ಕೇಂದ್ರದ ನಾಯಕರು ಯಡಿಯೂರಪ್ಪರನ್ನು ಟಾರ್ಗೆಟ್ ಮಾಡಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್

ನೆರೆ ಪರಿಹಾರ ನೀಡದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ

ಬೆಂಗಳೂರು, ಅ.1: ಉತ್ತರ ಕರ್ನಾಟಕ ಭಾಗದಲ್ಲಿ ಸಂಭವಿಸಿದ ನೆರೆ ಹಾವಳಿಯಿಂದಾಗಿ ಸಂತ್ರಸ್ತರಾಗಿರುವವರಿಗೆ ಈವರೆಗೆ ಪರಿಹಾರವನ್ನು ಬಿಡುಗಡೆ ಮಾಡದೆ, ವಿಳಂಬ ಧೋರಣೆ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಗುರಿಯನ್ನಾಗಿಸಿಕೊಂಡಿದ್ದಾರೆ. ಆದುದರಿಂದಲೇ, ರಾಜ್ಯಕ್ಕೆ ನೆರೆ ಪರಿಹಾರಕ್ಕಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕಿಡಿಗಾರಿದರು.

ರಾಜ್ಯದಲ್ಲಿ ಈಗ ಯಾವುದೇ ಚುನಾವಣೆಗಳು ನಡೆಯುತ್ತಿಲ್ಲ. ರಾಜ್ಯದಿಂದ 25 ಮಂದಿ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಜನ ಕಳುಹಿಸಿದ್ದಾರೆ. ದಕ್ಷಿಣ ಭಾರತದ ಬೇರೆ ಯಾವುದೇ ರಾಜ್ಯದಲ್ಲಿ ಬಿಜೆಪಿಗೆ ಇಷ್ಟೊಂದು ಪ್ರಮಾಣದಲ್ಲಿ ಜನ ಬೆಂಬಲ ಸಿಕ್ಕಿಲ್ಲ. ಆದರೂ, ನಮ್ಮ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವುದೇಕೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.

ಇದೇ ರೀತಿಯ ಮನೋಭಾವನೆ ಮುಂದುವರೆಸಿದರೆ ಖಂಡಿತವಾಗಿಯೂ ಜನತೆ ತಕ್ಕ ಪಾಠ ಕಲಿಸುತ್ತಾರೆ. ಎಂತೆಂತಹವರನ್ನು ಜನ ಮನೆಗೆ ಕಳುಹಿಸಿದ್ದಾರೆ. ಅಂತಹದರಲ್ಲಿ ಇವರೆಲ್ಲ ಯಾವ ಲೆಕ್ಕ. ಇಂತಹವರನ್ನು ಅಧಿಕಾರದಿಂದ ಕೆಳಗಿಳಿಸುವುದು ನಾವಲ್ಲ, ಜನತೆ ಇಳಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಹಳ್ಳಿ ಹಳ್ಳಿಗಳಿಗೆ ತಿರುಗಿ, ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದು ನಾವು. ನಮ್ಮನ್ನು ಪ್ರಶ್ನಿಸುವ ಜನರಿಗೆ ನಾವೇ ಉತ್ತರ ಕೊಡಬೇಕು. ಇವತ್ತು ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನತೆ ಪರದಾಡುತ್ತಿದ್ದಾರೆ. ಅವರಿಗೆ ಪರಿಹಾರ ಒದಗಿಸಿಕೊಡಿ ಎಂದು ಕೇಳುವುದು ನಮ್ಮ ಕರ್ತವ್ಯ ಎಂದು ಯತ್ನಾಳ್ ಹೇಳಿದರು.

ಬಿಹಾರದ ನೆರೆ ಸಂತ್ರಸ್ತರ ಬಗ್ಗೆ ಟ್ವೀಟ್ ಮಾಡಿ ಸಾಂತ್ವನ ಹೇಳುತ್ತಾರೆ. ಆದರೆ, ನಮ್ಮ ರಾಜ್ಯದ ಜನರಿಗೆ ಪರಿಹಾರವೂ ಇಲ್ಲ, ಸಾಂತ್ವನವೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಜನರಿಗೆ ಏನು ಉತ್ತರ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವಿರುದ್ಧ ಜನತೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯ ಸರಕಾರವು ಕೇಂದ್ರದ ಬಳಿ ನಿಯೋಗ ಕೊಂಡೊಯ್ಯಬೇಕು. ಪ್ರಧಾನಿ ಬಳಿ ನಾವೇ ಮಾತನಾಡುತ್ತೇವೆ. ಈ ಹಿಂದೆ ನಾನು ಸಂಸದ, ಕೇಂದ್ರ ಸಚಿವನಾಗಿದ್ದೆ. ನನಗೂ ಇಂತಹ ವಿಚಾರಗಳಲ್ಲಿ ಸ್ವಲ್ಪ ಅನುಭವವಿದೆ. ಈಗಿರುವ ನಮ್ಮ ಸಂಸದರು ಈ ವಿಚಾರದಲ್ಲಿ ಮೌನ ವಹಿಸುವುದು ಬೇಡ ಎಂದು ಯತ್ನಾಳ್ ಸಲಹೆ ನೀಡಿದರು.

Please follow and like us:
error