ಕೇಂದ್ರ ಸರಕಾರವನ್ನು ಟೀಕಿಸಲು ಜನರು ಹೆದರುತ್ತಿದ್ದಾರೆ: ಅಮಿತ್ ಶಾಗೆ ಉದ್ಯಮಿ ರಾಹುಲ್ ಬಜಾಜ್

ಹೊಸದಿಲ್ಲಿ, : ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಟೀಕಿಸಲು ಜನರು ಭಯಪಡುತ್ತಿದ್ದಾರೆ ಎಂದು ಖ್ಯಾತ ಉದ್ಯಮಿ ಮತ್ತು ಬಜಾಜ್ ಗ್ರೂಪ್ ನ ರಾಹುಲ್ ಬಜಾಜ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈಯಲ್ಲಿ ಇಕನಾಮಿಕ್ ಟೈಮ್ಸ್ ಆಯೋಜಿಸಿದ್ದ ‘ಇಟಿ’ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಹುಲ್ ಬಜಾಜ್ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ರನ್ನು ಉದ್ದೇಶಿಸಿ ಮಾತನಾಡಿದರು.

“ಯುಪಿಎ-2ರ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು. ನೀವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ. ಆದರೆ ನಾವು ನಿಮ್ಮನ್ನು ಬಹಿರಂಗವಾಗಿ ಟೀಕಿಸಲು ಮುಂದಾದರೆ, ನೀವು ಅದನ್ನು ಮೆಚ್ಚಬಹುದು ಎನ್ನುವ ಯಾವುದೇ ಭರವಸೆ ನಮಗಿಲ್ಲ. ನಾನು ಹೇಳಿದ್ದರಲ್ಲಿ ತಪ್ಪಿರಬಹುದು. ಆದರೆ ಎಲ್ಲರಿಗೂ ಹೀಗೆ ಅನಿಸುತ್ತಿದೆ. ಉದ್ಯಮ ರಂಗದ ಯಾರೊಬ್ಬರೂ ಈ ವಿಚಾರಗಳನ್ನೆತ್ತುವುದಿಲ್ಲ” ಎಂದವರು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಪ್ರಧಾನಿ ಮೋದಿಯವರು ‘ನಾನು ಆಕೆಯನ್ನು ಕ್ಷಮಿಸಲಾರೆ’ ಎಂದು ಹೇಳಿದ ನಂತರವೂ ಪ್ರಜ್ಞಾ ಸಿಂಗ್ ರನ್ನು ರಕ್ಷಣಾ ಸಮಿತಿಯ ಸದಸ್ಯೆಯನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದರು.

ಇದೇ ಸಂದರ್ಭ ಅವರು ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳ ಬಗ್ಗೆ  ಆತಂಕ ವ್ಯಕ್ತಪಡಿಸಿದರು. “ನಾವು ಕೆಲವೊಂದು ವಿಚಾರಗಳನ್ನು ಹೇಳಲು ಬಯಸುವುದಿಲ್ಲ. ಆದರೆ ಯಾರೊಬ್ಬರೂ ಶಿಕ್ಷೆಗೊಳಗಾಗಿರುವುದನ್ನು ಇದುವರೆಗೂ ನಾವು ನೋಡಿಲ್ಲ” ಎಂದು ರಾಹುಲ್ ಹೇಳಿದರು.

Please follow and like us:
error