ವಲಸೆ ಕಾರ್ಮಿಕರಿಗೆ ನೀಡುವುದಾಗಿ ಹೇಳಿದ್ದ ಆಹಾರ ಧಾನ್ಯ ನಿಜವಾಗಿಯೂ ತಲುಪಿದ್ದು ಎಷ್ಟು ಜನಕ್ಕೆ?

ಹೊಸದಿಲ್ಲಿ: ಕೇಂದ್ರ ಸರಕಾರ ಎಂಟು ಕೋಟಿ ವಲಸಿಗ ಕಾರ್ಮಿಕರಿಗೆ ಉಚಿತ ಧಾನ್ಯ ನೀಡುವುದಾಗಿ ಘೋಷಿಸಿತ್ತು. ಆದರೆ ವಾಸ್ತವವಾಗಿ ಮೇ-ಜೂನ್ ತಿಂಗಳಿನಲ್ಲಿ ಇಲ್ಲಿಯ ತನಕ ಕೇವಲ 20.26 ಲಕ್ಷ ವಲಸಿಗ ಕಾರ್ಮಿಕರಿಗೆ ಇದರ ಪ್ರಯೋಜನ ದೊರಕಿದೆ ಎಂದು ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶ ತಿಳಿಸಿದೆ.

ಮೋದಿ ಸರಕಾರದ 20 ಲಕ್ಷ ಕೋಟಿ ರೂ. ‘ಆತ್ಮ ನಿರ್ಭರ್ ಭಾರತ್’ ಪ್ಯಾಕೇಜ್ ಅಂಗವಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ  ಅಥವಾ ರಾಜ್ಯಗಳ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ಫಲಾನುಭವಿಗಳಲ್ಲದ ವಲಸಿಗ ಕಾರ್ಮಿಕರಿಗೆ ಎರಡು ತಿಂಗಳು ಉಚಿತ ಆಹಾರ ಧಾನ್ಯ ಒದಗಿಸುವುದಾಗಿ ತಿಳಿಸಿತ್ತು.

“ಕಾರ್ಡ್ ಹೊಂದಿಲ್ಲದೇ ಇರುವವರಿಗೆ ತಲಾ ವ್ಯಕ್ತಿಗೆ  5 ಕೆಜಿ ಗೋಧಿ ಹಾಗೂ ತಲಾ ಕುಟುಂಬಕ್ಕೆ ಒಂದು ಕೆಜಿ ಬೇಳೆ ಮುಂದಿನ ಎರಡು ತಿಂಗಳುಗಳಿಗೆ ನೀಡಲಾಗುವುದು. ಸುಮಾರು ಎಂಟು ಕೋಟಿ ವಲಸಿಗ ಕಾರ್ಮಿಕರಿಗೆ ಇದರಿಂದ ಪ್ರಯೋಜನವಾಗುವುದು ಹಾಗೂ ಸರಕಾರಕ್ಕೆ ಇದರಿಂದ ರೂ. 3,500 ಕೋಟಿ ವೆಚ್ಚ ತಗಲುವುದು” ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ಆದರೆ ಕೇಂದ್ರ ಸಚಿವಾಲಯ ರವಿವಾರ ಬಿಡುಗಡೆಗೊಳಿಸಿದ ಅಂಕಿಅಂಶದಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 4.42 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ಪಡೆದು ಅದರ ಪೈಕಿ 10,131 ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು 20.26 ಲಕ್ಷ ಫಲಾನುಭವಿಗಳಿಗೆ ವಿತರಿಸಿದೆ.

“ಸರಕಾರವು 1.96 ಕೋಟಿ ವಲಸಿಗ ಕುಟುಂಬಗಳಿಗೆ 39,000 ಮೆಟ್ರಿಕ್ ಟನ್ ಧಾನ್ಯಗಳ ವಿತರಣೆಗೆ ಅನುಮೋದನೆ ನೀಡಿದೆ. 28,306 ಮೆಟ್ರಿಟ್ ಟನ್  ಬೇಳೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಒಟ್ಟು  15,413 ಮೆಟ್ರಿಕ್ ಟನ್ ಧಾನ್ಯವನ್ನು  ರಾಜ್ಯಗಳು ಪಡೆದುಕೊಂಡಿವೆ” ಎಂದೂ ಸಚಿವಾಲಯ ಹೇಳಿದೆ.

Please follow and like us:
error