ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸಲು ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು-ಬಳೂಟಗಿ

 ಯು.ಕೆ.ಪಿ 3ನೇ ಹಂತದ ಯೋಜನೆ  ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು, ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸಲು ಒತ್ತಾಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಪೂರ್ಣಗೊಳ್ಳದ ಯೋಜನೆ ;

ಕೊಪ್ಪಳ : ಯು.ಕೆ.ಪಿ 3ನೇ ಹಂತದ ಯೋಜನೆಯನ್ನು  ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು,ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಮತ್ತು ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಲು ಒತ್ತಾಯ ಹೇರಬೇಕು ಎಂದು  ಹೋರಾಟಗಾರ ದೇವೇಂದ್ರಪ್ಪ ಬಳೂಟಗಿ ಆಗ್ರಹಿಸಿದರು.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಭಾಗದ ಜನಪ್ರತಿನಿಧಿಗಳ  ಇಚ್ಛಾಶಕ್ತಿಯ ಕೊರತೆಯಿಂದಾಗಿ ಈಗಲೂ ಸಹ ಯೋಜನೆ ಪೂರ್ಣಗೊಂಡಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ  ಎಲ್ಲ ಸಂಸದರು, ಶಾಸಕರು ಒತ್ತಡತಂದರೆ ಯೋಜನೆ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಮಾಡಲು ನಿರ್ಧರಿಸಿದ್ದು ಮೊದಲ ಹಂತದಲ್ಲಿ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆಯುವುದರ ಮುಖಾಂತರ ಮನವಿ ಮಾಡಿಕೊಳ್ಳುತ್ತೇವೆ. ಹಾಲಿ ಮತ್ತು ಮಾಜಿ ಸಂಸದರು, ಶಾಸಕರನ್ನು ಒಳಗೊಂಡ ನಿಯೋಗದಿಂದ ಸರಕಾರವನ್ನು ಭೇಟಿ ಮಾಡಲಾಗುವುದು. ಆ ಮೂಲಕ  ಸರಕಾರದ ಮೇಲೆ ಒತ್ತಡ ಹಾಕಿ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಕೃಷ್ಣಾ ನದಿಯ ವ್ಯಾಪ್ತಿಯ ಮಹಾರಾಷ್ಟ್ರ , ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗೆ ನೀರು ಹಂಚಿಕೆ ಮಾಡಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು 2010 ರಲ್ಲಿ ಐತೀರ್ಪು ನೀಡಿದೆ . ಅಲ್ಲದೆ , ಕಣಿವೆ ರಾಜ್ಯಗಳು ಐತೀರ್ಪಿನ ಸ್ಪಷ್ಟಿಕರಣ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿ , 2013 ರಲ್ಲಿ ಅಂತಿಮ ವರದಿ ಸಲ್ಲಿಸಿದೆ , ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪಿನಲ್ಲಿ ರಾಜ್ಯದ ಆಲಮಟ್ಟಿ ಜಲಾಶಯಕ್ಕೆ 130 T.M.C ನೀರು ಹಂಚಿಕೆಯಾಗಿದೆ . ಈ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಜಲಾಶಯದ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ವರೆಗೆ ಹೆಚ್ಚಿಸಬೇಕಾಗಿದೆ . ಕಾನೂನು ಹೋರಾಟದಲ್ಲಿ ಯಶಸ್ಸು ಗಳಿಸಿದ ನಂತರವೂ , ಇವತ್ತಿನವರೆಗೂ ನೀರಾವರಿ ಯೋಜನೆಗಳಿಗೆ ಬಳಕೆಗೆ ಸಾಧ್ಯವಾಗುತ್ತಿಲ್ಲ . ಯೋಜನ ಎಷ್ಟೇ ಪ್ರಗತಿ ಸಾಧಿಸಿದರೂ ನೀರು ಬಳಕೆಯ ಮೇಲೆ ಹಕ್ಕು ಸಿಗುವುದು ಕೇಂದ್ರವು ಅಧಿಸೂಚನೆ ಹೊರಡಿಸಿದ ಬಳಿಕವಷ್ಟ . ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಲು ಕಾಲವಿಳಂಬ ನೀತಿಯಿಂದ ಏತನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿವೆ . ಯೋಜನೆ ವಿಳಂಬವಾದಷ್ಟೂ ಒಂದಡೆ ಯೋಜನೆ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ , ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3 ರ , ಒಳಪಡುವ ಹಲವಾರು ಏತ ನೀರಾವರಿ ಯೋಜನೆಗಳ ಕಾಮಾಗಾರಿಗಳನ್ನು ಸಂಪೂರ್ಣವಾಗಿ ಕೈಗೊಳ್ಳಲು ಯಾವುದೇ ರೀತಿಯ ಕಾನೂನಾತ್ಮಕ ಅಡತಡೆಗಳು ಇರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ . ಅಧಿಸೂಚನೆ ಪ್ರಕಟವಾಗಬೇಕೆ ನ್ನುವುದು ತಾಂತ್ರಿಕ ವಿಚಾರವಷ್ಟೇ . ಹೊಸ ಕಾಯಿದಯಂತ ಪುನರ್ವಸತಿ , ಭೂಪರಿಹಾರ ಹಾಗೂ ಪುನರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಹಣಕಾಸಿನ ಅನುದಾನ ಹಂಚಿಕೆಗೆ ತಕ್ಷಣ ಕ್ರಮಕೈಗೊಳ್ಳಬೇಕು. ಈ ಕಾಮಗಾರಿ ಪೂರ್ಣಗೊಂಡರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ . ಸದರಿ ವಿಷಯದ ಕುರಿತಾಗಿ ಸರಕಾರ ಇಚ್ಛಾಶಕ್ತಿ ತೋರಬೇಕು . ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸುವಂತೆ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು . ಹಾಗೆಯೇ ಯು.ಕೆ.ಪಿ ಮೂರನೇ ಹಂತದ ಯೋಜನೆಯನ್ನು “ ರಾಷ್ಟ್ರೀಯ ಯೋಜನೆ ” ಎಂದು ಘೋಷಿಸುವಂತೆ ಕರ್ನಾಟಕ ಸರಕಾರ ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಮೂಲಕ , ಅದಕ್ಕೆ ಆದ್ಯತೆಯ ಮೇಲೆ ಹಣಕಾಸಿನ ವ್ಯವಸ್ಥೆ ಒದಗಿಸುವಂತೆ ಬೇಡಿಕೆ ಸಲ್ಲಿಸಬೇಕು . ಆದ್ದರಿಂದ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಂಸದರು ಮತ್ತು ಶಾಸಕರು ಒಳಗೊಂಡು ಸದರಿ ವಿಷಯದ ಕುರಿತಾಗಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ನೀರಾವರಿ ಸಚಿವರಿಗೆ ಮನವಿ ಕೊಡುವುದರ ಮೂಲಕ ಒತ್ತಡ ತರಬೇಕು . ಬರದ ನಾಡು ಎಂದು ಕರೆಸಿಕೊಳ್ಳುವ ಉತ್ತರ ಕರ್ನಾಟಕದ ಭೂಮಿಯನ್ನು ಹಸಿರಾಗಿಸಬಹುದು , ಅಧಿಸೂಚನೆ ಬಾರದಿರುವುದು ಈ ಎಲ್ಲಾ ಪ್ರಕ್ರಿಯೆಗೂ “ ತಡೆಗೋಡೆ ” ಯಾಗಿ ನಿಲ್ಲುವಂತಾಗಿದೆ . ಶೀಘ್ರವೇ ಅಧಿಸೂಚನೆ ತರಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ,  ಬಸವರಾಜ್ ಡಿ, ಕೆ.ಚನ್ನಬಸವಸ್ವಾಮಿ ಕನಕಗಿರಿ, ಜಿಲ್ಲಾ ಪಂಚಾಯತ್ ಸದಸ್ಯ ಹನುಂತಗೌಡ ಮಾಲೀಪಾಟೀಲ್, ಅಪ್ಪು ಪಟ್ಟಣಶೆಟ್ರ, ಮಲ್ಲಿಕಾರ್ಜುನ ಮೇಟಿ ಉಪಸ್ಥಿತರಿದ್ದರು.

Please follow and like us:
error