fbpx

ಕೊರೊನಾ ಉಲ್ಭಣಗೊಳ್ಳಲು ರಾಜ್ಯ ಸರಕಾರವೇ ಕಾರಣ- ಸಿದ್ದರಾಮಯ್ಯ

Bangalore :  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೊರೊನಾ ಸೋಂಕಿನಲ್ಲಿ ಭಾರತವನ್ನು ವಿಶ್ವದ ನಂಬರ್ ಒನ್ ದೇಶವನ್ನಾಗಿ ಮಾಡುವ ಧಾವಂತದಲ್ಲಿದ್ದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೊರೊನಾ ಸೋಂಕಿನಲ್ಲಿ ಕರ್ನಾಟಕವನ್ನು ದೇಶದ ನಂಬರ್ ಒನ್ ಮಾಡುವ ಉತ್ಸಾಹದಲ್ಲಿದ್ದಾರೆ.ಈ ಇಬ್ಬರು ನಾಯಕರು ದೇಶಕ್ಕೆ ಮತ್ತು ರಾಜ್ಯಕ್ಕೆ ಕೊರೊನಾಕ್ಕಿಂತಲೂ ಅಪಾಯಕಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.

ಕೊರೊನಾ ಸೋಂಕಿನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ತಮ್ಮ ದುರಾಡಳಿತದ ಮೂಲಕ ಈ ಜೋಡಿ ದೇಶವನ್ನು ಮತ್ತು ರಾಜ್ಯವನ್ನು ಕೊರೊನಾ ಸೋಂಕಿನಲ್ಲಿ ಮೊದಲ ಸ್ಥಾನಕ್ಕೇರಿಸಲು ಪಣತೊಟ್ಟಂತಿದೆ.

ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕಿನ ಸರಾಸರಿ 10,000 ಪ್ರಕರಣಗಳು ದಾಖಲಾಗುತ್ತಿವೆ. ಸರಾಸರಿ 100 ಸಾವುಗಳಾಗುತ್ತಿವೆ. ಇಲ್ಲಿಯವರೆಗೆ 6.68 ಲಕ್ಷ ಜನರಿಗೆ ಕೊರೊನಾ ಸೋಂಕು ತಗಲಿದೆ. 1.16 ಲಕ್ಷಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,. ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೇ ಕೊರೊನಾ ಸೋಂಕು ಬಡಿದಂತಿದೆ.

ರಾಜ್ಯದಲ್ಲಿ ಕೊರೊನಾ ಉಲ್ಭಣಗೊಳ್ಳಲು ಜನರ ನಿರ್ಲಕ್ಷ್ಯ ಕಾರಣ ಎಂಬ ಅತಿಪ್ರಚಾರದ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಕೊರೊನಾ ನಿಯಂತ್ರಣದಲ್ಲಿನ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ತನ್ನ ಆಡಳಿತದ ವೈಫಲ್ಯದಿಂದಾಗಿ ಖಾಲಿಯಾಗಿರುವ ಖಜಾನೆ ತುಂಬಿಸಲು ಮದ್ಯದಂಗಡಿಯಿಂದ ಮಾಲ್ ವರೆಗೆ, ದೇವಸ್ಥಾನಗಳಿಂದ ಹೊಟೇಲ್ ಗಳ ವರೆಗೆ ಎಲ್ಲವನ್ನು ತೆರೆದಿಟ್ಟು ಜನರನ್ನು ಕೈಬೀಸಿ ಕರೆಯುತ್ತಿರುವ ರಾಜ್ಯ ಸರ್ಕಾರ ಕೊರೊನಾ ಉಲ್ಭಣಗೊಳ್ಳಲು ಜನತೆಯೇ ಕಾರಣ ಎಂದು ದೂಷಿಸುತ್ತಿರುವುದು ಜನತೆಗೆ ಬಗೆಯುತ್ತಿರುವ ದ್ರೋಹ.

ಕೊರೊನಾ ಸೋಂಕಿನಿಂದಾಗಿ ಸಾವು-ನೋವು ಹೆಚ್ಚಲು ಮುಖ್ಯ ಕಾರಣ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಲ್ಲಿನ ವೈಫಲ್ಯ. ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆ ಮೇಲೆ ನಂಬಿಕೆ ಇಲ್ಲ, ಖಾಸಗಿ ಆಸ್ಪತ್ರೆಗೆ ಹೋಗಲು ಕೈಯಲ್ಲಿ ದುಡ್ಡಿಲ್ಲ. ಇದರಿಂದಾಗಿ ಪರೀಕ್ಷೆ ಮಾಡಿಕೊಳ್ಳದೆ, ಸರಿಯಾದ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸುತ್ತಿದ್ದಾರೆ.

ಕೊರೊನಾ ಸೋಂಕು ರಾಜ್ಯದಲ್ಲಿ ಉಲ್ಭಣಗೊಳ್ಳಲು ರಾಜ್ಯ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವೇ ಕಾರಣ. ಕೊರೊನಾ ಸೋಂಕನ್ನು ಜನರ ಸೇವೆ ಮಾಡಲು ಅವಕಾಶ ಎಂದು ಭಾವಿಸದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ, ಇದು ದುಡ್ಡು ಮಾಡಲು ಒದಗಿಬಂದ ಸುವರ್ಣಾವಕಾಶ ಎಂದು ತಿಳಿದದ್ದೇ ಇಂದಿನ ದುಸ್ಥಿತಿಗೆ ಕಾರಣ.

ಮೊದಲ ದಿನದಿಂದಲೇ ತಪ್ಪು ನೀತಿಗಳು, ಅನಿಶ್ಚಿತ ನಿರ್ಧಾರಗಳು, ತಿದ್ದಿತಿರುಚಿದ ಅಂಕಿಅಂಶಗಳು, ಮುಖ್ಯಮಂತ್ರಿಗಳು ಮತ್ತು ಸಚಿವರ ನಿಷ್ಕ್ರಿಯತೆ ಮತ್ತು ಬ್ರಹ್ಮಾಂಡ ಭ್ರಷ್ಟಾಚಾರವೇ ಕರ್ನಾಟಕದ ಇಂದಿನ ದುಸ್ಥಿತಿಗೆ ಕಾರಣ. ಲಾಕ್ ಡೌನ್ ಹೇರಿಕೆಯಿಂದ ಇಲ್ಲಿಯ ವರೆಗೆ ರಾಜ್ಯ ಸರ್ಕಾರಕ್ಕೆ ಕೊರೊನಾ ನಿಯಂತ್ರಣದ ಬಗ್ಗೆ ಸ್ಪಷ್ಟತೆ ಇಲ್ಲ. ಅಜ್ಞಾನ, ಸುಳ್ಳು ಮತ್ತು ಮತ್ತು ಭ್ರಷ್ಟಾಚಾರ ಕೊರೊನಾಕ್ಕಿಂತಲೂ ಅಪಾಯಕಾರಿ.

ಯಾವ ಖಾಸಗಿ ಆಸ್ಪತ್ರೆಗಳು ಕೂಡಾ ಸರ್ಕಾರ ನಿಗದಿಪಡಿಸಿರುವಷ್ಟು ಹಾಸಿಗೆಗಳನ್ನು ನೀಡುತ್ತಿಲ್ಲ, ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ವೆಚ್ಚದ ಮಿತಿಯನ್ನು ಪಾಲಿಸುತ್ತಿಲ್ಲ. ಸಚಿವರ ಹೇಳಿಕೆಗಳು ಮಾಧ್ಯಮಗಳಿಗಷ್ಟೇ ಸೀಮಿತ. ಖಾಸಗಿ ಆಸ್ಪತ್ರೆಗಳ ಧಣಿಗಳ ಋಣಕ್ಕೆ ಬಿದ್ದಿರುವ ಸರ್ಕಾರಕ್ಕೆ ಅವರನ್ನು ನಿಯಂತ್ರಿಸುವ ಶಕ್ತಿಯೂ ಇಲ್ಲ. ಒಳಗಿಂದೊಳಗೆ ಎಲ್ಲರೂ ಷಾಮೀಲಾಗಿದ್ದಾರೆ.

ರಾಜ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯ 303 ಕೊರೊನಾ ಸೋಂಕಿತರು ಸೇರಿದಂತೆ 841 ಸೋಂಕಿತರು ವೆಂಟಿಲೇಟರ್ ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದರೆ, ತನ್ನ ವ್ಯಾಪ್ತಿಯಲ್ಲಿಯೇ 957 ಸೋಂಕಿತರು ವೆಂಟಿಲೇಟರ್ ನಲ್ಲಿದ್ದಾರೆ ಎಂದು ಬಿಬಿಎಂಪಿ ಹೇಳುತ್ತಿದೆ. ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಸುಳ್ಳಿನ ಮೊರೆ ಹೋಗುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?

ಕಳೆದ ಆರು ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳೇನು ಎಂಬುದನ್ನು ಸತ್ಯನಿಷ್ಠವಾಗಿ ಜನತೆಯ ಮುಂದಿಡುವ ಧೈರ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇದೆಯೇ?ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗೆ ಸಾಮರ್ಥ್ಯ ಹೆಚ್ಚಿಸಿದ್ದೀರಿ? ಹೊಸದಾಗಿ ಎಷ್ಟು ಆಮ್ಲಜನಕ ಪೂರೈಕೆಯ ಹಾಸಿಗೆಗಳನ್ನು ಮಾಡಿದ್ದೀರಿ? ಹೊಸದಾಗಿ ಖರೀದಿಸಿದ ವೆಂಟಿಲೇಟರ್ ಗಳೆಷ್ಟು? ಎನ್ನುವುದನ್ನು ತಿಳಿಸುವಿರಾ ಮುಖ್ಯಮಂತ್ರಿಗಳೇ? ಎಂದು ಪ್ರಶ್ನೆ ಮಾಡಿದ್ಧಾರೆ

 

Please follow and like us:
error
error: Content is protected !!