ಕಾರ್ಗಿಲ್ ಯೋಧನನ್ನು ‘ವಿದೇಶಿ’ ಎಂದು ಘೋಷಿಸಿದ ಪ್ರಕರಣ: ಸನಾವುಲ್ಲಾರ ಬೆಂಬಲಕ್ಕೆ ನಿಂತ ಸೇನೆ

ಗುವಾಹತಿ, ಜೂ.2: ಭಾರತೀಯ ಸೇನೆಯ ನಿವೃತ್ತ ಯೋಧರಿಗೆ ‘ವಿದೇಶಿ ವ್ಯಕ್ತಿ’ ಎಂದು ಹಣೆಪಟ್ಟಿ ಕಟ್ಟಿದ ವಿಚಾರ ಭಾರೀ ವಿವಾದ ಸೃಷ್ಟಿಸಿದ ನಂತರ ಇದು ವ್ಯಕ್ತಿಯನ್ನು ತಪ್ಪಾಗಿ ಗುರುತಿಸಿರುವುದರಿಂದ ಆಗಿರುವ ಪ್ರಮಾದ ಎಂದು ಸ್ಥಳೀಯ ಸುದ್ದಿವಾಹಿನಿಗೆ ಸ್ಪಷ್ಟನೆ ನೀಡಲಾಗಿದೆ. ಈ ಮಧ್ಯೆ ಯೋಧ ಮುಹಮ್ಮದ್ ಸನಾವುಲ್ಲಾ ಅವರ ಕುಟುಂಬವನ್ನು ಸಂಪರ್ಕಿಸಿದ ಭಾರತೀಯ ಸೇನೆಯ ಅಧಿಕಾರಿಗಳು, ಸನಾವುಲ್ಲಾ ಬೆಂಬಲಕ್ಕೆ ನಿಂತಿದ್ದಾರೆ.

2008ರಲ್ಲಿ ಅಸ್ಸಾಂ ಪೊಲೀಸ್ ಪಡೆಯ ಗಡಿವಿಭಾಗ ತನಿಖೆ ನಡೆಸಿ ಸಿದ್ಧಪಡಿಸಿದ ವರದಿಯಲ್ಲಿ, ಸನಾವುಲ್ಲಾ ಅವರನ್ನು ಕಾರ್ಮಿಕ ಎಂದು ಗುರುತಿಸಿದ್ದಲ್ಲದೇ, ಶಂಕಿತ ಅಕ್ರಮ ವಲಸಿಗ ಎಂದು ಹಣೆಪಟ್ಟಿ ಕಟ್ಟಿತ್ತು. ಈ ಪ್ರಕರಣವನ್ನು ಅರೆನ್ಯಾಯಾಂಗ ಸಂಸ್ಥೆಯಾದ ವಿದೇಶಿ ನ್ಯಾಯಮಂಡಳಿಗೆ ವರ್ಗಾಯಿಸಲಾಗಿತ್ತು. ಅಸ್ಸಾಂ ಪೊಲೀಸರು ಅಥವಾ ಭಾರತೀಯ ಚುನಾವಣಾ ಆಯೋಗ ಅಕ್ರಮ ವಲಸಿಗರು ಎಂದು ಪರಿಗಣಿಸಿದ ಪ್ರಕರಣಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ.

ಕಮ್ರಪ್ ಗ್ರಾಮೀಣ ಜಿಲ್ಲಾ ನ್ಯಾಯಮಂಡಳಿ ಸನಾವುಲ್ಲಾ (52) ಅವರನ್ನು ವಿದೇಶಿ ವ್ಯಕ್ತಿ ಎಂದು ತೀರ್ಮಾನಿಸಿತ್ತು. ಭಾರತೀಯ ಸೇನೆಯಿಂದ ನಿವೃತ್ತಿಯಾದ ಬಳಿಕ ಗಡಿ ಸಂಸ್ಥೆಯಲ್ಲಿ ಸಬ್ ಇನ್‍ಸ್ಪೆಕ್ಟರ್ ಆಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಅವರು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ಸಹೋದ್ಯೋಗಿಗಳೇ ಅವರನ್ನು ಬಂಧಿಸಿ ಬಂಧನ ಕೇಂದ್ರಕ್ಕೆ ಕಳುಹಿಸಿದ್ದರು.

“ನಾವು ಈದ್ ಆಚರಿಸುವ ಮುನ್ನ ಪತಿಯನ್ನು ನೋಡಲು ಬಯಸಿದ್ದೇವೆ. ಇದನ್ನು ನಮ್ಮಲ್ಲಿಗೆ ಬಂದ ಸೇನೆಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಬಳಿಯೂ ಹೇಳಿದ್ದೇನೆ” ಎಂದು ಸನಾವುಲ್ಲಾ ಅವರ ಪತ್ನಿ ಸನಿಮಾ ಬೇಗಂ ಹೇಳಿದ್ದಾರೆ.

ನ್ಯಾಯಮಂಡಳಿಯ ಆದೇಶದ ವಿರುದ್ಧ ಶನಿವಾರ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಮುಂದಿನ ವಾರ ಇದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಸನಾವುಲ್ಲಾ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.

Please follow and like us:
error