತ್ತಿನಲ್ಲಿ ಕೆಲವು ಹುಂಬರ ಮತ್ತು ಮೂಲಭೂತವಾದಿಗಳ ಮಾತು ಮತ್ತು ಕ್ರಿಯೆಗಳನ್ನು ಇಡಿಯಾಗಿ ಒಂದು ಸಮುದಾಯದ ತಲೆಗೆ ಕಟ್ಟುವ, ಅದರ ವಿರುದ್ಧ ದ್ವೇಷವನ್ನು ವ್ಯವಸ್ಥಿತವಾಗಿ ಹಬ್ಬಿಸುವ ಕೆಲಸದಲ್ಲಿ ಕೆಲವರು ತೊಡಗಿದ್ದಾರೆ. ಕೆಲವು ಮಾಧ್ಯಮಗಳು ಸಹ ಈ ಕೆಲಸವನ್ನು ಮಾಡುತ್ತಿವೆ. ಇದು ತಪ್ಪು ಮತ್ತು ಅಪಾಯಕರ. ವ್ಯಕ್ತಿ ಅಥವಾ ಗುಂಪಿನವರು ಯಾವುದೇ ಧಾರ್ಮಿಕ ಸಮುದಾಯಕ್ಕೆ ಸೇರಿರಲಿ, ಅವರು ಮಾಡುವ ತಪ್ಪುಗಳನ್ನು ಎಲ್ಲರೂ ಖಂಡಿಸಬೇಕಿದೆ. ಜಾತಿ ಮತಾತೀತವಾಗಿ ಈ ಬಿಕ್ಕಟ್ಟಿನ ಸನ್ನಿವೇಶವನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ. ಭಾರತವು ಕಷ್ಟಕರವಾದ ಈ ಯುದ್ಧದಲ್ಲಿ ಗೆಲುವನ್ನು ಸಾಧಿಸುತ್ತದೆ ಎಂದು ನಾವು ನಂಬಿದ್ದೇವೆ. ಈ ವಿಷಯದಲ್ಲಿ ಮುಸ್ಲಿಂ ಚಿಂತಕರ ಚಾವಡಿಯು ಸರ್ಕಾರವು ಕೈಗೊಳ್ಳುವ ಎಲ್ಲ ಉಪಯುಕ್ತ ಕ್ರಮಗಳನ್ನು ಬೆಂಬಲಿಸುತ್ತದೆ. ಸಹನೆಯಿಂದ ವಿವೇಕದಿಂದ ಈ ಸನ್ನಿವೇಶವನ್ನು ಎದುರಿಸಬೇಕೆಂದು ಮುಸ್ಲಿಂ ಸಮುದಾಯಕ್ಕೆ ವಿನಂತಿಸುತ್ತದೆ. ಕೊರೊನ ವೈರಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದ ವಿಚಾರಗಳನ್ನು ತಿರುಚಿ, ಬಹು ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಡೆದು ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸರಕಾರವನ್ನು ಮುಸ್ಲಿಂ ಚಿಂತಕರ ಚಾವಡಿ ಆಗ್ರಹಿಸುತ್ತದೆ ಎಂದು ಡಾ.ರಹಮತ್ ತರೀಕೆರೆ, ಡಾ.ಮುಜಾಫರ್ ಅಸಾದಿ, ರಂಜಾನ್ ದರ್ಗಾ, ಅಬ್ದುಸ್ಸಲಾಂ ಪುತ್ತಿಗೆ, ಬಾನು ಮುಷ್ತಾಕ್, ಬಿ.ಪೀರ್‌ಬಾಷ, ಮುನೀರ್ ಕಾಟಿಪಳ್ಳ, ಅನೀಸ್ ಪಾಶಾ, ಜೆ.ಕಲೀಂಬಾಷಾ, ಡಾ.ಸಿರಾಜ್ ಅಹಮ್ಮದ್, ಡಾ.ರಜಾಕ್ ಉಸ್ತಾದ್, ಇಮಾಮ್ ಗೋಡೆಕಾರ, ಡಾ.ಶಾಕಿರಾ ಖಾನಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error

Related posts