ಕುವೈತ್ ನಲ್ಲಿ ಸಂಕಷ್ಟಕ್ಕೀಡಾಗಿದ್ದ ಕನ್ನಡಿಗನಿಗೆ ಇಂಡಿಯನ್ ಸೋಶಿಯಲ್ ಫೋರಮ್ ನೆರವು

ವೀಸಾ ನವೀಕರಿಸಲಾಗದೆ, ಕುವೈಟಿನಲ್ಲಿ ಕಳೆದ ಒಂದು ವರ್ಷದಿಂದ ತನ್ನ ಪ್ರಾಯೋಜಕನಿಂದ ನಿರಂತರ ಶೋಷಣೆಗೊಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಹಮೀದ್ ಇಸ್ಲಾಂ ಎಂಬವರು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ (ಐಎಸ್ಎಫ್) ನೆರವಿನಿಂದ ಯಶಸ್ವಿಯಾಗಿ ತನ್ನ ಕುಟುಂಬವನ್ನು ಮರುಸೇರಿದ್ದಾರೆ. 2013 ರಲ್ಲಿ ಉದ್ಯೋಗವನ್ನರಸಿ ಕುವೈಟ್ ಗೆ ಪ್ರಯಾಣಿಸಿದ್ದ ಹಮೀದ್, ಆರಂಭದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸಕ್ಕಾಗಿ ಸೇರಿಕೊಂಡಿದ್ದರು. ಮೊದಲ 4ವರ್ಷಗಳಲ್ಲಿ ಎಲ್ಲವೂ ಉತ್ತಮವಾಗಿಯೇ ಇದ್ದುವು. ಆದಾಗ್ಯೂ ಅವರ ಪ್ರಾಯೋಜಕರು ತನ್ನ ರೆಸ್ಟೋರೆಂಟ್ ಮುಚ್ಚಿದಾಗ ಕೆಲಸ ಕಳೆದುಕೊಂಡ ಹಮೀದ್ ಉದ್ಯೋಗವನ್ನರಸಿಕೊಂಡು ಹೊಸ ಪ್ರಾಯೋಜಕನನ್ನು ಸೇರಿಕೊಳ್ಳುವಲ್ಲಿ  ನಿರ್ಬಂಧಿತರಾದರು. ಹೊಸ ಪ್ರಾಯೋಜಕ ವಿಸಾ ನವೀಕರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ ವೇತನವನ್ನೂ ನೀಡದೆ ಸತಾಯಿಸುತ್ತಿದ್ದ. ಪರಿಣಾಮವಾಗಿ ಅವರು ಕುವೈತ್ ನಲ್ಲಿ ಆಹಾರ, ವಸತಿ ಹಾಗೂ ಯಾವುದೇ ಸೂಕ್ತವಾದ ಸೌಕರ್ಯಗಳಿಲ್ಲದೆ, ಸುಮಾರುಒಂದು ವರ್ಷಗಳ ಕಾಲ ಸಂಕಷ್ಟಕ್ಕೀಡಾಗಿದ್ದರು.

 ಇದೇ ಅವಧಿಯಲ್ಲಿ ಅವರ ಮಗಳ ವಿವಾಹವೂ ನಡೆದಿತ್ತಲ್ಲದೆ, ದುರದೃಷ್ಟವಶಾತ್ಹಮೀದ್ ರ ತಾಯಿಯೂ ಮೃತಪಟ್ಟಿದ್ದರು. ಕುವೈತ್ ಸರಕಾರವು ಪ್ರಯಾಣ ನಿಷೇಧ ಹೇರಿದ್ದರಿಂದ ತಾಯ್ನಾಡಿಗೆ ಮರಳಲಾಗದೆ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲೂ ಸಹ ಪಾಲ್ಗೊಳ್ಳುವುದರಿಂದ ಹಮೀದ್ ವಂಚಿತರಾಗಿದ್ದರು. ಹಮೀದ್ ಕುಟುಂಬಸ್ಥರು ಸ್ಥಳೀಯ ಎಸ್ಡಿಪಿಐ ಮುಖಂಡರೊಂದಿಗೆ ಅಳಲು ತೋಡಿಕೊಂಡು ಸಹಾಯಕ್ಕಾಗಿ ಮನವಿಮಾಡಿಕೊಂಡಿದ್ದರು. ಕುಟುಂಬಸ್ಥರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಎಸ್ಡಿಪಿಐ ನಾಯಕರು, ಕುವೈತ್ ನಲ್ಲಿ ಸಾಮಾಜಿಕ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಇಂಡಿಯನ್ ಸೋಷಿಯಲ್ ಫೋರಮ್ (ISF)ನಾಯಕರನ್ನು ಸಂಪರ್ಕಿಸಿ ಸಹಾಯಕ್ಕಾಗಿ ಕೋರಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಐಎಸ್ಎಫ್ ಕುವೈಟ್ ತಂಡ, ಹಮೀದ್ ರವರನ್ನು ಭೇಟಿಯಾಗಿ, ಮಾಹಿತಿ ಕಲೆ ಹಾಕಿ, ಪ್ರಾಯೋಜಕರನ್ನು ಸಂಪರ್ಕಿಸಿ, ನಿರಂತರ ಒಂದು ತಿಂಗಳ ಪ್ರಯತ್ನದೊಂದಿಗೆ ಕೊನೆಗೂ ಹಮೀದ್ ವಾಪಸಾತಿಗೆ ಅಗತ್ಯವಾದ ಎಲ್ಲಾ ಏರ್ಪಾಡುಗಳನ್ನು ಮಾಡಿದ್ದಲ್ಲದೆ, ಹಮೀದ್ ಮೇಲಿದ್ದ ಎಲ್ಲಾ  ಪ್ರಾಯೊಜಕ ಸಂಬಂಧಿ ಕೇಸುಗಳನ್ನೂ  ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.

ಅಕ್ಟೊಬರ್ 14 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಖಾಂತರ  ಹಮೀದ್ಇಸ್ಲಾಂಬೆಳ್ತಂಗಡಿ  ತಲುಪಿದರು. ಎಸ್ಡಿಪಿಐ  ಮುಖಂಡರಾದ  ಮುಸ್ತಫಾ ಪೆರ್ನೆ ನೇತೃತ್ವ ದ ತಂಡ ಹಮೀದ್ ರವರ  ಮನೆಯನ್ನು  ಸಂದರ್ಶಿಸಿ ಕ್ಷೇಮ  ವಿಚಾರಿಸಿದರು. ಎಸ್ಡಿಪಿಐ ಹಾಗೂ ಐಎಸ್ಎಫ್ ಕುವೈಟ್ ಶ್ರಮವನ್ನು  ಹಮೀದ್ ಮತ್ತು ಕುಟುಂಬಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.

 

Please follow and like us:
error