ಕೊಪ್ಪಳದ ಡಾ. ಉದಯ ಶಂಕರ ಪುರಾಣಿಕ್‌ಗೆ ಪ್ರತಿಷ್ಠಿತ ಪ್ರಶಸ್ತಿ

ದಾವಣಗೆರೆಯ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ


ಕೊಪ್ಪಳ: ಗಣ್ಯಾತಿಗಣ್ಯರಿಗೆ ಸಂದಿರುವ ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಗೆ ಕೊಪ್ಪಳದ ಡಾ. ಉದಯ ಶಂಕರ ಪುರಾಣಿಕ್ ಭಾಜನರಾಗಿದ್ದಾರೆ.
ಹೈದರಾಬಾದ್ ಕರ್ನಾಟಕ ವಿಮೋಚನೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಾಹಿತಿ ದಿ. ಅನ್ನದಾನಯ್ಯ ಪುರಾಣಿಕ್ ಅವರ ಮಗನಾಗಿರುವ ಡಾ. ಉದಯ ಶಂಕರ ಪುರಾಣಿಕ್ ಅವರು ಕಳೆದ 30 ವರ್ಷಗಳಿಂದ ದೇಶ-ವಿದೇಶಗಳಲ್ಲಿ ಕನ್ನಡ ಬಳಕೆಯನ್ನು ಜನಪ್ರಿಯಗೊಳಿಸುವ ಹಲವಾರು ಯೋಜನೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಕಂಪ್ಯೂಟರ್ ತಂತ್ರಜ್ಞರಾಗಿರುವ ಡಾ. ಪುರಾಣಿಕ್ ಕನ್ನಡದ ಅಪರೂಪದ ಹಸ್ತಪ್ರತಿಗಳು, ತಾಳೆಗರಿಗಳಿಗೆ ಡಿಜಿಟಲ್ ರೂಪ ನೀಡಿರುವುದಲ್ಲದೇ ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಅಂತರ್ಜಾಲದಲ್ಲಿ ಕನ್ನಡದಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೆಲಸ ಮಾಡಿದ್ದಾರೆ. ಅವರ ಅಪಾರ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸದಸ್ಯರು ಹಾಗೂ ಮಾರ್ಗದರ್ಶಕರನ್ನಾಗಿ ನೇಮಕ ಮಾಡಲಾಗಿದೆ.

ಸಾಧಾರಣ ಮೂಲದಿಂದ ದೊಡ್ಡ ಉದ್ಯಮಿಯೂ, ದಾಸೋಹಿಯೂ ಆಗಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಶರಣ ದಿ. ಮಾಗನೂರು ಬಸಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಶಸ್ತಿಯನ್ನು ಈ ಸಲ ಡಾ. ಉದಯ ಶಂಕರ ಪುರಾಣಿಕ್ ಅವರಿಗೆ ಘೋಷಿಸಲಾಗಿದೆ. ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನಗಳು ಜಂಟಿಯಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿವೆ. ಈ ಮುಂಚೆ ಗೊ.ರು. ಚನ್ನಬಸಪ್ಪ, ರಂಜಾನ್ ದರ್ಗಾ, ಪಾಟೀಲ್ ಪುಟ್ಟಪ್ಪ, ಲೀಲಾವತಿ ಆರ್. ಪ್ರಸಾದ್, ಅರವಿಂದ ಜತ್ತಿ ಮುಂತಾದವರಿಗೆ ಪ್ರಶಸ್ತಿ ಸಂದಿದೆ.

ಇದೇ ಜನವರಿ 30ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ತರಳಬಾಳು ಪೀಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿ ಡಾ. ಶೇಖರಗೌಡ ಮಾಲಿಪಾಟೀಲ್ ಹಾಗೂ ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Please follow and like us:
error