ಕೊರಳೊಡ್ಡಿದವರನ್ನು ಕೇರಳದ ವೈನಾಡ್ ನಾಜರ್ ಕಂಡದ್ದು

ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತದೆ. ಆ ಯುವತಿಯರು ಭಗವಂತನ ದಾಸಿಯರಾದ್ದರಿಂದ ದೇವಾಲಯವನ್ನು ಶುದ್ಧಗೊಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ, ನರ್ತನ, ನೃತ್ಯ ಮುಂತಾದ ನಿಶ್ಚಿತ ಕಾರ್ಯಗಳನ್ನು ಮಾಡುವುದರ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ದೇವರನ್ನು ಜೀವಂತ ವ್ಯಕ್ತಿಯೆಂದು ಭಾವಿಸಿ ವೈಭವದಲ್ಲಿ ಬಾಳುವ ಒಬ್ಬ ವ್ಯಕ್ತಿಯ ಎಲ್ಲ ಭೋಗಗಳನ್ನೂ ದೇವರಿಗೆ ಅರ್ಪಿಸುವ ಸಂಪ್ರದಾಯ ದೇವದಾಸಿ ಪದ್ಧತಿಯ ಮೂಲವಾಗಿರಬಹುದು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಉಲ್ಲೇಖವಾಗಿವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪು? ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಸಂಶೋಧಕರಾದ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾರಂಭ ಕಾಲದಲ್ಲಿ ರಂಗಭೋಗದ ಅಂಗವಾಗಿ ಸ್ತ್ರೀಯರೊಡನೆ ಪುರು?ರೂ ನರ್ತಿಸುತ್ತಿದ್ದರೆಂದು ತಿಳಿದುಬರುತ್ತದೆ. ಪುರು?ರೂ ದೇವರಿಗೆ ದಾಸರಾಗುವ ಸಂಪ್ರದಾಯ ಇಂದಿಗೂ ಬೆಳಗಾವಿಯ ಸೌದತ್ತಿಯ ಎಲ್ಲಮ್ಮನಗುಡ್ಡದ ದೇವಸ್ಥಾನದಲ್ಲಿ ಕಂಡುಬರುತ್ತದೆ. ಎಲ್ಲಮ್ಮನ ದೇವದಾಸಿಯರನ್ನು ದೇವರಿಗಾಗಿ ಅರ್ಪಿಸಿದ ಬಸವಿ, ಜೋಗಿತಿ, ಜೋಗತಿ, ಜೋಗಮ್ಮ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಜೊತೆಗೆ ಅವರಿಗೆ ಕೆಲವು ಕಡೆ ‘ಸೂಳೆ’ ಎಂಬ ಪದವನ್ನು ಸಹ ಬಳಕೆ ಮಾಡಿದರೆ ಇನ್ನೂ ಕೆಲವು ಕಡೆ ‘ಮುತ್ತು ಕಟ್ಟುವುದು’ ಎಂತಲೂ ಕರೆಯಲಾಗುತ್ತದೆ.
ಈ ದೇವದಾಸಿ ಪದ್ಧತಿಯು ಸಮಾಜದಲ್ಲಿ ಕೆಟ್ಟ ಸಂಪ್ರದಾಯವಾಗಿ ಪರಿಣಮಿಸಿದೆ. ಸ್ತ್ರೀಯರಿಗೆ ನೀಡುತ್ತಿರುವ ಅತ್ಯಂತ ಕಠೋರವಾದ ಕಿರುಕುಳಗಳಲ್ಲಿ ಈ ಪದ್ಧತಿಯೂ ಒಂದು. ಪ್ರಾಚೀನ ಕಾಲದಿಂದಲೂ ಈ ಪದ್ಧತಿಯು ಮುಂದುವರೆದುಕೊಂಡು ಬಂದು ಇಂದಿಗೂ ಕೆಲ ಭಾಗಗಳಲ್ಲಿ ಚಾಲ್ತಿಯಲ್ಲಿರುವುದು ದುರಂತವೇ ಸರಿ. ಈ ಅನಿಷ್ಠ ಪದ್ಧತಿಯ ವಿರುದ್ಧ ಅನೇಕ ಪ್ರಗತಿಪರ ಹೋರಾಟಗಾರರು ಹೋರಾಡುತ್ತಾ ಬಂದಿದ್ದಾರೆ. ಸರಕಾರಗಳು ಈ ಅನಿಷ್ಠ ಪದ್ಧತಿಯನ್ನು ತಡೆಗಟ್ಟುವುದಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.
ಇಂತಹ ಅನಿಷ್ಠ ಪದ್ಧತಿಯಾದ ದೇವದಾಸಿ ಪದ್ದತಿಯ ಮಜಲುಗಳನ್ನು ಕುರಿತು ಅನೇಕ ಸಾಹಿತಿಗಳು ಕೃತಿಗಳನ್ನು ರಚಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಹಲವು ಹೋರಾಟಗಾರರು ಈ ಪದ್ದತಿಯ ವಿರುದ್ದ ಹಲವಾರು ಚಳುವಳಿ, ಪ್ರತಿಭಟನೆ ಮುಂತಾದವುಗಳ ಮೂಲಕ ಈ ಅನಿಷ್ಠ ಪದ್ದತಿಯ ವಿರುದ್ಧ ಹೋರಾಟ ನಡೆಸಿದ್ದಾರೆ. ಅಂತಹ ಅನೇಕ ಹೋರಾಟಗಾರರು ಕನ್ನಡ ನಾಡಿನಲ್ಲಿ ಕಾಣಸಿಗುತ್ತಾರೆ. ಅಂತಹ ಪ್ರಮುಖರ ಸಾಲಿನಲ್ಲಿ ಶ್ರೀಯುತ ನಾಜರ್ ಪಿ.ಎಸ್.ರವರು ನಿಲ್ಲುತ್ತಾರೆ.
ನಾಜರ್‌ರವರು ಮೂಲತಃ ಕೇರಳದ ವೈನಾಡ್ ಜಿಲ್ಲೆಯ ಪಾಡಿಚ್ಚಿರ ಗ್ರಾಮದವರು. ಶ್ರೀಮತಿ ಆಯಿಷಾ ಮತ್ತು ಸೈನುದ್ದೀನ್ ದಂಪತಿಗಳ ಮಗನಾಗಿ ೧೯೭೩ರಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದಾರೆ. ಪದವಿ ಶಿಕ್ಷಣದ ನಂತರ ಶಿಕ್ಷಣಕ್ಕೆ ವಿದಾಯ ಹೇಳಿ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ನಾಜರ್ ಪಿ.ಎಸ್‌ರವರ ಮಾತೃ ಭಾಷೆ ಮಲೆಯಾಳಂ. ಮಲೆಯಾಳಂ ಭಾಷೆಯಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಇವರು ಇಸ್ಲಾಂ ಧರ್ಮೀಯರು. ಆದರೂ ನಾಜರ್ ಪಿ.ಎಸ್.ರವರು ಕರ್ನಾಟಕಕ್ಕೆ ಬಂದು ಕನ್ನಡ ಭಾಷೆ ಮಾತನಾಡುವುದಷ್ಟೇ ಅಲ್ಲದೇ ಓದುವುದು, ಬರೆಯುವುದು ಕಲಿತಿರುವುದು ಅವರಿಗೆ ಕನ್ನಡ ಭಾಷೆಯ ಮೇಲೆ ಇರುವ ಅಭಿಮಾನವನ್ನು ತೋರುತ್ತದೆ. ಅಭಿಮಾನದ ಜೊತೆಗೆ ಕನ್ನಡ ಸಾಹಿತ್ಯದ ಅಧ್ಯಯನ ಹಾಗೂ ಕನ್ನಡದಲ್ಲಿ ಕೃತಿ ರಚನೆ ಮಾಡಿರುವುದು ಸಾಮಾನ್ಯ ಸಂಗತಿಯೆನಲ್ಲ. ಎರಡು ಕೃತಿಗಳನ್ನು ಕನ್ನಡ ಭಾಷೆಯಲ್ಲಿಯೇ ರಚಿಸಿ ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿರುವುದು ಹೆಮ್ಮೆಯ ಸಂಗತಿ.
ನಾಜರ್ ಪಿ.ಎಸ್.ರವರು ೨೦೧೭ರಲ್ಲಿ ‘ಒಳ ಮನಸ್ಸಿನ ಕೂಗು’ ಎಂಬ ಕವನ ಸಂಕಲನವನ್ನು ಪ್ರಥಮ ಕಾಣಿಕೆಯಾಗಿ ಕನ್ನಡಕ್ಕೆ ನೀಡಿದ್ದಾರೆ. ಹಲವಾರು ವಿಷಯಗಳ ಕುರಿತು ಸುಂದರ ಕವನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮಕ್ಕಳ ಪ್ರೀತಿ, ನಿಸರ್ಗ ಮತ್ತು ಮನುಷ್ಯ ಸಂಬಂಧಗಳು ಈ ಕೃತಿಯಲ್ಲಿ ಕಾಣಸಿಗುತ್ತವೆ. ವಿಶೇಷವಾಗಿ ತಮ್ಮ ಅನುಭವಗಳನ್ನೂ ಸಹ ಕವನಗಳ ಮೂಲಕ ಓದುಗರ ಮುಂದಿಟ್ಟಿದ್ದಾರೆ.
ಅದೇ ರೀತಿ ೨೦೧೯ರಲ್ಲಿ ‘ಕೊರಳೊಡ್ಡಿದವರು ನಾ ಕಂಡದ್ದು ನನಗೆ ತಿಳಿದಿದ್ದು’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ದೇವದಾಸಿಯ ಪದ್ಧತಿಯ ಕುರಿತು ಚರ್ಚಿಸಿದ್ದಾರೆ. ಈ ಕೃತಿಯು ಬರಿ ಕೃತಿಯಾಗಿರದೇ ದೇವದಾಸಿ ಪದ್ಧತಿಯ ಕರಾಳ ಮುಖಗಳ ಕುರಿತು ಅನಾವರಣ ಮಾಡುವ ಸಂಶೋಧನಾ ಕೃತಿ ಎಂಬಂತೆ ನನಗೆ ಭಾಸವಾಗುತ್ತಿದೆ.
ನಾಜರ್ ಪಿ.ಎಸ್.ರವರು ೨೦೦೫ರಲ್ಲಿ ಬೆಂಗಳೂರಿಗೆ ಬಂದು ದೇವದಾಸಿಯರ ಮಕ್ಕಳ ಪುನರ್ವಸತಿ ಕೇಂದ್ರ ವಿಸ್ತಾರ್ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ೨೦೦೮ರಿಂದ ಕೊಪ್ಪಳ ಜಿಲ್ಲೆಯ ಕಿನ್ನಾಳದ ಹತ್ತಿರ ಇರುವ ಬಾಂಧವಿ ಪುನರ್ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
೨೦೦೫ರಿಂದ ಇಲ್ಲಿಯವರೆಗೆ ಸುಮಾರು ೧೫ ವರ್ಷಗಳ ಕಾಲ ದೇವದಾಸಿ ಮತ್ತು ಅವರ ಮಕ್ಕಳ ಒಡನಾಟದಲ್ಲಿ ಇದ್ದವರು. ಈ ಅನಿಷ್ಠ ಪದ್ಧತಿಯಿಂದ ಆ ತಾಯಂದಿರು ಮತ್ತು ಅವರ ಮಕ್ಕಳು ಅನುಭವಿಸಿದ ಅವಮಾನ, ನೋವು, ವೇದನೆಗಳನ್ನು ತೀರಾ ಹತ್ತಿರದಿಂದ ಕಂಡವರು. ಅಂತಹ ಅನುಭವಗಳನ್ನು ‘ಕೊರಳೊಡ್ಡಿದವರು ನಾ ಕಂಡದ್ದು ನನಗೆ ತಿಳಿದಿದ್ದು’ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ.
ಈ ದೇವದಾಸಿ ಪದ್ಧತಿಗೆ ಸಂಬಂಧಿಸಿದಂತೆ ಹಲವಾರು ಪುರಾಣ ಕಥೆಗಳು ಒಂದೊಂದು ರೀತಿಯ ಕಥೆಗಳನ್ನು ಹೇಳುತ್ತವೆ. ಅದರಲ್ಲಿ ಬಹಳ ಪ್ರಮುಖವಾಗಿ ರೇಣುಕಾ ದೇವಿಯ ಪುರಾಣದಲ್ಲಿ ಅದರ ಉಲ್ಲೇಖವಿದೆ. ರೇಣುಕಾ ದೇವಿಯು ತಪ್ಪು ಮಾಡಿದಾಗ ಅವಳ ರುಂಡವನ್ನು ಕಡಿಯಲು ಗಂಡ ಜಮದಗ್ನಿ ಮುನಿಯು ಮಗ ಪರಶುರಾಮನಿಗೆ ಆದೇಶ ನೀಡುತ್ತಾನೆ. ಅದರಂತೆ ಮಗ ಪರಶುರಾಮ ತಾಯಿಯ ತಲೆ ಕಡಿದು ಪುನಃ ತಂದೆಗೆ ತನ್ನ ತಾಯಿಯನ್ನು ಬದುಕಿಸಲು ವಿಜ್ಞಾಪಿಸಿಕೊಳ್ಳುತ್ತಾನೆ. ಅದರಂತೆ ತಾಯಿ ರೇಣುಕಾಳ ದೇಹ ಮತ್ತು ಎಲ್ಲೋ ಬಿದ್ದಿರುವ ಎಲ್ಲಮ್ಮಳ ತಲೆಯನ್ನು ಜೋಡಿಸಿ ರೇಣುಕಾ-ಯಲ್ಲಮ್ಮ ದೈವ ಸ್ವರೂಪವಾಗಿ ಪಡೆದುಕೊಂಡಿತು ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ರೇಣುಕಾಯಲ್ಲಮ್ಮಳ ಆರಾಧಕರೆ ಮುಂದೆ ದೇವದಾಸಿ ಪದ್ಧತಿಯನ್ನು ಪ್ರಾರಂಭಿಸಿದರು ಎಂಬುವ ಬಗ್ಗೆ ಈ ಕೃತಿಯಲ್ಲಿ ಉಲ್ಲೇಖವಿದೆ.
ಈ ಕೃತಿಯು ಕೇವಲ ಪುರಾಣಗಳಲ್ಲಷ್ಟೇ ದೇವದಾಸಿ ಪದ್ಧತಿ ಬಗ್ಗೆ ಉಲ್ಲೇಖಿಸಿಲ್ಲ. ಚರಿತ್ರೆಯಲ್ಲಿಯೂ ಸಹ ದೇವದಾಸಿ ಪದ್ಧತಿಯ ಕುರುಹುಗಳು ಇರುವುದನ್ನು ಈ ಕೃತಿಯು ವಿವರಿಸುತ್ತದೆ. ಹಂಪಿ, ಬೇಲೂರು, ಹಳೆಬಿಡು ಮುಂತಾದ ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯಗಳಲ್ಲಿ ಭಾಗವಹಿಸಿದ ದೇವದಾಸಿಯರ ಚಿತ್ರಗಳಿರುವುದು ಕಂಡುಬರುತ್ತದೆ. ಇದರ ಜೊತೆಗೆ ಕಾಳಿದಾಸರ ಮೇಘದೂತ ಕೃತಿಯಲ್ಲಿ ದೇವಸ್ಥಾನಗಳಲ್ಲಿ ನೃತ್ಯ ಮಾಡುವ ದೇವದಾಸಿಯರನ್ನು ಉಲ್ಲೇಖಿಸಿರುವುದು ಈ ಕೃತಿಯಲ್ಲಿ ಕಾಣಬಹುದಾಗಿದೆ. ದೇವಸ್ಥಾನಗಳಲ್ಲಿ ಪೂಜಿಸುವ ಪೂಜಾರಿಗಳನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿ ದೇವದಾಸಿಯರು ಇರುತ್ತಿದ್ದರೆಂಬ ಬಗ್ಗೆ ಉಲ್ಲೇಖಗಳಿವೆ. ತಂಜಾವೂರು ಮತ್ತು ತಿರುವನಂತಪುರದಲ್ಲಿ ದೇವದಾಸಿಗಳ ಸಂಖ್ಯೆ ನಾಲ್ಕೂನೂರಕ್ಕಿಂತಲೂ ಹೆಚ್ಚಾಗಿತ್ತೆಂದು ಉಲ್ಲೇಖಿಸಲಾಗಿದೆ. ಅಂದರೆ ಪ್ರಾಚೀನ ಕಾಲದಲ್ಲಿ ದೇವದಾಸಿಯರ ಸಂಖ್ಯೆ ಅಷ್ಟು ಪ್ರಮಾಣದಲ್ಲಿ ಇದ್ದ ಬಗ್ಗೆ ತಿಳಿದು ಬರುತ್ತದೆ.
ಈ ದೇವದಾಸಿ ಪದ್ಧತಿಯು ಇಂದೂ ಸಹ ಮುಂದುವರೆದುಕೊಂಡು ಹೋಗಲು ಅನೇಕ ಕಾರಣಗಳಿವೆ. ಅದರಲ್ಲಿ ಬಹುತೇಕ ಕಾರಣಗಳನ್ನು ಈ ಕೃತಿ ಉಲ್ಲೇಖಿಸುತ್ತದೆ. ಬಡತನ, ಅಂಗವಿಕಲತೆ, ಅನಾರೋಗ್ಯ, ಹಿರಿಯರ ಒತ್ತಾಸೆಗಳು ಮುಂತಾದ ಕಾರಣಗಳಿಗಾಗಿ ಈ ದೇವದಾಸಿ ಪದ್ಧತಿಯು ಇಂದಿಗೂ ಸಹ ಮುಂದುವರೆದುಕೊಂಡು ಹೋಗುತ್ತಿರುವುದು ದುರಂತವೇ ಸರಿ ಎಂಬುದು ಕೃತಿಯಲ್ಲಿದೆ.
ಈ ಅನಿಷ್ಟ ಪದ್ಧತಿಯ ವಿನಾಶಕ್ಕಾಗಿ ಅನೇಕ ಮಹನೀಯರು ಹೋರಾಟ ಮಾಡುತ್ತಾ ಬಂದಿದ್ದಾರೆ. ಈ ಪದ್ಧತಿ ನಿಷೇಧಕ್ಕಾಗಿ ಬಾಂಬೆ ಸರಕಾರ ಮತ್ತು ಮದ್ರಾಸ ಸರಕಾರಗಳು ನಿಷೇಧಿಸಿದ ಕಾನೂನುಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ಅನಿಷ್ಠ ಪದ್ಧತಿಯನ್ನು ನಿರ್ಮೂಲನೆ ಮಾಡುವುದಕ್ಕಾಗಿ ಸರಕಾರ ಕೈಗೊಂಡ ಅನೇಕ ಯೋಜನೆಗಳನ್ನು ಈ ಕೃತಿಯು ತಿಳಿಹೇಳುತ್ತದೆ.
ಬಹಳ ಪ್ರಮುಖವಾಗಿ ಈ ಕೃತಿಯು ವಿಶಿಷ್ಠತೆ ಪಡೆದುಕೊಂಡಿದ್ದು ದೇವದಾಸಿಯರ ಮಕ್ಕಳ ಅನುಭವಗಳನ್ನು ಈ ಕೃತಿಯ ಕೊನೆಯಲ್ಲಿ ಕ್ರೂಢೀಕರಿಸಲಾಗಿರುವುದು. ಅವರು ಅನುಭವಿಸಿದ ನೋವು, ಯಾತನೆಗಳನ್ನು ಇಲ್ಲಿ ಅನಾವರಣ ಮಾಡಲಾಗಿದೆ. ಜೊತೆಗೆ ಆ ಮಕ್ಕಳು ಏನೇ ನೋವು, ಹಿಂಸೆ ಅವಮಾನಗಳನ್ನು ಅನುಭವಿಸಿದರೂ ಅವುಗಳ ಮಧ್ಯೆಯೇ ಎದ್ದು ಬಂದು ಸಾಧನೆ ಮಾಡಿದ ಸಾಧಕರ ಅನುಭವಗಳು ಇಲ್ಲಿವೆ. ಈ ಮಕ್ಕಳ ಸಾಧನೆಗಳು ಸಮಾಜಕ್ಕೆ ಸ್ಪೂರ್ತಿಯಾಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.
ಪ್ರಾಚೀನ ಕಾಲದಿಂದಲೂ ದೇವದಾಸಿ ಎಂಬ ಅನಿಷ್ಠ ಪದ್ದತಿ ಮುಂದುವರೆದುಕೊಂಡು ಬಂದು ಇಂದಿಗೂ ಸಹ ಮಹಿಳೆಯರನ್ನು ಅವಮಾನಿತರನ್ನಾಗಿ ಮಾಡುತ್ತಿದೆ. ಇಂತಹ ಸಮಾಜದಲ್ಲಿದ್ದುಕೊಂಡು ನಾಜರ್‌ರವರು ತಮ್ಮ ಕೃತಿಯ ಮೂಲಕ ತಿಳಿಹೇಳುವ ಚಿಕ್ಕ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್

Please follow and like us:
error