fbpx

ಕೆ.ಆರ್.ಎಸ್. ಪಕ್ಷದಿಂದ ರಾಜ್ಯವ್ಯಾಪಿ ೨,೭೦೦ ಕಿ.ಮೀ. ಸೈಕಲ್ ಯಾತ್ರೆ

Koppal :  ಕರ್ನಾಟಕವು ಪ್ರಸ್ತುತ ಕೊರೋನಾ ವೈರಸ್‌ನಿಂದ ನಲುಗಿದಂತೆ, ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಸೊರಗಿದೆ. ಈ ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಮತ್ತು ಜನರ ಸಂಪತ್ತು ಲೂಟಿಯಾಗುತ್ತಿದೆ. ಕೊರೋನಾ ವೈರಸ್ ಸೋಂಕು ನಮ್ಮಲ್ಲಿನ ಅವ್ಯವಸ್ಥೆ ಮತ್ತು ಅಕ್ರಮಗಳನ್ನು ಹೊರ ಹಾಕಿದೆ, ಅದರಲ್ಲೂ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಗಳು ಯಾವ ಮಟ್ಟದಲ್ಲಿ ಅಧೋಗತಿ ತಲುಪಿದೆ ಎಂದು ತೋರಿಸಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷ ಚಲಿಸು ಕರ್ನಾಟಕ ಹೆಸರಿನಲ್ಲಿ ೨,೭೦೦ ಕಿ.ಮೀ. ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಹೇಳಿದರು.
ಪಕ್ಷದ ಕೊಪ್ಪಳ ಜಿಲ್ಲಾ ಘಟಕ ನಗರದ ಮಳೆಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ಏರ್ಪಡಿಸಿದ್ದ ಪಕ್ಷದ ಸಭೆಯಲ್ಲಿ ಪ.ಯ. ಗಣೇಶ ಮಾತನಾಡಿದರು.
ಒಂದೆಡೆ ನಿರಂತರವಾಗಿ ಅಕ್ರಮ ಮರಳು, ಕಲ್ಲು, ಅದಿರು ಗಣಿಗಾರಿಕೆ ನಡೆಯುತ್ತಿದ್ದರೆ, ಜನಸಾಮಾನ್ಯರು ಮರಳು ಸಿಗದೆ ಪರದಾಡುತ್ತಿದ್ದಾರೆ. ರೈತರು ಬರ-ನೆರೆಯಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಅದರ ಲಾಭವನ್ನು ಅಧಿಕಾರಿಗಳು ಮತ್ತು ಪಟ್ಟಭದ್ರರು ಪಡೆಯುತ್ತಿದ್ದಾರೆ. ಕಳೆದ ವರ್ಷದ ನೆರೆ ಪರಿಹಾರ ಬಹುತೇಕರಿಗೆ ಇಲ್ಲಿಯವರೆಗೂ ಸಿಕ್ಕಿಲ್ಲ. ಜನರು ತಮ್ಮ ಕೆಲಸಕ್ಕೆ ಸರ್ಕಾರಿ ಕಛೇರಿಗಳಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಕಾನೂನು ಮತ್ತು ಅನ್ಯಾಯಕ್ಕೊಳಗಾದ ಜನರನ್ನು ರಕ್ಷಿಸಬೇಕಾದ ಪೊಲೀಸರು ಜನರ ಶೋಷಣೆಗೆ ನಿಂತಿರುವಂತಿದೆ. ಈ ಎಲ್ಲಾ ಪರಿಸ್ಥಿತಿಗಳನ್ನು ಸುಧಾರಣೆಗೆ ತರಲು ಈ ಸೈಕಲ್ ಜಾಥಾ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ.ಯ. ಗಣೇಶ ತಿಳಿಸಿದರು.
ಸರ್ಕಾರದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕೋವಿಡ್-೧೯ ಸಂಕಷ್ಟದ ಸಮಯದಲ್ಲೂ ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಕೇವಲ ಅಧಿಕಾರಕ್ಕಾಗಿ ಮತ್ತು ಅದರಿಂದ ಹಣ ಮಾಡುವುದರ ಬಗ್ಗೆಯಷ್ಟೇ ಜೆ.ಸಿ.ಬಿ. ಪಕ್ಷಗಳ ಗಮನವಿದೆ. ಪ್ರತಿಯೊಂದರ ಮೇಲೂ ವಿಪರೀತ ತೆರಿಗೆ ಕಟ್ಟಬೇಕಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಛಾತೈಲದ ಬೆಲೆ ಕುಸಿದಿದ್ದರೂ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದರೂ, ಬೊಕ್ಕಸ ಮಾತ್ರ ಖಾಲಿ. ಕೋವಿಡ್‌ನಿಂದ ಜನರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಿದ್ದರೆ, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರೆ, ಉದ್ಯಮಗಳು, ವ್ಯಾಪಾರ-ವಹಿವಾಟು ಕುಂಠಿತವಾಗಿವೆ. ಈ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಸಂಚಾಲಕ ರವಿಕುಮಾರ ನಾಯ್ಕ ಆಪಾದಿಸಿದರು.
ಚಲಿಸು ಕರ್ನಾಟಕ ಸೈಕಲ್ ಯಾತ್ರೆಯು ಮೂರು ಹಂತಗಳಲ್ಲಿ ಇದೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಮೊದಲ ಹಂತದ ೧೫ ದಿನಗಳ ಯಾತ್ರೆಯು ಸೆಪ್ಟೆಂಬರ್ ೧೪, ೨೦೨೦ ರಂದು ಕೋಲಾರದಲ್ಲಿ ಆರಂಭವಾಗಿ ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ ಜಿಲ್ಲೆ), ದೇವನಹಳ್ಳಿ, ಹೊಸಕೋಟೆ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಸರ್ಜಾಪುರ, ಚಂದಾಪುರ ಮತ್ತು ಆನೇಕಲ್ (ಬೆಂಗಳೂರು ನಗರ ಜಿಲ್ಲೆ), ಹಾರೋಹಳ್ಳಿ, ರಾಮನಗರ ಮತ್ತು ಚನ್ನಪಟ್ಟಣ (ರಾಮನಗರ ಜಿಲ್ಲೆ), ಮದ್ದೂರು ಮತ್ತು ಮಂಡ್ಯ (ಮಂಡ್ಯ ಜಿಲ್ಲೆ), ಚಾಮರಾಜನಗರ, ನಂಜನಗೂಡು, ಮೈಸೂರು, ಹುಣಸೂರು ಮತ್ತು ಪಿರಿಯಾಪಟ್ಟಣ (ಮೈಸೂರು ಜಿಲ್ಲೆ), ಕುಶಾಲನಗರ, ಸೋಮವಾರಪೇಟೆ ಮತ್ತು ಶನಿವಾರಸಂತೆ (ಕೊಡಗು ಜಿಲ್ಲೆ), ಅರಕಲಗೂಡು, ಹಾಸನ ಮತ್ತು ಗಂಡಸಿ (ಹಾಸನ ಜಿಲ್ಲೆ), ತಿಪಟೂರು ಮತ್ತು ಹುಳಿಯಾರು (ತುಮಕೂರು ಜಿಲ್ಲೆ), ಹಿರಿಯೂರು (ಚಿತ್ರದುರ್ಗ ಜಿಲ್ಲೆ) ಮೂಲಕ ತುಮಕೂರು ಜಿಲ್ಲೆಯ ಶಿರಾದಲ್ಲಿ ಸೆಪ್ಟೆಂಬರ್ ೨೮ ರಂದು ಸಮಾರೋಪಗೊಳ್ಳಲಿದೆ. ಎರಡನೇ ಹಂತದ ಚಲಿಸು ಕರ್ನಾಟಕ ಯಾತ್ರೆ ಅಕ್ಟೋಬರ್ ೫ ರಿಂದ ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ೨೩ ರಿಂದ ಮೂರನೇ ಹಂತದ ಯಾತ್ರೆಯು ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗದ ಬೆಳಗಾವಿ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ಸೈಕಲ್ ಜಾಥಾದ ವಿವರಗಳನ್ನು ಪಕ್ಷದ ಹೊಸಪೇಟೆ ತಾಲೂಕು ಉಪಾಧ್ಯಕ್ಷ ಪಿ. ಅಂಜಿನಿ ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ಮೊಹಮ್ಮದ್ ಮುತಾಹರ್, ಜಂಟಿ ಕಾರ್ಯದರ್ಶಿ ದವಲ ಮಲಿಕ್, ಕಾರ್ಯದರ್ಶಿ ಅಡವಯ್ಯ ಸ್ವಾಮಿ, ಮೊಹಮ್ಮದ್ ಗನಿ ಉಪಸ್ಥಿತರಿದ್ದರು.

Please follow and like us:
error
error: Content is protected !!