ಹೊಸದಿಲ್ಲಿ : ನೂತನ ಕೃಷಿ ಕಾಯಿದೆಗಳ ಕುರಿತು ರೈತರಿಗೆ ಇರುವ ಯಾವುದೇ ಆಕ್ಷೇಪಗಳ ಕುರಿತು `ಕೈಮುಗಿದು’, ‘ತಲೆಬಾಗಿಸಿ’ ಚರ್ಚಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
“ಯಾರಿಗಾದರೂ ಏನಾದರೂ ಆಕ್ಷೇಪವಿದ್ದರೆ ನಾವು ತಲೆ ಬಗ್ಗಿಸಿ, ಕೈ ಮುಗಿದು ಅತ್ಯಂತ ವಿನಯದಿಂದ ನಿಮ್ಮ ಭಯಗಳನ್ನು ದೂರಗೊಳಿಸಲು ಸಿದ್ಧ,” ಎಂದು ಮಧ್ಯ ಪ್ರದೇಶದ ರೈತರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು. ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್ಪಿ ಅಂತ್ಯವಾಗಲಿದೆಯೆಂದು ಯಾರಾದರೂ ಹೇಳಿದ್ದರೆ ಅದೊಂದು ಅತ್ಯಂತ ದೊಡ್ಡ ಸುಳ್ಳು ಎಂದು ಪ್ರಧಾನಿ ಹೇಳಿದರು.
“ಈ ಕಾನೂನುಗಳನ್ನು ರಾತ್ರಿ ಬೆಳಗಾಗುವುದರೊಳಗೆ ಜಾರಿಗೆ ತರಲಾಗಿಲ್ಲ. ಕಳೆದ 22 ವರ್ಷಗಳಲ್ಲಿ ಪ್ರತಿಯೊಂದು ಸರಕಾರ ಹಾಗೂ ರಾಜ್ಯ ಈ ಕುರಿತು ವಿಸ್ತೃತವಾಗಿ ಚರ್ಚಿಸಿದೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಿಕ ತಜ್ಞರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರು ಸುಧಾರಣೆಗೆ ಬೇಡಿಕೆಯಿಟ್ಟಿದ್ದಾರೆ. ಇಂದು ಈ ಕಾನೂನುಗಳನ್ನು ವಿರೋಧಿಸುತ್ತಿರುವ ಪಕ್ಷಗಳು ಈ ಸುಧಾರಣೆಗಳ ಕುರಿತಾದ ಭರವಸೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ನೀಡಿವೆ” ಎಂದು ರೈತರ ಪ್ರತಿಭಟನೆಗಳ ಕುರಿತು ಮೋದಿ ಹೇಳಿದರು.
“ಅನ್ನದಾತರ ಬಗ್ಗೆ ಯಾವುದೇ ಕಾಳಜಿ ಇಲ್ಲದವರನ್ನು ಇಂದು ನನಗೆ ಬಯಲುಗೊಳಿಸಬೇಕಿದೆ. ಕೃಷಿ ಕಾನೂನಿನ ಹೆಸರಿನಲ್ಲಿ ದಾರಿ ತಪ್ಪಿಸುವವರನ್ನೂ ಎಚ್ಚರಿಸಬಯಸುತ್ತೇನೆ,” ಎಂದು ಪ್ರಧಾನಿ ಹೇಳಿದರು