ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ : ಹೆಚ್. ವಿಶ್ವನಾಥರೆಡ್ಡಿ

ಕೊಪ್ಪಳ ಫೆ. 05 : ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ ನೀಡಿ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಜಿ.ಪಂ. ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ತೀವ್ರ ಬರ ಹಿನ್ನೆಲೆ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕುಡಿಯುವ ನೀರು ಸರಬರಾಜು ಯೋಜನೆಯ ಮೋಟರಗಳ ದುರಸ್ಥಿ ಸರಿಪಡಿಸಿ ಜಿಲ್ಲೆಯಲ್ಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಸಂಭಂದ ಪಟ್ಟ ಅಧಿಕಾರಿಗಳು ಶಿಘ್ರವೇ ಬಗೆಹರಿಸಬೇಕು. ದಿನದಿಂದ ದಿನಕ್ಕೆ ವಿಪರೀತ ಬರ ಉಂಟಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಸುಮಾರು 30 ಲಕ್ಷದ ಅಂದಾಜು ವೆಚ್ಚದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಈ ಕಾರ್ಯಕ್ಕೆ ಮುಂದಾಗಿದೆ. ನೀರಿನ ಸಮಸ್ಯೆಯೊಂದಿಗೆ ಜನರು ಬಂದರೆ ಅಧಿಕಾರಿಗಳು ಉತ್ತಮ ಸ್ಪಂಧನೆ ನೀಡಬೇಕು. ಅಳವಂಡಿ, ಇರಕಲ್‍ಗಡಾ, ಕನಕಗಿರಿ, ಚಿಕ್ಕಕೊಪ್ಪ, ಕಲಕೇರಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಐದು ಕಡೆ ಗೋವು ಶಾಲೆಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತವು ನಿರ್ಧರಿಸಿದ್ದು, ಈಗಾಗಲೇ ಕೆಲಕಡೆ ಗೋಶಾಲೆ ಆರಂಭಿಸಲಾಗಿದೆ. ದನ-ಕರಗಳ ನೋಂದಣಿ ಮಾಡಿಕೊಳ್ಳುವಂತೆ ರೈತರಿಗೆ ಮಾಹಿತಿ ನೀಡಿ. ಎಲ್ಲಿ ಗೋವು ಶಾಲೆಯನ್ನು ಪ್ರಾರಂಭಿಸಿಲ್ಲಾ ಅಲ್ಲಿ ಆದಷ್ಟು ಬೇಗ ಗೋಶಾಲೆಯನ್ನು ಪ್ರಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳಿ. ಜಾನುವಾರುಗಳಿಗೆ ಸಂಬಂಧಿಸಿದ ಅಗತ್ಯ ಮೇವೂ, ಸೊಪ್ಪು ನಮ್ಮ ಭಾಗದಲ್ಲಿ ಕಡಿಮೆ ಇದ್ದು, ಪಕ್ಕದ ಜಿಲ್ಲೆಯಾದ ರಾಯಚೂರಿನಿಂದ ಮೇವು ಖರೀದಿಸಲಾಗುವುದು. ಮೇವನ್ನು ಕತ್ತರಿಸಿ ಉಪ್ಪುನೀರು ಬೇರಿಸಿ, ಮೇವು ಕೆಡದಂತೆ ಸುವ್ಯವಸ್ಥೆಯಿಂದ ಕಾಪಾಡಿಕೊಳ್ಳಬೇಕು. ಹಾಗೇ ದಾಖಲಾದ ಗೋವುಗಳ ಪ್ರತಿನಿತ್ಯದ ಮೂಲಭೂತ ಸೌಕರ್ಯ ವದಗಿಸಿ ಗೋವುಗಳ ಆರೈಕೆಗೆ ಒತ್ತು ನೀಡಿ. ಗೋವುಗಳ ಸಗಣಿಯನ್ನು ಟೆಂಡರ ಕರೆಯುವ ಮೂಲಕ ಮಾರಾಟ ಮಾಡಿ ಇನ್ನಷ್ಟು ಗೋ ಶಾಲೆಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಿ. ಪಶು ವ್ಯದ್ಯಕೀಯ ಇಲಾಖೆಯಲ್ಲಿನ ದನಕರುಗಳಿಗೆ ಕೈಕಾಲು ನೋವು, ಬಾಯಿ ನೋವು, ಲಸಿಕೆಯನ್ನು ನಿಗದಿತ ಅವಧಿಯೊಳಗೆ ಹಾಕಿಸಿ. ಅಲ್ಲದೇ ದನಕರುಗಳಿಗೆ ಅಗತ್ಯ ಚಿಕಿತ್ಸೆ ನೀಡಿ. ಗೋವುಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಮ್ಮ ಇಲಾಖಾ ಪ್ರಗತಿ ವರದಿ ನೀಡಿ, ತೋಟಗಾರಿಕೆ ಇಲಾಖೆಯು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ವಿಶೇಷವಾಗಿ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿ 60 ಎಕರೆ ಜಮೀನಿನಲ್ಲಿ ನಿರ್ಮಿಸಿದ ಇಸ್ರೇಲ್ ಮಾದರಿ ತಂತ್ರಾಂಶವು ಯಶಸ್ವಿಯಾದಿಯಲ್ಲಿ ಸಾಗುತ್ತಿದೆ. ಇದರಿಂದ ನಮ್ಮ ಜಿಲ್ಲೆಯಯು ಒಂದು ಮಾದರಿಯಾಗಲಿದೆ. ದಿನದಿಂದ ದಿನಕ್ಕೆ ರೈತರು ಇಲಾಖೆಗೆ ಬಂದು ಅದರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇದೇ ಫೆ 16 ರಿಂದ 18 ರವರೆಗೆ ದ್ರಾಕ್ಷಿ ಮತ್ತು ದಾಳಿಂಬೆ ಮೇಳವನ್ನು ಆಯೋಜಿಸಲಾಗಿದೆ ಎಂದರು.
ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ರತ್ನವ್ವ ಭರಪ್ಪ ನಗರ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ತಾ.ಪಂ. ಅಧ್ಯಕ್ಷರು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ, ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಿಸರಳ್ಳಿ, ಜಂಟಿ ಕೃಷಿ ನಿರ್ದೇಶಕಿ ಶಬಾನ ಶೇಖ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಉಮಾದೇವಿ ಸೊನ್ನದ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error