ಕೊಪ್ಪಳ ಜಿಲ್ಲೆಯಾದ್ಯಂತ ಅಚ್ಚುಕಟ್ಟಾಗಿ ನಡೆದ ಮತ ಎಣಿಕೆ ಕಾರ್ಯ

ಮೊದಲ ಹಾಗೂ ಎರಡನೇ ಹಂತದ ಗ್ರಾ.ಪಂ. ಚುನಾವಣೆ ಮತ ಎಣಿಕೆ ಮುಕ್ತಾಯ
 
ಕೊಪ್ಪಳ : ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020 ನಿಮಿತ್ತ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮೊದಲ ಹಾಗೂ ಎರಡನೇ ಹಂತದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು (ಡಿ.30) ಜಿಲ್ಲೆಯ ಏಳು ತಾಲ್ಲೂಕು ಕೇಂದ್ರಗಳಲ್ಲಿ ಅಚ್ಚುಕಟ್ಟಾಗಿ ನಡೆಯಿತು.
ಜಿಲ್ಲೆಯ ಕೊಪ್ಪಳ, ಯಲಬುರ್ಗಾ, ಕುಕನೂರು, ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕುಷ್ಟಗಿ ಸೇರಿ ಏಳೂ ತಾಲ್ಲೂಕುಗಳ ಒಟ್ಟು 153 ಗ್ರಾಮ ಪಂಚಾಯತಿಗಳ ಪೈಕಿ 149 ಗ್ರಾಮ ಪಂಚಾಯತಿಗಳ 1004 ಮತ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ಘೋಷಣೆಯಾಗಿತ್ತು.  ಮೊದಲ ಹಂತದಲ್ಲಿ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕುಗಳ  73 ಗ್ರಾಮ ಪಂಚಾಯಿತಿಗಳಲ್ಲಿನ ಒಟ್ಟು 1,321 ಸ್ಥಾನಗಳಲ್ಲಿ 109 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 1,212 ಸ್ಥಾನಗಳಿಗೆ ಡಿಸೆಂಬರ್. 22 ರಂದು ನಡೆದ ಚುನಾವಣೆಯಲ್ಲಿ ಅಂತಿಮವಾಗಿ 3,341 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಈ ಪೈಕಿ 1,212 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.


ಎರಡನೇ ಹಂತದಲ್ಲಿ ಜಿಲ್ಲೆಯ ಗಂಗಾವತಿ, ಕಾರಟಗಿ, ಕನಕಗಿರಿ ಹಾಗೂ ಕುಷ್ಟಗಿ ತಾಲ್ಲೂಕುಗಳಲ್ಲಿನ 76 ಗ್ರಾಮ ಪಂಚಾಯಿತಿಗಳಲ್ಲಿನ 1,375 ಸ್ಥಾನಗಳಲ್ಲಿ 169 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 1,206 ಸ್ಥಾನಗಳಿಗೆ ಡಿಸೆಂಬರ್. 27 ರಂದು ನಡೆದ ಚುನಾವಣೆಯಲ್ಲಿ ಅಂತಿಮವಾಗಿ 3,095 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.  ಈ ಪೈಕಿ 1,206 ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಮತ ಎಣಿಕೆ ಕಾರ್ಯ;
    ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020ರ ಹಿನ್ನೆಲೆ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾ.ಪಂ. ಚುನಾವಣೆಯ ಮತ ಎಣಿಕೆಯು ನಗರದ ಗವಿಸಿದ್ಧೇಶ್ವರ ಪ್ರೌಢ ಶಾಲೆಯಲ್ಲಿ ನಡೆಯಿತು.  ಯಲಬುರ್ಗಾ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಕನೂರು ತಾಲ್ಲೂಕಿನ ವಿದ್ಯಾನಂದ ಗುರುಕುಲ ಶಿಕ್ಷಣ ಸಂಸ್ಥೆ, ಗಂಗಾವತಿ ತಾಲ್ಲೂಕಿನ ಲಯನ್ಸ್ ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗ, ಕಾರಟಗಿ ತಾಲ್ಲೂಕಿನ ಸಿ.ಮಲ್ಲಿಕಾರ್ಜುನ ನಾಗಪ್ಪ ಸಂಯುಕ್ತ ಪದವಿ ಪೂರ್ವ ಹಾಗೂ ಕಲಾ ಮಹಾವಿದ್ಯಾಲಯ, ಕನಕಗಿರಿ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆ (ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ), ಕುಷ್ಟಗಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಬೆಳಿಗ್ಗೆ 08 ಗಂಟೆಗೆ ಪ್ರಾರಂಭವಾಯಿತು.  ಜಿಲ್ಲೆಯ 149 ಗ್ರಾಮ ಪಂಚಾಯತಿಗಳಲ್ಲಿ 1004 ಮತ ಕ್ಷೇತ್ರಗಳಿದ್ದು, ಏಳು ತಾಲ್ಲೂಕುಗಳಲ್ಲಿನ ಮತ ಎಣಿಕಾ ಕೇಂದ್ರಗಳ 82 ಕೊಠಡಿಗಳಲ್ಲಿ ಮತ ಎಣಿಕಾ ಕಾರ್ಯ ಜರುಗಿದ್ದು, ಇದಕ್ಕಾಗಿ 478 ಮತ ಎಣಿಕೆ ಮೇಜುಗಳನ್ನು ಬಳಕೆ ಮಾಡಲಾಗಿದೆ.  ಮತ ಎಣಿಕೆ ಕಾರ್ಯಕ್ಕೆ 478 ಮೇಲ್ವಿಚಾರಕರು, 954 ಸಹಾಯಕ ಸಿಬ್ಬಂದಿಗಳು ಹಾಗೂ 27 ಕಾಯ್ದಿರಿಸಿದ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು, ಎಲ್ಲವೂ ಸೇರಿ ಒಟ್ಟು 1458 ಸಿಬ್ಬಂದಿ ಮತ ಎಣಿಕೆ ಕಾರ್ಯವನ್ನು ನಿರ್ವಹಿಸಿದ್ದಾರೆ.
ಮತ ಎಣಿಕಾ ಕಾರ್ಯವು ನಿಗದಿತ ಸಮಯಕ್ಕೆ ಅಂದರೆ ಬೆಳಿಗ್ಗೆ 08 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.  ಜಿಲ್ಲೆಯ ಆಯಾ ತಾಲೂಕುಗಳ ಮತ ಎಣಿಕಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು.  ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳು ಮತ ಎಣಿಕಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ.  ಸಾರ್ವಜನಿಕರಿಗೆ ಮತ ಎಣಿಕೆಯ ಎಲ್ಲಾ ಹಂತದ ಮಾಹಿತಿಯನ್ನು ಸಹ ಧ್ವನಿವರ್ಧಕದ ಮೂಲಕ ತಲುಪಿಸಲಾಯಿತು.  ಚುನಾವಣಾ ಆಯೋಗವು ನೀಡಿರುವ ನಿರ್ದೇಶನಗಳನ್ನು ಅಚ್ಚುಕಟ್ಟಾಗಿ ಪಾಲಿಸಿ 2020ರ ಗ್ರಾಮ ಪಂಚಾಯತ್ ಚುನಾವಣೆ, ಮತ ಎಣಿಕೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

Please follow and like us:
error